ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಂಚಾಯ್ತಿಗೆ ಬೀಗ ಜಡಿದು ಗ್ರಾಮಸ್ಥರ ಪ್ರತಿಭಟನೆ

Last Updated 14 ಆಗಸ್ಟ್ 2012, 6:25 IST
ಅಕ್ಷರ ಗಾತ್ರ

ಹಿರಿಯೂರು: ಸರ್ಕಾರದಿಂದ ಅಲ್ಪಸಂಖ್ಯಾತರಿಗೆ ಮಂಜೂರು ಮಾಡಿರುವ 30 ಮನೆಗಳನ್ನು ಗ್ರಾಮ ಪಂಚಾಯ್ತಿ ಸದಸ್ಯರೊಬ್ಬರು ಸಂಬಂಧಿಕರಿಗೆ ಹಂಚಿಕೆ ಮಾಡುವ ಮೂಲಕ ಬಡವರನ್ನು ವಂಚಿಸಿದ್ದಾರೆ ಎಂದು ಆರೋಪಿಸಿ ಗ್ರಾಮಸ್ಥರು ಪಂಚಾಯ್ತಿ ಕಚೇರಿಗೆ ಬೀಗ ಜಡಿದು ಪ್ರತಿಭಟಿಸಿದ ಘಟನೆ ಸೋಮವಾರ ತಾಲ್ಲೂಕಿನ ಕೂನಿಕೆರೆ ಗ್ರಾಮದಲ್ಲಿ ನಡೆದಿದೆ.

ಸರ್ಕಾರದಿಂದ ಮಂಜೂರಾಗಿರುವ ಮನೆಗಳು ಅಲ್ಪಸಂಖ್ಯಾತ ಬಡವರಿಗೆ ಸಿಗಬೇಕು ಎನ್ನುವುದು ತಮ್ಮ ಪ್ರಮುಖ ಬೇಡಿಕೆ. ಈ ಬಗ್ಗೆ ತಾಲ್ಲೂಕು ಪಂಚಾಯ್ತಿ ಇಒ ಗಮನಕ್ಕೆ ತಂದಿದ್ದೇವೆ. ಸಮಸ್ಯೆ ಪರಿಹಾರದ ಭರವಸೆ ಸಿಕ್ಕಿದೆ ಎಂದು ಪ್ರತಿಭಟನೆಯ ನೇತೃತ್ವ ವಹಿಸಿದ್ದ ಫಕೃದ್ದೀನ್ ಸಾಬ್, ಶುಕೂರ್ ಸಾಬ್, ಹಬೀಬ್, ಹಯಾತ್, ಸೈಯದ್, ಕೆ.ಎಲ್. ಗೋವಿಂದರಾಜು, ಮಹಾಂತೇಶ್, ರಂಗನಾಥ್, ಚಂದ್ರಪ್ಪ, ರಂಗಪ್ಪ, ಕುಮಾರ್, ಮಕ್ಸೂದ್, ಮೂಡಲಗಿರಿಯಪ್ಪ, ರಸೂಲ್‌ಸಾಬ್, ಈರಣ್ಣ, ತಿಮ್ಮಣ್ಣ ತಿಳಿಸಿದರು.

ಇಒ ಸ್ಪಷ್ಟನೆ:  ಪಂಚಾಯ್ತಿ ಕಚೇರಿಗೆ ಮುತ್ತಿಗೆ ಹಾಕಿದ ಘಟನೆ ಬಗ್ಗೆ ಪ್ರತಿಕ್ರಿಯಿಸಿರುವ ತಾಲ್ಲೂಕು ಪಂಚಾಯ್ತಿ ಇಒ ರಮೇಶ್, ಇಂದಿರಾ   ಆವಾಜ್ ಯೋಜನೆಯ ಅಡಿ ತಾಲ್ಲೂಕಿನ 32 ಗ್ರಾ.ಪಂ.ಗಳಿಗೆ ತಲಾ 42 ಮನೆ  ಮಂಜೂರು ಮಾಡಲಾಗಿದೆ. ಇದರಲ್ಲಿ ಶೇ 60ರಷ್ಟು ಪರಿಶಿಷ್ಟ ಜಾತಿ, ವರ್ಗದವರಿಗೆ, ಶೇ 15ರಷ್ಟು ಅಲ್ಪಸಂಖ್ಯಾತರಿಗೆ, ಉಳಿದ ಶೇ 25ರಷ್ಟು ಮನೆಗಳನ್ನು ಇತರ ಸಮುದಾಯದವರಿಗೆ ಹಂಚಲಾಗುವುದು. ಗ್ರಾಮ ಸಭೆಗಳ ಮೂಲಕ ಈಗಾಗಲೇ ಫಲಾನುಭವಿ ಆಯ್ಕೆ ಮಾಡಲಾಗಿದ್ದು, ಅಲ್ಪ ಸಂಖ್ಯಾತರು ಇಲ್ಲದ ಪಂಚಾಯ್ತಿಗಳ ಮನೆಗಳನ್ನು ತಮಗೆ ಕೊಡಬೇಕು ಎನ್ನುವುದು ಕೂನಿಕೆರೆ ಗ್ರಾಮಸ್ಥರ ಬೇಡಿಕೆಯಾಗಿದೆ ಎಂದು ತಿಳಿಸಿದ್ದಾರೆ.

32 ಪಂಚಾಯ್ತಿಗಳಿಂದ ಅಲ್ಪಸಂಖ್ಯಾತರ ಕೋಟಾದಲ್ಲಿ ಸುಮಾರು 30 ಮನೆ ಉಳಿಯಬಹುದು. ತಾಲ್ಲೂಕಿನ ಧರ್ಮಪುರ, ಜವನಗೊಂಡನಹಳ್ಳಿ, ದಿಂಡಾವರ, ವಾಣಿವಿಲಾಸಪುರ, ಕೂನಿಕೆರೆ ಪಂಚಾಯ್ತಿ ವ್ಯಾಪ್ತಿಯಲ್ಲಿ ಅಲ್ಪಸಂಖ್ಯಾತರಿದ್ದು, ಉಳಿಯುವ ಮನೆಗಳನ್ನು ಈ ಎಲ್ಲಾ ಪಂಚಾಯ್ತಿಗಳಿಗೂ ಸಮನಾಗಿ ಹಂಚಬೇಕು. ವಾರದ ಒಳಗೆ ಮತ್ತೊಮ್ಮೆ ಗ್ರಾಮಸಭೆ ನಡೆಸಿ ಯಾವುದೇ ಪಂಚಾಯ್ತಿಗೂ ಅನ್ಯಾಯ ಆಗದಂತೆ ಮನೆ ಹಂಚಿಕೆ ಮಾಡುತ್ತೇವೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT