ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಂಪ ರಾಮಾಯಣ: ಪ್ರತಿ ಸಂಸ್ಕೃತಿಯ ರಾವಣ

ನೆಲಸಿರಿ
Last Updated 3 ಆಗಸ್ಟ್ 2013, 19:59 IST
ಅಕ್ಷರ ಗಾತ್ರ

ತಿಣಿಕಿದನು ಫಣಿರಾಯ ರಾಮಾ
ಯಣದ ಕವಿಗಳ ಭಾರದಲಿ ತಿಂ
ಥಿಣಿಯ ರಘುವರ ಚರಿತೆಯಲಿ ಕಾಲಿಡಲು ತೆರಪಿಲ್ಲ

ಈ ಭೂಮಿಯನ್ನು ಹೊತ್ತಿರುವ ಆದಿಶೇಷ ರಾಮಾಯಣ ರಚಿಸಿರುವ ಅಸಂಖ್ಯಾತ ಕವಿಗಳ ಭಾರದಿಂದ ಒದ್ದಾಡಿದನಂತೆ. ರಾಮಚರಿತಾ ಕೃತಿಗಳ ಗುಂಪು ಎಷ್ಟಿದೆಯೆಂದರೆ ಕಾಲಿಡಲೂ ಜಾಗವಿಲ್ಲದಷ್ಟು! ಹಾಗೆಂದು ಕುಮಾರವ್ಯಾಸ ಹೇಳುತ್ತಾನೆ. ಕುಮಾರವ್ಯಾಸನ ಕಾಲದವರೆಗಿನ ಕನ್ನಡ ರಾಮಾಯಣಗಳ ಸಂಖ್ಯೆ ಗಮನಿಸಿದರೆ ಈ ಮಾತು ಒಪ್ಪುವುದು ಕಷ್ಟ.

ಬಹುಶಃ ಬಹಳಷ್ಟು ರಾಮಾಯಣಗಳು ರಚಿತವಾಗಿದ್ದಿರಬೇಕು, ನಮಗೆ ಉಪಲಬ್ಧವಿಲ್ಲ. ಆದರೆ ರಾಮಾಯಣದ ಕತೆ ಕಾಣಸಿಗುವ ಭಾಷೆಗಳ ಪಟ್ಟಿ ಗಮನಿಸಿದರೇ ಈಗ ನಮಗೆ ಆತ ಹೇಳಿದ್ದು ನಿಜವೆನ್ನಿಸುತ್ತದೆ. ಅಸಾಮೀ, ಬಾಲಿನೀಸ್, ಬಂಗಾಳಿ, ಚೀನೀ, ಕಾಂಬೋಡಿಯನ್, ಗುಜರಾತೀ, ಕಾಶ್ಮೀರೀ, ಖೊತಾನಿ, ಲಾವೋಶಿಯಾ, ಮರಾಠಿ, ಮಲಯೇಸಿಯನ್, ಒರಿಯಾ, ಪ್ರಾಕೃತ, ಸಂಸ್ಕೃತ, ಸಂತಾಲೀ, ಸಿಂಹಳೀ, ತಮಿಳು, ತೆಲುಗು, ಥಾಯ್, ಟಿಬೆಟನ್ ಮೊದಲಾದ ಭಾಷೆಗಳಲ್ಲಿ ರಾಮಕಥನ ಹಲವು ಶತಮಾನಗಳ ಅವಧಿಯಲ್ಲಿ ಮತ್ತೆ ಮತ್ತೆ ಹೇಳಲ್ಪಟ್ಟಿದೆ.

ರಾಮಾಯಣದ ಬಗ್ಗೆ ವಿಶೇಷ ಅಧ್ಯಯನ ಮಾಡಿದ ಕ್ಯಾಮಿಲ್ ಬಲ್ಕ್ (1950) ಮುನ್ನೂರು ರಾಮಾಯಣ ಕಥನವನ್ನು ಗುರುತಿಸಿದ್ದಾರೆ ಎಂದು ಎ.ಕೆ. ರಾಮಾನುಜನ್ ಹೇಳುತ್ತಾರೆ. ಹೆಚ್ಚು ಮಾನ್ಯತೆ ಪಡೆದಿರುವ ಮೂಲ ವಾಲ್ಮೀಕಿ ರಾಮಾಯಣದ ಜೊತೆ ಜೊತೆಗೇ ಅದ್ಭುತ ರಾಮಾಯಣ, ಆಧ್ಯಾತ್ಮ ರಾಮಾಯಣ, ವಾಸಿಷ್ಠ ರಾಮಾಯಣ, ಶೇಷರಾಮಾಯಣ, ಬೌದ್ಧರಾಮಾಯಣ, ಜೈನರಾಮಾಯಣ ಪರಂಪರೆಗಳೂ ಇವೆ. ಇವುಗಳ ಮೂಲಹಂದರ ಒಂದೇ ಆದರೂ ಸ್ವರೂಪದಲ್ಲಿ ಅಜಗಜಾಂತರ ವ್ಯತ್ಯಾಸವಿದೆ. ಇನ್ನು ಜಾನಪದ ರಾಮಾಯಣದ ವಿನ್ಯಾಸವೇ ಬೇರೆ.

ಈ ಹಿನ್ನೆಲೆಯಲ್ಲಿ ನಾಗಚಂದ್ರನ `ರಾಮಚಂದ್ರ ಚರಿತ ಪುರಾಣ' ಕನ್ನಡದ ಒಂದು ಮುಖ್ಯ ಕೃತಿ. ಹನ್ನೆರಡನೆಯ ಶತಮಾನದ ಆದಿಭಾಗದಲ್ಲಿದ್ದ ನಾಗಚಂದ್ರ ಜೈನಕವಿ. `ಅಭಿನವ ಪಂಪ'ನೆಂದು ಖ್ಯಾತಿ ಪಡೆದಿದ್ದ ಈತ ಪಂಪನ ಮಾದರಿಯಲ್ಲಿಯೇ ಎರಡು ಕೃತಿಗಳನ್ನು ರಚಿಸಿದ್ದಾನೆ. ಒಂದು ಹತ್ತೊಂಬತ್ತನೇ ತೀರ್ಥಂಕರನಾದ ಮಲ್ಲಿನಾಥನ ಕಥೆ ಹೇಳುವ `ಮಲ್ಲಿನಾಥ ಪುರಾಣ'; ಮತ್ತೊಂದು ವಾಲ್ಮೀಕಿ ರಾಮಾಯಣಕ್ಕಿಂತ ಭಿನ್ನವಾದ ಜೈನರಾಮಾಯಣ ಪರಂಪರೆಗೆ ಸೇರಿದ `ಪಂಪ ರಾಮಾಯಣ' ಎಂದೇ ಪ್ರಸಿದ್ಧವಾಗಿರುವ `ರಾಮಚಂದ್ರಚರಿತ ಪುರಾಣ'.

ಭಾರತೀಯ ಮನಸ್ಸನ್ನು ರಾಮಾಯಣ ಮಹಾಭಾರತ ಕೃತಿಗಳು ಕಾಡಿದಷ್ಟು ಬೇರೆ ಯಾವುದೂ ಕಾಡಿದಂತಿಲ್ಲ. ಮತ್ತೆ ಮತ್ತೆ ಭಾರತೀಯ ಮನಸ್ಸು ರಾಮಾಯಣ ಮಹಾಭಾರತ ಜಗತ್ತನ್ನು ಪ್ರವೇಶಿಸಿ, ತಮ್ಮ ಕಾಲಕ್ಕೆ, ತಮ್ಮ ಧರ್ಮಕ್ಕೆ ತಕ್ಕಂತೆ ಅವುಗಳನ್ನು ವ್ಯಾಖ್ಯಾನಿಸಿದೆ. ಕನ್ನಡದಲ್ಲಿಯೂ ಈ ಕಥನಗಳು ಪುನರುಕ್ತವಾಗಿವೆ. ಹೀಗೆ ಪುನರ್ಲೇಖಿಸುವಾಗ ಮೂಲವನ್ನು ಹಾಗೇ ಒಪ್ಪಿಕೊಳ್ಳದೆ ತಮ್ಮ ಧರ್ಮಕ್ಕೆ ಅನುಗುಣವಾಗಿ ತಿದ್ದಿ ಬದಲಾಯಿಸಿ ತಮ್ಮದೇ ಪರಂಪರೆಯನ್ನು ರೂಪಿಸಿದ್ದಾರೆ. ಜೈನ ಕವಿಗಳು ರೂಪಿಸಿದ ಈ ಪರಂಪರೆ ವಾಲ್ಮೀಕಿ ರಾಮಾಯಣಕ್ಕಿಂತ ಭಿನ್ನವಾದುದು.

ಇಲ್ಲಿಯೇ ಒಂದು ಅಂಶವನ್ನು ಗಮನಿಸಬೇಕು. ಕನ್ನಡದಲ್ಲಿ ಜೈನ ಕವಿಗಳು ರಾಮಾಯಣ ಮಹಾಭಾರತ ಕತೆಯನ್ನು ಬಳಸಿಕೊಂಡಂತೆ ವೀರಶೈವ ಕವಿಗಳು ಬಳಸಿಕೊಳ್ಳಲಿಲ್ಲ. ಹದಿನೈದನೇ ಶತಮಾನದಲ್ಲಿದ್ದ ಚಿತ್ರಲೇಶ್ವರನೆಂಬ ವೀರಶೈವ ಕವಿ (ಕ್ರಿ.ಶ. 1470) ಭಾಮಿನಿ ಷಟ್ಪದಿಯಲ್ಲಿ ಒಂದು ರಾಮಾಯಣ ಬರೆದಿದ್ದಾನೆ ಎಂದು ತ.ಸು.ಶಾಮರಾಯರು ಹೇಳುತ್ತಾರೆ. ಇದನ್ನು ಹೊರತುಪಡಿಸಿದರೆ ರಾಮಾಯಣ, ಮಹಾಭಾರತ ಅವರ ಕಾವ್ಯವಸ್ತುವಾಗಲಿಲ್ಲ. ಶಿವನ ಮಹಿಮೆಯನ್ನು ಹೇಳುವ `ಕಿರಾತಾರ್ಜುನೀಯ ಪ್ರಸಂಗ' ಮಾತ್ರ ಅವರ ಗಮನ ಸೆಳೆದಿದೆ ಅಷ್ಟೆ!

ನಾಗಚಂದ್ರನ `ರಾಮಚಂದ್ರಚರಿತ ಪುರಾಣ'ಕ್ಕೆ ಮೂಲ ಆಕರ ಪ್ರಾಕೃತ ಭಾಷೆಯಲ್ಲಿ ವಿಮಲಸೂರಿ ಬರೆದ `ಪಲುಮಚರಿಯ'. ಇದು ಜೈನರಾಮಾಯಣ ಪರಂಪರೆಯ ಅತ್ಯಂತ ಪ್ರಾಚೀನ ಕೃತಿಯೆಂದು ಹೇಳುತ್ತಾರೆ. ಜೈನ ರಾಮಾಯಣ ಪರಂಪರೆಯಲ್ಲಿ ಮತ್ತೊಂದು ಧಾರೆಯಿದೆ, ಅದು ಗುಣಭದ್ರಾಚಾರ‌್ಯರು ಸಂಸ್ಕೃತದಲ್ಲಿ ಬರೆದ `ಉತ್ತರ ಪುರಾಣ'ದ ಪರಂಪರೆ. ಕನ್ನಡದಲ್ಲಿ ಈ ಎರಡೂ ಪರಂಪರೆಯ ಪ್ರಭಾವವಿದೆ. `ಚಾವುಂಡರಾಯ ಪುರಾಣ'ದಲ್ಲಿ ಗುಣಭದ್ರಾಚಾರ‌್ಯರ ಪ್ರಭಾವವಿದ್ದರೆ, ನಾಗಚಂದ್ರ ವಿಮಲಸೂರಿಯ ಮಾದರಿಯನ್ನು ಅನುಸರಿಸಿದ್ದಾನೆ.

ವಿಮಲಸೂರಿಯ `ಪಲುಮಚರಿಯ'ದ ಆರಂಭದಲ್ಲಿಯೇ ಒಂದು ಪ್ರಸಂಗವಿದೆ. ಶ್ರೇಣಿಕ ಮಹಾರಾಜನಿಗೆ ರಾಮಾಯಣದ ಕತೆ ಕೇಳಿದಾಗ ಕೆಲವು ಸಂದೇಹಗಳು ಮೂಡುತ್ತವೆ. ರಾಕ್ಷಸರು ಅತಿ ಬಲಶಾಲಿಗಳಾಗಿದ್ದರೂ ವಾನರರು ಅವರನ್ನು ಹೇಗೆ ಜಯಿಸಿದರು? ರಾವಣ ಉತ್ತಮ ಕುಲದವನಾಗಿದ್ದು, ಉದಾತ್ತನಾಗಿದ್ದೂ ನರಮಾಂಸವನ್ನೇಕೆ ತಿನ್ನುತ್ತಿದ್ದ? ರಕ್ತವನ್ನೇಕೆ ಕುಡಿಯುತ್ತಿದ್ದ? ಕುಂಭಕರ್ಣ ಹೇಗೆ ಆರು ತಿಂಗಳ ಕಾಲ ನಿದ್ರಿಸುತ್ತಿದ್ದ, ಕಿವಿಗೆ ಕಾದೆಣ್ಣೆ ಸುರಿದರೂ ಅವನಿಗೆ ಎಚ್ಚರವಾಗಲಿಲ್ಲವೇಕೆ? ಎಚ್ಚರವಾದಾಗ ಹಸಿವನ್ನು ಹಿಂಗಿಸಿಕೊಳ್ಳಲು ಆನೆಗಳನ್ನು, ಎಮ್ಮೆಗಳನ್ನು ನುಂಗುತ್ತಿದ್ದುದು ಹೇಗೆ? ಇಂತಹ ಅನೇಕ ಪ್ರಶ್ನೆಗಳು ಮನಸ್ಸಿನಲ್ಲಿ ಮೂಡಿದಾಗ ಶ್ರೇಣಿಕ ಮಹಾರಾಜ ಗೌತಮ ಮುನಿಯನ್ನು ಈ ಬಗ್ಗೆ ಕೇಳುತ್ತಾನೆ.

ಆಗ ಗೌತಮಗಣಧರ `ಜೈನ ವಿವೇಕಿಗಳು ಹೇಳಿರುವ ಕಥೆ ಹೀಗಿಲ್ಲ, ರಾವಣನು ರಾಕ್ಷಸನಲ್ಲ, ನರಭಕ್ಷಕನಲ್ಲ, ರಕ್ತ ಕುಡಿಯುತ್ತಲೂ ಇರಲಿಲ್ಲ. ಕುಕವಿಗಳು, ಮೂರ್ಖರು ಇಂಥ ಸುಳ್ಳುಗಳನ್ನು ಹೇಳಿದ್ದಾರೆ' ಎಂದು ಹೇಳಿ ತನ್ನದೇ ಆದ ರೀತಿಯಲ್ಲಿ ರಾಮಾಯಣವನ್ನು `ತಿದ್ದಿ' ಹೇಳುತ್ತಾನೆ. ಹೀಗೆ ವಾಲ್ಮೀಕಿ ರಾಮಾಯಣವನ್ನು ತಿದ್ದಿ ರೂಪಿಸಿದ ಪ್ರತಿ ಪುರಾಣವೇ ಜೈನ ರಾಮಾಯಣ.

ಜನಪ್ರಿಯ ಕತೆಯೊಂದನ್ನು ಹೀಗೆ ತಿದ್ದುವ ಕೆಲಸ-ತಮ್ಮ ಉದ್ದೇಶಕ್ಕಾಗಿ ಎಲ್ಲ ಕಾಲದಲ್ಲೂ ಎಲ್ಲ ದೇಶದಲ್ಲೂ ನಡೆಯುತ್ತದೆ. ರೆನೆಸಾನ್ಸ್ ಕಾಲದ ಯೂರೋಪಿಯನ್ ಕವಿಗಳಿಗೆ ಅಭಿಜಾತ ಯುಗದ ಮಹಾಕಾವ್ಯಗಳು ಅ-ಕ್ರಿಶ್ಚಿಯನ್ (ಜಚ್ಞ) ಸಮಾಜದ ರಚನೆಗಳಾದುದರಿಂದ ಅವುಗಳು ಒಟ್ಟಾರೆ ಕೀರ್ತಿಸುವ ಮೌಲ್ಯಗಳು ಮತ್ತು ಆದರ್ಶಗಳು ಕ್ರಿಶ್ಚಿಯನ್ ಧರ್ಮದ ಮೌಲ್ಯಗಳಿಗೆ ವಿರುದ್ಧವಾಗಿ ಕಂಡವು. ಇದಕ್ಕೆ ಪರ್ಯಾಯವಾಗಿ ಯೂರೋಪಿಯನ್ ಕವಿಗಳು ಅಭಿಜಾತ ಕಾವ್ಯದ ಲಕ್ಷಣಗಳನ್ನೆಲ್ಲಾ ಹಾಗೇ ಉಳಿಸಿಕೊಂಡರು.

ಆದರೆ ನಾಯಕನನ್ನು ಮಾತ್ರ ಕ್ರಿಶ್ಚಿಯನ್ ಧರ್ಮಕ್ಕಾಗಿ ಹೋರಾಡುವ ಯೋಧನಂತೆ ಚಿತ್ರಿಸಿದರು. ಇಟಾಲಿಯನ್ ಕವಿ ಟ್ಯಾಸೋ, ಪೋರ್ಚುಗೀಸ್ ಕವಿ ಕಾಮೋಯನ್ ಮೊದಲಾದವರನ್ನು ನಾವಿಲ್ಲಿ ಗಮನಿಸಬಹುದು. ಮಿಲ್ಟನ್ ಅಭಿಜಾತ ಕಾವ್ಯ ಪರಂಪರೆಯನ್ನೇ ತಿರಸ್ಕರಿಸಿ ಧರ್ಮಗ್ರಂಥವಾದ ಬೈಬಲ್ ಕಥೆಯನ್ನಾಧರಿಸಿ ಕಾವ್ಯ ರಚಿಸುತ್ತಾನೆ. ಈ ಬಗ್ಗೆ ಸಿ.ಎನ್. ರಾಮಚಂದ್ರನ್ ತಮ್ಮ ತೌಲನಿಕ ಸಾಹಿತ್ಯ ವಿವೇಚನೆಯಲ್ಲಿ ವಿವರವಾಗಿ ಚರ್ಚಿಸುತ್ತಾರೆ. ಜೈನರಾಮಾಯಣ ಪರಂಪರೆಯೂ ಇಂಥದೇ ಪ್ರತಿಭಟನೆಯ ಮಾದರಿ. ಬೌದ್ಧರಾಮಾಯಣದಲ್ಲೂ ನಾವು ಇದನ್ನು ಗುರ್ತಿಸಬಹುದು.

ನಾಗಚಂದ್ರನಿಗೆ ವಿಮಲಸೂರಿಯೇ ಮೂಲವಾದ್ದರಿಂದ ಈತನ ಕಥಾವಿನ್ಯಾಸವೂ ವಾಲ್ಮೀಕಿ ರಾಮಾಯಣಕ್ಕಿಂತ ಭಿನ್ನವಾಗಿದೆ. ಕೆಲವು ಮುಖ್ಯ ಬದಲಾವಣೆಗಳನ್ನು ಗಮನಿಸುವುದಾದರೆ ಇಲ್ಲಿ ರಾವಣನನ್ನು ಕೊಲ್ಲುವವನು ರಾಮನಲ್ಲ, ಆತ ಧರ‌್ಮನಾಯಕ, ಅಹಿಂಸಾವ್ರತಿ; ವೀರನಾಯಕನಾದ ಲಕ್ಷ್ಮಣ ಪ್ರತಿನಾಯಕನಾದ ರಾವಣನನ್ನು ಕೊಲ್ಲುತ್ತಾನೆ. ಇಲ್ಲಿ ಯಜ್ಞಗಳಿಲ್ಲ, ವಿಶ್ವಾಮಿತ್ರ ಮಂಥರೆಯ ಪ್ರಸಂಗವೂ ಇಲ್ಲ.

ಸೀತೆ ಭೂಮಿಯಲ್ಲಿ ಸಿಕ್ಕಿದವಳಲ್ಲ, ಜನಕರಾಜನ ಮಗಳು, ಅವಳಿಗೆ ಪ್ರಭಾಮಂಡಲ ಎಂಬ ಅಣ್ಣನುಂಟು. ವಾಲಿಸುಗ್ರೀವರು ಕಪಿಗಳಲ್ಲ, ಕಪಿಧ್ವಜರು, ಖೇಚರರು. ವಾಲಿಯನ್ನು ಇಲ್ಲಿ ರಾಮ ಕೊಲ್ಲುವ ಪ್ರಸಂಗವಿಲ್ಲ. ಹನುಮಂತ ಇಲ್ಲಿ ರಾವಣನ ನೆಂಟ, ಆತನ ತಂಗಿಯ ಅಳಿಯ. ವರುಣನ ಮೇಲೆ ರಾವಣ ಯುದ್ಧ ಮಾಡಿದಾಗ ಆಂಜನೇಯ ಆತನಿಗೆ ಸಹಾಯ ಮಾಡುತ್ತಾನೆ. ಇಲ್ಲಿ ಸೇತುಬಂಧನವಿಲ್ಲ. ಆಕಾಶ ಕಾಮಿನೀವಿದ್ಯೆಯಿಂದ ಸೈನ್ಯ ಸಾಗುತ್ತದೆ-ಹೀಗೆ ಮೂಲರಾಮಾಯಣಕ್ಕೂ ನಾಗಚಂದ್ರನ ರಾಮಚಂದ್ರಚರಿತ ಪುರಾಣಕ್ಕೂ ಕಥಾಸ್ವರೂಪದಲ್ಲಿ ಅನೇಕ ವ್ಯತ್ಯಾಸಗಳಿವೆ. ಇವುಗಳಲ್ಲೆಲ್ಲಾ ಮುಖ್ಯವಾದುದು ರಾವಣನ ಪಾತ್ರದಲ್ಲಾಗಿರುವ ಬದಲಾವಣೆ.

ನಾಗಚಂದ್ರನ ರಾವಣ ಸಕಲವಿದ್ಯಾ ನಿಪುಣ. ರತ್ನಶ್ರವ ಹಾಗೂ ಕೈಕನಿ ದಂಪತಿಗಳ ಮಗನಾದ ಈತ ಮಗುವಾಗಿದ್ದಾಗ ನವಮುಖ ಮಾಣಿಕ್ಯದಲ್ಲಿ ಮಗುವಿನ ಮುಖ ಪ್ರತಿಬಿಂಬಿಸಲು ಈತನಿಗೆ `ದಶಮುಖ' ಎಂಬ ಹೆಸರು ಬಂದಿತು. ರಾವಣ ಮಹಾಶೂರ ಮಾತ್ರನಲ್ಲ, ಚಾರಿತ್ರದಲ್ಲೂ ಶುಚಿತ್ವ ಕಾಪಾಡಿಕೊಂಡವನು.

ಆತನ ವ್ಯಕ್ತಿತ್ವದ ಸ್ವರೂಪ ಪ್ರಕಟವಾಗುವ ಒಂದು ಪ್ರಸಂಗವನ್ನು ಗಮನಿಸಬಹುದು: ದುರ್ಲಂಘ್ಯಪುರದ ರಾಜ ನಳಕೂಬರ. ಆತನ ಹೆಂಡತಿ ಉಪರಂಭೆ. ರಾವಣ ದಿಗ್ವಿಜಯಕ್ಕೆ ಬಂದಾಗ ದುರ್ಲಂಘ್ಯಪುರದ ಕೋಟೆಯನ್ನು ಭೇದಿಸುವುದು ಕಷ್ಟವಾಗಿ ಊರ ಹೊರಗೆ ಬೀಡುಬಿಟ್ಟಿರುತ್ತಾನೆ. ಉಪರಂಭೆ ರಾವಣನಿಗೆ ಒಲಿದು ಸಖಿಯ ಮೂಲಕ ಪ್ರೇಮಸಂದೇಶ ಕಳಿಸುತ್ತಾಳೆ. ರಾವಣ ಈ ಸಂದೇಶವನ್ನು ಯುದ್ಧತಂತ್ರವಾಗಿ ಬಳಸಿಕೊಂಡು ಉಪರಂಭೆಯಿಂದ ಕೋಟೆ ಭೇದಿಸುವ ರಹಸ್ಯ ತಿಳಿದು ನಳಕೂಬರನನ್ನು ಜಯಿಸುತ್ತಾನೆ.

ಆ ನಂತರ ಉಪರಂಭೆಯನ್ನು ಏಕಾಂತದಲ್ಲಿ ಕರೆಸಿ, ಅವಳನ್ನು ಗೌರವದಿಂದ ಕಂಡು ನಳಕೂಬರನ ಜೊತೆ ಅನ್ಯೋನ್ಯವಾಗಿರುವಂತೆ ತಿಳಿಸಿ ಅವಳಿಗೆ ಉಚಿತ ರೀತಿಯಲ್ಲಿ ತಿಳಿವಳಿಕೆ ಹೇಳಿ ನಳಕೂಬರನನ್ನು ಮಾಂಡಲೀಕನನ್ನಾಗಿ ಮಾಡಿಕೊಂಡು ರಾಜ್ಯ ಒಪ್ಪಿಸಿ ಮುಂದೆ ಹೋಗುತ್ತಾನೆ. ಪರಸ್ತ್ರೀಯನ್ನು ಹೀಗೆ ಗೌರವದಿಂದ ಕಾಣುವ ರಾವಣ ದುರ್ಬಲ ಗಳಿಗೆಯೊಂದರಲ್ಲಿ ಸೀತೆಗೆ ಮನಸೋಲುತ್ತಾನೆ.

ವಿಹಿತಾಚಾರಮನ್ ಅನ್ವಯಾಗತ ಗುಣ ಪ್ರಖ್ಯಾತಿರಯಂ ದುಷ್ಟ ನಿ
ಗ್ರಹ ಶಿಷ್ಟ ಪ್ರತಿಪಾಲನ ಕ್ಷಮತೆಯಂ ಕೈಗಾಯದೆ ಅನ್ಯಾಂಗನಾ
ಸ್ಮೃಹೆಯಂ ತಾಳ್ದಿದನಲ್ತೆ ಕಾಲವಶದಿಂ ಲಂಕೇಶ್ವರಂ ವಿಸ್ಮಯಾ
ವಹಮಲ್ತು ಅಬಿಯುಂ ಒರ್ಮೆ ಕಾಲವಶದಿಂ ಮರ‌್ಯಾದೆಯಂ ದಾಂಟದೇ//
ಒಳ್ಳೆಯ ನಡವಳಿಕೆಯನ್ನು, ವಂಶಾನುಗತವಾಗಿ ಬಂದ ಸದ್ಗುಣ ಖ್ಯಾತಿಯನ್ನು, ದುಷ್ಟನಿಗ್ರಹ ಶಿಷ್ಟ ಪರಿಪಾಲನಾ ಸಾಮರ್ಥ್ಯವನ್ನು ಕಾಯ್ದುಕೊಳ್ಳದೆ ಕಾಲವಶದಿಂದ ಲಂಕೇಶ್ವರನಾದ ರಾವಣನು ಪರಸ್ತ್ರೀಯನ್ನು ಬಯಸಿದನಲ್ಲ! ಇದು ಆಶ್ಚರ್ಯವೇನಲ್ಲ! ಸಮುದ್ರವೂ ಒಮ್ಮಮ್ಮೆ ಕಾಲವಶದಿಂದ ತನ್ನ ಮೇರೆಯನ್ನು ಮೀರುತ್ತದಲ್ಲವೇ! ಪ್ರವೃತ್ತಿ ಸಂಸ್ಕೃತಿಗಳ ಸಂಘರ್ಷವಿದು. ಒಮ್ಮಮ್ಮೆ ಎಂಥ ಸಂಯಮಿಯೂ ಬಯಕೆಗಳಿಗೆ ಶರಣಾಗಿಬಿಡಬಹುದು! ರಕ್ತದ ವೇಗವನ್ನು ನಿಯಂತ್ರಿಸಲು ವಿವೇಕ ಸೋಲುತ್ತದೆ.

ರಾವಣ ಅವಲೋಕಿನೀ ವಿದ್ಯೆಯನ್ನು ನೆನೆಯುತ್ತಾನೆ. ಅವಲೋಕಿನೀ ವಿದ್ಯೆ ಮುಂದಿನ ದುಷ್ಪರಿಣಾಮವನ್ನು ತಿಳಿಯ ಹೇಳಿದರೂ ಕೇಳುವ ಸ್ಥಿತಿಯಲ್ಲಿ ರಾವಣ ಇರುವುದಿಲ್ಲ. ಸೀತೆಯನ್ನು ಅಪಹರಿಸುತ್ತಾನೆ. ಅವಳ ಒಲವು ಗಳಿಸಲು ವಿಫಲ ಯತ್ನಗಳನ್ನು ನಡೆಸುತ್ತಾನೆ. ರಾಮನ ಬಗೆಗಿನ ಸೀತೆಯ ನಿಷ್ಠೆ ಕದಲದಿದ್ದಾಗ ಕದಡಿದ ನೀರು ತಿಳಿಯಾಗುವಂತೆ ರಾವಣನ ಮನಸ್ಸು ಸೀತಾ ವ್ಯಾಮೋಹದಿಂದ ವಿಮುಕ್ತವಾಗಿ, ವೈರಾಗ್ಯ ಮೂಡಿ, ತನ್ನ ಕೃತ್ಯಕ್ಕೆ ಪಶ್ಚಾತ್ತಾಪ ಪಟ್ಟು ಸೀತೆಯನ್ನು ರಾಮನಿಗೆ ಒಪ್ಪಿಸಲು ತೀರ‌್ಮಾನಿಸುತ್ತಾನೆ.

ಆದರೆ-
ಇರದುಯ್ದೀಗಳೆ ಕೊಟ್ಟೊಡೆ ಎನ್ನ ಕಡುಪುಂ ಕಟ್ಟಾಯುಮಂ ಬೀರಮುಂ
ಬಿರುದುಂ ಬೀಸರಮಕ್ಕುಂ ಓಸರಿಸಿದಂತಾಗಿರ್ಕುಂ ಅಂತಾನದಂ
ತಿರೆ ದೋರ್ಗರ್ವಮನಿರ್ವಲಂ ಪೊಗಳೈನಂ ಸೌಮಿತ್ರಿಯಂ ರಾಮನಂ
ವಿರಥರ್ ಮಾಡಿ ರಣಾಗ್ರದೊಳ್ ಪಿಡಿದು ತಂದು ಆನ್‌ಕೊಟ್ಟಿತೆಂ ಸೀತೆಯಂ!

ಈಗಲೇ ಸೀತೆಯನ್ನು ಕರೆದುಕೊಂಡು ಹೋಗಿ ಕೊಟ್ಟರೆ ನನ್ನ ಪರಾಕ್ರಮವೂ, ಶೌರ‌್ಯವೂ ಖ್ಯಾತಿಯೂ ನಾಶವಾಗಿಬಿಡುತ್ತದೆ, ಪಕ್ಕಕ್ಕೆ ಸರಿಸಿದಂತಾಗಿಬಿಡುತ್ತದೆ. ಹಾಗಾಗದಂತಿರಲು ನನ್ನ ಬಾಹುಬಲವನ್ನು ಎರಡೂ ಕಡೆಯ ಸೈನ್ಯ ಹೊಗಳುವಂತೆ ಹೋರಾಡಿ, ರಾಮಲಕ್ಷ್ಮಣರನ್ನು ರಥಹೀನರನ್ನಾಗಿ ಮಾಡಿ ಸೆರೆಹಿಡಿದು ತಂದು, ಆ ನಂತರ ನಾನೇ ಸೀತೆಯನ್ನು ರಾಮನಿಗೆ ಒಪ್ಪಿಸುತ್ತೇನೆ.
ಎಂತಹ ಧೀರ ನಿರ್ಧಾರ! ವೀರನಿಗೆ ತಕ್ಕ ನಡವಳಿಕೆ! ಆದರೆ ರಣರಂಗದಲ್ಲಿ ರಾವಣ ಮರಣ ಹೊಂದುತ್ತಾನೆ.
ವಿಮಲಸೂರಿ, ನಾಗಚಂದ್ರ ಚಿತ್ರಿಸಿದ ರಾವಣನ ಪಾತ್ರವನ್ನು ಗಮನಿಸಿದ ನಂತರ ಕೆಲವು ಸಂಗತಿಗಳನ್ನು ಮರುಚಿಂತನೆಗೆ ಒಡ್ಡಬೇಕೆನ್ನಿಸುತ್ತದೆ.

ಮೊದಲನೆಯದು `ಟ್ರಾಜಿಡಿ'ಯ ಪ್ರಶ್ನೆ. ನಾಗಚಂದ್ರನ ರಾವಣ ನಿಸ್ಸಂದೇಹವಾಗಿ ಒಬ್ಬ ದುರಂತ ನಾಯಕ. ಪಂಪನ ಕರ್ಣ, ರನ್ನನ ದುರ‌್ಯೋಧನ ನಮಗಿಲ್ಲಿ ನೆನಪಾಗುತ್ತಾರೆ. ಬಿ.ಎಂ.ಶ್ರೀ. ಮೊದಲಿಗೆ  ಅ ಖ್ಟಜಜ್ಚಿ ್ಕಚ್ಞ ಎಂಬ ಪ್ರಬಂಧದಲ್ಲಿ ಈ ಬಗ್ಗೆ ಗಮನ ಸೆಳೆಯುತ್ತಾರೆ. ಡಿ.ಎಲ್. ನರಸಿಂಹಾಚಾರ್ ಅವರು `ಪಾಶ್ಚಾತ್ಯ ರುದ್ರನಾಟಕಗಳಲ್ಲಿ ಕಾಣುವ ದುರಂತ ನಾಯಕರಂತೆ ವಿಮಲಸೂರಿಯೇ ಮುಂತಾದ ಜೈನಕವಿಗಳು ರಾವಣನ ಪಾತ್ರವನ್ನು ನಿರ್ಮಿಸಲು ಸಂಕಲ್ಪಿಸಿ ಹೊರಟರೆಂದು ಹೇಳಲಿಕ್ಕಾಗುವುದಿಲ್ಲ.

ಆ ದೃಷ್ಟಿಯನ್ನು ಹೊಂದಿದ ಇಂದಿನವರಾದ ನಮಗೆ ಆ ರಾವಣನ ಪಾತ್ರ ಹಾಗೆ ಕಾಣುತ್ತದೆ' ಎಂದಿದ್ದಾರೆ. ಇಂಥ ಅಭಿಪ್ರಾಯಕ್ಕೆ ಕಾರಣವಿದೆ. ಭಾರತೀಯ ಸಾಹಿತ್ಯದಲ್ಲಿ `ಟ್ರಾಜಿಡಿ' ಎಂಬ ಪರಿಕಲ್ಪನೆಯಿಲ್ಲ ಎಂಬುದು ರೂಢಿಯ ಮಾತು. ಸಂಸ್ಕೃತ ನಾಟಕ ಮತ್ತು ಕಾವ್ಯ ಕಥನಗಳ ಮಟ್ಟಿಗೆ ಈ ಮಾತು ಖಂಡಿತ ನಿಜ.

ಆದರೆ ಒಟ್ಟಾರೆ ಭಾರತೀಯ ಸಾಹಿತ್ಯಕ್ಕೇ ಈ ಮಾತನ್ನು ಅನ್ವಯಿಸಲಾಗದು ಎಂದು ಎ.ಕೆ. ರಾಮಾನುಜನ್ ಅಭಿಪ್ರಾಯಪಡುತ್ತಾರೆ. ಜಾನಪದ ಸಾಹಿತ್ಯದಲ್ಲಿ ದುರಂತದ ಪರಿಕಲ್ಪನೆ ಇದೆ, ದ್ರಾವಿಡ ಭಾಷೆಗಳಲ್ಲಿಯೂ ನಾವು `ದುರಂತ'ದ ಸ್ವರೂಪ ಗುರ್ತಿಸಬಹುದು, ತಮಿಳುಕಾವ್ಯ `ಶಿಲಪ್ಪದಿಕಾರಂ' ಇದಕ್ಕೆ ಉತ್ತಮ ನಿದರ್ಶನ ಎಂದು ಅವರು ಅಭಿಪ್ರಾಯಪಡುತ್ತಾರೆ. ತಮಿಳಿನ `ವಿಲ್ಲುಪಾಟ್ಟು', ತುಳುವಿನ `ಪಾಡ್ದನ'ಗಳನ್ನು ಅವರು ಉಲ್ಲೇಖಿಸುತ್ತಾರೆ. ಪ್ರಾಕೃತದ ವಿಮಲಸೂರಿ, ಕನ್ನಡದ ನಾಗಚಂದ್ರನೂ ಈ ಗುಂಪಿಗೇ ಸೇರುತ್ತಾರೆ.

ಮತ್ತೊಂದು ಅಂಶವೆಂದರೆ ಪ್ರಧಾನ ಸಂಸ್ಕೃತಿಗೆ ಪರ್ಯಾಯವಾಗಿ ಪ್ರತಿ ಸಂಸ್ಕೃತಿಯನ್ನು ನಿರ‌್ಮಿಸುವ ಪ್ರಯತ್ನ ರಾವಣನ ಪಾತ್ರದ ಸ್ವರೂಪದಲ್ಲಿದೆಯೇ ಎಂದು ನಾವು ಚಿಂತಿಸಬೇಕಿದೆ. `ಶ್ರೀ ರಾಮಾಯಣ ದರ್ಶನಂ'ನಲ್ಲಿ ಕುವೆಂಪು ಚಿತ್ರಿಸುವ ರಾವಣ ನನಗಿಲ್ಲಿ ನೆನಪಾಗುತ್ತಾನೆ; ಅಲ್ಲಿ ರಾವಣ ಹೇಳುತ್ತಾನೆ-

ಆರ‌್ಯರಾದವಂಗೆ ಎಮ್ಮೆ ಕೂಡೆ ಕೂಳು ಕೊಡೆ ನಂಟು
ಪೇಸಂತೆ! ನಾವು ರಾಕ್ಷಸರಂತೆ! ನೀನರಿಯೆ
ನಮ್ಮನೆಂತವರು ಬಣ್ಣಿಪರೆಂಬುದು! ದಶಶಿರಂ
ಎಂಬೆನ್ನ ಬಿರುದನವರೀರೈದು ತಲೆಯೆಂದು
ಚಿತ್ರಿಪರ್! ದಶರಥನಂತು ನಾಂ ಚಿತ್ರಿಪೆವೆ!
ಪತ್ತು ತೇರೊಳ್ ಪತ್ತು ಸೂಳೆರಡು ಕಾಲ್ಗಳವನಿಟ್ಟು
ಚರಿಸುವೊಲ್ ಬಣ್ಣಿಪ್ಪೆವೇಂ! ನಮ್ಮ ಪೆಣ್ಗಳನವರ್
ಕೋಲೆಗಳ್ ಕೋಡುಗಳ್‌ವೆರಗಿ ಬರೆದಪರಂತೆ!
ನಾವು ನರಕಂ ಕಡಿದು, ಬಿಸಿನೆತ್ತರಂ ಕುಡಿದು
ಬರ್ದುಕುವರಂತೆ! ಸಂಸ್ಕೃತಿ ನಮ್ಮಳಿನಿಸಾನುಮೇನ್
ಇಲ್ಲಂತೆ! ರಾಕ್ಷಸ ಕುಲದ ನಾವು ರಾಕ್ಷಸರೆ
ದಿಟಮಂತೆ! ತೋರ್ಪೆನವಂಗೆ ನಮ್ಮ
ಸಂಸ್ಕೃತಿಯ ರುಚಿಯಿನಿತು.

ನಿಸ್ಸಂದೇಹವಾಗಿ ಆರ‌್ಯರು ದ್ರಾವಿಡ ಸಂಸ್ಕೃತಿಯನ್ನು ಕಾಣುವ ಬಗೆಯನ್ನು ರಾವಣನ ಮಾತುಗಳು ತೋರಿಸುತ್ತವೆ. ಆರ‌್ಯ-ದ್ರಾವಿಡ ಸಂಸ್ಕೃತಿಯ ಸಂಘರ್ಷವನ್ನು ರಾವಣ ಇಲ್ಲಿ ದಾಖಲಿಸುತ್ತಿದ್ದಾನೆ.

ದಶಶಿರನೆಂಬ ಬಿರುದು ಹತ್ತು ತಲೆಯಿರುವವನೆಂದು ಪರಿವರ್ತಿತವಾಗುವುದು, ರಾಕ್ಷಸಕುಲ ನಿಜವಾಗಿಯೂ ರಾಕ್ಷಸರಾಗಿ, ಅವರ ಹೆಣ್ಣುಗಳನ್ನು ಕೋರೆ, ಕೋಡುಗಳಿರುವವರೆಂದು ಬಣ್ಣಿಸುವುದು-ಇವೆಲ್ಲವೂ ಆರ‌್ಯರು ದ್ರಾವಿಡರನ್ನು ಹೀಯಾಳಿಸುವ ಪರಿ. `ದಶರಥ'ನನ್ನೂ ಹೀಗೆಯೇ ವ್ಯಾಖ್ಯಾನಿಸಬಹುದಲ್ಲವೇ ಎಂಬ ಪ್ರಶ್ನೆ ರಾವಣನ ಪ್ರತಿಧಾಳಿ.

ನಾಗಚಂದ್ರನ ರಾವಣನಿಗೂ, ಕುವೆಂಪು ಚಿತ್ರಿಸುವ ರಾವಣನಿಗೂ ಸಂಬಂಧ ಇದೆಯಲ್ಲವೇ? ಪ್ರಧಾನ ಸಂಸ್ಕೃತಿ ಹಾಗೂ ಅಧೀನ ಸಂಸ್ಕೃತಿಗಳ ಸಂಘರ್ಷಕ್ಕೆ ರಾವಣ ರೂಪಕವೇ? ಆಧುನಿಕ ಸಾಮ್ರಾಜ್ಯಶಾಹಿ ಸಂಸ್ಕೃತಿ ವಸಾಹತುಗಳನ್ನು ಹೀಗೆಯೇ ವ್ಯಾಖ್ಯಾನಿಸುತ್ತದಲ್ಲವೇ?

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT