ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನ್ಯಾಯಾಂಗ ಸುಧಾರಣೆ: ವಿಲೇವಾರಿಯ ವೇಗ

Last Updated 31 ಡಿಸೆಂಬರ್ 2012, 9:08 IST
ಅಕ್ಷರ ಗಾತ್ರ

ಭಾರತದ ಸುಪ್ರೀಂ ಕೋರ್ಟ್ ಅನ್ನು ವಿಶ್ವದ ಅತ್ಯಂತ ಶಕ್ತಿಶಾಲಿ ನ್ಯಾಯಾಲಯ ಎಂದು ಗುರುತಿಸಲಾಗುತ್ತದೆ. ಬಡವರ ರಕ್ಷಕ, ಸಾಂವಿಧಾನಿಕ ಆಡಳಿತದ ರಕ್ಷಾ ಕವಚ ಮತ್ತು ಜನರು ಅತ್ಯಂತ ವಿಶ್ವಾಸಾರ್ಹವೆಂದು ಭಾವಿಸಿರುವ ಸಾಂವಿಧಾನಿಕ ಸಂಸ್ಥೆ ಎಂಬ ವಿಶೇಷಣಗಳನ್ನೂ ಸುಪ್ರೀಂಕೋರ್ಟ್‌ಗೆ ಆರೋಪಿಸಲಾಗುತ್ತದೆ. ಆದರೆ ವಾಸ್ತವ ಏನು?

ಸುಪ್ರೀಂ ಕೋರ್ಟ್ ಮತ್ತು ಒಟ್ಟು ಭಾರತೀಯ ನ್ಯಾಯಾಂಗ ವ್ಯವಸ್ಥೆಯ ಕುರಿತ ವಸ್ತುನಿಷ್ಠ ವಿಶ್ಲೇಷಣೆಗಳ ಕೊರತೆಯಲ್ಲಿ ಭಾರತದ ಅತ್ಯುನ್ನತ ನ್ಯಾಯಪೀಠಕ್ಕೆ ಉತ್ಪ್ರೇಕ್ಷಿತ ಗುಣಗಳುಳ್ಳ ವ್ಯಕ್ತಿತ್ವವೊಂದು ಪ್ರಾಪ್ತವಾಗಿದೆ. ಸುಪ್ರೀಂ ಕೋರ್ಟ್‌ಗೆ ಇಂಥದ್ದೊಂದು ಸಾಂಸ್ಥಿಕ ವ್ಯಕ್ತಿತ್ವವನ್ನು ನೀಡುವುದರ ಹಿಂದೆ  ವಕೀಲರಿದ್ದಾರೆ, ನ್ಯಾಯಾಧೀಶರಿದ್ದಾರೆ.

ಹಾಗೆಯೇ ಕೆಲವು ವಿದ್ವಾಂಸರು ಹಾಗೂ ರಾಜಕೀಯ ವಿಶ್ಲೇಷಕರು ಕೂಡಾ ವಿಮರ್ಶೆಯನ್ನೇ ಮರೆತ ಮಾಧ್ಯಮಗಳ ಜೊತೆ ಸೇರಿಕೊಂಡಿದ್ದಾರೆ.  ಇವರೆಲ್ಲರೂ ಬೆರಳೆಣಿಕೆಯ ಪ್ರತಿಷ್ಠಿತ ಪ್ರಕರಣಗಳಲ್ಲಿ ನ್ಯಾಯಾಲಯ ಹೇಳಿದ್ದನ್ನು ಸಂಭ್ರಮಿಸುತ್ತಾ ಸುಪ್ರೀಂ ಕೋರ್ಟ್‌ನ ನಿರ್ವಹಣೆಯನ್ನು ವಿಶ್ಲೇಷಿಸುವ ಸಾಂಸ್ಥಿಕ ಮೌಲ್ಯಮಾಪನ ಮಾದರಿಯನ್ನು ಅಭಿವೃದ್ಧಿ ಪಡಿಸುವಲ್ಲಿ ವಿಫಲರಾಗಿದ್ದಾರೆ.

ಅಂಕಿ-ಅಂಶ ಆಧಾರಿತ ವಸ್ತುನಿಷ್ಠ ವಿಶ್ಲೇಷಣೆಯೊಂದರ ಎದುರು ಸುಪ್ರೀಂಕೋರ್ಟ್‌ಗೆ ಆರೋಪಿಸಲಾಗಿರುವ ಎಲ್ಲಾ ವಿಶೇಷಣಗಳೂ ಪ್ರಶ್ನಾರ್ಹವಾಗಿ ಬಿಡುತ್ತವೆ. ಅಷ್ಟೇ ಅಲ್ಲ ಇಂಥದ್ದೊಂದು ವಿಶ್ಲೇಷಣೆ ಸುಪ್ರೀಂಕೋರ್ಟ್‌ನ ಸಾಂಸ್ಥಿಕ ವ್ಯಕ್ತಿತ್ವದ ಕುರಿತಂತೆ ಇರುವ ಸ್ಥಾಪಿತ ಗ್ರಹೀತಗಳನ್ನು ಸುಳ್ಳೆಂದು ಸಾಬೀತು ಮಾಡಿದರೂ ಆಶ್ಚರ್ಯ ಪಡಬೇಕಾಗಿಲ್ಲ.

ಅಜೀಂ ಪ್ರೇಮ್‌ಜಿ ವಿಶ್ವವಿದ್ಯಾಲಯದ (ಎಪಿಯು) ಕಾನೂನು, ಆಡಳಿತ ಮತ್ತು ಅಭಿವೃದ್ಧಿ ವಿಭಾಗವು ನಿಕ್ ರಾಬಿನ್‌ಸನ್ ಅವರ `ಅಂಕಿ-ಸಂಖ್ಯೆಗಳಲ್ಲಿ ಭಾರತೀಯ ಸುಪ್ರೀಂ ಕೋರ್ಟ್' ಎಂಬ ಸಂಶೋಧನಾ ಪ್ರಬಂಧವನ್ನು ಹೊರತಂದಿದೆ. ಸುಪ್ರೀಂ ಕೋರ್ಟ್‌ನ ಕಾರ್ಯನಿರ್ವಹಣೆಯ ಕುರಿತಂತೆ  ನಿಕ್ ರಾಬಿನ್‌ಸನ್ ಅವರು ನಡೆಸುತ್ತಿರುವ ಸಂಶೋಧನೆಯ ಪ್ರಾಥಮಿಕ ಫಲಿತಾಂಶಗಳನ್ನು ವಿವರಿಸುತ್ತಿರುವ ಈ ಪ್ರಬಂಧ 1993ರಿಂದ 2011ರ ತನಕ ಸುಪ್ರೀಂ ಕೋರ್ಟ್ ನಿರ್ವಹಿಸಿದ ಪ್ರಕರಣಗಳನ್ನು ವಿಶ್ಲೇಷಿಸಿ ಮೂರು ಬಹುಮುಖ್ಯ ವಾಸ್ತವಾಂಶಗಳನ್ನು ಕಂಡುಕೊಂಡಿದೆ.

ಒಂದು: ದೆಹಲಿ ಮತ್ತು ಹೆಚ್ಚು ತಲಾ ಜಿಎನ್‌ಪಿ (ಒಟ್ಟು ರಾಷ್ಟ್ರೀಯ ಉತ್ಪನ್ನ) ಇರುವ ರಾಜ್ಯಗಳ ಜನರು ದೇಶದ ಇತರ ಪ್ರದೇಶಗಳ ಜನರಿಗಿಂತ ಹೆಚ್ಚಾಗಿ ಸುಪ್ರೀಂಕೋರ್ಟ್‌ಗೆ ವ್ಯಾಜ್ಯಗಳನ್ನು ಕೊಂಡೊಯ್ಯುತ್ತಾರೆ.

ಎರಡು: ನ್ಯಾಯಾಲಯದ ಪ್ರಕರಣಗಳ ಯಾದಿಯಲ್ಲಿ ಶೋಷಿತ ಮತ್ತು ಬಡ ಜನತೆಯ ರಾಜಕೀಯ, ಸಾಮಾಜಿಕ ಮತ್ತು ಆರ್ಥಿಕ ಹಕ್ಕುಗಳ ರಕ್ಷಣೆಗೆ ಸಂಬಂಧಿಸಿದ ಪ್ರಕರಣಗಳಿಗಿಂತ ಹೆಚ್ಚಾಗಿ ಸಾರ್ವಜನಿಕ ಸ್ವಾಮ್ಯದ ಉದ್ಯಮಗಳ ನೌಕರರಿಗೆ ಸಂಬಂಧಿಸಿದ ಪ್ರಕರಣಗಳು, ತೆರಿಗೆ ಮತ್ತು ಆಸ್ತಿ ವ್ಯಾಜ್ಯಗಳಿವೆ.

ಮೂರು: ನ್ಯಾಯಾಲಯಕ್ಕೆ ಬರುವ ಅರ್ಜಿಗಳಲ್ಲಿ ಶೇಕಡಾ 84ರಷ್ಟು ವಿಶೇಷಾನುಮತಿ ಅರ್ಜಿಗಳು (ಸ್ಪೆಷಲ್ ಲೀವ್ ಪಿಟಿಷನ್). ಅಂದರೆ ಸಿವಿಲ್ ಮತ್ತು ಕ್ರಿಮಿನಲ್ ವಿವೇಚನಾ ಪರಿಶೀಲನೆಯ ವ್ಯಾಪ್ತಿಗೆ ಬರುವ ಪ್ರಕರಣಗಳು. ಇದು ಹಕ್ಕುಗಳ ರಕ್ಷಣೆಯ ವ್ಯಾಪ್ತಿಯಲ್ಲಿ ಬರುವ ರಿಟ್ ಅರ್ಜಿಗಳ ಸಂಖ್ಯೆಯನ್ನು ಗಮನಾರ್ಹ ಪ್ರಮಾಣದಲ್ಲಿ ಕುಸಿಯುವಂತೆ ಮಾಡಿದೆ. ಪ್ರಸ್ತುತ ರಿಟ್ ಅರ್ಜಿಗಳ ಪ್ರಮಾಣವಿರುವುದು ಕೇವಲ ಶೇಕಡಾ 2 ರಷ್ಟು.

ನಿಕ್ ರಾಬಿನ್‌ಸನ್ ಅವರು ಗುರುತಿಸಿರುವ ಈ ಮೂರೂ ಅಂಶಗಳು ಈಗಾಗಲೇ ಸ್ಥಾಪಿತವಾಗಿರುವ ಸುಪ್ರೀಂ ಕೋರ್ಟ್‌ನ ಸಾಂಸ್ಥಿಕ ವ್ಯಕ್ತಿತ್ವವನ್ನು ಪುನರ್ ಮೌಲ್ಯಮಾಪನಕ್ಕೆ ಒಳಪಡಿಸುವ ಅಗತ್ಯವನ್ನು ಸೂಚಿಸುತ್ತಿವೆ.2011ರ ಅಂಕಿ ಅಂಶಗಳು ಹೇಳುತ್ತಿರುವಂತೆ ಸುಪ್ರೀಂ ಕೋರ್ಟ್ ತಲುಪಿದ ಮೇಲ್ಮನವಿಗಳಲ್ಲಿ ಶೇಕಡಾ 40ರಷ್ಟು ದೆಹಲಿ, ಮುಂಬೈ ಹಾಗೂ ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್‌ಗಳಿಂದ ಬಂದಿವೆ.

ಬಿಹಾರ, ಕೊಲ್ಕತ್ತ, ಒಡಿಶಾ, ಉತ್ತರಾಂಚಲ, ಚತ್ತೀಸ್‌ಗಡ, ಜಾರ್ಖಂಡ್, ಅಸ್ಸಾಂ, ಜಮ್ಮು ಮತ್ತು ಕಾಶ್ಮೀರ ಹಾಗೂ ಸಿಕ್ಕಿಂ ರಾಜ್ಯಗಳಿಂದ ಬಂದ ಮೇಲ್ಮನವಿಗಳನ್ನೆಲ್ಲಾ ಒಟ್ಟು ಗೂಡಿಸಿದರೂ ಅವುಗಳ ಪ್ರಮಾಣ ಶೇಕಡಾ 13ನ್ನು ಮೀರುವುದಿಲ್ಲ. ಅಂದರೆ ದೇಶದ ಶ್ರೀಮಂತವೆನಿಸಿಕೊಂಡ ಭಾಗದಿಂದ ಹೆಚ್ಚಿನ ವ್ಯಾಜ್ಯಗಳು ಸುಪ್ರೀಂ ಕೋರ್ಟ್ ತಲುಪುತ್ತವೆ.

ಅಪರಾಧಿಕ ಪ್ರಕರಣಗಳನ್ನು ಹೊರತು ಪಡಿಸಿದರೆ ನ್ಯಾಯಾಲಯ ಹೆಚ್ಚಾಗಿ ನಿರ್ವಹಿಸಿರುವುದು ತೆರಿಗೆ (ಶೇ.14), ಆಸ್ತಿ (ಶೇ.13), ಸಾರ್ವಜನಿಕ ಸ್ವಾಮ್ಯದ ಉದ್ಯಮಗಳ ಸೇವಾ ಸಂಬಂಧಿ ಕಾನೂನು (ಶೇ.20) ವ್ಯಾಜ್ಯಗಳನ್ನು. ಈ ಬಗೆಯ  ಅರ್ಜಿಗಳು ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಿರುವುದಷ್ಟೇ ಈ ಸ್ಥಿತಿಗೆ ಕಾರಣವಲ್ಲ.

  ಪೂರ್ಣ ಪರಿಶೀಲನೆಗೆ ಸುಪ್ರೀಂ ಕೋರ್ಟ್ ಕೈಗೆತ್ತಿಕೊಳ್ಳುವ ಅರ್ಜಿಗಳ ಸಂಖ್ಯೆಯಲ್ಲಿ ಸಾಮಾನ್ಯ ಸಿವಿಲ್ (ಶೇ.9)ಮತ್ತು ವೈಯಕ್ತಿಕ ಕಾನೂನು ಪ್ರಕರಣಗಳಿಗೆ (ಶೇ.9)  ಹೋಲಿಸಿದರೆ  ಕಂಪೆನಿ ಕಾನೂನು (ಶೇ.17) ಮತ್ತು ಮಧ್ಯಸ್ಥಿಕೆ ಪ್ರಕರಣಗಳದ್ದೇ (ಶೇ.15) ದೊಡ್ಡಪಾಲು.

ಈ ಮೊದಲೇ ಹೇಳಿದಂತೆ ರಿಟ್ ಅರ್ಜಿಗಳ ಸಂಖ್ಯೆಯಲ್ಲಿ ಗಮನಾರ್ಹ ಪ್ರಮಾಣದ ಇಳಿಕೆ ಕಂಡುಬಂದಿದೆ. 1985ರಲ್ಲಿ ಒಟ್ಟು ಪ್ರಕರಣಗಳ ಸಂಖ್ಯೆಯ ಶೇಕಡಾ 41ರಷ್ಟಿದ್ದ ರಿಟ್ ಅರ್ಜಿಗಳು ಪ್ರಮಾಣ 2011ರ ವೇಳೆಗೆ ಕೇವಲ ಶೇಕಡಾ 2ಕ್ಕೆ ಇಳಿದಿದೆ. ಈ ಅಂಕಿ-ಅಂಶಗಳನ್ನು ಮುಂದಿಟ್ಟುಕೊಂಡು ವಿಶ್ಲೇಷಿಸಿದರೆ ಮೂಲಭೂತ ಹಕ್ಕುಗಳ ರಕ್ಷಣೆ ಎಂಬುದು ಸುಪ್ರೀಂ ಕೋರ್ಟ್‌ನ ಒಟ್ಟು ಕೆಲಸದ ಅತಿ ಸಣ್ಣ ಭಾಗವಷ್ಟೇ ಆಗಿ ಉಳಿದಿದೆ.

ನ್ಯಾಯಾಂಗ ವ್ಯವಸ್ಥೆಯ ಸುಧಾರಣೆಗೆ ಸಂಬಂಧಿಸಿದ ಸಮಕಾಲೀನ ಚರ್ಚೆಗಳೆಲ್ಲವುಗಳ ಪ್ರಾಥಮಿಕ ಕಾಳಜಿ ನ್ಯಾಯದಾನ ವ್ಯವಸ್ಥೆಯಲ್ಲಿ ಕಂಡುಬರುವ ನಿಧಾನಗತಿ ಮತ್ತು ಬಾಕಿ ಉಳಿದಿರುವ ಪ್ರಕರಣಗಳಿಗೆ ಸೀಮಿತವಾಗಿವೆ. ಎಪಿಯು ನಡೆಸಿದ ಸಂಶೋಧನೆಯ ಫಲಿತಾಂಶಗಳು ಸೂಚಿಸುತ್ತಿರುವಂತೆ ಹೈಕೋರ್ಟ್ ಮತ್ತು ಕೆಳ ನ್ಯಾಯಾಲಯಗಳಿಗೆ ಹೋಲಿಸಿದರೆ ಸುಪ್ರೀಂ ಕೋರ್ಟ್‌ನಲ್ಲಿ ಪ್ರಕರಣಗಳ ಸಂಖ್ಯೆ ಬಹಳ ತೀವ್ರಗತಿಯಲ್ಲಿ ಹೆಚ್ಚಾಗುತ್ತಿದೆ.

2005ರಿಂದ 2010ರ ನಡುವಣ ಅವಧಿಯಲ್ಲಿ ಹೈಕೋರ್ಟ್ ಮತ್ತು ಕೆಳ ನ್ಯಾಯಾಲಯಗಳಲ್ಲಿ ಪ್ರಕರಣ ಸಂಖ್ಯೆ ಕ್ರಮವಾಗಿ ಶೇಕಡಾ 25 ಮತ್ತು ಶೇಕಡಾ 4ರ ದರದಲ್ಲಿ ಹೆಚ್ಚಾಗಿದೆ. ಆದರೆ ಇದೇ ಅವಧಿಯಲ್ಲಿ ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ ರೂಪದಲ್ಲಿ ತಲುಪಿದ ಪ್ರಕರಣಗಳ ಸಂಖ್ಯೆ ಶೇಕಡಾ 52ರಷ್ಟು (ಸುಮಾರು 43,000 ಪ್ರಕರಣಗಳು) ಹೆಚ್ಚಾಗಿದೆ.

ಇದೇ ಅವಧಿಯಲ್ಲಿ ಸ್ವತಃ ಸುಪ್ರೀಂ ಕೋರ್ಟ್ ವಿಚಾರಣೆಗೆ ಸ್ವೀಕರಿಸಿದ ಪ್ರಕರಣಗಳ ಸಂಖ್ಯೆ ಶೇಕಡಾ 70ರಷ್ಟು (8824 ಪ್ರಕರಣಗಳು) ಏರಿಕೆ ಕಂಡಿದೆ. ಈ ಅಂಕಿ ಅಂಶಗಳೇ ಸುಪ್ರೀಂ ಕೋರ್ಟ್ ಪ್ರಕರಣಗಳನ್ನು ಇತ್ಯರ್ಥಗೊಳಿಸುವ ವೇಗವನ್ನು ಹೆಚ್ಚಿಸಿಕೊಂಡರೂ ಬಾಕಿ ಉಳಿಯುವ ಪ್ರಕರಣಗಳ ಸಂಖ್ಯೆ ಹೇಗೆ ಬೆಳೆಯುತ್ತಲೇ ಹೋಗುತ್ತದೆ ಎಂಬುದಕ್ಕೆ ಸಾಕ್ಷಿಯಾಗುತ್ತವೆ.

ಹೆಚ್ಚು ನ್ಯಾಯಾಧೀಶರು, ಹೆಚ್ಚಿನ ಸಂಖ್ಯೆಯ ನ್ಯಾಯಾಲಯಗಳು ಮತ್ತು ಹೆಚ್ಚು ಹೆಚ್ಚು ತಂತ್ರಜ್ಞಾನ ಬಳಕೆ ಈ ಬಾಕಿ ಉಳಿಯುತ್ತಿರುವ ಪ್ರಕರಣಗಳ ಸಂಖ್ಯೆಗೆ ಪರಿಹಾರವೆಂಬಂತೆ ಬಿಂಬಿಸಿ ಕಾರ್ಯರೂಪಕ್ಕೆ ತರಲಾಗುತ್ತಿದೆ. ಭಾರತೀಯ ನ್ಯಾಯಾಂಗ ವ್ಯವಸ್ಥೆಯ ಸುಧಾರಣಾ ನೀತಿ 1925ರ ನ್ಯಾಯಮೂರ್ತಿ ರ‌್ಯಾನ್ಕಿನ್ ಸಮಿತಿ ವರದಿ ನೀಡಿದ ವಿಶ್ಲೇಷಣೆ ಮತ್ತು ಸಲಹೆಗಳನ್ನು ಪುನಾರವರ್ತಿಸುತ್ತಿರುತ್ತದೆ.

ಈ ಪ್ರಕ್ರಿಯೆಯಲ್ಲಿ ಹೊಸ ಅಂಕಿ-ಅಂಶಗಳು ಇದ್ದರೂ ಅದರ ಪ್ರಮಾಣ ಕನಿಷ್ಠ. ವಸ್ತುನಿಷ್ಠ ವಿಶ್ಲೇಷಣೆಯಂತೂ ಇಲ್ಲವೇ ಇಲ್ಲ. ಪರಿಣಾಮವಾಗಿ 1950ರಲ್ಲಿ ಕೇವಲ ಎಂಟರಷ್ಟಿದ್ದ ಸುಪ್ರೀಂ ಕೋರ್ಟ್ ನ್ಯಾಯಾಧೀಶರ ಸಂಖ್ಯೆ 2012ರ ಹೊತ್ತಿಗೆ 31ಕ್ಕೆ ಏರಿತೇ ಹೊರತು ಪ್ರಕರಣಗಳ ವಿಲೇವಾರಿಯ ವೇಗ ಹೆಚ್ಚಾಗಲಿಲ್ಲ, ಬಾಕಿ ಪ್ರಕರಣಗಳ ಪ್ರಮಾಣವೂ ಕಡಿಮೆಯಾಗಲಿಲ್ಲ, ಆಗುವ ಸೂಚನೆಯ ಕಾಣಿಸುತ್ತಿಲ್ಲ. ಕೇವಲ ಸುಪ್ರೀಂ ಕೋರ್ಟ್‌ನ ನ್ಯಾಯಾಧೀಶರ ಸಂಖ್ಯೆಯನ್ನು ಹೆಚ್ಚಿಸುವುದು ಒಂದು ಅರ್ಥಹೀನ ಪರಿಹಾರ ಮಾತ್ರ.

ಎಪಿಯುನ ಸಂಶೋಧನೆ ಹೇಳುವಂತೆ ದೊಡ್ಡ ಸಂಖ್ಯೆಯ ನ್ಯಾಯಾಧೀಶರಿರುವ ನ್ಯಾಯಾಲಯದಲ್ಲಿ ಎರಡು ಅಥವಾ ಮೂವರು ನ್ಯಾಯಾಧೀಶರ ಹಲವು ಸಣ್ಣ ಪೀಠಗಳಿರುವುದು ವಾಜ್ಯಗಳ ವಿಲೇವಾರಿಯ ವೇಗವನ್ನು ಹೆಚ್ಚಿಸುವುದಿಲ್ಲ ಅಥವಾ ಬಾಕಿ ಪ್ರಕರಣಗಳ ಸಂಖ್ಯೆಯನ್ನೂ ಕಡಿಮೆ ಮಾಡುವುದಿಲ್ಲ. ಬದಲಿಗೆ ನಿಯಮಗಳ ಕುರಿತಂತೆ ಇರುವ ನಿಸ್ಸಂದಿಗ್ಧತೆಯನ್ನು ಇಲ್ಲವಾಗಿಸಿ ತೀರ್ಪುಗಳ ಸುಸಂಬದ್ಧತೆಯನ್ನು ದುರ್ಬಲಗೊಳಿಸಿಬಿಡುತ್ತದೆ. 

ಇದು ಸುಪ್ರೀಂ ಕೋರ್ಟ್‌ನ ಮಟ್ಟಿಗೆ ಬಹುಮುಖ್ಯವಾಗುವ ಪೂರ್ವನಿದರ್ಶನಗಳ ಮಹತ್ವವನ್ನು ಕಡಿಮೆ ಮಾಡಿ ಮತ್ತೆ ಮತ್ತೆ ಕಕ್ಷಿದಾರರು ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸುವ ಪ್ರವೃತ್ತಿಯನ್ನು ಹೆಚ್ಚಿಸುತ್ತದೆ. ಇದರ ಪರಿಣಾಮ ಸುಪ್ರೀಂ ಕೋರ್ಟ್‌ಗೆ ಬರುವ ಪ್ರಕರಣಗಳ ಸಂಖ್ಯೆಯ ಹೆಚ್ಚಳದಲ್ಲಿ ಪ್ರತಿಬಿಂಬಿಸುತ್ತದೆ.

ರಾಜೀವ್ ಧವನ್ ಅವರ `ಸುಪ್ರೀಂ ಕೋರ್ಟ್ ಅಂಡರ್ ಸ್ಟ್ರೈನ್: ಚಾಲೆಂಜ್ ಆಫ್ ಅರಿಯರ್ಸ್‌ 1978' ಮತ್ತು ಬಿಬೇಕ್ ದೇಬ್ರಾಯ್ ಮತ್ತು ಆರ್ಣಬ್ ಹಝಾರ ಅವರ `ಜ್ಯುಡಿಷಿಯಲ್ ರಿಫಾರ್ಮ್ಸ ಇನ್ ಇಂಡಿಯಾ 2007'ಗಳು ನ್ಯಾಯಾಂಗ ವ್ಯವಸ್ಥೆಯ ಸುಧಾರಣೆಗೆ ಅಗತ್ಯವಿರುವ ವಸ್ತುನಿಷ್ಠ ಮತ್ತು ಸೂಕ್ಷ್ಮ ವಿಶ್ಲೇಷಣೆಗಳ ಮಾರ್ಗವೊಂದನ್ನು ಕಂಡುಕೊಳ್ಳಲು ಅಗತ್ಯವಿರುವ ತಳಹದಿಯನ್ನು ಒದಗಿಸುತ್ತವೆ.

ನಿಕ್ ರಾಬಿನ್ಸನ್ ಅವರ ಸಂಶೋಧನೆಯ ಪ್ರಾಥಮಿಕ ಫಲಿತಾಂಶಗಳೂ ಕೂಡಾ ನ್ಯಾಯಾಂಗೀಯ ಸುಧಾರಣೆಗೆ ಸಂಬಂಧಿಸಿದಂತೆ ವಸ್ತುನಿಷ್ಠ ನಿಲುವೊಂದರ ಅಗತ್ಯವನ್ನು  ಸೂಚಿಸುತ್ತಿದೆ. ಜೊತೆಗೆ ಸುಪ್ರೀಂ ಕೋರ್ಟ್‌ನ ಸಾಂಸ್ಥಿಕ ಗುಣದ ಬಗ್ಗೆ ಸಾರ್ವಜನಿಕರಿಗೆ ಇರುವ ತಪ್ಪು ಕಲ್ಪನೆಯನ್ನು ಹೋಗಲಾಡಿಸಿ ಪರಿಣಾಮಕಾರಿ ಸುಧಾರಣೆಗೆ ಅಗತ್ಯವಿರುವ ಮಾರ್ಗದರ್ಶನವನ್ನು ನೀಡುತ್ತಿದೆ. 

ಕೇವಲ ದೃಷ್ಟಾಂತಗಳು ಮತ್ತು ಮೇಲ್ಪದರದ ಗ್ರಹಿಕೆಗಳ ಆಧಾರದ ಮೇಲೆ ಸುಧಾರಣೆಗಳನ್ನು ಯೋಜಿಸುವ ವಿಧಾನವನ್ನು ಕೈಬಿಟ್ಟು ವಾಸ್ತವವನ್ನು ಅರ್ಥ ಮಾಡಿಕೊಂಡ ವಸ್ತುನಿಷ್ಠ ವಿಧಾನವೊಂದನ್ನು ಅಳವಡಿಸಿಕೊಳ್ಳದೇ ಹೋದರೆ ಭಾರತೀಯ ನ್ಯಾಯಾಂಗ ವ್ಯವಸ್ಥೆ ಮತ್ತು ಸುಪ್ರೀಂ ಕೋರ್ಟ್‌ನ ಸುಧಾರಣೆ ಸಾಧ್ಯವಾಗದು. ಆಸ್ಟ್ರೇಲಿಯಾದ ವೈಟ್ ಇಂಡಸ್ಟ್ರೀಸ್ ಲಿಮಿಟೆಡ್ ಮತ್ತು ಭಾರತ ಸರ್ಕಾರದ ನಡುವಣ ವ್ಯಾಜ್ಯಕ್ಕೆ ಸಂಬಂಧಿಸಿದಂತೆ ತೀರ್ಪು ನೀಡಿದ ವಿಶ್ವಸಂಸ್ಥೆಯ ಅಂತಾರಾಷ್ಟ್ರೀಯ ವ್ಯಾಪಾರ ಕಾನೂನುಗಳ ಆಯೋಗ (ಯುಎನ್‌ಸಿಐಟಿಆರ್‌ಎಲ್) `ವೈಟ್ ಸಂಸ್ಥೆಯ ವ್ಯಾಪ್ತಿ ಸಂಬಂಧಿ ಮನವಿಯನ್ನು ನಿರ್ವಹಿಸಲು ಭಾರತೀಯ ನ್ಯಾಯಾಂಗ ವ್ಯವಸ್ಥೆಗೆ ಒಂಬತ್ತು ವರ್ಷಗಳಲ್ಲಿ ಸಾಧ್ಯವಾಗಿಲ್ಲ ಎಂಬ ತೀರ್ಮಾನಕ್ಕೆ ಬರಲು ಅಡ್ಡಿಯಾಗುವ ಏನೂ ನ್ಯಾಯಮಂಡಳಿಗೆ ಕಾಣುತ್ತಿಲ್ಲ.

ಹಾಗೆಯೇ ಸುಪ್ರೀಂ ಕೋರ್ಟ್ ಈ ಕುರಿತ ವಿಚಾರಣೆಯನ್ನು ಕೈಗೆತ್ತಿಕೊಳ್ಳಲು ಐದು ವರ್ಷ ಅನಗತ್ಯವಾಗಿ ಕಾಯಿಸಿರುವುದು ವೈಟ್ ಸಂಸ್ಥೆಗೆ ಭಾರತವೇ ಸ್ವಯಂ ಪ್ರೇರಿತವಾಗಿ ನೀಡಿದ ಹಕ್ಕು ಚಲಾವಣೆಯ ಖಾತರಿಯನ್ನು ಅಪ್ರಸ್ತುತಗೊಳಿಸುತ್ತದೆ' ಎಂದಿತ್ತು.

ಈ ಪ್ರಕರಣದಲ್ಲಿ ಭಾರತ ಸರ್ಕಾರವು ಸುಮಾರು 50 ಕೋಟಿ ರೂಪಾಯಿಗಳನ್ನು ವೈಟ್ ಇಂಡಸ್ಟ್ರೀಸ್ ಸಂಸ್ಥೆ ಪರಿಹಾರವಾಗಿ ನೀಡಿದ್ದನ್ನು ಮಾಧ್ಯಮಗಳು ವರದಿ ಮಾಡಿದ್ದವು. ಈಗಿರುವ ಸ್ಥಾಪಿತ ಮಾದರಿಯಲ್ಲೇ ನ್ಯಾಯಾಂಗ ವ್ಯವಸ್ಥೆಯ ಸುಧಾರಣೆಯನ್ನು ಮಾಡಲು ಹೊರಡುವುದು ಜನ ಸಾಮಾನ್ಯನ ತೆರಿಗೆ ಹಣಕ್ಕೆ ಹೇಗೆ ಮಾರಕವಾಗಿ ಪರಿಣಮಿಸುತ್ತದೆ ಎಂಬುದಕ್ಕೆ ಮೇಲಿನ ಘಟನೆ ಒಳ್ಳೆಯ ಉದಾಹರಣೆ.

(ಲೇಖಕರಿಬ್ಬರೂ ವಕೀಲರು ಮತ್ತು ಅಜೀಂ ಪ್ರೇಮ್‌ಜಿ ವಿಶ್ವವಿದ್ಯಾಲಯದ ಪ್ರಾಧ್ಯಾಪಕರು)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT