ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನ್ಯಾಯಮೂರ್ತಿಗಳಿಂದ ಕೆರೆ ಅಭಿವೃದ್ಧಿ ಪರಿಶೀಲನೆ

Last Updated 16 ಜೂನ್ 2011, 19:30 IST
ಅಕ್ಷರ ಗಾತ್ರ

ಬೆಂಗಳೂರು: `ಔಷಧೀಯ ಸಸಿಗಳನ್ನು ಬೆಳೆಸುವುದಿರಲಿ, ಹೆಚ್ಚು ಆಮ್ಲಜನಕ ಹೊರ ಸೂಸುವ ಮರಗಳನ್ನು ಬೆಳಸಿ ಜನರು ಶುದ್ಧ ಗಾಳಿ ಸೇವನೆ ಮಾಡುವಂತಹ ವಾತಾವರಣ ನಿರ್ಮಿಸಿ...~ನಗರದ ಮಾರತ್‌ಹಳ್ಳಿ ಬಳಿಯ ಚಿನ್ನಪ್ಪನಹಳ್ಳಿ ಕೆರೆ ಪ್ರದೇಶಕ್ಕೆ ಗುರುವಾರ ಭೇಟಿ ನೀಡಿ ಪರಿಶೀಲನೆ ನಡೆಸಿದ ಹೈಕೋರ್ಟ್ ನ್ಯಾಯಮೂರ್ತಿ ಎನ್.ಕೆ. ಪಾಟೀಲ್ ಅವರು ಪಾಲಿಕೆಯ ಅರಣ್ಯಾಧಿಕಾರಿಯೊಬ್ಬರಿಗೆ ನೀಡಿದ ಸಲಹೆ ಇದು.

ಹೈಕೋರ್ಟ್‌ನಿಂದ ರಚನೆಯಾಗಿರುವ ಕೆರೆ ಸಂರಕ್ಷಣೆ ಮತ್ತು ಅಭಿವೃದ್ಧಿ ಸಮಿತಿಯ ಅಧ್ಯಕ್ಷರೂ ಆದ ಕಾನೂನು ಸೇವಾ ಸಮಿತಿ ಅಧ್ಯಕ್ಷ ಎನ್.ಕೆ. ಪಾಟೀಲ್ ಅವರು ಚಿನ್ನಪ್ಪನಹಳ್ಳಿ ಕೆರೆಯನ್ನು ಪರಿಶೀಲಿಸಿದರು.
ಕೆರೆ ದಂಡೆಯಲ್ಲಿ ವಿವಿಧ ಸಸಿಗಳನ್ನು ನೆಡಲಾಗುತ್ತಿತ್ತು.

ಆಗ ನ್ಯಾಯಮೂರ್ತಿಗಳು, `ವಿದೇಶಿ ತಳಿಯ ಸಸಿಗಳನ್ನು ಇಲ್ಲಿ ಬೆಳೆಸುವ ಬದಲಿಗೆ ಸ್ಥಳೀಯವಾಗೇ ಲಭ್ಯವಿರುವ ಸಸಿಗಳನ್ನು ಬೆಳೆಸಿ. ಬೇವು, ಆಲ, ಹೊಂಗೆ ಸಸಿಗಳನ್ನು ಬೆಳೆಸುವತ್ತ ಗಮನ ಹರಿಸಿ~ ಎಂದರು.

ಆಗ ಅಧಿಕಾರಿಯೊಬ್ಬರು `ಔಷಧೀಯ ಸಸಿಗಳನ್ನು ಬೆಳೆಸಲಾಗಿದೆ~ ಎಂದು ಮಾಹಿತಿ ನೀಡಿದಾಗ, `ಆಮ್ಲಜನಕವನ್ನು ದೊಡ್ಡ ಪ್ರಮಾಣದಲ್ಲಿ ಹೊರ ಸೂಸುವ ಸಸಿಗಳನ್ನು ಹೆಚ್ಚಾಗಿ ಬೆಳೆಸಿ~ ಎಂದರು.

ಇದಕ್ಕೆ ದನಿಗೂಡಿಸಿದ ಪಾಲಿಕೆ ಆಯುಕ್ತ ಸಿದ್ದಯ್ಯ, `ವಿವಿಧ ಬಗೆಯ ಹಣ್ಣಿನ ಸಸಿಗಳನ್ನು ನೆಡಬೇಕು. ಇದರಿಂದ ಪ್ರಾಣಿ, ಪಕ್ಷಿಗಳಿಗೆ ಆಶ್ರಯ ಕಲ್ಪಿಸಬಹುದಾಗಿದೆ. ಪರಿಸರ ಕೂಡ ಸುಂದರವಾಗಿ ಕಾಣುತ್ತದೆ~ ಎಂದು ಹೇಳಿದರು.
ಈ ಸಂದರ್ಭದಲ್ಲಿ ಸ್ಥಳೀಯರು,
 
`ಪಾಲಿಕೆಯು ಈ ಕೆರೆಯನ್ನು ಉತ್ತಮವಾಗಿ ಅಭಿವೃದ್ಧಿಪಡಿಸಿದೆ. ಇದರಿಂದ ಮಕ್ಕಳು, ಹಿರಿಯರು ಎಲ್ಲರಿಗೂ ಅನುಕೂಲವಾಗಿದೆ. ಆದರೆ ಕೆರೆ ಪ್ರದೇಶದಲ್ಲಿ ಭದ್ರತಾ ಸಿಬ್ಬಂದಿ ಇಲ್ಲದ ಕಾರಣ ಯಾರು ಬೇಕಾದರೂ ಒಳಗೆ ಪ್ರವೇಶಿಸುವಂತಾಗಿದ್ದು, ಸಣ್ಣ ಪುಟ್ಟ ಅಪರಾಧಗಳು ಸಂಭವಿಸುತ್ತಿವೆ~ ಎಂದು ಅಳಲು ತೋಡಿಕೊಂಡರು.

ಇದಕ್ಕೆ ಪ್ರತಿಕ್ರಿಯಿಸಿದ ಆಯುಕ್ತರು, `ಶೀಘ್ರವಾಗಿ ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಿ ಯಾವುದೇ ಅಕ್ರಮ ಚಟುವಟಿಕೆ ನಡೆಯದಂತೆ ಎಚ್ಚರ ವಹಿಸಲಾಗುವುದು~ ಎಂದು ಭರವಸೆ ನೀಡಿದರು.

ಪರಿಶೀಲನಾ ಕಾರ್ಯ ಪೂರ್ಣಗೊಂಡ ಬಳಿಕ ಸುದ್ದಿಗಾರರಿಗೆ ಪ್ರತಿಕ್ರಿಯೆ ನೀಡಿದ ನ್ಯಾಯಮೂರ್ತಿ ಪಾಟೀಲ್, `ನಗರದಲ್ಲಿರುವ ಎಲ್ಲ ಕೆರೆಗಳನ್ನು ಸಂರಕ್ಷಿಸಿ, ಅಭಿವೃದ್ಧಿಪಡಿಸಲು ರಚನೆಯಾಗಿರುವ ಸಮಿತಿಯು ಈಗಾಗಲೇ ಕ್ರಿಯಾ ಯೋಜನೆ ಸಿದ್ಧಪಡಿಸಿದೆ. ಸುಮಾರು 80ರಷ್ಟು ಕೆರೆಗಳ ಸಮೀಕ್ಷೆ ಕಾರ್ಯ ಪೂರ್ಣಗೊಂಡಿದೆ. ಇದೀಗ ಕೆರೆಗಳ ಅಭಿವೃದ್ಧಿಗೆ ಕೈಗೊಂಡಿರುವ ಕ್ರಮಗಳನ್ನು ಪರಿಶೀಲಿಸಲಾಗುತ್ತಿದೆ~ ಎಂದರು.

ಆಯುಕ್ತ ಸಿದ್ದಯ್ಯ, `ಬಿಬಿಎಂಪಿ ವ್ಯಾಪ್ತಿಯಲ್ಲಿನ 132 ಕೆರೆಗಳನ್ನು ಅಭಿವೃದ್ಧಿಪಡಿಸುವ ಕಾರ್ಯ ಆರಂಭವಾಗಿದ್ದು, 19 ಕೆರೆಗಳ ಅಭಿವೃದ್ಧಿ ಪ್ರಗತಿಯಲ್ಲಿದೆ. ಯಾವುದೇ ಕೆರೆಗೂ ಚರಂಡಿ ನೀರು ಸೇರ್ಪಡೆಯಾಗದಂತೆ ಕ್ರಮ ಕೈಗೊಳ್ಳಲಾಗುತ್ತಿದೆ. ಕೆರೆ ಒತ್ತುವರಿಯನ್ನು ಮುಲಾಜಿಲ್ಲದೇ ತೆರವುಗೊಳಿಸಲಾಗುವುದು. ನಂತರ ಹಂತ ಹಂತವಾಗಿ ಅಭಿವೃದ್ಧಿ ಕಾರ್ಯ ಕೈಗೊಳ್ಳಲಾಗುವುದು~ ಎಂದು ಹೇಳಿದರು.

ಬಳಿಕ ನ್ಯಾಯಮೂರ್ತಿಗಳು ಸಸಿ ನೆಟ್ಟು ನೀರೆರೆದರು. ನಂತರ ಕೈಕೊಂಡನಹಳ್ಳಿ ಕೆರೆಯನ್ನು ಪರಿಶೀಲಿಸಿದರು. ಪಾಲಿಕೆ ಸದಸ್ಯ ಎನ್.ಆರ್. ಶ್ರೀಧರರೆಡ್ಡಿ, ಕೆರೆ ವಿಭಾಗದ ಮುಖ್ಯ ಎಂಜಿನಿಯರ್ ಬಿ.ವಿ. ಸತೀಶ್ ಇತರರು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT