ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಂಜಾಬ್ ವ್ಯಾಪಾರಿಗಳಿಂದ ತರಕಾರಿ ರವಾನೆ

Last Updated 9 ಜನವರಿ 2011, 11:10 IST
ಅಕ್ಷರ ಗಾತ್ರ

ಅಮೃತಸರ (ಐಎಎನ್‌ಎಸ್): ಪಾಕಿಸ್ತಾನದೊಂದಿಗೆ ಉತ್ತಮ ಬಾಂಧವ್ಯ ಹೊಂದುವ ಸದಾಶಯದೊಂದಿಗೆ ಪಂಜಾಬ್ ಮೂಲದ ವ್ಯಾಪಾರಿಗಳು ಶನಿವಾರ ಟೊಮೆಟೊ ಮತ್ತು ಇತರ ತರಕಾರಿಗಳನ್ನು ರಸ್ತೆ ಮೂಲಕ ಪಾಕ್‌ಗೆ ರವಾನಿಸುವ ಕಾರ್ಯವನ್ನು ಪುನರಾರಂಭಿಸಿದ್ದಾರೆ.  ಭಾರತಕ್ಕೆ ಪಾಕ್ ಈರುಳ್ಳಿ ರಫ್ತು ಮಾಡುವುದನ್ನು ತಡೆಹಿಡಿದುದಕ್ಕೆ ಪ್ರತಿಯಾಗಿ ಈ ವ್ಯಾಪಾರಿಗಳು ಪಾಕಿಸ್ತಾನಕ್ಕೆ ತೆರಳಲು ಸಿದ್ಧವಾಗಿದ್ದ ಟೊಮೆಟೊ, ಆಲೂಗಡ್ಡೆ, ಶುಂಠಿ, ಮೆಣಸು ಮತ್ತು ಇತರ ತರಕಾರಿಗಳನ್ನು ತುಂಬಿದ್ದ 70 ಟ್ರಕ್‌ಗಳನ್ನು ಶುಕ್ರವಾರ ತಡೆಹಿಡಿದಿದ್ದರು.ಆದರೆ ‘ಮುಯ್ಯಿಗೆ ಮುಯ್ಯಿ’ ಎಂಬ ಧೋರಣೆ ತಳೆಯಲು ಬಯಸದ ವ್ಯಾಪಾರಿಗಳು ಟ್ರಕ್‌ಗಳನ್ನು ಪಾ ಕ್‌ಗೆ ತೆರಳಲು ಶನಿವಾರ ಅವಕಾಶ ನೀಡಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.

‘ಭಾರತ ಮತ್ತು ಪಾಕಿಸ್ತಾನ ನಡುವೆ ವ್ಯಾಪಾರ ವಹಿವಾಟು ವೃದ್ಧಿಸಬೇಕು, ಇದರ ಮೂಲಕ ಸ್ನೇಹ ಸೇತು ಬೆಸೆಯಬೇಕು ಎಂಬುದು ನಮ್ಮ ಉದ್ದೇಶ. ತರಕಾರಿಗಳನ್ನು ಕಳುಹಿಸುವ ನಮ್ಮ ಕ್ರಮದಿಂದಲಾದರೂ ಪಾಕಿಸ್ತಾನ ಪಾಠ ಕಲಿತು ತಾನು ತಡೆಹಿಡಿದಿದ್ದ ಈರುಳ್ಳಿ ಟ್ರಕ್‌ಗಳನ್ನು ಭಾರತಕ್ಕೆ ಕಳುಹಿಸಿಕೊಡುತ್ತದೆ ಎಂದು ಭಾವಿಸಿದ್ದೇವೆ’ ಎಂದು ಅಮೃತಸರ ರಫ್ತು ಮತ್ತು ಆಮದು ಸಂಘದ ಉಪಾಧ್ಯಕ್ಷ ರಾಜ್‌ದೀಪ್ ಉಪ್ಪಲ್ ಹೇಳಿದರು.

ಡಿ.21ರಿಂದ ಈಚೆಗೆ ಭಾರತವು ಪಾಕ್‌ಂದ ಪ್ರತಿದಿನ 50 ಟ್ರಕ್ ಈರುಳ್ಳಿ ಆಮದು ಮಾಡಿಕೊಳ್ಳುತ್ತಿತ್ತು. ಪಾಕ್‌ನಲ್ಲೂ ಈರುಳ್ಳಿ ಬೆಲೆ ಏರಿಕೆ ಆಗಿರುವುದರಿಂದ ರಸ್ತೆ ಮೂಲಕ ನಡೆಯುವ ಈರುಳ್ಳಿ ರಫ್ತು ನಿಷೇಧಿಸುತ್ತಿರುವುದಾಗಿ ಅದು ಹೇಳಿದ್ದರಿಂದ ಭಾರತ ತೀವ್ರ ಆಘಾತ ವ್ಯಕ್ತಪಡಿಸಿತ್ತು. ಈ ಮಧ್ಯೆ, ದೆಹಲಿಯ ಸಗಟು ಮಾರುಕಟ್ಟೆಗೆ ಮಹಾರಾಷ್ಟ್ರ, ಗುಜರಾತ್, ಮಧ್ಯಪ್ರದೇಶ ಭಾಗಗಳಿಂದ ದೊಡ್ಡ ಪ್ರಮಾಣದಲ್ಲಿ ಈರುಳ್ಳಿ ಆಗಮಿಸಿದ್ದರಿಂದ ಶನಿವಾರ ಈರುಳ್ಳಿ ಕಿಲೋ ದರ 3 ರೂಪಾಯಿಯಷ್ಟು ಇಳಿಯಿತು. ಹೀಗಾಗಿ ಈರುಳ್ಳಿ ದರ 40 ರೂಪಾಯಿಗೆ ಸ್ಥಿರವಾಗುವಂತಾಯಿತು.

ಶುಕ್ರವಾರ ಉತ್ತರಪ್ರದೇಶ, ತಮಿಳುನಾಡು, ಪಂಜಾಬ್, ಹರಿಯಾಣ, ಜಮ್ಮ ಮತ್ತು ಕಾಶ್ಮೀರಗಳಲ್ಲಿ ಆದಾಯ ತೆರಿಗೆ ಅಧಿಕಾರಿಗಳು ಈರುಳ್ಳಿ ವ್ಯಾಪಾರಿಗಳ ಮೇಲೆ ದಾಳಿ ನಡೆಸಿದ್ದರಿಂದ ಪ್ರಮುಖ ನಗರಗಳಲ್ಲಿ ಈರುಳ್ಳಿ ದರ ಕಿಲೋಗೆ 5ರಿಂದ 10 ರೂಪಾಯಿಗಳಷ್ಟು ಕುಸಿದಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT