ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನ್ಯಾಯ ಬೆಲೆ ಅಂಗಡಿಯಲ್ಲಿ ಅನ್ಯಾಯ ತಪ್ಪಿಸಿ: ಸೂಚನೆ

Last Updated 20 ಸೆಪ್ಟೆಂಬರ್ 2011, 8:40 IST
ಅಕ್ಷರ ಗಾತ್ರ

ಕೋಲಾರ: `ಜಿಲ್ಲೆಯ ನ್ಯಾಯಬೆಲೆ ಅಂಗಡಿಗಳಲ್ಲಿ ಅನ್ಯಾಯ ನಡೆಯುತ್ತಿದೆ. ಲಭ್ಯ ಧಾನ್ಯಪಟ್ಟಿ ಪ್ರಕಟಿಸುವುದಿಲ್ಲ. ತೂಕದಲ್ಲಿಯೂ ವ್ಯತ್ಯಾಸವಿರುತ್ತದೆ. ತಿಂಗಳಲ್ಲಿ ಕೆಲವೇ ದಿನ ಪಡಿತರ ವಿತರಿಸುವುದರಿಂದ ಎಲ್ಲರಿಗೂ ಧಾನ್ಯ ದೊರಕುತ್ತಿಲ್ಲ. ಇದನ್ನು ಸರಿಪಡಿಸಬೇಕು.~
-ನಗರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಸೋಮವಾರ ಮೊದಲ ಬಾರಿಗೆ ನಡೆದ ಜಿಲ್ಲಾ ಗ್ರಾಹಕರ ರಕ್ಷಣಾ ಪರಿಷತ್ ಸಭೆಯಲ್ಲಿ ಕೇಳಿ ಬಂದ ಮಾತುಗಳಿವು.

ಪರಿಷತ್‌ನ ಸದಸ್ಯ ಕೆ.ವಿ.ಜಗದೀಶ್ವರಾಚಾರಿ ಜಿಲ್ಲೆಯಲ್ಲಿ ಪಡಿತರ ವ್ಯವಸ್ಥೆಯ ಅಸಮರ್ಪಕ ಅಂಶಗಳ ಬಗ್ಗೆ ಗಮನ ಸೆಳೆದರು. ಗ್ರಾಮಾಂತರ ಪ್ರದೇಶಗಳ ನ್ಯಾಯ ಬೆಲೆ ಅಂಗಡಿಗಳಲ್ಲಿ ಕಳಪೆ ವಿತರಿಸಲಾಗುತ್ತಿದೆ. ಸೋಪ್ ತೆಗೆದುಕೊಳ್ಳದಿದ್ದರೆ ಧಾನ್ಯ ಕೊಡುವುದಿಲ್ಲ ಎಂದು ಬೆದರಿಸುವ ಉದಾಹರಣೆಗಳೂ ಇವೆ ಎಂದು ಅವರು ಆರೋಪಿಸಿದರು.

`ತಿಂಗಳಲ್ಲಿ ಕನಿಷ್ಠ 10 ದಿನವಾದರೂ ನ್ಯಾಯಬೆಲೆ ಅಂಗಡಿಗಳನ್ನು ತೆರೆದಿರಬೇಕು. ಆದರೆ ಬೆರೆಳೆಣಿಕೆಯಷ್ಟು ದಿನ ಮಾತ್ರ ಅಂಗಡಿ ತೆರೆದು, ಎಲ್ಲರಿಗೂ ಹಂಚಿದ್ದಾಯಿತು ಎಂದು ಮಾಲೀಕರು ಹೇಳುವುದರಿಂದ ಗ್ರಾಹಕರಿಗೆ ತೊಂದರೆಯಾಗುತ್ತಿದೆ. ಧಾನ್ಯಗಳ ಬೆಲೆ ಮತ್ತು ಲಭ್ಯ ಧಾನ್ಯಗಳ ಪಟ್ಟಿಯನ್ನು ಕೂಡ ಸ್ಪಷ್ಟವಾಗಿ ಪ್ರಕಟಿಸಿರುವುದಿಲ್ಲ ಎಂದರು.

ಎಪಿಎಲ್ ಕುಟುಂಬಗಳಿಗೆ ನೀಡಿರುವ ತಾತ್ಕಾಲಿಕ ಕಾರ್ಡ್ ಅನ್ನು ಮುಂದುವರಿಸುವ ಬದಲು ಶಾಶ್ವತವಾಗಿ ಕಾರ್ಡ್ ನೀಡಬೇಕು ಎಂಬ ಅವರ ಸಲಹೆಗೆ ಪ್ರತಿಕ್ರಿಯಿಸಿದ ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆ ಉಪನಿರ್ದೇಶಕ ಶ್ರೀನಿವಾಸಯ್ಯ, ಕಾರ್ಡ್ ವಿತರಿಸುತ್ತಿದ್ದ ಗುತ್ತಿಗೆ ಸಂಸ್ಥೆಯ ಕಾರ್ಯಾಚರಣೆ ಸ್ಥಗಿತಗೊಂಡಿದೆ ಎಂದು ತಿಳಿಸಿದರು.

`ಈ ಅಂಶವನ್ನು ಕೂಡಲೇ ಸರ್ಕಾರದ ಗಮನಕ್ಕೆ ತನ್ನಿ~ ಎಂದು ಜಿಲ್ಲಾಧಿಕಾರಿ ಮನೋಜ್‌ಕುಮಾರ್ ಮೀನಾ ಸೂಚಿಸಿದರು.

ಪಡಿತರ ಅಂಗಡಿಗಳಲ್ಲಿ ನೀಡುತ್ತಿರುವ ಸೀಮೆ ಎಣ್ಣೆ, ಪೆಟ್ರೋಲ್ ಬಂಕ್‌ಗಳಲ್ಲಿ ವಿತರಿಸುವ ಇಂಧನದ ಅಳತೆಯಲ್ಲಿ ಅಕ್ರಮಗಳು ನಡೆಯುತ್ತಿವೆ ಎಂದು ಜಗದೀಶ್ವರಾಚಾರಿ ಆರೋಪಿಸಿದರು.

ಜಿಲ್ಲಾ ರೈತ ಹಿತರಕ್ಷಣಾ ಸಮಿತಿ ಕಾರ್ಯದರ್ಶಿ ಎಂ.ಗೋವಿಂದಗೌಡ ಮಾತನಾಡಿ, ರೈತರಿಗೆ ಪೂರೈಸುವ ಕೀಟನಾಶಕ, ಗೊಬ್ಬರದ ಗುಣಮಟ್ಟದ ಕಡಿಮೆ ಇರುತ್ತದೆ. ಹಲವೆಡೆ ರಸೀದಿ ಕೊಡುವುದಿಲ್ಲ. ಕಳಪೆ ಕೀಟನಾಶಕ, ಗೊಬ್ಬರ ಬಳಕೆಯಿಂದ ಬೆಳೆ ಹಾನಿಯಾದರೆ ಪರಿಹಾರ ದೊರಕುವುದು ಕಷ್ಟವಾಗುತ್ತದೆ ಎಂದು ಹೇಳಿದರು.

ರೈತರಲ್ಲಿ ಮೂಡುವ ಈ ಅಭದ್ರತೆಯನ್ನು ನಿವಾರಿಸುವ ನಿಟ್ಟಿನಲ್ಲಿ ಉತ್ತಮ ಕೀಟನಾಶಕ, ಗೊಬ್ಬರ ವಿತರಣೆಗೆ ಕ್ರಮ ಕೈಗೊಳ್ಳಬೇಕು ಎಂದರು.

ಪರಿಷತ್‌ನ ಮತ್ತೊಬ್ಬ ಸದಸ್ಯ ವೆಂಕಟೇಶ್ ಮಾತನಾಡಿ, ಬಂಗಾರಪೇಟೆ, ಕೆಜಿಎಫ್ ಅಡುಗೆ ಅನಿಲ ವಿತರಣೆಯಲ್ಲಿ ತಾರತಮ್ಯ ನಡೆಯುತ್ತಿದೆ ಎಂದು ಆರೋಪಿಸಿದರು. ಗ್ರಾಹಕರ ತೊಂದರೆಗಳನ್ನು ನಿವಾರಿಸುವ ನಿಟ್ಟಿನಲ್ಲಿ ಸಂಘ-ಸಂಸ್ಥೆಗಳ ಸಹಯೋಗದಿಂದ ಜಾಗೃತಿ ಕಾರ್ಯಕ್ರಮಗಳನ್ನು ರೂಪಿಸುವುದು ಅಗತ್ಯವಿದೆ ಎಂದು ವಿ.ಪಿ.ಸೋಮಶೇಖರ್ ಸಲಹೆ ನೀಡಿದರು.

ನಂತರ ಮಾತನಾಡಿದ ಜಿಲ್ಲಾಧಿಕಾರಿ, ದೂರವಾಣಿ, ಬೆಸ್ಕಾಂ ಮೊದಲಾದ ಸಂಸ್ಥೆಗಳಿಂದ ಸಮಸ್ಯೆಯಾದರೆ ಗ್ರಾಹಕರು ಕೂಡಲೇ ಆ ಇಲಾಖೆಯ ಮೇಲಧಿಕಾರಿಗಳಿಗೆ ದೂರು ಕೊಡಬೇಕು.  ಅಲ್ಲಿ ಪರಿಹಾರವಾಗದಿದ್ದರೆ ಗ್ರಾಹಕರ ವೇದಿಕೆಯ ನೆರವು ಪಡೆಯಬೇಕು. ಬಹುತೇಕ ಸಂದರ್ಭದಲ್ಲಿ ಉಚಿತವಾಗಿಯೇ ವೇದಿಕೆ ನ್ಯಾಯ ಒದಗಿಸುವ ಸೌಲಭ್ಯವಿದೆ ಎಂದರು.
 

20 ಶಾಲೆ, ಕಾಲೇಜಿನಲ್ಲಿ ಗ್ರಾಹಕ ಕ್ಲಬ್

ಕೋಲಾರ: ಜಿಲ್ಲೆಯ ಐದು ತಾಲ್ಲೂಕಿನಲ್ಲಿ 20 ಸರ್ಕಾರಿ ಪ್ರೌಢಶಾಲೆ/ಪದವಿಪೂರ್ವ ಕಾಲೇಜಿನಲ್ಲಿ ಗ್ರಾಹಕರ ಕ್ಲಬ್‌ಗಳನ್ನು ಸ್ಥಾಪಿಸಲಾಗಿದೆ ಎಂದು ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆ ಉಪನಿರ್ದೇಶಕ ಶ್ರೀನಿವಾಸಯ್ಯ ತಿಳಿಸಿದರು.

ಸಭೆಯಲ್ಲಿ ಮಾಹಿತಿ ನೀಡಿದ ಅವರು, 2009-10ನೇ ಸಾಲಿನಲ್ಲಿ ಶಾಲಾ ಗ್ರಾಹಕರ ಕ್ಲಬ್‌ಗಳನ್ನು ಸ್ಥಾಪಿಸಿದ್ದು 2 ಲಕ್ಷ ರೂಪಾಯಿ ಬಿಡುಗಡೆ ಮಾಡಲಾಗಿತ್ತು. ಪ್ರತಿ ಕ್ಲಬ್‌ಗೆ 8 ಸಾವಿರ ರೂಪಾಯಿ ನೀಡಲಾಗಿದೆ. ಕ್ಲಬ್ ಸ್ಥಾಪನೆ-ಕಾರ್ಯಕ್ರಮವನ್ನು ಅನುಷ್ಠಾನಗೊಳಿಸುವ ನೋಡಲ್ ಸಂಸ್ಥೆಯಾಗಿ ಬಂಗಾರಪೇಟೆಯ ಕಾರಮಂಗಲದ ರತ್ನ ಟ್ರಸ್ಟ್ ಅನ್ನು ನೇಮಿಸಲಾಗಿದೆ ಎಂದರು.

ವಿವರ: ಬಂಗಾರಪೇಟೆ ತಾಲ್ಲೂಕಿನ ಸುಂದರ ಪಾಳ್ಯ, ಬೂದಿಕೋಟೆಯ ಕಾಲೇಜು, ಕ್ಯಾಸಂಬಳ್ಳಿ, ಗುಲ್ಲಹಳ್ಳಿಯ ಪ್ರೌಢಶಾಲೆ; ಕೆಜಿಎಫ್‌ನ ಬಾಲಕಿಯರ ಕಾಲೇಜು, ಕಾಮಸಮುದ್ರದ ಕಾಲೇಜು,  ದೊಡ್ಡೂರಿನ ಪ್ರೌಢಶಾಲೆ; ಶ್ರೀನಿವಾಸಪುರ ತಾಲ್ಲೂಕಿನ ಬೈರಗಾನಹಳ್ಳಿ, ನಂಬಿಹಳ್ಳಿ, ತಾಡಿಗೋಳ್‌ನಲ್ಲಿರುವ ಶಾಲೆಗಳು; ಮಾಲೂರು ತಾಲ್ಲೂಕಿನ ಡಿ.ಎನ್.ದೊಡ್ಡಿ, ಮಾಸ್ತಿ ಟೇಕಲ್‌ನಲ್ಲಿರುವ ಕಾಲೇಜು, ಕೆಸರಗೆರೆಯಲ್ಲಿರುವ ಶಾಲೆ; ಕೋಲಾರ ತಾಲ್ಲೂಕಿನ ಹೋಳೂರು, ಶಾಪೂರಿನ ಶಾಲೆ, ಕ್ಯಾಲನೂರಿನ ಕಾಲೇಜು; ಮುಳಬಾಗಲಿನ ಬಾಲಸಂದ್ರ, ಹೆಬ್ಬಣಿಯ ಶಾಲೆ, ತಿಪ್ಪದೊಡ್ಡಿಯ ಕಾಲೇಜು. 20 ಸಂಸ್ಥೆಗಳಿಗೆ ತಲಾ 8 ಸಾವಿರದಂತೆ ರೂ 1,60 ಲಕ್ಷ ಮತ್ತು ನೋಡಲ್ ಏಜೆನ್ಸಿಗೆ 40 ಸಾವಿರದಂತೆ 2 ಲಕ್ಷ ರೂಪಾಯಿ ಬಿಡುಗಡೆಯಾಗಿ ಖರ್ಚಾಗಿದೆ ಎಂದು ಅವರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT