ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಂಚಾಯಿತಿ ಅಧ್ಯಕ್ಷರ ಅವಧಿ ಐದು ವರ್ಷಕ್ಕೆ?

Last Updated 13 ಆಗಸ್ಟ್ 2012, 19:30 IST
ಅಕ್ಷರ ಗಾತ್ರ

ಬೆಂಗಳೂರು: ಗ್ರಾಮ ಪಂಚಾಯಿತಿ, ತಾಲ್ಲೂಕು ಹಾಗೂ ಜಿಲ್ಲಾ ಪಂಚಾಯಿತಿಗಳ ಅಧ್ಯಕ್ಷರ ಅಧಿಕಾರದ ಅವಧಿಯನ್ನು ಐದು ವರ್ಷಕ್ಕೆ ವಿಸ್ತರಿಸುವುದೂ ಸೇರಿದಂತೆ ಪಂಚಾಯತ್ ರಾಜ್ ಕಾಯ್ದೆಗೆ ಹಲವು ತಿದ್ದುಪಡಿಗಳನ್ನು ತರುವಂತೆ ರಾಜ್ಯ ಸರ್ಕಾರ ನೇಮಕ ಮಾಡಿದ್ದ ಉನ್ನತಮಟ್ಟದ ಸಮಿತಿ ಶಿಫಾರಸು ಮಾಡಿದೆ. ಶಿಫಾರಸು ಜಾರಿ ಕುರಿತು ಗಂಭೀರವಾಗಿ ಯೋಚಿಸುತ್ತಿರುವ ಸರ್ಕಾರ, ಈ ಬಗ್ಗೆ ಅಭಿಪ್ರಾಯ ಸಂಗ್ರಹಕ್ಕೆ ಮುಂದಾಗಿದೆ.

ಪಂಚಾಯತ್ ರಾಜ್ ಸಂಸ್ಥೆಗಳ ಆಡಳಿತ ಮತ್ತು ಕಾರ್ಯನಿರ್ವಹಣೆಯಲ್ಲಿ ಪ್ರಮುಖ ಬದಲಾವಣೆಗಳನ್ನು ತರಲು ಯೋಚಿಸಿದ್ದ ರಾಜ್ಯ ಸರ್ಕಾರ, ಅದಕ್ಕೆ ಪೂರಕವಾಗಿ `ಕರ್ನಾಟಕ ಪಂಚಾಯತ್ ರಾಜ್-1993~ಕ್ಕೆ ತಿದ್ದುಪಡಿ ತರುವ ಕುರಿತು ಅಧ್ಯಯನ ನಡೆಸಲು ಉನ್ನತಮಟ್ಟದ ಸಮಿತಿಯನ್ನು ನೇಮಿಸಿತ್ತು.
 
ದೀರ್ಘಕಾಲ ಈ ಕುರಿತು ಅಧ್ಯಯನ ನಡೆಸಿದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯ್ ರಾಜ್ ಇಲಾಖೆಯ ಹಿಂದಿನ (ಈಗ ನಗರಾಭಿವೃದ್ಧಿ ಇಲಾಖೆಯಲ್ಲಿದ್ದಾರೆ) ಪ್ರಧಾನ ಕಾರ್ಯದರ್ಶಿ ಅಮಿತಾ ಪ್ರಸಾದ್ ನೇತೃತ್ವದ ಸಮಿತಿ ಕೆಲ ದಿನಗಳ ಹಿಂದೆ ಉದ್ದೇಶಿತ ತಿದ್ದುಪಡಿಗಳನ್ನು ಒಳಗೊಂಡ ಕರಡನ್ನು ಸರ್ಕಾರಕ್ಕೆ ಸಲ್ಲಿಸಿತ್ತು.

ಸಮಿತಿ ಸಲ್ಲಿಸಿರುವ ಕರಡನ್ನು ರಾಜ್ಯದ ಎಲ್ಲಾ ಜಿಲ್ಲಾ ಪಂಚಾಯಿತಿ, ತಾಲ್ಲೂಕು ಪಂಚಾಯಿತಿ ಮತ್ತು ಗ್ರಾಮ ಪಂಚಾಯಿತಿಗಳಿಗೆ ಕಳುಹಿಸಲಾಗಿದೆ. ಸಮಿತಿಯು ಸಲ್ಲಿಸಿರುವ ಪ್ರಸ್ತಾವದಲ್ಲಿರುವ ಉದ್ದೇಶಿತ ತಿದ್ದುಪಡಿಗಳಿಗೆ ಸಂಬಂಧಿಸಿದಂತೆ ಎಲ್ಲ ಸದಸ್ಯರ ಪ್ರತಿಕ್ರಿಯೆಗಳನ್ನು ಸಂಗ್ರಹಿಸಿ ಕಳುಹಿಸುವಂತೆ ಸ್ಥಳೀಯ ಸಂಸ್ಥೆಗಳಿಗೆ ಸೂಚಿಸಲಾಗಿದೆ. ಇದೇ ಕರಡನ್ನು ಇಲಾಖೆಯ ವೆಬ್‌ಸೈಟ್‌ನಲ್ಲೂ ಪ್ರಕಟಿಸಿದ್ದು, ಸಾರ್ವಜನಿಕರ ಅಭಿಪ್ರಾಯವನ್ನೂ ಸಂಗ್ರಹಿಸಲು ಇಲಾಖೆ ನಿರ್ಧರಿಸಿದೆ.

ಹಲವು ಬದಲಾವಣೆಗಳಿಗೆ ಒಲವು:
ಮುಖ್ಯವಾಗಿ ಗ್ರಾಮ ಪಂಚಾಯಿತಿ ಅಧ್ಯಕ್ಷರ ಅವಧಿಯನ್ನು ಎರಡೂವರೆ ವರ್ಷದಿಂದ ಐದು ವರ್ಷಕ್ಕೆ ವಿಸ್ತರಿಸಬೇಕು ಎಂದು ಸಮಿತಿ ಶಿಫಾರಸು ಮಾಡಿದೆ. ಇದೇ ರೀತಿ ತಾಲ್ಲೂಕು ಪಂಚಾಯಿತಿ ಹಾಗೂ ಜಿಲ್ಲಾ ಪಂಚಾಯಿತಿ ಅಧ್ಯಕ್ಷರ ಅವಧಿಯನ್ನು 20 ತಿಂಗಳಿನಿಂದ ಐದು ವರ್ಷಕ್ಕೆ ವಿಸ್ತರಿಸಬೇಕೆಂಬ ಶಿಫಾರಸು ವರದಿಯಲ್ಲಿದೆ. ಸ್ಥಳೀಯ ಸಂಸ್ಥೆಗಳ ಆಡಳಿತದಲ್ಲಿ ಸ್ಥಿರತೆ ಕಾಯ್ದುಕೊಳ್ಳಲು ಈ ಕ್ರಮ ಅಗತ್ಯ ಎಂದು ತಿಳಿಸಲಾಗಿದೆ.

ಈ ಮೂರೂ ಸ್ಥಳೀಯ ಸಂಸ್ಥೆಗಳ ಸದಸ್ಯರು ಆಯ್ಕೆಯಾದ ಮೂರು ತಿಂಗಳ ಒಳಗೆ ತಮ್ಮ ಆಸ್ತಿ ವಿವರವನ್ನು ಸಕ್ಷಮ ಪ್ರಾಧಿಕಾರಗಳಿಗೆ ಸಲ್ಲಿಸುವುದನ್ನು ಕಡ್ಡಾಯಗೊಳಿಸುವ ಪ್ರಸ್ತಾವವಿದೆ. ಅನುಕ್ರಮವಾಗಿ ಜಿಲ್ಲಾಧಿಕಾರಿ, ಪ್ರಾದೇಶಿಕ ಆಯುಕ್ತರು ಮತ್ತು ರಾಜ್ಯ ಚುನಾವಣಾ ಆಯೋಗಕ್ಕೆ ಆಸ್ತಿ ವಿವರ ಸಲ್ಲಿಸಬೇಕು.
 
ಅಲ್ಲದೇ, ಸದಸ್ಯರು ಹೊಸ ಆಸ್ತಿ ಖರೀದಿಸಿದ ಅಥವಾ ವಿಲೇವಾರಿ ಮಾಡಿದ ಪ್ರಕ್ರಿಯೆ ಕುರಿತು ತಕ್ಷಣವೇ ಸಕ್ಷಮ ಪ್ರಾಧಿಕಾರಕ್ಕೆ ಮಾಹಿತಿ ನೀಡಬೇಕು. ಆಸ್ತಿ ವಿವರ ಸಲ್ಲಿಸದಿರುವುದು ಮತ್ತು ತಪ್ಪು ಮಾಹಿತಿ ನೀಡಿರುವುದು ಸಾಬೀತಾದಲ್ಲಿ ಸದಸ್ಯತ್ವದಿಂದ ಅನರ್ಹಗೊಳಿಸುವ ಪ್ರಸ್ತಾವವೂ ಉದ್ದೇಶಿತ ತಿದ್ದುಪಡಿಯಲ್ಲಿ ಸೇರಿದೆ.

ಪ್ರತಿ ತಿಂಗಳ 10ರಂದು ಅಥವಾ 10ನೇ ಕೆಲಸದ ದಿನದಂದು ಗ್ರಾಮ ಪಂಚಾಯಿತಿ ಕಡ್ಡಾಯವಾಗಿ ಸಭೆ ಸೇರಬೇಕು. ಇದೇ ರೀತಿ ತಾಲ್ಲೂಕು ಪಂಚಾಯಿತಿ 15ರಂದು ಮತ್ತು ಜಿಲ್ಲಾ ಪಂಚಾಯಿತಿ 20ರಂದು ಸಭೆ ಸೇರುವುದನ್ನು ಕಡ್ಡಾಯಗೊಳಿಸುವ ತಿದ್ದುಪಡಿಯ ಪ್ರಸ್ತಾವವೂ ಕರಡು ಪ್ರತಿಯಲ್ಲಿದೆ.
 
1993ರ ಪಂಚಾಯತ್ ರಾಜ್ ಕಾಯ್ದೆಯ ಪ್ರಕಾರ ಕನಿಷ್ಠ ಆರು ತಿಂಗಳಿಗೆ ಒಮ್ಮೆ ಗ್ರಾಮಸಭೆ ನಡೆಸಬೇಕು. ಈ ಅವಧಿಯನ್ನು ಮೂರು ತಿಂಗಳಿಗೆ ಕಡಿತಗೊಳಿಸಬೇಕು ಹಾಗೂ ಇದೇ ಅವಧಿಯಲ್ಲಿ ವಾರ್ಡ್ ಸಭೆಯನ್ನೂ ಕಡ್ಡಾಯಗೊಳಿಸಬೇಕು ಎಂದು ಸಮಿತಿ ಶಿಫಾರಸು ಮಾಡಿದೆ.

ಮರು ವಿಂಗಡಣೆ ಪ್ರಸ್ತಾವ:

ಗ್ರಾಮ ಪಂಚಾಯಿತಿಗಳು ಮತ್ತು ಅವುಗಳ ಕ್ಷೇತ್ರಗಳ ಮರು ವಿಂಗಡಣೆಯೂ ಅಗತ್ಯ ಎಂದು ಉನ್ನತಮಟ್ಟದ ಸಮಿತಿ ವರದಿಯಲ್ಲಿ ತಿಳಿಸಿದೆ. ಈಗ ಗ್ರಾಮ ಪಂಚಾಯಿತಿಯೊಂದು ಕನಿಷ್ಠ 5,000 ಜನಸಂಖ್ಯೆ ಹೊಂದಿರಬೇಕು. ಗರಿಷ್ಠ ಮಿತಿ 7,000. ಗ್ರಾಮ ಪಂಚಾಯಿತಿಯ ಕನಿಷ್ಠ ಜನಸಂಖ್ಯಾ ಮಿತಿಯನ್ನು 10,000ಕ್ಕೆ ಮತ್ತು ಗರಿಷ್ಠ ಮಿತಿಯನ್ನು 15,000ಕ್ಕೆ ಹೆಚ್ಚಿಸಲು ಶಿಫಾರಸು ಮಾಡಲಾಗಿದೆ.

ಬೆಳಗಾವಿ, ಚಿಕ್ಕಮಗಳೂರು, ದಕ್ಷಿಣ ಕನ್ನಡ, ಧಾರವಾಡ, ಹಾಸನ, ಕೊಡಗು, ಶಿವಮೊಗ್ಗ, ಉಡುಪಿ, ಹಾವೇರಿ ಮತ್ತು ಉತ್ತರ ಕನ್ನಡ ಜಿಲ್ಲೆಗಳಲ್ಲಿ ಪ್ರತಿ 2,500 ಜನಸಂಖ್ಯೆಗೆ ಒಂದು ಗ್ರಾಮ ಪಂಚಾಯಿತಿ ಇರಬಹುದು. ಈ ಮಿತಿಯನ್ನು ಐದು ಸಾವಿರಕ್ಕೆ ಹೆಚ್ಚಿಸುವ ಪ್ರಸ್ತಾವವಿದೆ. ಪ್ರತಿ ಸಾವಿರ ಜನಸಂಖ್ಯೆಗೆ ಒಬ್ಬ ಸದಸ್ಯ ಮತ್ತು ಒಂದು ಕ್ಷೇತ್ರಕ್ಕೆ ಒಬ್ಬನೇ ಸದಸ್ಯ ಎಂಬ ಸೂತ್ರವನ್ನು ಅಳವಡಿಸಿಕೊಳ್ಳಬೇಕು ಎಂಬ ಅಂಶವೂ ಕರಡು ತಿದ್ದುಪಡಿ ಪ್ರಸ್ತಾವದಲ್ಲಿ ಇದೆ.

`ಶೀಘ್ರದಲ್ಲಿ ಪ್ರತಿಕ್ರಿಯೆಗಳನ್ನು ಕಳುಹಿಸುವಂತೆ ಮತ್ತೊಮ್ಮೆ ಎಲ್ಲ ಪಂಚಾಯಿತಿಗಳಿಗೂ ಪತ್ರ ಕಳುಹಿಸಲಾಗುವುದು. ಇಲಾಖೆಯ ವೆಬ್‌ಸೈಟ್‌ನಲ್ಲಿ ಈಗ ಕರಡನ್ನು ಪ್ರಕಟಿಸಿದ್ದು, ಸಾರ್ವಜನಿಕರ ಅಭಿಪ್ರಾಯವನ್ನೂ ಸಂಗ್ರಹಿಸಲು ತೀರ್ಮಾನಿಸಲಾಗಿದೆ. ಅಭಿಪ್ರಾಯ ಸಂಗ್ರಹಿಸಿದ ಬಳಿಕ ಕಾಯ್ದೆ ತಿದ್ದುಪಡಿಗೆ ಅಂತಿಮ ಕರಡನ್ನು ಸಿದ್ಧಪಡಿಸುವ ಯೋಚನೆ ಸರ್ಕಾರಕ್ಕಿದೆ~ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಮೂಲಗಳು `ಪ್ರಜಾವಾಣಿ~ಗೆ ತಿಳಿಸಿವೆ.

ಅವಿಶ್ವಾಸಕ್ಕೆ ಮೂಗುದಾರ
ಜಿಲ್ಲಾ ಪಂಚಾಯಿತಿಗಳಲ್ಲಿ ರಾಜಕೀಯ ಕಾರಣಗಳಿಗಾಗಿ ಪದೇ ಪದೇ ಅಧ್ಯಕ್ಷರನ್ನು ಕೆಳಕ್ಕಿಳಿಸುವ ಪ್ರವೃತ್ತಿಗೆ ಕಡಿವಾಣ ಹಾಕಲು ಪರಿಹಾರ ಸೂತ್ರವೊಂದನ್ನು ಸಮಿತಿ ಮುಂದಿಟ್ಟಿದೆ. ಇದರ ಪ್ರಕಾರ, ಅವಿಶ್ವಾಸ ನಿರ್ಣಯ ಅಂಗೀಕಾರವಾಗಿ ಅಧ್ಯಕ್ಷರು ಪದಚ್ಯುತಿ ಹೊಂದಿದರೆ ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿಯ ಅಧ್ಯಕ್ಷರೇ ಉಳಿದ ಅವಧಿಗೆ ಜಿಲ್ಲಾ ಪಂಚಾಯಿತಿ ಅಧ್ಯರಾಗಿರಬೇಕು. ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿಯ ಅಧ್ಯಕ್ಷರು ಕಡ್ಡಾಯವಾಗಿ ಪರಿಶಿಷ್ಟ ಜಾತಿ ಅಥವಾ ಪರಿಶಿಷ್ಟ ಪಂಗಡಕ್ಕೆ ಸೇರಿರಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT