ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೋಡಬನ್ನಿ ಕಪ್ಪಲೆಪ್ಪ ಜಲಪಾತದ ಸೊಬಗು

ಬೆಟ್ಟದ ತಪ್ಪಲಿನಲ್ಲಿ ಜಲಲ... ಜಲಧಾರೆ...
Last Updated 14 ಸೆಪ್ಟೆಂಬರ್ 2013, 6:56 IST
ಅಕ್ಷರ ಗಾತ್ರ

ಹನುಮಸಾಗರ: ಎಂಟು ವರ್ಷಗಳಿಂದ ರೈತರು ವಿಶ್ವಾಸವಿರಿಸಿಕೊಂಡಿದ್ದ ಕಪ್ಪಲೆಪ್ಪ ಜಲಪಾತ ಈ ಪ್ರಮಾಣದಲ್ಲಿ ನೀರು ಒಂದು ಬಾರಿಯೂ ಬಿದ್ದಿಲ್ಲ. ಆದರೆ, ಮುಂಗಾರು ಹಂಗಾಮಿನಲ್ಲಿ ಜಲಪಾತ ಭೋರ್ಗರೆಯುವ ಸೌಂದರ್ಯ ಸವಿಯಲು ಸುತ್ತಲಿನ ಹಳ್ಳಿಗರು, ಶಾಲಾ ಮಕ್ಕಳು ಜಾತ್ರೆಗೆ ಬಂದಂತೆ ಬರುತ್ತಿದ್ದಾರೆ.

ಜಲಪಾತದ ಮಡಿಲಿನಲ್ಲಿ ನೆನೆದು, ನಕ್ಕುನಲಿದು, ನೀರಿಗಿಳಿದು ಆನಂದ ಪಡುತ್ತಿರು ವುದು ಶುಕ್ರವಾರ ಕಂಡುಬಂದಿತು. ಕೊಪ್ಪಳ ಸೇರಿದಂತೆ ನೆರೆಯ ಬಿಜಾಪುರ, ಬಾಗಲಕೋಟೆ, ಗದಗ, ಬಳ್ಳಾರಿ ಜಿಲ್ಲೆಗಳಲ್ಲಿ ಜಲಪಾತಗಳು ಅಪರೂಪ. ಈ ಕಾರಣ ಕಪ್ಪಲೆಪ್ಪ, ಕಪಿಲತೀರ್ಥ, ಕಬ್ಬರಗಿ ದಿಡಗ ಎಂಬ ಹೆಸರುಗಳಿಂದ ಕರೆಯ ಲ್ಪಡುವ ಈ ಜಲಧಾರೆ ಕಣ್ತುಂಬಿಕೊಳ್ಳಲು ಜನ ತಂಡೋಪತಂಡವಾಗಿ ಬರುತ್ತಿದ್ದಾರೆ.

ಗದಗನಿಂದ ಗಜೇಂದ್ರಗಡ ಮಾರ್ಗವಾಗಿ ಬಂದರೆ 60 ಕಿ.ಮೀ, ಕುಷ್ಟಗಿಯಿಂದ 25 ಕಿ.ಮೀ, ಬಾಗಲಕೋಟ ಜಿಲ್ಲೆಯ ಇಳಕಲ್‌ ಪಟ್ಟಣದಿಂದ 40 ಕಿ.ಮೀ ದೂರದಲ್ಲಿದೆ ಈ ಮನಮೋಹಕ ಜಲಪಾತ. ಬರುಡು ನೆಲದಲ್ಲಿ ಚಿಲುಮೆಯಾಗಿ, ಸಾಮಾನ್ಯ ಜನರಿಗಿಂತ ರೈತ ರೊಂದಿಗೆ ಭಕ್ತಿಯ ಬಾಂಧವ್ಯ ಬೆಸೆದುಕೊಂಡಿದೆ.

ಜನಪಾಲ ಈಗ ಯನಮನೋಹರವಾಗಿದ್ದು, ನಿಸರ್ಗ ರಸಿಕರನ್ನು ಸೆಳೆಯುತ್ತಿದೆ. ದಿನ ಕಳೆದಂತೆ ಇಲ್ಲಿಗೆ ಭೇಟಿ ನೀಡುವವರ ಸಂಖ್ಯೆ ಹೆಚ್ಚುವ ಸಾಧ್ಯತೆ ಇದೆ.ಬೆಟ್ಟದ ತಪ್ಪಲಿನಿಂದ ರಭಸವಾಗಿ ಹರಿಯುವ ನೀರು 40 ಅಡಿ ಎತ್ತರದಿಂದ ಧುಮುಕುತ್ತದೆ. ನೀರು ಬೀಳುವ ಅಡಿಯಲ್ಲಿ ನಿಸರ್ಗವೇ ಹಾಸು ಬಂಡೆ ನಿರ್ಮಿಸಿದೆ. ಬಂಡೆಗೆ ಅಪ್ಪಳಿಸಿದ ನೀರು ಹನಿ-ಹನಿಯಾಗಿ ಮೇಲಕ್ಕೆ ಚಿಮ್ಮುತ್ತದೆ. ಇದೇ ನೀರು ಗುಪ್ತಗಾಮಿನಿಯಂತೆ ಮುಂದೆ ಹರಿದು ಕೆರೆ ಸೇರುತ್ತದೆ.

ಬಹುತೇಕ ಜಲಪಾತಗಳನ್ನು ದೂರದಿಂದಲೇ ನಿಂತು ನೋಡಿ ಆನಂದಿಸಬಹುದು. ಆದರೆ, ಇಲ್ಲಿ ಮಕ್ಕಳಿಂದ ಹಿಡಿದು ಮುದುಕರವರೆಗೂ ನೀರು ಬೀಳುವ ಹಾಸು ಬಂಡೆಯ ಮೇಲೆ ಮಲಗಿ ಜಲಕ್ರೀಡೆಯಾಡಬಹುದು. ಕಸುವು ಹೊಂದಿದ ಯುವಕರು ಜಲಧಾರೆಗೆ ಮೈಯೊಡ್ಡಿ ಮೈ-ಮನ ಹಗುರ ಮಾಡಿಕೊಳ್ಳಬಹುದು. ಬೆಟ್ಟ ಏರಿ ಹೋದರೆ ಭೋರ್ಗರೆಯುವ ನೀರಿನ ಸದ್ದೇ ಹೊಸ ಮಾರ್ಗ ತೋರುತ್ತದೆ. ಸಮೀಪಿಸಿದಾಗ ಹಾಲಿನ ನೊರೆಯಂತೆ ಜಲಪಾತದಿಂದ ಜರಿಯುವ ಜಲದ ಐಸಿರಿ ಕಣ್ಣಿಗೆ ಆನಂದ ಉಂಟುಮಾಡುತ್ತದೆ.

‘ನಬಾರ್ಡನಿಂದ ರಸ್ತೆ ನಿರ್ಮಾಣಕ್ಕೆ ರೂ 25 ಲಕ್ಷ ಮಂಜೂರಾಗಿದೆ. ಆದರೆ, ಕಾಯ್ದಿಟ್ಟ ಅರಣ್ಯವಾದ ಕಾರಣ ಕಾಮಗಾರಿ ಅನುಮತಿ ನೀಡಿಲ್ಲ. ಅರಣ್ಯ ಇಲಾಖೆ ಅನುಮತಿ ನೀಡಿದರೆ ರಸ್ತೆ ನಿರ್ಮಿಸಲು ಸಾಧ್ಯವಿದೆ’ ಎನ್ನುತ್ತಾರೆ ತಾಲ್ಲೂಕು ಪಂಚಾಯಿತಿ ಸದಸ್ಯ ಪರಶುರಾಮಪ್ಪ ನಂದ್ಯಾಳ.

ಕಲ್ಲು–ಮುಳ್ಳಿನ ಹಾದಿ

ಮಳೆಗಾಲದ ಪ್ರಮುಖ ಪ್ರವಾಸಿ ತಾಣವಾಗುವ ಎಲ್ಲ ಅರ್ಹತೆ ಈ ಜಲಪಾತ ಹೊಂದಿದೆ. ಆದರೆ, ಜಲಪಾತಕ್ಕೆ ಬರಲು ರಸ್ತೆಯದ್ದೇ ದೊಡ್ಡ ತೊಂದರೆ. ಕಬ್ಬರಗಿ ಗ್ರಾಮದಿಂದ ಸುಮಾರು ನಾಲ್ಕು ಕಿ.ಮೀ ಕಾಲ್ನಡಿಗೆಯಲ್ಲಿ ಹೋಗಬೇಕು. ಕಾಲಿನಲ್ಲಿ ಬಲವಿರುವ ಜನರು ಮಾತ್ರ ಈ ಜಲಪಾತಕ್ಕೆ ಬರುವಂತಾಗಿದೆ. ದಾರಿಯುದ್ದಕ್ಕೂ ಕಲ್ಲುಬಂಡೆ, ಮುಳ್ಳು, ಕಂಟಿಗಳನ್ನು ಎದುರಿಸಿ ನಡೆಯಬೇಕು. ಜಲಪಾತದ ಕೇಂದ್ರ ಸ್ಥಳ ತಲುಪಲು ಪರದಾಡಬೇಕಾದ ಸ್ಥಿತಿ ಚಾರಣ ಪ್ರಿಯರದ್ದು, ಕಬ್ಬರಗಿ ಗ್ರಾಮದಲ್ಲಿ ಚರಂಡಿ, ರಸ್ತೆ ವ್ಯವಸ್ಥೆ ಸರಿಯಾಗಿಲ್ಲ. ಚರಂಡಿ ದಾಟಿಕೊಂಡೆ ಮುಂದೆ ಸಾಗಬೇಕು. ಜಲಪಾತದ ಸಮೀಪ ಯಾವುದೇ ವಾಹನ ಹೋಗಲು ಸಾಧ್ಯವಿಲ್ಲ. ಹೀಗಾಗಿ ಬೈಕ್‌ಗಳು 2 ಕಿ.ಮೀ ದೂರದಲ್ಲಿ ನಿಂತರೆ, ಉಳಿದ ವಾಹನಗಳು ನಾಲ್ಕು ಕಿ.ಮೀ ದೂರದಲ್ಲಿ ನಿಲ್ಲಬೇಕಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT