ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಕ್ಷ ಸಂಘಟನೆಯ ಅಖಾಡಕ್ಕಿಳಿದ ಕೇಂದ್ರ ಸಚಿವರು

Last Updated 19 ಫೆಬ್ರುವರಿ 2012, 19:30 IST
ಅಕ್ಷರ ಗಾತ್ರ

ಬೆಂಗಳೂರು: ಚುನಾವಣಾ ಸಿದ್ಧತೆಯ ಭಾಗವಾಗಿ ರಾಜ್ಯದ ನಾಲ್ಕು ಕಂದಾಯ ವಿಭಾಗಗಳಲ್ಲೂ ಕೇಂದ್ರ ಸಚಿವರ ನೇತೃತ್ವದಲ್ಲಿ ವಿಭಾಗೀಯ ಮಟ್ಟದ ಸಮಾವೇಶ ನಡೆಸಲು ಕಾಂಗ್ರೆಸ್ ನಿರ್ಧರಿಸಿದೆ. ಇದೇ 25ರಂದು ಬೆಂಗಳೂರು ವಿಭಾಗದ ಸಮಾವೇಶ ನಡೆಯಲಿದೆ.

ವಿದೇಶಾಂಗ ಸಚಿವ ಎಸ್.ಎಂ.ಕೃಷ್ಣ ಮತ್ತು ರೈಲ್ವೆ ಖಾತೆ ರಾಜ್ಯ ಸಚಿವ ಕೆ.ಎಚ್.ಮುನಿಯಪ್ಪ ನೇತೃತ್ವದಲ್ಲಿ ಭಾನುವಾರ ಕೆಪಿಸಿಸಿ ಕಚೇರಿಯಲ್ಲಿ ಬೆಂಗಳೂರು ಹಾಗೂ ಮೈಸೂರು ವಿಭಾಗದ ಸಂಸದರು, ಶಾಸಕರು, ಮಾಜಿ ಶಾಸಕರು, ಜಿಲ್ಲಾ ಕಾಂಗ್ರೆಸ್ ಸಮಿತಿ ಹಾಗೂ ಬ್ಲಾಕ್ ಕಾಂಗ್ರೆಸ್ ಸಮಿತಿಗಳ ಪದಾಧಿಕಾರಿಗಳ ಸಭೆ ನಡೆಯಿತು.
 
ವಿಭಾಗೀಯ ಮಟ್ಟದ ಸಮಾವೇಶ ನಡೆಸುವ ಕುರಿತು ಈ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಗಿದೆ.
ನಾಲ್ಕು ಕಂದಾಯ ವಿಭಾಗಗಳಲ್ಲಿ ಪಕ್ಷ ಸಂಘಟನೆಯ ಹೊಣೆಯನ್ನು ರಾಜ್ಯವನ್ನು ಪ್ರತಿನಿಧಿಸುವ ನಾಲ್ವರು ಕೇಂದ್ರ ಸಚಿವರಿಗೆ ವಹಿಸಿ ಜನವರಿ 31ರಂದು ಎಐಸಿಸಿ ಆದೇಶ ಹೊರಡಿಸಿತ್ತು.
 
ಬಳಿಕ ಮೊದಲ ಬಾರಿಗೆ ಆಯಾ ವಿಭಾಗದ ಉಸ್ತುವಾರಿ ಹೊತ್ತಿರುವ ಕೇಂದ್ರ ಸಚಿವರು ವಿಭಾಗ ಮಟ್ಟದ ಪದಾಧಿಕಾರಿಗಳ ಸಭೆ ನಡೆಸಿದರು.

ಬೆಂಗಳೂರು ವಿಭಾಗದ ಒಂಬತ್ತು ಜಿಲ್ಲೆಗಳ ಪಕ್ಷದ ಪದಾಧಿಕಾರಿಗಳು ಮತ್ತು ಪ್ರಮುಖರ ಸಮಾವೇಶ 25ರಂದು ನಗರದ ಅರಮನೆ ಮೈದಾನದಲ್ಲಿ ನಡೆಯಲಿದೆ. ಕೆಪಿಸಿಸಿ ಅಧ್ಯಕ್ಷರ ಜೊತೆ ಚರ್ಚಿಸಿದ ಬಳಿಕ ಮೈಸೂರು ವಿಭಾಗದ ಸಮಾವೇಶದ ದಿನಾಂಕ ನಿಗದಿ ಮಾಡಲು ಮುನಿಯಪ್ಪ ನಿರ್ಧರಿಸಿದ್ದಾರೆ. ಬೆಳಗಾವಿ ಮತ್ತು ಗುಲ್ಬರ್ಗ ವಿಭಾಗಗಳ ಸಭೆ ಇನ್ನಷ್ಟೇ ನಡೆಯಬೇಕಿದೆ.

ಅಧ್ಯಕ್ಷರ ನೇಮಕಕ್ಕೆ ಒತ್ತಾಯ: ಬೆಳಿಗ್ಗೆ ಬೆಂಗಳೂರು ವಿಭಾಗದ ಸಭೆ ನಡೆಯಿತು. ಶಾಸಕ ಟಿ.ಬಿ.ಜಯಚಂದ್ರ, ವಿಧಾನ ಪರಿಷತ್ ಸದಸ್ಯ ಎಂ.ವಿ.ರಾಜಶೇಖರನ್, ಮಾಜಿ ಸಚಿವರಾದ ಪ್ರೊ.ಬಿ.ಕೆ.ಚಂದ್ರಶೇಖರ್, ಬಿ.ಎಲ್.ಶಂಕರ್, ಎ.ಕೃಷ್ಣಪ್ಪ, ಬೆಂಗಳೂರು ನಗರ ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಎಚ್.ಎಂ.ರೇವಣ್ಣ ಮತ್ತಿತರರು ಸಭೆಯಲ್ಲಿ ಪಾಲ್ಗೊಂಡಿದ್ದರು. ಬೆಂಗಳೂರು ನಗರ, ಮಹಾನಗರ, ಗ್ರಾಮಾಂತರ, ಶಿವಮೊಗ್ಗ, ದಾವಣಗೆರೆ, ಚಿತ್ರದುರ್ಗ, ತುಮಕೂರು, ಕೋಲಾರ, ರಾಮನಗರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಗಳ ಪ್ರತಿನಿಧಿಗಳು ಸಭೆಯಲ್ಲಿದ್ದರು.

ಬೆಂಗಳೂರು ನಗರ ಜಿಲ್ಲೆ ಮತ್ತು ಬೆಂಗಳೂರು ಮಹಾನಗರ ಕಾಂಗ್ರೆಸ್ ಸಮಿತಿಗಳಿಗೆ ಹೊಸ ಅಧ್ಯಕ್ಷರನ್ನು ನೇಮಿಸದೇ ಇರುವ ವಿಷಯ ಸಭೆಯಲ್ಲಿ ಪ್ರಸ್ತಾಪವಾಗಿದೆ. ತಕ್ಷಣವೇ ಎರಡೂ ಘಟಕಗಳಿಗೆ ಹೊಸ ಅಧ್ಯಕ್ಷರನ್ನು ನೇಮಿಸಬೇಕು ಎಂದು ಬೆಂಗಳೂರು ಜಿಲ್ಲೆಯ ಹಲವರು ಕೃಷ್ಣ ಅವರನ್ನು ಒತ್ತಾಯಿಸಿದರು.

`ಋಣ ತೀರಿಸುವೆ~:ಎಸ್.ಎಂ.ಕೃಷ್ಣ ಮಾತನಾಡಿ, `35 ವರ್ಷಗಳ ಕಾಲ ಪಕ್ಷ ಮತ್ತು ಸರ್ಕಾರದಲ್ಲಿ ವಿವಿಧ ಹುದ್ದೆಯಲ್ಲಿದ್ದೆ. ಪಕ್ಷ ನನಗೆ ಪ್ರದೇಶ ಕಾಂಗ್ರೆಸ್ ಅಧ್ಯಕ್ಷ, ಮುಖ್ಯಮಂತ್ರಿ, ವಿದೇಶಾಂಗ ಸಚಿವ ಸ್ಥಾನ ಸೇರಿದಂತೆ ಹಲವು ಸ್ಥಾನಮಾನಗಳನ್ನು ನೀಡಿದೆ. ಪಕ್ಷದ ಋಣ ನನ್ನ ಮೇಲಿದೆ. ಅದನ್ನು ತೀರಿಸಲು ಪ್ರಾಮಾಣಿಕ ಪ್ರಯತ್ನ ನಡೆಸುತ್ತೇನೆ. ಅದಕ್ಕೆ ಪೂರ್ಣ ಸಹಕಾರ ನೀಡಿ~ ಎಂದು ಮನವಿ ಮಾಡಿದರು.

ಕೆಳಸ್ತರದಿಂದ ಸಂಘಟನೆಗೆ ಒತ್ತು: ಮಧ್ಯಾಹ್ನ ನಡೆದ ಮೈಸೂರು ವಿಭಾಗದ ಸಭೆಯಲ್ಲಿ ಮುನಿಯಪ್ಪ ಅವರೊಂದಿಗೆ ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕಿ ಮೋಟಮ್ಮ, ಸಂಸದ ಎಚ್.ವಿಶ್ವನಾಥ್ ಮತ್ತಿತರರು ಭಾಗವಹಿಸಿದ್ದರು. ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್ ಅವರು ಸಭೆಯ ಕೊನೆಯ ವೇಳೆಗೆ ಸೇರಿಕೊಂಡರು.

ಪ್ರಿಯಾಂಕ ಗಾಂಧಿಗೆ ಆಹ್ವಾನ? ಚಿಕ್ಕಮಗಳೂರು-ಉಡುಪಿ ಲೋಕಸಭಾ ಉಪಚುನಾವಣೆಗೆ ಪ್ರಿಯಾಂಕ ಗಾಂಧಿ ಅವರನ್ನು ಅಭ್ಯರ್ಥಿಯಾಗಿ ನಿಲ್ಲಿಸುವಂತೆ ಶಿಫಾರಸು ಮಾಡಿ ಪಕ್ಷದ ಹೈಕಮಂಡ್‌ಗೆ ಪ್ರಸ್ತಾವ ಸಲ್ಲಿಸುವಂತೆ ಕೆಪಿಸಿಸಿ ಪರಿಶಿಷ್ಟ ಘಟಕದ ಅಧ್ಯಕ್ಷ ಎನ್.ಮಂಜುನಾಥ್ ಮೈಸೂರು ವಿಭಾಗ ಮಟ್ಟದ ಸಭೆಯಲ್ಲಿ ಆಗ್ರಹಿಸಿದರು.

ಸಚಿವರಿಗೆ ಮುತ್ತಿಗೆ

ಸಂಜೆ ಮೈಸೂರು ವಿಭಾಗದ ಪಕ್ಷದ ಪದಾಧಿಕಾರಿಗಳ ಸಭೆ ನಡೆಸಲು ಬಂದ ರೈಲ್ವೆ ಖಾತೆ ರಾಜ್ಯ ಸಚಿವ ಕೆ.ಎಚ್.ಮುನಿಯಪ್ಪ ಅವರಿಗೆ ಕೆಪಿಸಿಸಿ ಕಚೇರಿ ಆವರಣದಲ್ಲೇ ಮುತ್ತಿಗೆ ಹಾಕಿದ ಮೈಸೂರಿನ ಕಾಂಗ್ರೆಸ್ ಕಾರ್ಯಕರ್ತರು, ಮೈಸೂರು ಮಹಾನಗರ ಕಾಂಗ್ರೆಸ್ ಸಮಿತಿ ಅಧ್ಯಕ್ಷ ದಾಸೇಗೌಡ ವಿರುದ್ಧ ದೂರು ಹೇಳಿಕೊಂಡ ಘಟನೆ ನಡೆಯಿತು.

ಭಾನುವಾರ ಸಚಿವರು ಕೆಪಿಸಿಸಿ ಕಚೇರಿಗೆ ಬಂದು ಕಾರಿನಿಂದ ಇಳಿಯುತ್ತಿದ್ದಂತೆಯೇ ಮೈಸೂರು ಮಹಾನಗರ ಯುವ ಕಾಂಗ್ರೆಸ್ ಸಮಿತಿ ಮಾಜಿ ಉಪಾಧ್ಯಕ್ಷ ಪ್ರಕಾಶ್ ನೇತೃತ್ವದಲ್ಲಿ ಹಲವು ಕಾರ್ಯಕರ್ತರು ಮುತ್ತಿಗೆ ಹಾಕಿದರು. ಪಕ್ಷದಲ್ಲಿ ನಿಷ್ಠಾವಂತ ಕಾರ್ಯಕರ್ತರಿಗೆ ನ್ಯಾಯ ದೊರೆಯುತ್ತಿಲ್ಲ. ಹೊರಗಿನಿಂದ ಬಂದವರಿಗೆ ಸ್ಥಾನಮಾನ ನೀಡಲಾಗುತ್ತಿದೆ ಎಂದು ದೂರಿದರು.

ತಕ್ಷಣವೇ ಅವರನ್ನೆಲ್ಲ ಕೊಠಡಿಯೊಂದಕ್ಕೆ ಕರೆದೊಯ್ದ ಸಚಿವರು, ಕೆಲಕಾಲ ಮಾತುಕತೆ ನಡೆಸಿದರು. ಬಳಿಕ ಪತ್ರಕರ್ತರ ಜೊತೆ ಮಾತನಾಡಿದ ಪ್ರಕಾಶ್, `ದಾಸೇಗೌಡ ಅವರು ಬಿಜೆಪಿಯಿಂದ ವಲಸೆ ಬಂದವರಿಗೆ ಆದ್ಯತೆ ನೀಡುತ್ತಿದ್ದಾರೆ. ಇದರಿಂದ ನಿಷ್ಠಾವಂತರಿಗೆ ಅನ್ಯಾಯವಾಗಿದೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT