ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನ್ಯಾಯಮೂರ್ತಿಗಳಿಗೆ ಮನೆ: ಮಾಹಿತಿಗೆ ಆದೇಶ

Last Updated 6 ಜೂನ್ 2011, 19:55 IST
ಅಕ್ಷರ ಗಾತ್ರ

ಬೆಂಗಳೂರು: ಸಚಿವರಿಗೆ ಮೀಸಲು ಇರಿಸಿದ್ದ ನಗರದ ಹೆಬ್ಬಾಳ ಬಳಿಯ `ಆಗ್ರೋ ಕೈಗಾರಿಕೆಗಳ ನಿಗಮ~ದ ಜಾಗದಲ್ಲಿ     ಹೈಕೋರ್ಟ್ ನ್ಯಾಯಮೂರ್ತಿಗಳಿಗೆ ನಿರ್ಮಿಸಲು ಉದ್ದೇಶಿಸಲಾಗಿರುವ ಮನೆಯ ನಿರ್ಮಾಣ ಕಾರ್ಯ ಯಾವ ಹಂತ ತಲುಪಿದೆ ಎಂಬ ಬಗ್ಗೆ ಪ್ರಮಾಣ ಪತ್ರದ ಮೂಲಕ ಮಾಹಿತಿ ನೀಡುವಂತೆ ಸರ್ಕಾರದ ಮುಖ್ಯ ಕಾರ್ಯದರ್ಶಿಗಳಿಗೆ ಕೋರ್ಟ್ ಸೋಮವಾರ ಆದೇಶಿಸಿದೆ.

ಈ ಮಾಹಿತಿ ನೀಡಲು ಆರು ವಾರಗಳ ಕಾಲಾವಕಾಶವನ್ನು ಮುಖ್ಯ ನ್ಯಾಯಮೂರ್ತಿ ಜೆ.ಎಸ್.ಕೇಹರ್ ನೇತೃತ್ವದ ವಿಭಾಗೀಯ ಪೀಠ ನೀಡಿದೆ.

ಎಲ್ಲಿಯೇ ನಿವೇಶನ ಗೊತ್ತು ಮಾಡಿದರೂ ಅದು ವಿವಾದಕ್ಕೆ ಒಳಗಾಗುತ್ತಿರುವುದರಿಂದ  ಹೈಕೋರ್ಟ್‌ನಿಂದ ತೀವ್ರ ತರಾಟೆಗೆ ಒಳಗಾಗಿದ್ದ ಸರ್ಕಾರ, ಕೊನೆಯದಾಗಿ ಹೆಬ್ಬಾಳದ ಬಳಿ ಜಾಗ ನೀಡಲು ನಿರ್ಧರಿಸಿದೆ.

ಕಟ್ಟಡ ನಿರ್ಮಾಣಕ್ಕೆ 75ಕೋಟಿ ರೂಪಾಯಿಗಳನ್ನು ಮೀಸಲು ಇರಿಸಲಾಗಿದೆ ಎಂದು ಸರ್ಕಾರ ತಿಳಿಸಿದ ಹಿನ್ನೆಲೆಯಲ್ಲಿ, ಮುಂದಿನ ಪ್ರಗತಿಯನ್ನು ಕೋರ್ಟ್ ಬಯಸಿದೆ.

ನಗರದ ಎಚ್‌ಎಸ್‌ಆರ್ ಲೇಔಟ್ ಬಳಿ ಆಟದ ಮೈದಾನಕ್ಕೆ ಮೀಸಲಿಟ್ಟ ಜಾಗದಲ್ಲಿ ನ್ಯಾಯಮೂರ್ತಿಗಳಿಗೆ ನಿವೇಶನ ನೀಡಲು ಸರ್ಕಾರ ಮುಂದಾಗಿರುವ ಕ್ರಮ ಪ್ರಶ್ನಿಸಿ `ಎಚ್‌ಎಸ್‌ಆರ್ ಸೆಕ್ಟರ್-2 ನಾಗರಿಕರ ಕ್ಷೇಮಾಭಿವೃದ್ಧಿ ಸಂಘ~ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆಯನ್ನು ಪೀಠ ನಡೆಸುತ್ತಿದೆ.

ಡಿಜಿಪಿ ಹುದ್ದೆ: ತಡೆ ತೆರವಿಗೆ ಹೈಕೋರ್ಟ್ ನಕಾರ: ರಾಜ್ಯ ಪೊಲೀಸ್ ಮಹಾನಿರ್ದೇಶಕರ (ಡಿಜಿ-ಐಜಿಪಿ) ಹುದ್ದೆಗೆ ಆಯ್ಕೆಯಾಗುವವರ ಹೆಸರನ್ನು ಪ್ರಕಟಿಸುವುದಕ್ಕೆ ಇದ್ದ ತಡೆಯಾಜ್ಞೆಯನ್ನು ತೆರವುಗೊಳಿಸಲು    ಹೈಕೋರ್ಟ್ ಸೋಮವಾರ ನಿರಾಕರಿಸಿದೆ.

ತಡೆಯಾಜ್ಞೆ ತೆರವುಗೊಳಿಸುವಂತೆ ಅಡ್ವೊಕೇಟ್ ಜನರಲ್ ಅಶೋಕ ಹಾರ‌್ನಹಳ್ಳಿ ಅವರು ಮಾಡಿಕೊಂಡ ಮನವಿಯನ್ನು ಮಾನ್ಯ ಮಾಡಲು  ಕೆ.ಎಲ್.ಮಂಜುನಾಥ ನೇತೃತ್ವದ ವಿಭಾಗೀಯ ಪೀಠ ನಿರಾಕರಿಸಿತು.   ಈ ಹಂತದಲ್ಲಿ ಯಾವುದೇ ಮಧ್ಯಂತರ ಆದೇಶ ಹೊರಡಿಸುವುದಿಲ್ಲ.      

ಬದಲಿಗೆ ಅರ್ಜಿಯನ್ನು ಒಂದೇ   ಬಾರಿಗೆ ಇತ್ಯರ್ಥಗೊಳಿಸುವುದಾಗಿ ಪೀಠ ಹೇಳಿತು.
ಈ ಹುದ್ದೆಯ ನೇಮಕಾತಿಗೆ ಸಂಬಂಧಿಸಿದಂತೆ ಕೇವಲ ಡಿಜಿಪಿ ದರ್ಜೆಯ ಅಧಿಕಾರಿಗಳ ಹೆಸರನ್ನು ಕಳುಹಿಸಿಕೊಡುವಂತೆ ಕೇಂದ್ರ ಲೋಕಸೇವಾ ಆಯೋಗಕ್ಕೆ ಕೇಂದ್ರ ಆಡಳಿತ ನ್ಯಾಯಮಂಡಳಿ ನೀಡಿದ್ದ ನಿರ್ದೇಶನವನ್ನು ಪ್ರಶ್ನಿಸಿ  ರೈಲ್ವೆ ವಿಭಾಗದ ಎಡಿಜಿಪಿ (ಆಗಿನ ನಗರ ಪೊಲೀಸ್ ಕಮಿಷನರ್) ಶಂಕರ ಬಿದರಿ ಅವರು ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ನ್ಯಾಯಮೂರ್ತಿಗಳು ನಡೆಸುತ್ತಿದ್ದಾರೆ. ವಿಚಾರಣೆಯನ್ನು ಮಂಗಳವಾರಕ್ಕೆ ಮುಂದೂಡಲಾಯಿತು.

ವಿಚಾರಣೆ ಆರಂಭ: ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹಾಗೂ ಅವರ ಅಳಿಯ ಆರ್.ಎನ್. ಸೋಹನ್ ಕುಮಾರ್ ವಿರುದ್ಧ ಭೂಹಗರಣದ ತನಿಖೆಯ ಕುರಿತಾದ ಮುಖ್ಯ ಅರ್ಜಿಯ ವಿಚಾರಣೆಯನ್ನು ಹೈಕೋರ್ಟ್ ಸೋಮವಾರದಿಂದ ಕೈಗೆತ್ತಿಕೊಂಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT