ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೋಂದಣಿ, ಸರ್ವೇ ಇಲಾಖೆಯಲ್ಲಿ ಲಂಚಾವತಾರ!

ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿ ಬಿ.ಬಸವರಾಜು ಅಸಮಾಧಾನ
Last Updated 8 ಜನವರಿ 2014, 6:20 IST
ಅಕ್ಷರ ಗಾತ್ರ

ದಾವಣಗೆರೆ:  ನೋಂದಣಿ ಮತ್ತು ಸರ್ವೇ ಇಲಾಖೆಯಲ್ಲಿ ಲಂಚಾವತಾರದ ಬಗ್ಗೆ ಜನರಿಂದ ದೂರು ಕೇಳಿಬರುತ್ತಿದೆ. ಬೆಳಗಾವಿ ಅಧಿವೇಶನದಲ್ಲೂ ಇಂಥ ಆಕ್ಷೇಪ ಕೇಳಿ ಬಂದಿದೆ. ಕೂಡಲೇ ಇಲಾಖೆ ಸಿಬ್ಬಂದಿ ಮೇಲೆ ನಿಗಾ ಇಡುವ ಮೂಲಕ ಕ್ರಮ ಕೈಗೊಳ್ಳಬೇಕು... ಗ್ರಾಮ ಲೆಕ್ಕಾಧಿಕಾರಿಗಳು ಸ್ಥಳದಲ್ಲಿ ಕರ್ತವ್ಯ ನಿರ್ವಹಿಸುತ್ತಿಲ್ಲ. ಅವರು ತಹಶೀಲ್ದಾರ್ ಕಚೇರಿಗಳಲ್ಲಿಯೇ ಹೆಚ್ಚು ಕಾಲ ಕಳೆಯುತ್ತಾರೆ... ನ್ಯಾಯ ಪ್ರಕರಣಗಳು ಇತ್ಯರ್ಥವಾಗದೇ ಬಾಕಿ ಇವೆ. ಇವೆಲ್ಲಾ ಯಾವಾಗ ಬಗೆಹರಿಯುತ್ತವೆ? ಸಕಾಲದಲ್ಲಿ ಬಾಕಿ ಪ್ರಕರಣಗಳು ಎಷ್ಟಿವೆ..? ಚನ್ನಗಿರಿಯಲ್ಲಿಯೇ ಅವಧಿ ಮೀರಿದ ಪ್ರಕರಣಗಳು ಹೆಚ್ಚಿವೆ ಏಕೆ?

ಜಿಲ್ಲಾಧಿಕಾರಿ ಕಚೇರಿಯ ಸಭಾಂಗಣದಲ್ಲಿ ಶನಿವಾರ ನಡೆದ ಕಂದಾಯ ಇಲಾಖೆಯ ಪ್ರಗತಿ ಪರಿಶೀಲನಾ ಸಭೆಯಲ್ಲಿ ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿ ಬಿ.ಬಸವರಾಜು ಅಧಿಕಾರಿಗಳನ್ನು ಪ್ರಶ್ನಿಸಿದ ಪರಿ ಇದು.

ಜಿಲ್ಲಾಧಿಕಾರಿ ಎಸ್.ಟಿ.ಅಂಜನ್‌ಕುಮಾರ್ ಪ್ರತಿಕ್ರಿಯಿಸಿ, ‘ನೋಂದಣಿ ಮತ್ತು ಸರ್ವೇ ಇಲಾಖೆಯಲ್ಲಿ ಲಂಚಾವತಾರಕ್ಕೆ ಕಡಿವಾಣ ಹಾಕಲು ಮತ್ತು ಜನಸಾಮಾನ್ಯರಿಗೆ ಮನೆ ಬಾಗಿಲಿಗೆ ಸರ್ಕಾರದ ಸೌಲಭ್ಯ ಕಲ್ಪಿಸುವ ಉದ್ದೇಶದಿಂದ ‘ನಮ್ಮ ನಡೆ; ಹಳ್ಳಿ ಕಡೆ’ ಎಂಬ ಯೋಜನೆಯನ್ನು ರೂಪಿಸಿದ್ದು, ಅಗತ್ಯ ಸಿದ್ಧತೆ ಮಾಡಿಕೊಳ್ಳಲಾಗಿದೆ.

ಜನಸಂಪರ್ಕ ಸಭೆ ಮಾದರಿಯಲ್ಲಿ ಮೊದಲು ಹಳ್ಳಿಗಳನ್ನು ಆಯ್ಕೆ ಮಾಡಿಕೊಂಡು ಅಲ್ಲಿನ ಸಮಸ್ಯೆ ಆಲಿಸಿ ಅದಕ್ಕೆ ತಕ್ಕ ಪರಿಹಾರ ಕಲ್ಪಿಸಿ ನಂತರ ಜನಪ್ರತಿನಿಧಿಗಳ ನೇತೃತ್ವದಲ್ಲಿ ಸಮಾರಂಭ ನಡೆಸಲಿದ್ದೇವೆ. ಇಂತಹ ಯೋಜನೆ ಈ ಮುಂದೆ ಹಮ್ಮಿಕೊಳ್ಳಲಾಗಿದೆ. ಅದನ್ನು ಮತ್ತಷ್ಟೂ ರಚನಾತ್ಮಕವಾಗಿ ಮಾಡುವ ಉದ್ದೇಶವಿದೆ’ ಎಂದು ತಿಳಿಸಿದರು.

ಕಂದಾಯ ಇಲಾಖೆ ಎಲ್ಲ ಇಲಾಖೆಗಳ ತಾಯಿ ಇದ್ದಂತೆ. ಇಲ್ಲಿ ಆಡಳಿತ ಪಾರದರ್ಶಕವಾಗಿರಬೇಕು. ಅದಕ್ಕೆ ಅಧಿಕಾರಿ ವರ್ಗ ಶ್ರಮಿಸಬೇಕು. ಸೋಮಾರಿತನ ಮತ್ತು ನಡವಳಿಕೆ ಸರಿಯಿಲ್ಲದ ಅಧಿಕಾರಿಗಳ ವಿರುದ್ಧ ನಿರ್ದಾಕ್ಷಿಣ್ಯ ಕಠಿಣ ಕ್ರಮಕ್ಕೆ ಮುಂದಾಗಿ ಎಂದು ಜಿಲ್ಲಾಧಿಕಾರಿಗೆ ಸೂಚಿಸಿದ ಬಸವರಾಜು ಅವರು, ‘ಪೋಡಿ, ತತ್ಕಾಲಿಕ ಪೋಡಿಗೆ ಸಂಬಂಧಿಸಿದಂತೆ ವಿವಿಧೆಡೆ ದೂರು ಕೇಳಿಬರುತ್ತಿವೆ. ಇದಕ್ಕೆ ಸರ್ವೇ ಇಲಾಖೆಯಲ್ಲಿ ಸಿಬ್ಬಂದಿ ಕೊರತೆ ಕಾರಣವಾಗಿದೆ. ಸರ್ಕಾರ 1800 ಭೂಮಾಪಕ ಅಧಿಕಾರಿಗಳನ್ನು ಆಯ್ಕೆ ಮಾಡಿದ್ದು, ತರಬೇತಿ ನೀಡುತ್ತಿದೆ. ಈ ಅಧಿಕಾರಿಗಳು ಕರ್ತವ್ಯಕ್ಕೆ ಹಾಜರಾದ ಕೂಡಲೇ ಪೋಡಿಗೆ ಸಂಬಂಧಿಸಿದ ಕಾರ್ಯ ಚುರುಕಾಗಲಿದೆ’ ಎಂದು ತಿಳಿಸಿದರು.

ಜಿಲ್ಲಾಧಿಕಾರಿ ಪ್ರತಿಕ್ರಿಯಿಸಿ, ‘ಜಿಲ್ಲೆಯಲ್ಲಿ 33 ಮಂದಿ ಭೂಮಾಪಕರು ಹೊಸದಾಗಿ ಸೇವೆಗೆ ಸೇರಿದ್ದಾರೆ. 59 ಪರವಾನಗಿ
ಭೂಮಾಪಕರನ್ನು ನೇಮಿಸಲಾಗಿದೆ. ಉಳಿದಂತೆ 19 ಭೂಮಾಪಕರ ಹುದ್ದೆ ಖಾಲಿ ಇವೆ’ ಎಂದು ತಿಳಿಸಿದರು.

ಸ್ಮಶಾನಕ್ಕೆ ಹೆಚ್ಚು ಆದ್ಯತೆ ನೀಡಿ: ಜಿಲ್ಲೆಯಲ್ಲಿನ ಹಲವು ಗ್ರಾಮದಲ್ಲಿ ಸ್ಮಶಾನದ ಕೊರತೆ ಇದೆ ಎಂಬ ದೂರಿದೆ. ಏನು ಕ್ರಮಕೈಗೊಂಡಿದ್ದೀರಿ? ಎಂದು ಬಸವರಾಜು ಪ್ರಶ್ನಿಸಿದರು. ಅದಕ್ಕೆ ಉತ್ತರಿಸಿದ ಜಿಲ್ಲಾಧಿಕಾರಿ ಅಂಜನ್‌ಕುಮಾರ್, ‘ಜಿಲ್ಲೆಯಲ್ಲಿ 617 ಗ್ರಾಮಗಳಿಗೆ ಸ್ಮಶಾನ ಸೌಲಭ್ಯ ಕಲ್ಪಿಸಲಾಗಿದೆ. 191 ಗ್ರಾಮಗಳಿಗೆ ಸ್ಮಶಾನ ಭೂಮಿ ಒದಗಿಸಲು ಜಮೀನು ಗುರುತಿಸಲಾಗಿದೆ. 47 ಗ್ರಾಮಗಳಿಗೆ ಸ್ಮಶಾನ ಭೂಮಿ ಒದಗಿಸುವಂತೆ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಲಾಗಿದೆ. ಉಳಿದಂತೆ ರುದ್ರಭೂಮಿಗಳಿಗೆ ಮೂಲ ಸೌಲಭ್ಯ ಒದಗಿಸಲು ಹಣಕಾಸಿನ ಕೊರತೆ ಇದೆ. ಸರ್ಕಾರ ಅನುಮತಿ ಕೊಟ್ಟರೆ ‘ನರೇಗಾ’ ಯೋಜನೆ ವ್ಯಾಪ್ತಿಯಲ್ಲಿ ಇದನ್ನು ಸೇರಿಸಬಹುದು’ಎಂದರು.

ಬಸವರಾಜು ಮಾತನಾಡಿ, ‘ಸ್ಮಶಾನ ತೀರಾ ಅಗತ್ಯ. ತಳಸಮುದಾಯದ ಜನರಿಗೆ ಸ್ಮಶಾನ ಇಲ್ಲದೇ ತೊಂದರೆ ಅನುಭವಿಸುತ್ತಿದ್ದಾರೆ. ಕಂದಾಯ ಇಲಾಖೆ ಅಧಿಕಾರಿಗಳು ಮೊದಲು ಸ್ಮಶಾನಕ್ಕೆ ಆದ್ಯತೆ ಮೇರೆಗೆ ಸೌಲಭ್ಯ ಕಲ್ಪಿಸಬೇಕು. ಇದಕ್ಕೆ ಸಂಬಂಧಿಸಿದಂತೆ ಸರ್ಕಾರಮಟ್ಟದಲ್ಲಿ ಎಲ್ಲಾ ರೀತಿಯಲ್ಲಿ ಸಹಕಾರ ನೀಡಲಾಗುವುದು’ ಎಂದರು.

ರೂ.10 ಕೋಟಿ ವೆಚ್ಚದಲ್ಲಿ ಮಿನಿ ವಿಧಾನಸೌಧ: ಹಳೇ ತಹಶೀಲ್ದಾರ್ ಕಚೇರಿಯಲ್ಲಿ 35 ಗುಂಟೆ ಜಾಗವಿದೆ. ಇಲ್ಲಿ ರೂ.10 ಕೋಟಿ ಅಂದಾಜು ವೆಚ್ಚದಲ್ಲಿ ಬಹುಮಹಡಿಯ ಮಿನಿ ವಿಧಾನಸೌಧ ನಿರ್ಮಿಸಲು ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಲಾಗಿದೆ. ಸರ್ಕಾರ ಸಮ್ಮತಿ ನೀಡಿದೆ. ಕೂಡಲೇ ಮಿನಿವಿಧಾನಸೌಧ ನಿರ್ಮಾಣಕ್ಕೆ ಚಾಲನೆ ನೀಡಲಾಗುವುದು ಎಂದು ಜಿಲ್ಲಾಧಿಕಾರಿ ಸಭೆಗೆ ತಿಳಿಸಿದರು.

ಬಸವರಾಜು ಮಾತನಾಡಿ, ‘ಕಟ್ಟಡ ನಿರ್ಮಾಣ ಗುತ್ತಿಗೆಯನ್ನು ಪಿಡಬ್ಲುಡಿ ಇಲಾಖೆಗೆ ವಹಿಸುವುದು ಬೇಡ. ಅದನ್ನು ಗೃಹ ಮಂಡಳಿಗೆ ವಹಿಸಿಕೊಡಿ’ ಎಂದು ಸಲಹೆ ನೀಡಿದರು.

ಜಿಲ್ಲಾಧಿಕಾರಿ ಮಾತನಾಡಿ, ‘ಆವರಗೊಳ್ಳದ ಸರ್ವೇ ನಂ. 61/62ರಲ್ಲಿನ ಜಮೀನಿನಲ್ಲಿ ವಿವಿಧ ಇಲಾಖೆ ಅಧಿಕಾರಿ ಸಿಬ್ಬಂದಿಯ ವಸತಿಗೃಹ ನಿರ್ಮಾಣಕ್ಕೆ ಸರ್ಕಾರಕ್ಕೆ ಪ್ರಸ್ತಾವ ಕಳುಹಿಸಲಾಗಿದೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಅಂಜನ್‌ಕುಮಾರ್ ಅವರು, ವಿವಿಧ ತಹಶೀಲ್ದಾರ್ ಕಚೇರಿಯ ಪೀಠೋಕರಣ ಆಧುನೀಕರಣಕ್ಕೆ ಹಣಕಾಸು ನೆರವು ಹಾಗೂ ಉಪ ವಿಭಾಗಾಧಿಕಾರಿ ನಾಗರಾಜ್‌ ಸೇರಿದಂತೆ ದಾವಣಗೆರೆ, ಜಗಳೂರು ತಹಶೀಲ್ದಾರ್ ಅವರಿಗೆ ವಾಹನ ವ್ಯವಸ್ಥೆ  ಕಲ್ಪಿಸುವಂತೆ ಮನವಿ ಮಾಡಿದರು.

ಹೆಚ್ಚುವರಿ ಜಿಲ್ಲಾಧಿಕಾರಿ ಇಬ್ರಾಹಿಂ ಮೈಗೂರ, ಉಪ ವಿಭಾಗಾಧಿಕಾರಿ ಎಸ್. ನಾಗರಾಜ್, ಹರಪನಹಳ್ಳಿ ಉಪ ವಿಭಾಗಾಧಿಕಾರಿ ಲೋಕೇಶ್, ಪಾಲಿಕೆ ಆಯುಕ್ತ ನಾರಾಯಣಪ್ಪ, ತಹಶೀಲ್ದಾರ್ ಮಂಜುನಾಥ್ ಆರ್. ಬಳ್ಳಾರಿ, ದೂಡಾ ಆಯುಕ್ತ ಜಯಪ್ರಕಾಶ್ ನಾರಾಯಣ, ಜಿಲ್ಲಾ ಸಮಾಜ ಕಲ್ಯಾಣಾಧಿಕಾರಿ ಮಹಾಂತೇಶ್, ಬಿಸಿಎಂ ಇಲಾಖೆ ಜಿಲ್ಲಾ ಸಹಾಯ ನಿರ್ದೇಶಕಿ ಸರೋಜಾ ಮೊದಲಾದವರು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT