ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಂಚಾಯ್ತಿಗೆ ಬೀಗ ಜಡಿದು ಪ್ರತಿಭಟನೆ

`ಶೆಟ್ಟರ್ ತವರಲ್ಲಿ ಕುಡಿಯುವ ನೀರಿಗೆ ಜನತೆಯ ತತ್ವಾರ'
Last Updated 4 ಏಪ್ರಿಲ್ 2013, 7:53 IST
ಅಕ್ಷರ ಗಾತ್ರ

ಕೆರೂರ: ಎರಡು ವರ್ಷಗಳ ಬರಗಾಲದಿಂದ ಕುಡಿಯುವ ನೀರಿಗೆ ಬೋರವೆಲ್‌ಗಳನ್ನೇ ಅವಲಂಬಿಸಿರುವ ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಅವರ ಹುಟ್ಟೂರು, ಬೇಸಿಗೆ ವ್ಯಾಪಿಸುತ್ತಿದ್ದಂತೆ ದಾಹ ತಣಿಸುವ ನೀರಿಗೆ ನಿತ್ಯವೂ ತತ್ವಾರ ಪಡುತ್ತಿದೆ.

ಪಟ್ಟಣದ 16 ನೇ ವಾರ್ಡಿನ ಮನೆಗಳಿಗೆ ಕಳೆದ ಹಲವಾರು ದಿನಗಳಿಂದ ಸಮರ್ಪಕ ಕುಡಿಯುವ ನೀರು ಪೂರೈಕೆಯಾಗದ ಕಾರಣ ಅಸಮಾಧಾನಗೊಂಡ ಬಡಾವಣೆಯ ನಾಗರಿಕರು ಪಟ್ಟಣ ಪಂಚಾಯ್ತಿ ಕಚೇರಿಗೆ ಬೀಗ ಜಡಿದು ತಮ್ಮ ಆಕ್ರೋಶ ವ್ಯಕ್ತಪಡಿಸಿದರು.

ಸುಮಾರು 20 ಸಾವಿರಕ್ಕೂ ಹೆಚ್ಚು ಜನಸಂಖ್ಯೆ ಇರುವ ಇಲ್ಲಿನ ಬಹುತೇಕ ವಾರ್ಡುಗಳು ದಿನವೂ ಕುಡಿಯುವ ನೀರಿಗಾಗಿ ಪರಿತಪಿಸುತ್ತಿವೆ. ಕೊಡ ನೀರಿಗೆ ಸಾರ್ವಜನಿಕರು ತಮ್ಮ ಕೆಲಸಗಳನ್ನು ಬಿಟ್ಟು, ದೂರದ ಕಡೆಗಳಿಂದ ಸಿಕ್ಕಲ್ಲಿ ನೀರು ಹಿಡಿದು ತರುವುದೇ ನಿತ್ಯದ ಕಾಯಕವಾಗಿ ಹೋಗಿದೆ.

ಈ ಸಮಸ್ಯೆಯಿಂದ ದುಡಿದೇ ಬದುಕು ಸಾಗಿಸುವ ಬಡವರು, ನೇಕಾರ ಸಮುದಾಯ ನೀರಿಗಾಗಿ ಸಾಕಷ್ಟು ನರಳುವಂತಾಗಿದೆ ಎಂದು ಪ್ರತಿಭಟನೆಕಾರರು ತಮ್ಮ ದುರ್ಗತಿಯನ್ನು ತೆರೆದಿಡುತ್ತಾರೆ.

`ಮಾರ್ಗವೇ ಇಲ್ಲ'
ಇಲ್ಲಿನ ಪುರಾತನ ಕೆರೆಗೆ ಪಕ್ಕವೇ ಇರುವ ಕೊಟೇಶ್ವರಿ ಕಾಲೊನಿ, ಇತರೆ ಬಡಾವಣೆ ನಿವಾಸಿಗಳಿಗೆ ನೀರು ಪೂರೈಸಲು ಪಂಚಾಯ್ತಿ ಕೊಳವೆ ಮಾರ್ಗವೇ ಇಲ್ಲ.

ಈ ಜನರು ಸುಮಾರು ದೂರ ಹೋಗಿ, ಗಂಟೆಗಟ್ಟ ಲೆ ಕಾಯ್ದು ನೀರು ಹೊತ್ತು ತರುವ ದುರ್ಗತಿ ದಿನಂಪ್ರತಿಯದು. `ಒಂದು ವೇಳೆ ಮುಖ್ಯಸ್ಥ ಹಾಸಿಗೆ ಹಿಡಿದರೆ ಆ ಕುಟುಂಬದ ದುಸ್ಥಿತಿ ಹೇಳುವದೇ ಬೇಡ' ಎಂದು ಅಲ್ಲಿನ ನಿವಾಸಿಗಳು ತಮ್ಮ ಸಂಕಟವನ್ನು ವಿವರಿಸುತ್ತಾರೆ.

ಸ್ಥಳೀಯ ಪಂಚಾಯ್ತಿ ಆಡಳಿತ ಭರವಸೆ ನೀಡುವುದು ಬೇಡ, ಕೂಡಲೇ ತಮ್ಮ ಕಾಲೊನಿಗಳಿಗೆ ಸೂಕ್ತ ನೀರು ಪೂರೈಸಲು ಮುಂದಾಗಬೇಕು. ಸಮಸ್ಯೆ ನಿವಾರಿಸದಿದ್ದರೆ ನಾಗರಿಕರೆಲ್ಲರೂ ಒಟ್ಟಾಗಿ ಉಗ್ರ ರೀತಿಯಲ್ಲಿ ಪ್ರತಿಭಟಿಸುವುದು ಅನಿವಾರ್ಯ ಆಗುತ್ತದೆ ಎಂದು ಅವರು ಎಚ್ಚರಿಸಿದರು.

ಪ.ಪಂ ಮುಖ್ಯಾಧಿಕಾರಿ ಪಿ.ಕೆ. ಗುಡದಾರಿ ಮಾತನಾಡಿ, ಪಟ್ಟಣಕ್ಕೆ ನೀರು ಪೂರೈಸುವ ಕೊಳವೆಬಾವಿಗಳಲ್ಲಿ ಅಂತರ್ಜಲ ಬರಗಾಲದಿಂದ ಕುಸಿಯುತ್ತಿದೆ. ಜನತೆಗೆ ಬೇಡಿಕೆಯಂತೆ ನೀರು ಪೂರೈಸುವುದು ಕಷ್ಟವಾಗುತ್ತಿದೆ. ಬೇಸಿಗೆಯಲ್ಲಿ ಪರ್ಯಾಯ ವ್ಯವಸ್ಥೆಗೆಜಿಲ್ಲಾಧಿಕಾರಿಗಳಿಗೆ ಪ್ರಸ್ತಾವ ಸಲ್ಲಿಸಲಾಗಿದೆ. ಇಷ್ಟರಲ್ಲೇ ಈ ಸಮಸ್ಯೆ ತಹಬದಿಗೆ ಬರಲಿದ್ದು, ಪರಿಸ್ಥಿತಿ ಅರಿತು ನಾಗರಿಕರು ಸಹಕರಿಸಬೇಕು ಎಂದರು.

ಈ ಸಂದರ್ಭದಲ್ಲಿ ಜಿ.ಪಂ  ಎಂಜಿನಿಯರ್ ಹಾಗೂ ಕಿರಿಯ ಎಂಜಿನಿಯರ್ ಎನ್.ಕೆ. ಹೊಸಮನಿ ಇತರರು ಇದ್ದರು.ಪ್ರತಿಭಟನೆಯಲ್ಲಿ 16 ನೇ ವಾರ್ಡಿನ ಸದಸ್ಯ ಸದಾನಂದ ಮದಿ, ನೂರಂದಪ್ಪ ಗದ್ದನಕೇರಿ, ನೀಲಪ್ಪ ಕ್ವಾಣ್ಣೂರ, ಈರಪ್ಪ ಹರವಿ,ಗುಂಡಪ್ಪ ಹೂವನ್ನವರ,ಯಂಕಪ್ಪ ಮೂಲಿನಮನಿ, ಕೃಷ್ಣಾ ಮಾನ್ವಿ, ಹನಮಂತ ಗಿಡ್ನಂದಿ, ನಾಗ ಪ್ಪ ಬಡಣ್ಣವರ, ಮಹಾನಂದ ಕ್ವಾನ್ನೂರ, ಗೋಪಾಲ ಪರದೇಶಿ ಇತರರು ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT