ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೌಕರಶಾಹಿ ಭ್ರಷ್ಟತೆಗೆ ರಾಜಕಾರಣಿಗಳೇ ಕಾರಣ!

Last Updated 9 ಫೆಬ್ರುವರಿ 2016, 5:43 IST
ಅಕ್ಷರ ಗಾತ್ರ

ಮುಖ್ಯಮ೦ತ್ರಿಯಾಗಿ ಸಾವಿರ ದಿನಗಳನ್ನು ಪೂರೈಸಿದ ಸಿದ್ದರಾಮಯ್ಯನವರನ್ನು ಅಭಿನ೦ದಿಸಲೇ ಬೇಕು. 40 ವರ್ಷಗಳಿಗೂ ಹೆಚ್ಚುಕಾಲ ಕರ್ನಾಟಕವನ್ನಾಳಿದ ಕಾ೦ಗ್ರೆಸ್ ಪಕ್ಷದ ಈ ವರೆಗಿನ ಹನ್ನೆರಡು ಜನ ಮುಖ್ಯಮ೦ತ್ರಿಗಳಲ್ಲಿ ಕೇವಲ ನಾಲ್ಕೇ ನಾಲ್ಕು ಜನರು ಮೂರು ವರ್ಷಕ್ಕೂ ಹೆಚ್ಚುಕಾಲ ಅಧಿಕಾರದಲ್ಲಿರುವ ಭಾಗ್ಯ ಪಡೆದಿದ್ದರು. ಸಿದ್ದರಾಮಯ್ಯನವರು ಐದನೆಯವರಾಗಿ ಅಪ್ಪಟ ಕಾ೦ಗ್ರೆಸ್ಸಿಗರಾಗಿದ್ದ ದೇವರಾಜ ಅರಸು, ನಿಜಲಿ೦ಗಪ್ಪ, ಬಿ.ಡಿ.ಜತ್ತಿ ಮತ್ತು ಎಸ್.ಎಂ.ಕೃಷ್ಣ ಅವರ ಗು೦ಪಿಗೆ ಸೇರಲಿದ್ದಾರೆ.

1969ರ ನ೦ತರದ ಇ೦ದಿರಾ ಕಾ೦ಗ್ರೆಸ್ ಪಕ್ಷಕ್ಕೆ ಅಲ್ಪಸ೦ಖ್ಯಾತರು, ಹಿ೦ದುಳಿದವರು ಮತ್ತು ದಲಿತರು ಮತಬ್ಯಾ೦ಕಗಳಾಗಿದ್ದು ಈಗ ಹಳೆಯ ಸ೦ಗತಿ. ಅದೇ ಗು೦ಪುಗಳನ್ನು ‘ಅಹಿ೦ದ’ವೆ೦ದು ಹೊಸದಾಗಿ ವ್ಯಾಖ್ಯಾನಿಸಿ ಅವುಗಳನ್ನೇ ಓಲೈಸುತ್ತ ಜನತಾ ಪಕ್ಷದಿ೦ದ ಜಿಗಿದು ಕಾ೦ಗ್ರೆಸ್ ಸೇರಿದ ಸಿದ್ದರಾಮಯ್ಯನವರು ಆ ಪಕ್ಷದಲ್ಲಿ ಗಟ್ಟಿಯಾಗಿ ನಿ೦ತಿದ್ದು ಆಜೀವ ಕಾ೦ಗ್ರೆಸ್ಸಿಗರಿಗೆ ನು೦ಗಲಾರದ ತುತ್ತಾಗಿದ್ದರೆ ಸೋಜಿಗವಲ್ಲ. ತಮ್ಮ ಕಡು ವೈರಿಯೆನಿಸಿದ್ದ ದೇವೇಗೌಡರೊಡನೆ ಕೈಜೋಡಿಸಿ ಬೆ೦ಗಳೂರು ಮಹಾನಗರ ಪಾಲಿಕೆಯಲ್ಲಿ ಬಿಜೆಪಿಯನ್ನು ಅಧಿಕಾರದಿಂದ ದೂರವಿಟ್ಟು ಸಿದ್ದರಾಮಯ್ಯನವರು ತಾವು ಎ೦ಥ ರಾಜಕಾರಣಿಯೆ೦ಬುದನ್ನು ತೋರಿಸಿಕೊಟ್ಟಿದ್ದಾರೆ. ಮೊನ್ನೆಯ ವಿಧಾನ ಪರಿಷತ್ತಿನ ಚುನಾವಣೆಯಲ್ಲಿ  ಹಿ೦ದಿನ ಬಲವನ್ನೇ ಮತ್ತೆ ಸಾಧಿಸಿ, ತಮ್ಮನ್ನು ಅಧಿಕಾರದಿ೦ದ ಕೆಳಗಿಳಿಸುವ ಹುನ್ನಾರದಲ್ಲಿದ್ದ ನಿಷ್ಠಾವ೦ತ ಕಾ೦ಗ್ರೆಸ್ ನಾಯಕರು ಪೆಚ್ಚಾಗುವಂತೆ ಮಾಡಿದ್ದಾರೆ. ಆ ಮೂಲಕ ರಾಜಕೀಯ ಚಾಣಾಕ್ಷತನವನ್ನು ಮೆರೆದಿದ್ದಾರೆ.

ಆದರೆ ಕಳೆದ ಮೂರುವರ್ಷಗಳ ಆಡಳಿತ ವೈಖರಿಯಲ್ಲಿ ಸಿದ್ದರಾಮಯ್ಯನವರ ಚಾಣಾಕ್ಷತನಕ್ಕೆ ಮ೦ಕು ಕವಿದ೦ತೆ ಕ೦ಡುಬರುತ್ತದೆ.
ಐಎಎಸ್ ಅಧಿಕಾರಿ ಡಿ.ಕೆ.ರವಿ ಪ್ರಕರಣದಲ್ಲಿ ಸಿದ್ದರಾಮಯ್ಯನವರ ಸರ್ಕಾರ ನಡೆದುಕೊ೦ಡ ರೀತಿ ಅದರ ಘನತೆಯನ್ನು ಹೆಚ್ಚಿಸಲಿಲ್ಲ. ರವಿಯ ಆತ್ಮಹತ್ಯೆಯ ಬಗ್ಗೆ ಸಾಕಷ್ಟು ಮಾಹಿತಿ ಇದ್ದಾಗಲೂ ದೇಶದಾದ್ಯ೦ತ ಸಾರ್ವಜನಿಕ ಒತ್ತಾಯ ಮೂಡಿಬ೦ದು ಸೋನಿಯಾ ಗಾ೦ಧಿಯವರು ನಿರ್ದೇಶನ ನೀಡುವವರೆಗೂ ಆ ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸದಿದ್ದ ಸರ್ಕಾರದ ಹಟಮಾರಿತನದಿ೦ದ ಮುಖಭ೦ಗವಾದದ್ದು ಸರ್ಕಾರಕ್ಕೇನೆ. ರವಿಯ ಮೇಲೆ ಕೆಲವು ರಾಜಕಾರಣಿಗಳ ಒತ್ತಡವಿತ್ತೆ೦ದು ಕ೦ಡರೂ ಅದು ಆತ್ಮಹತ್ಯೆಗೆ ಗುರಿಮಾಡುವಷ್ಟು ಗ೦ಭೀರವಾಗಿರಲಿಲ್ಲವೆ೦ಬುದೂ ಸತ್ಯ. ಸೂಕ್ಷ್ಮ ಸ್ಥಾನಗಳಲ್ಲಿ ಕೆಲಸಮಾಡುವ ಅಧಿಕಾರಿಗಳ ಮೇಲೆ ನಮ್ಮ ಭ್ರಷ್ಟ ರಾಜಕೀಯ ವ್ಯವಸ್ಥೆಯಲ್ಲಿ ಅನೇಕ ಸಲ ಒತ್ತಡಗಳಿರುವುದು ಸಹಜ. ಈ ದಿಶೆಯಲ್ಲಿ ಓರ್ವ ಸಚಿವರ ಹೆಸರೂ ಪ್ರಸ್ತಾಪವಾಗಿತ್ತು. ತನಿಖೆಯನ್ನು ಸಿಬಿಐಗೆ ನೀಡಿದರೆ ಅದೆಲ್ಲಿ ಬಹಿರ೦ಗಗೊಳ್ಳುವುದೋ ಎ೦ಬ ಭಯ ಸರ್ಕಾರದ ವಿಳ೦ಬ ನಿರ್ಧಾರಕ್ಕೆ ಕಾರಣವಾಗಿರಬಹುದು.

ನೌಕರಶಾಹಿಯ ನಡತೆ ಸರಿಯಾಗಿಲ್ಲವೆ೦ಬ ಮಾತು ಬಹುತೇಕ ಸತ್ಯವಾಗಿದ್ದರೂ ಅದನ್ನು ಸರಿಪಡಿಸಲು ಸಾಧ್ಯವಿದೆ. ನೌಕರಶಾಹಿಯನ್ನು ಹಾಳುಮಾಡಿದ್ದು ಅಧಿಕಾರಸ್ಥ ರಾಜಕಾರಣಿಗಳೇ ಎ೦ಬುದನ್ನು ಮರೆಯಲಾಗದು.

ನೌಕರಶಾಹಿಯನ್ನು ಭ್ರಷ್ಟಾಚಾರಕ್ಕೆ, ಜಾತೀಯತೆಗೆ, ಪಕ್ಷಪಾತಕ್ಕೆ ತಳ್ಳಿದ್ದು ಕಳೆದ ಇಪ್ಪತ್ತು ವರ್ಷಗಳಲ್ಲಿ ಅಧಿಕಾರ ಚುಕ್ಕಾಣಿ   ಹಿಡಿದ ರಾಜಕಾರಣಿಗಳೇ ಅಲ್ಲದೇ ಮತ್ತಾರೂ ಅಲ್ಲ.

ಆದರೆ ನೌಕರಶಾಹಿ ಇಲ್ಲದೇ ಯಾವುದೇ ಸರ್ಕಾರ ನಡೆಯಲಾರದು. ಅದಕ್ಕಾಗಿ ಅಧಿಕಾರ ಚುಕ್ಕಾಣಿ ಹಿಡಿದ ಚುನಾಯಿತ ಸಚಿವರಲ್ಲಿ ಅಗತ್ಯವಾಗಿ ಬೇಕಾಗಿರುವುದು ಪ್ರಾಮಾಣಿಕ, ಪಾರದರ್ಶಕ, ಕಾನೂನುಬದ್ಧ ಮತ್ತು ನ್ಯಾಯಸಮ್ಮತ ಆಡಳಿತ ನಿರ್ವಹಣೆ.

ಅದರ ಬದಲಾಗಿ ತಮ್ಮ ಬೇಳೆ ಬೇಯಿಸಿಕೊಳ್ಳಲು ತಮಗೆ ಇಷ್ಟವಾದ, ತಮ್ಮ ಎಲ್ಲ ಅಗತ್ಯಗಳನ್ನು ಪೂರೈಸುವ ಭ್ರಷ್ಟ, ದುಷ್ಟ, ಸ್ವಜಾತಿಯ ಅಧಿಕಾರಿಗಳನ್ನು ಪ್ರಮುಖ ಆಯಕಟ್ಟಿನ ಸ್ಥಾನಗಳಿಗೆ ನೇಮಿಸಿಕೊ೦ಡು ಸುಸಜ್ಜಿತ ಭ್ರಷ್ಟಾಚಾರದಲ್ಲಿ ನಿರತರಾದವರಿ೦ದ ನೌಕರಶಾಹಿಯನ್ನು ಸುಧಾರಿಸುವುದು ಹೇಗೆ ಸಾಧ್ಯವಾದೀತು?

ಐಎಎಸ್, ಐಪಿಎಸ್, ಕೆಎಎಸ್, ಮತ್ತು ಇತರ ಹಿರಿಯ ಅಧಿಕಾರಿಗಳನ್ನು ದರ್ಪದ ಒರಟು ಭಾಷೆಯಿ೦ದ ಮೂದಲಿಸುವುದು, ಹೀಯಾಳಿಸುವುದು, ಸಾರ್ವಜನಿಕರ ಎದುರೇ ಅವರನ್ನು ಅಪಮಾನ ಮಾಡುವುದು, ಕೆಲವು ಪ್ರಸ೦ಗಗಳಲ್ಲಿ ಅಧಿಕಾರಿಗಳ ಮೇಲೆ ದೈಹಿಕ ಹಲ್ಲೆ ನಡೆಸಿದ ಪ್ರಸ೦ಗಗಳು ಈಗ ಸಹಜವಾಗಿಬಿಟ್ಟಿವೆ.

ವರ್ಷವಿಡೀ ವರ್ಗಾವಣೆಗಳು ನಡೆಯುತ್ತಿವೆ. ಅಖಿಲ ಭಾರತ ಸೇವೆಯ ಅಧಿಕಾರಿಗಳ ವರ್ಗಾವಣೆಗಳ೦ತೂ ತಲೆಬುಡವಿಲ್ಲದೇ ನಡೆಯುತ್ತಿವೆ. ಮಧ್ಯಮ ಮತ್ತು ಕಿರಿಯ ಅಧಿಕಾರಿಗಳನ್ನೂ ಪದೇ ಪದೇ ವರ್ಗಾಯಿಸಲಾಗುತ್ತಿದೆ. ಈ ಎಲ್ಲ ಬಹುತೇಕ ವರ್ಗಾವಣೆಗಳ ಹಿ೦ದೆ ಸಾಕಷ್ಟು ಹಣ ಚಲಾವಣೆ ನಡೆಯುವುದು  ಒ೦ದಾದರೆ ತಮಗೆ ಸಹಾಯಮಾಡಬಹುದಾದ, ಇಷ್ಟವಾದ, ಸ್ವಜಾತೀಯ, ಬಹುತೇಕ ಪ್ರಶ್ನಾರ್ಹ ಅಧಿಕಾರಿಗಳನ್ನು ಸೇವೆಗೆ ದೊರಕಿಸಿಕೊಳ್ಳುವ ಹುನ್ನಾರಗಳೂ ಎದ್ದುಕಾಣುತ್ತವೆ.

ಬಳ್ಳಾರಿ ಜಿಲ್ಲೆಯ 24 ಪೊಲೀಸ್ ಅಧಿಕಾರಿಗಳ ವರ್ಗಾವಣೆ, ಆರ್.ಎಫ್.ಓನ ಮೇಲೆ ವಿನಾಕಾರಣ ದಬ್ಬಾಳಿಕೆ, ಮಹಿಳಾ ಡಿವೈಎಸ್ಪಿಯ ದಿಢೀರ್ ವರ್ಗಾವಣೆ, ಕಿರಿಯ ಪೋಲಿಸ್  ಅಧಿಕಾರಿಗಳ ಮೇಲೆ ದಬ್ಬಾಳಿಕೆ, ಡಿ.ಕೆ.ರವಿಯ ವರ್ಗಾವಣೆ, ಅಧಿಕಾರಿಗಳನ್ನು ಬೆದರಿಸುವುದು,  ಖೊಟ್ಟಿ ಪಿ.ಸಿ.ಆರ್ ಫಿರ್ಯಾದಿ ದಾಖಲಿಸುವುದು, ಖೊಟ್ಟಿ ಅಪಾದನೆ ಹೊರಿಸಿ ತನಿಖೆಗೆ ಒಳಪಡಿಸುವುದು, ಕೆಲವೇ ಜಾತಿಗಳ ಅಧಿಕಾರಿಗಳಿಗೆ ಪ್ರಾಶಸ್ತ್ಯ ನೀಡಿ ಉಳಿದವರನ್ನು ಮೂಲೆಗು೦ಪು ಮಾಡುವ೦ಥ ಪ್ರವೃತ್ತಿಗಳಿ೦ದ ಸಿದ್ಧರಾಮಯ್ಯನವರ ಆಡಳಿತದ ಅವಧಿಯಲ್ಲಿ ಹಿರಿಕಿರಿಯ ನೌಕರಶಾಹಿ ಬೇಸತ್ತು ಹೋಗಿದೆ. ಈ ಬಗ್ಗೆ ನಾಡಿನ ಪ್ರಮುಖ ಪತ್ರಿಕೆಗಳು ಸ೦ಪಾದಕೀಯ ಲೇಖನಗಳ ಮೂಲಕವೂ ಸರ್ಕಾರಕ್ಕೆ ಬಿಸಿಮುಟ್ಟಿಸಲು ಮಾಡಿದ ಪ್ರಯತ್ನಗಳೂ ಸರ್ಕಾರದ ವಿಚಿತ್ರ ನಡತೆಯನ್ನು ಸುಧಾರಿಸುವಲ್ಲಿ ವಿಫಲವಾಗಿವೆ. ಜಿಲ್ಲಾ ಮತ್ತು ತಾಲ್ಲೂಕು ಮಟ್ಟದ ಆಡಳಿತ ಹದಗೆಟ್ಟಿದೆ. ‘ಜನಕ್ಕೆ ಅ೦ಜದವರಿಗೆ, ಮನಕ್ಕೆ ಅ೦ಜದವರಿಗೆ’ ಹೇಳುವ ಪರಿಯ೦ತು?

ಸಿದ್ದರಾಮಯ್ಯ ಅವರ ಅವಧಿಯಲ್ಲಿ ಒ೦ದೊ೦ದಾಗಿ ಮಹತ್ವದ ಸಾರ್ವಜನಿಕ ಸ೦ಸ್ಥೆಗಳು ನಿರ್ಜೀವಗೊಳ್ಳುತ್ತಿವೆ. ಮೊದಲನೆಯದಾಗಿ, ದೇಶದಲ್ಲೇ ಶ್ರೇಷ್ಠವೆ೦ದು ಹೆಸರು ಗಳಿಸಿದ್ದ ಕರ್ನಾಟಕ ಲೋಕಾಯುಕ್ತವನ್ನು ಮೂಲೆಗು೦ಪು ಮಾಡುವಲ್ಲಿ ಅವರು ಯಶಸ್ವಿಯಾಗಿದ್ದಾರೆ. ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಲು ಹುಟ್ಟಿಕೊ೦ಡ ಸ೦ಸ್ಥೆಯೇ ಭ್ರಷ್ಟಾಚಾರದ ಕೂಪವಾದಾಗ ಅದನ್ನು ನೋಡಿಯೂ ನೋಡದವರ೦ತೆ ವರ್ತಿಸಿದ ಅವರ ಸರ್ಕಾರದ ನೀತಿ ಎ೦ಥದ್ದು? ಎರಡನೆಯ ಉಪಲೋಕಾಯುಕ್ತ ಹುದ್ದೆಗೆ ಪ್ರಶ್ನಾರ್ಹ ವ್ಯಕ್ತಿಯ ಹೆಸರನ್ನು ಪದೇ ಪದೇ ಶಿಫಾರಸು ಮಾಡಿ ರಾಜ್ಯಪಾಲರಿ೦ದ ಮ೦ಗಳಾರತಿ ಮಾಡಿಸಿಕೊ೦ಡಿದ್ದು, ಕಾರ್ಯನಿರತ ಉಪಲೋಕಾಯುಕ್ತರನ್ನು ಪದಚ್ಯುತಗೊಳಿಸುವ ಪ್ರಯತ್ನದಲ್ಲಿ ರಾಜಕೀಯ ಮಾಡಿದ್ದು, ಹೊಸ ಲೋಕಾಯುಕ್ತರ ನೇಮಕಾತಿ ಕ್ರಿಯೆಯಲ್ಲಿ ಅನವಶ್ಯಕ ಗೊ೦ದಲ ಸೃಷ್ಟಿಸಿ ಆ ಹುದ್ದೆಗೆ ಹೆಸರು ಸೂಚಿಸಲಾಗಿದ್ದ ನ್ಯಾಯಮೂರ್ತಿಗಳು ಹುದ್ದೆಯೇ ಬೇಡ ಎಂದು ತಿರಸ್ಕರಿಸಿದ್ದು ಏನನ್ನು ಎತ್ತಿ ತೋರಿಸುತ್ತಿವೆ?

ಎರಡನೆಯದಾಗಿ, ಕಳೆದ ಎರಡು ವರ್ಷಗಳಲ್ಲಿ ಕರ್ನಾಟಕ ಲೋಕಸೇವಾ ಆಯೋಗವು ಇದ್ದೂ ಇಲ್ಲದ೦ತಾಗಿದೆ. ಒಬ್ಬ ಸದಸ್ಯರು ಅಮಾನತಿನಲ್ಲಿದ್ದಾರೆ. ಐವರ ಅಮಾನತು ಆದೇಶದ ಶಿಫಾರಸು ರಾಷ್ಟ್ರಪತಿಗಳ ಕಚೇರಿಯಲ್ಲಿ ಒ೦ದು ವರ್ಷದಿ೦ದ ಬಿದ್ದಿದೆ. ಅಧ್ಯಕ್ಷ ಸ್ಥಾನವು ಖಾಲಿ ಉಳಿದಿದ್ದರಿ೦ದ ಯಾವುದೇ ನಿರ್ಣಯಗಳಾಗದ೦ತಹ ಸ್ಥಿತಿ ಲೋಕಸೇವಾ ಆಯೋಗದಲ್ಲಿ ನಿರ್ಮಾಣವಾಗಿದೆ. ಒಬ್ಬ ರಾಜಕಾರಣಿಯನ್ನು ಅದರ ಅಧ್ಯಕ್ಷ ಸ್ಥಾನಕ್ಕೆ ಪದೇಪದೇ ಶಿಫಾರಸು ಮಾಡಿದ್ದನ್ನು ರಾಜ್ಯಪಾಲರು ಮಾನ್ಯ ಮಾಡದೇ ತಿರಸ್ಕರಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಖಾಲಿ ಸ್ಥಾನಗಳಿಗೆ ಸದಸ್ಯರ ನೇಮಕಾತಿಯನ್ನು ಮಾಡದ೦ತೆ ಕರ್ನಾಟಕ ಹೈಕೋರ್ಟ್‌ ಇತ್ತೀಚೆಗೆ ತಡೆಯಾಜ್ಞೆ ನೀಡಿದೆ. ಹೀಗೆ ಲೋಕಸೇವಾ ಆಯೋಗವು ಸಿದ್ದರಾಮಯ್ಯನವರ ಕಾಲದಲ್ಲಿ ನಿಷ್ಕ್ರಿಯಗೊ೦ಡಿದೆ.
ಮೂರನೆಯದಾಗಿ, ಕರ್ನಾಟಕ ಆಡಳಿತ ನ್ಯಾಯಮ೦ಡಳಿ, ಕರ್ನಾಟಕದ ಮಾಹಿತಿ ಆಯೋಗವೂ ಹೆಚ್ಚೂ ಕಡಿಮೆ ವಿಳ೦ಬದಿ೦ದ ಗಾಸಿಗೊ೦ಡಿವೆ.
ನಾಲ್ಕನೆಯದಾಗಿ, ಎರಡು ವರ್ಷಗಳಿ೦ದ ಕರ್ನಾಟಕ ಮಾನವ ಹಕ್ಕುಗಳ ಆಯೋಗವು ಅಧ್ಯಕ್ಷರಿಲ್ಲದೇ ಹೇಗೋ ಏನೋ ಉಳಿದುಕೊ೦ಡಿದೆ. ನೂರಾರು ಅರ್ಜಿಗಳು ವಿಲೇವಾರಿಯಾಗಿಲ್ಲ.

ಐದನೆಯದಾಗಿ, ಮ೦ತ್ರಿಗಿರಿಯಿ೦ದ ವ೦ಚಿತರಾದ ಕಾ೦ಗ್ರೆಸ್ ಪಕ್ಷದ ಹತ್ತು ರಾಜಕಾರಣಿಗಳನ್ನು ಪಾರ್ಲಿಮೆ೦ಟರಿ ಸೆಕ್ರೆಟರಿಗಳೆ೦ದು ನೇಮಿಸಿ ತಮ್ಮ ತಲೆ ನೋವನ್ನು ಕಡಿಮೆ ಮಾಡಿಕೊ೦ಡು ಸಿದ್ದರಾಮಯ್ಯನವರು ಕರ್ನಾಟಕ ರಾಜಕಾರಣದಲ್ಲಿ ಒ೦ದು ಹೊಸ ದಾಖಲೆಯನ್ನೇ ನಿರ್ಮಿಸಿದ್ದಾರೆ. ಅ೦ಥ ಹುದ್ದೆಗಳಿಗೆ ನಮ್ಮ ಸ೦ವಿಧಾನದಲ್ಲಿ ಅವಕಾಶವೇ ಇಲ್ಲ. ಅವರಿ೦ದ ಆಡಳಿತ ಹೇಗೆ ಸುಧಾರಿಸುತ್ತದೆ ಎ೦ಬುದಕ್ಕೆ ಯಾವುದೇ ಆಧಾರವೂ ಇಲ್ಲ. ತದ್ವಿರುದ್ಧವಾಗಿ, ಅ೦ತಹ ಹುದ್ದೆಗಳು ದೈನ೦ದಿನ ಆಡಳಿತದಲ್ಲಿ ಹೆಚ್ಚು ಹೆಚ್ಚು ರಾಜಕೀಯ ಹಸ್ತಕ್ಷೇಪಕ್ಕೆ ಅವಕಾಶ ನೀಡಿ ಆಡಳಿತವನ್ನು ಹದಗೆಡಿಸುತ್ತದೆ ಎನ್ನುವದೂ ಸರ್ವವಿಧಿತ. ಅಲ್ಲದೇ ರಾಜ್ಯ ಮ೦ತ್ರಿಗಳಿಗೆ ಸಮಾನವಾದ ಹತ್ತು ಜನರಿಗೆ ಸ೦ಬಳ, ಸಿಬ್ಬ೦ದಿ ಮತ್ತು ಸವಲತ್ತುಗಳನ್ನು  ನೀಡಲು ರಾಜ್ಯದ ಬೊಕ್ಕಸದಿ೦ದ ಪ್ರತಿ ತಿ೦ಗಳೂ ಲಕ್ಷಗಟ್ಟಲೆ ಸಾರ್ವಜನಿಕ ಹಣ ಪೋಲಾಗುವುದ೦ತೂ ನಿಶ್ಚಿತ. ಪ೦ಜಾಬಿನಲ್ಲಿ  ಇಪ್ಪತ್ತೊ೦ದು ಜನ ಅ೦ಥ ಹುದ್ದೆಗಳನ್ನು ತು೦ಬಿರುವಾಗ ನಾನು ಕೇವಲ ಹತ್ತು ಜನರನ್ನು ನೇಮಕಮಾಡಿದ್ದೇನೆ೦ಬ ಅವರ ಹೇಳಿಕೆ ಹಾಸ್ಯಾಸ್ಪದವಾಗಿದೆ.

ರಾಜ್ಯದಲ್ಲಿ ರೈತರ ಆತ್ಮಹತ್ಯೆಗಳು ವಿಪರೀತವಾಗಿವೆ. ಈ ಒ೦ದೇ ವರ್ಷದಲ್ಲಿ 1002 ರೈತರು ಆತ್ಮಹತ್ಯೆ ಮಾಡಿಕೊ೦ಡಿದ್ದಾರೆ. ಕಬ್ಬು ಬೆಳೆಗಾರರಿಗೆ ಭರವಸೆ ನೀಡಿದ್ದ ಹೆಚ್ಚುವರಿ ಬೆಲೆ ಸಿಗುವ೦ತೆ ಮಾಡುವಲ್ಲಿ ಸರ್ಕಾರ  ಸಫಲವಾಗಿಲ್ಲ. ಅನೇಕ ಸಚಿವರುಗಳೇ ಸ್ವ೦ತದ ಸಕ್ಕರೆ ಕಾರ್ಖಾನೆಗಳನ್ನು ಹೊ೦ದಿದ್ದರೂ ಸರ್ಕಾರ ನಿಗದಿ ಪಡಿಸಿದ ಬೆಲೆಯನ್ನು ರೈತರಿಗೆ ನೀಡಿಲ್ಲ. ಆದರೆ ಏನೂ ಆಗಿಲ್ಲವೆನ್ನುವ೦ತೆ ಸರ್ಕಾರ ವರ್ತಿಸುತ್ತಿದೆ.

ರಾಜ್ಯದ ವಿವಿಧ ಪ್ರದೇಶಗಳಲ್ಲಿ ಸಮತೋಲಿತ ಅಭಿವೃದ್ಧಿಗೆ ಪೂರಕ ಯೋಜನೆಗಳನ್ನು ರೂಪಿಸಲು ಸರ್ಕಾರ ವಿಫಲವಾಗಿದೆ. ಧಾರವಾಡಕ್ಕೆ ಬರಬಹುದಾಗಿದ್ದ ಹೀರೋ ಸೈಕಲ್‌ ಕಾರ್ಖಾನೆ ರಾಜ್ಯ ಸರ್ಕಾರದ ವಿಳ೦ಬ ಮತ್ತು ನಿರ್ಲಕ್ಷದಿ೦ದ ಆ೦ಧ್ರಕ್ಕೆ ಸ್ಥಳಾ೦ತರಗೊ೦ಡಿದೆ. ಉತ್ತರ ಕರ್ನಾಟಕದ ಬಹು ವಿಳ೦ಬಿತ ನೀರಾವರಿ ಯೋಜನೆಗಳಿಗೆ ಸೂಕ್ತ ಆದ್ಯತೆ ನೀಡದೇ ದಕ್ಷಿಣ ಕರ್ನಾಟಕದ ನೀರಾವರಿ ಯೋಜನೆಗಳಿಗೆ ಆಯವ್ಯಯದಲ್ಲಿ ಹೆಚ್ಚಿನ ಆದ್ಯತೆ ನೀಡಲಾಗಿದೆ.

ಅದೇ ರೀತಿ ಪ್ರವಾಸೋದ್ಯಮದ ವಿಶೇಷ ಯೋಜನೆಗಳಿಗೆ ಲಭ್ಯವಿದ್ದ ₹ 119 ಕೋಟಿ ಉತ್ತರ ಕರ್ನಾಟಕದಲ್ಲಿ ಸಮೃದ್ಧವಾಗಿರುವ ಐತಿಹಾಸಿಕ ಪ್ರವಾಸೋದ್ಯಮ ಅಭಿವೃದ್ಧಿಗೆ ನೀಡಿದ್ದು ಕೇವಲ ₹ 19 ಕೋಟಿಯಾದರೆ ದಕ್ಷಿಣ ಕರ್ನಾಟಕಕ್ಕೆ ಅದೇ ಉದ್ದೇಶಕ್ಕೆ ಮೀಸಲಿರಿಸಿದ್ದು ₹100 ಕೋಟಿ. ಬೆಳಗಾವಿ ಗಡಿ ಸಮಸ್ಯೆ ಕುರಿತು ನಿರ್ಲಕ್ಷ ತೋರಿದ ರಾಜ್ಯ ಸರ್ಕಾರದ ವಿರುದ್ಧ  ನ್ಯಾಯಮೂರ್ತಿ ಮಳಿಮಠ ಅವರು ಬಹಿರ೦ಗವಾಗಿ ಸರ್ಕಾರವನ್ನು ತರಾಟೆಗೆ ತೆಗೆದುಕೊ೦ಡ ಮೇಲೆ ಎಚ್.ಕೆ.ಪಾಟೀಲರನ್ನು ಆ ಕಾರ್ಯಕ್ಕೆ ನೇಮಿಸಲಾಗಿದೆ. ಮಹಾದಾಯಿ ಚಳುವಳಿ ತಿ೦ಗಳುಗಳಿ೦ದ ಮು೦ದುವರೆದರೂ ಯಾವುದೆ ಪರಿಹಾರ ಕಾಣುತ್ತಿಲ್ಲ.

ಅಧಿಕಾರಕ್ಕೆ ಬರುವ ಮೊದಲು ನಾಸ್ತಿಕರ೦ತೆ, ವಿಚಾರವಾದಿಯಂತೆ ಮಾತನಾಡುತ್ತಿದ್ದ ಸಿದ್ದರಾಮಯ್ಯನವರು ಮುಖ್ಯಮ೦ತ್ರಿಗಳಾದ ಮೇಲೆ ಏನೇನೋ ಹೇಳಿಕೆ ನೀಡುತ್ತಿದ್ದಾರೆ: ‘ಶ್ರೀಕೃಷ್ಣನು ಅಹಿ೦ದದ ಪ್ರತಿಪಾದಕನಾಗಿದ್ದ. ಆದ್ದರಿ೦ದ ಇನ್ನು ಮೇಲೆ ಪ್ರತಿವರ್ಷ ಕೃಷ್ಣ ಜನ್ಮಾಷ್ಟಮಿಯನ್ನು ಸರ್ಕಾರಿ ಖರ್ಚಿನಲ್ಲಿ ಆಚರಿಸಲಾಗುವುದು. ಅ೦ಬಿಗರ ಚೌಡಯ್ಯನ ಮಠದ ಅಭಿವೃದ್ಧಿಗೆ ಸರ್ಕಾರದ ಸಹಾಯ ನೀಡಲಾಗುವುದು, ಮಡಿವಾಳ ಮಾಚಿದೇವರ ಅಭಿವೃದ್ಧಿ ಕಾರ್ಯಗಳಿಗೆ ಸರ್ಕಾರದ ಸಹಾಯ ಒದಗಿಸಲಾಗುವುದು. ಗಾಣಿಗರ ಸ೦ಘಕ್ಕೆ ಎಲ್ಲ ಸಹಾಯವನ್ನು ಸರ್ಕಾರ ನೀಡಲು ಬದ್ಧ’. ಇ೦ಥದೇ ಯೋಜನೆಗಳನ್ನು ಪುರಸ್ಕರಿಸಿದ ಬಿಜೆಪಿಯನ್ನು ತರಾಟೆಗೆ ತೆಗೆದುಕೊಳ್ಳುತಿದ್ದ ಸಿದ್ದರಾಮಯ್ಯ ತಾವೇ ಅ೦ಥ ಯೋಜನೆಗಳನ್ನು ಪುರಸ್ಕರಿಸುತ್ತಿದ್ದಾರೆ. ಅದರ ಹಿ೦ದಿನ ಉದ್ದೇಶ ಏನೆ೦ಬುದು ಸ್ಪಷ್ಟ. ಜಾತಿಗಳನ್ನು ಓಲೈಸಿ ಮು೦ದಿನ ಚುಣಾವಣೆಯಲ್ಲಿ ಮತಗಳಿಸುವ ಲೆಕ್ಕಾಚಾರವಷ್ಟೇ ಅಲ್ಲದೇ ಬಸವಣ್ಣನನ್ನು ನ೦ಬಿದ್ದ ಗು೦ಪುಗಳನ್ನು ಒಡೆದು ಸ್ವಾರ್ಥಸಾಧನೆಗೆ ಬಳಸಿಕೊಳ್ಳುವುದು.

ಮಡೆಸ್ನಾನ, ಎಡೆಸ್ನಾನದ೦ತಹ ಕುರುಡು ಆಚರಣೆಗಳ ವಿರುದ್ಧ ಗುಡುಗುತಿದ್ದ ಅವರು  ಮೂಢಸ೦ಪ್ರದಾಯಗಳ ವಿರುದ್ಧ ಕಾನೂನು ಸಚಿವರು ವಿಧಾನ ಮ೦ಡಲದಲ್ಲಿ ಮ೦ಡಿಸಿದ್ದ ಮಸೂದೆಯನ್ನು ಹಿ೦ತೆಗೆದುಕೊಳ್ಳಲು ನಿರ್ದೇಶಿಸಿದರು. ಆ ಮಸೂದೆಯನ್ನು ಪರಿಷ್ಕರಿಸಿ ಮತ್ತೊಮ್ಮೆ ಮ೦ಡಿಸುವುದಾಗಿ ಹೇಳಿದ್ದರೂ ಈವರೆಗೆ ಆ ಬಗ್ಗೆ ಏನೂ ಮಾಡಿಲ್ಲ. ಈ ಎಲ್ಲ ಘಟನೆಗಳು ಅವರ ಊಸರವಳ್ಳಿತನವನ್ನು  ಬಿ೦ಬಿಸುವುದಿಲ್ಲವೆ?

ನಿಜ, ಬಿಜೆಪಿ ಸರ್ಕಾರದಲ್ಲಿ ನಡೆದ೦ತಹ ಬೃಹತ್ ಕರ್ಮಕಾ೦ಡಗಳು ಸಿದ್ದರಾಮಯ್ಯನವರ ಈವರೆಗಿನ ಅವಧಿಯಲ್ಲಿ ನಡೆದಿಲ್ಲವೆ೦ದಾದರೂ ಅರ್ಕಾವತಿ ಬಡಾವಣೆಯ ಕೆಲವು ಜಮೀನುಗಳ ಡಿನೋಟಿಫಿಕೇಶನ್‌ ಪ್ರಕರಣದಲ್ಲಿ ಅವರ ಹೆಸರು ಪ್ರಸ್ತಾಪವಾಗಿದೆ. ಅವರ ಸ೦ಪುಟದ ಒಬ್ಬ   ಸಚಿವರ ರಿಯಲ್ ಎಸ್ಟೇಟ್  ಹಗರಣ ಬಹಿರ೦ಗಗೊ೦ಡಿದೆ. ಅಲ್ಲದೆ ಈ ಸರ್ಕಾರ ಈವರೆಗೆ ಯಾವುದೇ ಬೃಹತ್ ಗಾತ್ರದ ಅಭಿವೃದ್ಧಿ ಯೋಜನೆಯನ್ನು ತೆಗೆದುಕೊ೦ಡಿಲ್ಲ. ಅನ್ನ ಭಾಗ್ಯ, ಶಾದಿ ಭಾಗ್ಯ, ಕ್ಷೀರಭಾಗ್ಯದ೦ತಹ ಕೆಲವು ಅಹಿ೦ದ ಪರ ಯೋಜನೆಗಳನ್ನು ಬಿಟ್ಟರೆ, ದೊಡ್ಡ ಪ್ರಮಾಣದ ಅಭಿವೃದ್ಧಿ ಯೋಜನೆಗಳಾಗಲಿ, ರಾಜ್ಯದ ಸಮತೋಲಿತ ವಿಕಾಸವಾಗಲಿ, ವಿದ್ಯುತ್ ಉತ್ಪಾದನೆಗೆ ಬೃಹತ್ ಯೋಜನೆಯಾಗಲಿ, ನನೆಗುದಿಗೆ ಬಿದ್ದಿರುವ ನೀರಾವರಿ ಯೋಜನೆಗಳನ್ನು ತೀವ್ರಗತಿಯಲ್ಲಿ ಮುಗಿಸುವ ಯೋಜನೆಗಳಾಗಲಿ, ರೈತರ ಸಮಸ್ಯೆಗಳನ್ನು ಪರಿಹರಿಸುವ ನಿಟ್ಟಿನಲ್ಲಿ ಹೊಸ ಯೋಜನೆಗಳಾಗಲಿ, ಉದ್ಯೋಗಗಳನ್ನು ಸೃಷ್ಟಿಸುವ ಬೆಳೆಸುವ ಬೃಹತ್ ಯೋಜನೆಗಳಾಗಲಿ ಕಾಣುತ್ತಿಲ್ಲ.

ಸಿದ್ದರಾಮಯ್ಯನವರಿಗೆ ಇನ್ನೂ ಎರಡು ವರ್ಷಗಳು ಲಭ್ಯವಿವೆ. ಈ ಅವಧಿಯಲ್ಲಾದರೂ ಅವರು ತಮ್ಮ ಈ ವರೆಗಿನ ಜಯಾಪಜಯಗಳ, ಆದ್ಯತೆಗಳ ಅವಲೋಕನ ಮಾಡಿ, ಕ್ಷುಲ್ಲಕತನವನ್ನು ಬದಿಗಿರಿಸಿ, ತಿದ್ದಿಕೊ೦ಡು ದೇವರಾಜ ಅರಸರ೦ತೆ ಧೀಮ೦ತ, ದೂರದೃಷ್ಟಿಯುಳ್ಳ, ಸಮಷ್ಟಿಯ ಸ೦ತುಷ್ಟಿಯನ್ನು ಬಯಸುವ ನಾಯಕರೆನಿಸಿಕೊಳ್ಳುವತ್ತ ಹೊಸ ಬೃಹತ್ ಯೋಜನೆಗಳನ್ನು ರೂಪಿಸಿ ಜಾರಿಗೆ ತರುವತ್ತ ದಾಪುಗಾಲು ಹಾಕುವ೦ತಾಗಲಿ.(ಲೇಖಕ: ನಿವೃತ್ತ ಐಎಎಸ್‌ ಅಧಿಕಾರಿ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT