ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಠ್ಯ ರಾಜಕೀಯ

Last Updated 3 ಫೆಬ್ರುವರಿ 2012, 19:30 IST
ಅಕ್ಷರ ಗಾತ್ರ

ಫೆಡರಲ್ ಸ್ವರೂಪದ ವ್ಯವಸ್ಥೆ ಇರುವ ನಮ್ಮ ನಾಡಿನಲ್ಲಿ, ಶಾಲಾ ಶಿಕ್ಷಣದ ಬಗ್ಗೆ ಪಠ್ಯಕ್ರಮದ ಬಗ್ಗೆ ಸ್ಪಷ್ಟ, ರಾಜಿಗೆ ಅವಕಾಶವಿಲ್ಲದ ಸ್ಪಷ್ಟ ಧೋರಣೆಗಳು ಇರಬೇಕೆಂದು ನಿರೀಕ್ಷಿಸುವುದು ಸಹಜ. ಶಾಲೆಗಳ ಹಂತದ ಶಿಕ್ಷಣ, ರಾಜ್ಯಗಳ ಪರಿಧಿಯಲ್ಲಿ ಬರುವ ಜವಾಬ್ದಾರಿ ಎಂಬ ಸಂದೇಶ ನಮ್ಮ ಸಂವಿಧಾನದಲ್ಲಿ ಅಂತರ್ಗತವಾಗಿದೆ. ಕೇಂದ್ರವು ಕಾಲಕಾಲಕ್ಕೆ ಶಾಲಾ ಪಠ್ಯಕ್ರಮದ ರೂಪುರೇಷೆಗಳನ್ನು ರಚಿಸಿ ರಾಜ್ಯಗಳಿಗೆ ರವಾನಿಸುವ ಪದ್ಧತಿ ಜಾರಿಯಲ್ಲಿದೆ. ಈ ಪಠ್ಯಕ್ರಮದ ಚೌಕಟ್ಟನ್ನು ಆಧರಿಸಿ ರಾಜ್ಯಗಳು ಪಠ್ಯವಸ್ತು (ಸಿಲೆಬಸ್) ಹಾಗೂ ಪಠ್ಯಪುಸ್ತಕಗಳನ್ನು ರಚಿಸಿ ಅನುಷ್ಠಾನಗೊಳಿಸುತ್ತವೆ.

ರಾಷ್ಟ್ರೀಯ ಪಠ್ಯಕ್ರಮದ ಚೌಕಟ್ಟು 2000ನೆಯ ಇಸವಿಯಲ್ಲಿ ಪ್ರಕಟವಾದಾಗ ಈ ನಂಬಿಕೆಗಳು ಮಣ್ಣುಗೂಡಿದವು. ನಾವು ಹಿಂದೆಂದೂ ಕೇಳದಂತಹ ಮೂಲಭೂತವಾದಿಗಳು ಪಠ್ಯಕ್ರಮದ ರಚನೆಯಲ್ಲಿ ತಮ್ಮ ಕೈಚಳಕ ತೋರಿ ಬಹುಧರ್ಮೀಯ ಹಾಗೂ ಬಹುಸಂಸ್ಕೃತಿಯ ನಮ್ಮ ನಾಡಿನಲ್ಲಿ ಕಂಡು ಕೇಳದಂತಹ ಅಂಶಗಳನ್ನು ಸೇರ್ಪಡೆ ಮಾಡುವಲ್ಲಿ ಯಶಸ್ಸು ಗಳಿಸಿದರು. ಪರಿಣಾಮವಾಗಿ 2000ದಲ್ಲಿ ಪ್ರಕಟವಾದ ದಾಖಲೆಯನ್ನು ತಿರಸ್ಕರಿಸಿ 2005ರಲ್ಲಿ ಮತ್ತೊಂದು ದಾಖಲೆಯನ್ನು ಕೇಂದ್ರ ರಾಜ್ಯಗಳಿಗೆ ರವಾನಿಸಿತು. ಪ್ರತಿಸಲ ಸರ್ಕಾರಗಳು ಬದಲಾವಣೆ ಕಂಡಾಗ ಶಾಲಾ ಶಿಕ್ಷಣವೆಂಬ ಗುರುತರ ಕ್ಷೇತ್ರದಲ್ಲಿ ಇಂಥ ಮಂಗಾಟಗಳನ್ನು ಕಾಣುವ ದೌರ್ಭಾಗ್ಯವು ನಮ್ಮದೇ ಅನ್ನುವುದನ್ನು ಕಾಲವೇ ಮುಂದೆ ಸ್ಪಷ್ಟಪಡಿಸಲಿದೆ. ಇಂಥ ಒಂದು ಕರಾಳ ಅಧ್ಯಾಯ ಮುಗಿಯಿತೆಂದು ಭಾವಿಸುವ ಹಲವರಿಗೆ, ಸಿ. ಎಸ್. ದ್ವಾರಕಾನಾಥರ `ಪ್ರಾಥಮಿಕ ಶಿಕ್ಷಣದಲ್ಲಿ ಕೇಸರೀಕರಣದ ಸ್ಯಾಂಪಲ್~ ಎಂಬ ಲೇಖನ (ಪ್ರ ವಾ. ಫೆ. 2) ಒಂದು ಎಚ್ಚರದ ಗಂಟೆಯಾಗಿ ಮೂಡಿ ಬಂದಿದೆ.

ಏನೇ ಆದರ್ಶಗಳನ್ನು ಬೋಧಿಸಿ, ಸಲಹೆ ಸೂಚನೆಗಳನ್ನು ಪಠ್ಯಕ್ರಮದಲ್ಲಿ ಅಳವಡಿಸಲು ಮಾರ್ಗಸೂಚಿಗಳನ್ನು ರೂಪಿಸಿದರೂ ರೋಗಪೀಡಿತ ಮನಸ್ಸುಗಳು ಮುಖ್ಯವಾಗಿ ಚರಿತ್ರೆಯ ವಿಷಯವನ್ನು (ಇದೊಂದೇ ವಿಷಯ ಎಂದೇನಿಲ್ಲ) ತಿರುಚಿ ಸಂವಿಧಾನದ ಆಶಯಗಳನ್ನು ಅಪಹಾಸ್ಯಗೈಯ್ಯಲು ಯಾವಾಗಲೂ ಸನ್ನದ್ಧವಾಗಿಯೇ ಇರುತ್ತವೆ. ಅತ್ಯಂತ ಶಿಸ್ತಿನ ಹಾಗೂ ಕ್ರಮಬದ್ಧ ಶಿಕ್ಷಣ ವ್ಯವಸ್ಥೆಗೆ ಒಂದು ಮಾದರಿಯಾಗಿದ್ದ ಕರ್ನಾಟಕಕ್ಕೆ ಈಗ ಬಂದಿರುವ ಪಾಡು ಬೇಕಿತ್ತೆ ಎನ್ನುವುದು ಬೇರೆ ಪ್ರಶ್ನೆ.

ಮುಖ್ಯವಾಗಿ ಗಮನಿಸಬೇಕಾದ ಅಂಶವೆಂದರೆ ಈಗ ಮೂಲಭೂತ ಹಕ್ಕಾಗಿ ಶಿಕ್ಷಣ (ಆರ್‌ಟಿಇ) ಕಾಯ್ದೆ ಜಾರಿಯಲ್ಲಿದೆ. ಆರ್‌ಟಿಇ ವಿಧಿ 29 ರಲ್ಲಿ ಪಠ್ಯಕ್ರಮದ ಜಾರಿಗಾಗಿ ವಿಧಿವಿಧಾನಗಳು ಅಡಕವಾಗಿವೆ. ಅದರಂತೆ ಪ್ರತಿ ರಾಜ್ಯವೂ ಪಠ್ಯಕ್ರಮದ ಜಾರಿಗಾಗಿ ಒಂದು ಅಕಡೆಮಿಕ್ ಅಥಾರಿಟಿಯನ್ನು ರಚಿಸಿಕೊಳ್ಳಬೇಕು. ಹೀಗಿರುವಾಗ ಆರ್‌ಟಿಇಯ ಪ್ರಸ್ತಾವನೆಯನ್ನು ಬದಿಗೊತ್ತಿ ರಾಜ್ಯ ಸರ್ಕಾರ ನೇರವಾಗಿ ಪಠ್ಯ ಕ್ರಮದ ಜಾರಿಗೆ ಮುಂದಾಗಿದೆ. ಇಂತಹ ತರಾತುರಿಯ ಹಿಂದೆ ಗುಪ್ತ ಕಾರ್ಯಸೂಚಿ  ಅಡಗಿದೆ ಎಂದು ಟೀಕಿಸುವವರ ಕೈಗೆ ದೊಣ್ಣೆ ಕೊಟ್ಟಂತೆ ಆಗಿಲ್ಲವೇ? ಏಕೆಂದರೆ ಪಠ್ಯಕ್ರಮ 2005 ರಲ್ಲಿ ಬಂದದ್ದು; 7 ವರ್ಷಗಳ ಕಾಲ ಈ ಬಗ್ಗೆ ಏನೂ ಕ್ರಮ ಜರುಗಿಸದೆ ಈಗ ಇಂಥ ಕ್ರಮಕ್ಕೆ ಮುಂದಾಗಿರುವುದು ವಿಪರ್ಯಾಸವೇ ಸರಿ. ಅಲ್ಲದೆ ಡಿಎಸ್‌ಇಆರ್‌ಟಿ ಸಂಸ್ಥೆಯಂತೂ ಅಕಡೆಮಿಕ್ ಅಥಾರಿಟಿಯ ಸ್ಥಾನ ವಹಿಸಲು ಸಾಧ್ಯವಿಲ. ಏಕೆಂದರೆ ಅದಕ್ಕೆ ಸ್ಥಾಯತ್ತತೆಯೇ ಇಲ್ಲ.

ಪಠ್ಯಪುಸ್ತಕಗಳಿಂದಲೇ ಎಲ್ಲಾ ಆಗುವುದಿಲ್ಲ. ತುಂಬ ಇತಿಮಿತಿಗಳಿವೆ ಎಂಬುದು ನಿಜ. ಆದರೆ ಪರ್ಯಾಯ ಕಲಿಕೆಯ ಸಾಮಗ್ರಿಗಳಿಲ್ಲದ ಗ್ರಾಮೀಣ ಪ್ರದೇಶಗಳಲ್ಲಿ ಮಕ್ಕಳಿಗೆ ಪಠ್ಯಪುಸ್ತಕಗಳೇ ಸರ್ವಸ್ವ. ಪಠ್ಯಪುಸ್ತಕಗಳು ಈ ಮಕ್ಕಳ ವಿಮೋಚನೆಯ ಸಾಧನವೆಂದರೂ ಉತ್ಪ್ರೇಕ್ಷೆ ಏನಿಲ್ಲ. ಏನೇ ಆಗಲಿ, ಪಠ್ಯಪುಸ್ತಕಗಳು ಪಠ್ಯಕ್ರಮದ ಆಶಯಗಳಿಗೆ ಮೂರ್ತಸ್ವರೂಪ ನೀಡುವ ಮಾಧ್ಯಮ. ಪಠ್ಯಪುಸ್ತಕಗಳ ರಚನೆಯಂಥ ಕಾರ್ಯದಲ್ಲಿ ಭಾಗವಹಿಸುವವರೆಲ್ಲರ ನಿಲುವುಗಳು ಕೇಸರೀಕರಣ, ಎಡ,ಬಲ ಮೊದಲಾದ ಪೂರ್ವಗ್ರಹಗಳಿಂದ ಮುಕ್ತವಾಗಿರಬೇಕು. ಸಾಮಾಜಿಕ ಚಿಂತನೆ ವೈಚಾರಿಕತೆಯ ನೆಲೆಗಟ್ಟು ಹಾಗೂ ಆರೋಗ್ಯಕರ ಚರ್ಚೆಗಳ ಆಧಾರದ ಮೇಲೆ ಈ ಕಾರ್ಯ ನಡೆಯಬೇಕು. ಆಯಾ ಕ್ಷೇತ್ರದಲ್ಲಿನ ತಜ್ಞರ ಭಾಗವಹಿಸುವಿಕೆ, ಪರಿಣತರ ಮೇಲ್ವಿಚಾರಣೆ ಇವೆಲ್ಲ ನಾವು ನಿರೀಕ್ಷಿಸಿದ ಆದರ್ಶ ಮಾದರಿಗೆ ಪೂರಕವೆನಿಸುತ್ತವೆ.

ಶಿಕ್ಷಣದ ಬಗ್ಗೆ ಯಾವುದೇ ಆದರ್ಶಗಳ ವ್ಯಾಖ್ಯಾನ ಮಾಡಿ ಏನೇ ಹೇಳಿದರೂ, ಸಾಮಾನ್ಯ ಜನ ಅನುಲಕ್ಷಿಸುವುದು ಪಠ್ಯಪುಸ್ತಕಗಳನ್ನು ಮಾತ್ರ ಎಂಬುದನ್ನು ಮರೆಯುವಂತಿಲ್ಲ.  ಆದ್ದರಿಂದಲೇ ಪಠ್ಯಪುಸ್ತಕಗಳದ್ದು ಒಂದು ವಿಶಿಷ್ಟ ಪ್ರಪಂಚ. ಜ್ಞಾನ ಒಂದೆಡೆ ಇರಲಿ, ದೈವತ್ವವನ್ನು ಆರೋಪಿಸಿಕೊಂಡು ಅವು ಶಿಕ್ಷಕರನ್ನು, ಪೋಷಕರನ್ನು ದಂಗು ಬಡಿಸುವ ಪರಿ ವರ್ಣಿಸಲು ಕಷ್ಟ. ಕೊನೆಗೆ ಪಠ್ಯಪುಸ್ತಕಗಳು ಶಿಕ್ಷಣವನ್ನೇ ನಿಯಂತ್ರಿಸುತ್ತಿವೆಯೇ ಎಂಬ ಭ್ರಮೆ ಮೂಡುವುದು ಸಹಜ.

ಈ ಹಿನ್ನೆಲೆಯಲ್ಲಿಯೇ ಈ ಪಠ್ಯ ಪುಸ್ತಕಗಳ ಬಗ್ಗೆ ಇರುವ ಕೆಲವು ಟೀಕೆ, ಟಿಪ್ಪಣಿಗಳನ್ನು ಅವಲೋಕನ ಮಾಡಬೇಕು.

1) ಪಠ್ಯಪುಸ್ತಕಗಳು ತರಗತಿಗಳ ಚಟುವಟಿಕೆಗಳ, ಪ್ರಕ್ರಿಯೆಗಳ ಸ್ಥಾನ ಆಕ್ರಮಿಸಿಕೊಂಡಿವೆ. ಕಲಿಕೆಯ ಚಟುವಟಿಕೆಗಳಿಗೆ ಪಠ್ಯಪುಸ್ತಕಗಳು ಪರ್ಯಾಯವೆನಿಸವು. ಉದಾ: ಪಠ್ಯಪುಸ್ತಕದಲ್ಲಿನ ಚಿತ್ರಗಳು, ಅನುಭವಗಳ ಸ್ಥಾನ ಪಡೆಯಲು ಸಾಧ್ಯವಿಲ್ಲ. ಪ್ರಯೋಗಾಲಯದಲ್ಲಿ ವಿದ್ಯಾರ್ಥಿ ಪಡೆಯುವ ಅನುಭವ ಪ್ರಯೋಗದ ಚಿತ್ರ ನೋಡಿ ಪಡೆಯಲು ಸಾಧ್ಯವಿಲ್ಲ.

2) ಪಠ್ಯಪುಸ್ತಕಗಳು ಶಿಕ್ಷಕನ ಚಲನಶೀಲತೆ ಹಾಗೂ ಕರ್ತೃತ್ವವನ್ನು ನಿಯಂತ್ರಿಸಲು ಹವಣಿಕೆ ತೋರುತ್ತವೆ.

3) ಪಠ್ಯಪುಸ್ತಕಗಳು ಯಾರಿಗಾಗಿ? ಮಕ್ಕಳಿಗಾಗಿ ಅನ್ನುವುದಾದಲ್ಲಿ ಅವರೇಕೆ ರಚನೆಯಲ್ಲಿ ಭಾಗಸ್ಥರಲ್ಲ?

4) ಪಠ್ಯಪುಸ್ತಕಗಳಲ್ಲಿ ಸೇರ್ಪಡೆಯಾದ ಅನುಭವಗಳು ನಗರೀಕರಣದ ದಟ್ಟ ಸಾಂದ್ರತೆಯಿಂದಾಗಿ ಗ್ರಾಮಾಂತರ ಪ್ರದೇಶದ ಮಕ್ಕಳ ಅನುಭವಕ್ಕೆ ಸ್ಪಂದಿಸವು. ಹಲವು ವೇಳೆ ಈ ಪಠ್ಯಪುಸ್ತಕದಲ್ಲಿ ಬರುವ ಅನುಭವಗಳು ಗ್ರಾಮೀಣ ಮಕ್ಕಳಿಗೆ ತಾವು ಜೀವಿಸುತ್ತಿರುವ ರೀತಿಯೇ ಸರಿಯಲ್ಲ ಎಂಬ ಭಾವನೆಯನ್ನು ನೀಡಿದರೆ ಅಶ್ಚರ್ಯವೇನಿಲ್ಲ.

5)ಯಾವ ಅನುಭವಗಳಿಂದ ಮಕ್ಕಳು ಶಾಲೆಗೆ ಬರುತ್ತಾರೋ, ಅವುಗಳ ಪರಿಗಣನೆಯೇ ರಚನಕಾರರಿಗೆ ಇರುವುದಿಲ್ಲ. ಮಕ್ಕಳು ಖಾಲಿ ತಲೆಯಿಂದ ಶಾಲೆಗೆ ಬರುವುದಿಲ್ಲ.

6) ಮಕ್ಕಳಿಗೆ ಪಠ್ಯಪುಸ್ತಕಗಳು ಹೊರೆಯೇ?

7)ಮಾಹಿತಿ ತುರುಕಿದರೆ ಜ್ಞಾನವೆನಿಸದು. ರಚನಕಾರರಿಗೆ ಎಲ್ಲವನ್ನೂ ಒಮ್ಮೆಲೇ ಹೇಳುವ ತವಕ.

8)ಬಹಳ ಬೋಧಿಸಲಾಗುತ್ತಿದೆ. ಕಲಿಕೆ ಅಲ್ಲ. ಇದಕ್ಕೆ ಹಾಗೂ ಪರೀಕ್ಷೆಗಳ ವೈಭವೀಕರಣಕ್ಕೆ ಪಠ್ಯಪುಸ್ತಕ ಕೊಡುಗೆ ನೀಡಿವೆಯೇ?

9)ಮಕ್ಕಳ ನೈಸರ್ಗಿಕ ಕುತೂಹಲ ಹಾಗೂ ವೀಕ್ಷಣೆಯನ್ನು ಪಠ್ಯಪುಸ್ತಕಗಳು ಕಡೆಗಣಿಸುತ್ತಿವೆ.

10)ಪಠ್ಯಪುಸ್ತಕಗಳಲ್ಲಿ ಬರುವ ಭಾಷೆ ಮಕ್ಕಳಿಗೆ ಕೃತಕವೆನಿಸುತ್ತದೆ. ಅಸಹಜ ಕೂಡ.

11) ಮಾಹಿತಿ ಮುಕ್ಕುವ, ಪರೀಕ್ಷೆಗಳಲ್ಲಿ ಕಕ್ಕುವ ಉರುಹಚ್ಚುವಿಕೆಗೆ ಪಠ್ಯಪುಸ್ತಕಗಳ ರೀತಿ ನೀತಿಗಳೇ ಕಾರಣವಲ್ಲವೆ?

12) ಮುದ್ರಣದ ಅಗಾಧ ಸಂಖ್ಯೆಯಿಂದಾಗಿ ಪಠ್ಯಪುಸ್ತಕಗಳಲ್ಲಿ ತಪ್ಪುಗಳು ಬಹಳ. ಮುದ್ರಣದ ಕೀಳು ಗುಣಮಟ್ಟ ಅನಿವಾರ್ಯವೇನೋ ಅನಿಸಿಬಿಟ್ಟಿದೆ.

ಈ ಟೀಕೆ ಟಿಪ್ಪಣಿಗಳು ಹಲವು ಮೂಲಗಳಿಂದ ಬಂದವು. ಏಕೆಂದರೆ ಪಠ್ಯಪುಸ್ತಕಗಳ ರಚನೆಯ ಕೆಲಸವೇ ತುಂಬ ಸಂಕೀರ್ಣ. ಹಲವು ಬಾರಿ ಶಾಸನ ಸಭೆಗಳಲ್ಲಿ, ನ್ಯಾಯಾಲಯಗಳಲ್ಲಿ ಬಂದ ಮುದ್ದತ್ತುಗಳಿಂದಾಗಿ ಇಲಾಖೆ ಸವಿಸ್ತಾರ ನಿಯಮಗಳನ್ನು ರಚಿಸಿ ಕೊಂಡಿವೆ. ಪ್ರತಿ ಪಠ್ಯಪುಸ್ತಕ ಶೀರ್ಷಿಕೆಗೆ ಒಂದು ರಚನಾ ಸಮಿತಿ ಇರುತ್ತದೆ.

ತರಗತಿಯ ಹಂತದಲ್ಲಿ ಕೆಲಸ ಮಾಡುವ ಇಬ್ಬರಾದರೂ ಶಿಕ್ಷಕರಿರುತ್ತಾರೆ. ಇಷ್ಟೆಲ್ಲ ಇದ್ದು ಆಕ್ಷೇಪಾರ್ಹ ಅಂಶಗಳು ಹೇಗೆ ಪುಸ್ತಕದೊಳಕ್ಕೆ ನುಸುಳಿದವು? ಇವುಗಳ ಬಗ್ಗೆ ಪರಿಶೀಲನೆಯಾಗಬೇಕಾಗುತ್ತದೆ.

(ಲೇಖಕರು ಸಾರ್ವಜನಿಕ ಶಿಕ್ಷಣ ಇಲಾಖೆ ನಿವೃತ್ತ ನಿರ್ದೇಶಕರು)
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT