ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಠ್ಯಕ್ರಮದಲ್ಲಿ ನೈತಿಕ ಮೌಲ್ಯ

Last Updated 12 ಜನವರಿ 2014, 19:30 IST
ಅಕ್ಷರ ಗಾತ್ರ

ಮಕ್ಕಳು ಬಾಲ್ಯದಿಂದ ಯೌವನಾವಸ್ಥೆಗೆ ಕಾಲಿಡುವ ಹದಿಹರೆಯದ ಹಂತದಲ್ಲಿ ದೈಹಿಕವಾಗಿ ತೀವ್ರಗತಿಯಲ್ಲಿ ಬದಲಾವಣೆಗಳಾಗುತ್ತವೆ.  ಇದರಿಂದಾಗಿ ಗೊಂದಲ, ಮಾನಸಿಕ ತಳಮಳ ಎದುರಿಸುತ್ತಾರೆ.

ಈ ಕಿಶೋರಾವಸ್ಥೆಯಲ್ಲಿ ಮೌಲ್ಯವನ್ನು ಆಧರಿಸಿದ ಲೈಂಗಿಕ ಶಿಕ್ಷಣದ ಅವಶ್ಯಕತೆ ಇದೆ. ಇದನ್ನು ಅರಿತು 9ನೇ ತರಗತಿಯ ಪಠ್ಯಕ್ರಮದಲ್ಲಿ ‘ಮಾನವನಲ್ಲಿ ಸಂತಾನೋತ್ಪತ್ತಿ’ ಎಂಬ ವಿಷಯವನ್ನು ಅಳವಡಿಸಲಾಗಿದೆ. ಜ್ಞಾನದೊಂದಿಗೆ ನೈತಿಕ ಮೌಲ್ಯಗಳನ್ನೂ ಕಲಿಸುವ ಕೆಲಸ ಆಗಬೇಕಿದೆ. ಇದನ್ನೇ ಮೌಲ್ಯಾಧಾರಿತ ಶಿಕ್ಷಣ ಎನ್ನುತ್ತಾರೆ.

ಮೌಲ್ಯ ಆಧಾರಿತ ಲೈಂಗಿಕ ಶಿಕ್ಷಣ
ಹದಿಹರೆಯ, ಹೆಣ್ಣು ಮತ್ತು ಗಂಡು ಮಕ್ಕಳಲ್ಲಾಗುವ ದೈಹಿಕ ಬದಲಾವಣೆ, ಸ್ತ್ರೀ ಪುರುಷ ಜನನಾಂಗಗಳ ರಚನೆ, ಕಾರ್ಯ, ಗರ್ಭಧಾರಣೆ, ಬಂಜೆತನ ಕಾರಣ ಮತ್ತು ಪರಿಹಾರ, ವಿವಾಹ, ಸಂಭೋಗ ಕ್ರಿಯೆ, ವೈಯುಕ್ತಿಕ ಸ್ವಚ್ಛತೆ, ಸ್ವರಕ್ಷಣೆ, ಸೋಂಕು, ಲೈಂಗಿಕ ರೋಗ, ಮುನ್ನೆಚ್ಚರಿಕೆ ಕ್ರಮಗಳು ಮುಂತಾದವುಗಳ ಬಗ್ಗೆ ಮಾಹಿತಿ ನೀಡಬೇಕು. ಜೊತೆಗೆ ಉತ್ತಮ ಆಹಾರಾಭ್ಯಾಸ, ಒಳ್ಳೆಯ ಹವ್ಯಾಸಗಳು, ಸನ್ನಡತೆ, ದುಶ್ಚಟಗಳಿಂದಾಗುವ ಅಪಾಯಗಳು, ಸಾಮಾಜಿಕ ಹಾಗೂ ಕೌಟುಂಬಿಕ ಜವಾಬ್ದಾರಿ ಹಂಚಿಕೆ ಹೀಗೆ ಮೌಲ್ಯಗಳನ್ನು ಅಳವಡಿಸಿ ಸೂಕ್ತವಾದ ಕ್ರಮದಲ್ಲಿ ಶಿಕ್ಷಣ ನೀಡುವುದನ್ನು ಮೌಲ್ಯ ಆಧಾರಿತ ಲೈಂಗಿಕ ಶಿಕ್ಷಣ ಎಂದು ಕರೆಯಲಾಗುತ್ತದೆ. ನಮ್ಮ ಜೀವನಶೈಲಿಗೆ ಕೇವಲ ಲೈಂಗಿಕ ಶಿಕ್ಷಣ ಪ್ರಯೋಜನಕಾರಿ ಆಗದು, ಅವರ ಜೊತೆಗೆ ಮೌಲ್ಯ ಶಿಕ್ಷಣ ಇದ್ದಲ್ಲಿ ಮಾತ್ರ ಪರಿಣಾಮಕಾರಿಯಾಗಬಲ್ಲದು.

ಶಿಕ್ಷಕರಿಗಿರುವ ಸವಾಲುಗಳು–ಸಿದ್ಧತೆಗಳು
1. ಸಹಶಿಕ್ಷಣ:
  ವಿಷಯ ಮನವರಿಕೆಗೆ ವಿದ್ಯಾರ್ಥಿ, ವಿದ್ಯಾರ್ಥಿನಿಯರನ್ನು ಪ್ರತ್ಯೇಕಿಸುವ ಅಗತ್ಯವಿಲ್ಲ. ಇದು ಇಲ್ಲದ ಕುತೂಹಲಕ್ಕೆ, ಅನುಮಾನಕ್ಕೆ, ಅಸಮಾನತೆಗೆ ಎಡೆಮಾಡಿಕೊಟ್ಟಂತಾಗುತ್ತದೆ. ಸಹಪಾಠಿಗಳಲ್ಲಿ ಪರಸ್ಪರ ಗೌರವ, ಸಹಾಯ ಮನೋಭಾವನೆ, ಸನ್ನಡತೆ, ಜವಾಬ್ದಾರಿ ನಿರ್ವಹಣೆ­ಯಲ್ಲಿ ಗಂಡು, ಹೆಣ್ಣು ಇಬ್ಬರ ಪಾತ್ರದ ಮನನ ಮಾಡಬೇಕಾಗಿರುವುದರಿಂದ ಪ್ರತ್ಯೇಕಿಸದೆ ಇರುವುದು ಒಳ್ಳೆಯದು. ದೇಹ ರಚನೆ ಬಗ್ಗೆ ನಮ್ಮ ಗ್ರಹಿಕೆ ತಪ್ಪಾಗಿದ್ದ ಮಾತ್ರಕ್ಕೆ ಯಾವುದೇ ಅಂಗ ಕೆಟ್ಟದ್ದಾಗಿರಲು ಸಾಧ್ಯವಿಲ್ಲ.

2. ವಯಸ್ಸಿಗೆ ಅನುಣವಾಗಿ ತಿಳಿಸಬೇಕಾದ ವಿಷಯ:
ಲೈಂಗಿಕ ಶಿಕ್ಷಣದ ಅಗತ್ಯತೆ ಅರಿತು 9ನೇ ತರಗತಿಯ ವಿಜ್ಞಾನ ವಿಷಯದಲ್ಲಿ ಅಧ್ಯಯನ­ವನ್ನು ಅಳವಡಿಸಲಾಗಿದೆ. ಆದರೆ ಶಿಕ್ಷಕರು 8ನೇ ತರಗತಿ­ಯಿಂದಲೇ ಸೂಕ್ತ ಮಾರ್ಗದರ್ಶನ ನೀಡಬೇಕಾಗುತ್ತದೆ.

8ನೇ ತರಗತಿ ವಿದ್ಯಾರ್ಥಿಗಳಿಗೆ...
ಹದಿಹರೆಯ ಎಂದರೆ ಏನು, ಈ ಸಮಯದಲ್ಲಿ ಹೆಣ್ಣು, ಗಂಡು ಮಕ್ಕಳಲ್ಲಿ ಆಗುವ ದೈಹಿಕ ಬದಲಾವಣೆ, ಕಾರಣವಾದ ಹಾರ್ಮೋನ್‌ಗಳು, ವೈಯುಕ್ತಿಕ ಸ್ವಚ್ಛತೆ, ಉತ್ತಮ ಆಹಾರಾಭ್ಯಾಸ, ಸನ್ನಡತೆ, ಒಳ್ಳೆಯ ಹವ್ಯಾಸ, ಸಹಪಾಠಿಗಳಲ್ಲಿ ಪರಸ್ಪರ ಗೌರವ, ಸಹಾಯ, ಹೊಂದಾಣಿಕೆ ವಿಷಯಗಳ ಬಗ್ಗೆ ಮನವರಿಕೆ ಮಾಡಿಕೊಡಬೇಕು. ಇದು ಮೌಲ್ಯ ಆಧಾರಿತ ಶಿಕ್ಷಣಕ್ಕೆ ಮುನ್ನುಡಿ ಹಾಕಿದಂತೆ ಆಗುತ್ತದೆ.

9ನೇ ತರಗತಿಯ ವಿದ್ಯಾರ್ಥಿಗಳಿಗೆ...
ಸ್ತ್ರೀ, ಪುರುಷ ಜನನಾಂಗ ರಚನೆ, ಕಾರ್ಯವೈಖರಿ, ವಿವಾಹ, ಗರ್ಭಧಾರಣೆ, ಬಂಜೆತನ– ಕಾರಣಗಳು, ಪರಿಹಾರ­ಗಳು, ಒಳ್ಳೆಯ ಸ್ಪರ್ಶ, ಕೆಟ್ಟ ಸ್ಪರ್ಶ, ಸ್ವಚ್ಛತೆ ಕೊರತೆಯಿಂದ ಉಂಟಾಗುವ ಸೋಂಕು, ಹಸ್ತಮೈಥುನ, ಸಮಾ­ಜದಲ್ಲಿ ಹೆಣ್ಣಿನ ಸ್ಥಾನಮಾನ, ಅದಕ್ಕೆ ಪರಿಹಾರೋಪಾಯ­ಗಳು, ಸಮಾಜ, ಕುಟುಂಬದ ಒಳಿತಿನಲ್ಲಿ ಗಂಡು ಮತ್ತು ಹೆಣ್ಣು ಮಕ್ಕಳ ಪಾತ್ರ... ಹೀಗೆ ಮೌಲ್ಯ ಶಿಕ್ಷಣಕ್ಕೆ ಹೆಚ್ಚು ಪ್ರಾಮುಖ್ಯತೆ ಇರಲಿ.

10ನೇ ತರಗತಿಯ ವಿದ್ಯಾರ್ಥಿಗಳಿಗೆ...
ದಾಂಪತ್ಯದ ನಿಜವಾದ ಅರ್ಥ, ನಿಷ್ಠೆ, ಹೊಂದಾಣಿಕೆ, ಅನ್ಯೋನ್ಯತೆ, ನಂಬಿಕೆ, ವಿವಾಹಪೂರ್ವ ಲೈಂಗಿಕತೆ, ವಿವಾಹಬಾಹಿರ ಲೈಂಗಿಕತೆಯಿಂದಾಗುವ ದುಷ್ಪರಿಣಾಮಗಳು, ಹರಡಬಹುದಾದ ಲೈಂಗಿಕ ರೋಗಗಳು, ಅವುಗಳ ಲಕ್ಷಣಗಳು, ಮುನ್ನೆಚ್ಚರಿಕೆ ಕ್ರಮಗಳು, ಮಾದಕ ವ್ಯಸನದ ದುಷ್ಪರಿಣಾಮ, ಸರಳ ವ್ಯಾಯಾಮ, ಮಾನಸಿಕ, ದೈಹಿಕ ಒತ್ತಡ ನಿರ್ವಹಣೆ­ಯಲ್ಲಿ ಹಸ್ತಮೈಥುನದ ಪಾತ್ರ, ಜೀವನದಲ್ಲಿ ಎದುರಾಗುವ ಸಣ್ಣ ಪುಟ್ಟ ಸಂತೋಷದ ಕ್ಷಣಗಳನ್ನು ಅನುಭವಿಸಲು ಪ್ರೇರೇಪಿಸುವುದು. ಪ್ರೀತಿಯೆಂದು ಭಾವಿಸಿ ವಿದ್ಯಾರ್ಥಿಗಳು ಆಕರ್ಷಣೆಗೆ ಒಳಗಾಗಿ ತೊಂದರೆ ಅನುಭವಿ­ಸುವುದನ್ನು ತಡೆಯಬಹುದು. ಕಿರುಲೇಖನ/ಕಥೆ/ಕವನಗಳನ್ನು ಓದಲು ಅಥವಾ ಬರೆಯಲು ಪ್ರೋತ್ಸಾಹಿಸುವುದು. ಒಟ್ಟಾರೆಯಾಗಿ ಮೌಲ್ಯ ಶಿಕ್ಷಣವೇ ಪ್ರಧಾನವಾಗಿರಲಿ.

3. ಭಾಷಾ ವೈಖರಿ/ದೇಹ ಪರಿಭಾಷೆ ಪಾಠೋಪಕರಣಗಳು:
ಬಳಸುವ ಭಾಷೆಯು ಸ್ಪಷ್ಟವಾಗಿರಬೇಕು. ದೇಹ ರಚನೆ­ಯನ್ನು ಹೇಳುವಾಗ ಕವಿಗಳಾಗುವುದು ಬೇಡ. ಹೇಳುವ ವಿಷಯ ವಸ್ತುನಿಷ್ಠವಾಗಿರಬೇಕು. ವೈಜ್ಞಾನಿಕ ಪದಗಳ ಬಳಕೆ ಇದ್ದು, ಆಡು ಭಾಷೆಯ ಪದಗಳಿಗೆ ಕಡಿವಾಣ ಹಾಕಿ. ಅಪ್ಪಿ­ತಪ್ಪಿಯೂ ಮಾತನಾಡಲು ಹಿಂಜರಿಯುವುದಾಗಲಿ, ಮುಜು­ಗರ­ಪಡುವುದಾಗಲಿ ಮಾಡಕೂಡದು.

ಈ ವಿಷಯಕ್ಕೆ ಸಂಬಂಧಿಸಿದಂತೆ ಅಗತ್ಯವಿರುವ ಚಾರ್ಟ್‌ಗಳನ್ನಾಗಲಿ ವೈಜ್ಞಾನಿಕವಾಗಿ ಸೂಕ್ತವಾದ (ಋತುಚಕ್ರ, ನಿಶೇಚನ ಕ್ರಿಯೆಗೆ ಸಂಬಂಧಿಸಿದಂತೆ) 1 ಅಥವಾ 2 ನಿಮಿಷಗಳಿಗೂ ಮೀರದ ಅನಿಮೇಶನ್‌ ವಿಡಿಯೋಗಳ ಬಳಕೆ ಮಾಡಬಹುದು. ಅಗತ್ಯವಿದ್ದಲ್ಲಿ ಲೈಂಗಿಕ ಹಾಗೂ ಮನೋಚಿಕಿತ್ಸಕರ ಸಹಾಯ ಪಡೆಯಬಹುದು. ಇಲ್ಲವೆ ಹತ್ತಿರದ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿಗಳಿಂದ ತಿಳುವಳಿಕೆ ಕಾರ್ಯಕ್ರಮ ಏರ್ಪಡಿಸಬಹುದು.

ಪೋಷಕರ ಸಭೆ ಕರೆದು ಹದಿಹರೆಯದ ಮಕ್ಕಳಲ್ಲಿ ಆಗುವ ಮಾನಸಿಕ ಹಾಗೂ ದೈಹಿಕ ಬದಲಾವಣೆ, ಇಂತಹ ಸಂದರ್ಭದಲ್ಲಿ ಮಕ್ಕಳೊಂದಿಗೆ ಪಾಲಕರ ವರ್ತನೆ, ವಹಿಸಬೇಕಾದ ಎಚ್ಚರಿಕೆ ಕ್ರಮಗಳು, ನೀಡಬೇಕಾದ ಸವಲತ್ತುಗಳು, ತೋರಬೇಕಾದ ಕಾಳಜಿ ಮುಂತಾದವುಗಳ ಬಗ್ಗೆ ಮಾಹಿತಿ ನೀಡಬಹುದು.
ಮೌಲ್ಯಗಳ ಪ್ರಾಮುಖ್ಯತೆ ಹೇಳುವಾಗ ಕಥೆ ಪುರಾಣಗಳಲ್ಲಿ, ಇತಿಹಾಸದಲ್ಲಿ ರಾಜಮಹಾರಾಜರ ಯಶಸ್ಸಿಗೆ ಅಥವಾ ಅವನತಿಗೆ ಕಾರಣವಾದ ಅವರ ಸನ್ನಡತೆ ಅಥವಾ ದುರ್ನಡತೆ ಬಗ್ಗೆ ಹೆಚ್ಚು ಒತ್ತು ಕೊಟ್ಟು ಹೇಳಬಹುದು  ಮೌಲ್ಯ ಆಧಾರಿತ ಸಣ್ಣ ಕಥೆಗಳು ಪರಿಣಾಮಕಾರಿಯಾಗಿ ಕೆಲಸ ಮಾಡುತ್ತವೆ.

4. ವಿಭಿನ್ನ ಪರಿಸರದಿಂದ ಬಂದ ವಿಭಿನ್ನ ಮನಸ್ಥಿತಿಯ ಮಕ್ಕಳು:
ಅತಿಯಾದ ಮುಜುಗರ ವ್ಯಕ್ತಪಡಿಸುವ, ಮುಕ್ತವಾಗಿ ಚರ್ಚಿಸುವ, ಅನಕ್ಷರಸ್ಥ ಕುಟುಂಬದಿಂದ ಬಂದ ಅಥವಾ ವಿದ್ಯಾವಂತ ಕುಟುಂಬದಿಂದ ಬಂದ, ಸವಲತ್ತುಗಳೇ ಇಲ್ಲದ/ಮೊಬೈಲ್‌, ಇಂಟರ್‌ನೆಟ್‌ ಮಂತಾದ ಸವಲತ್ತು ಪಡೆದ, ಅತಿಯಾದ ಪ್ರೀತಿ, ಕಾಳಜಿಯಿಂದ ಬಂದ ಅಥವಾ ನಿರ್ಲಕ್ಷ್ಯಕ್ಕೆ ಒಳಗಾದ, ವಿದ್ಯಾರ್ಥಿ ಎಂಬ ಲಕ್ಷಣವೂ ಇಲ್ಲದ, ಪಾಲಕರಿಗಿಂತ ಶಿಕ್ಷಕರಿಗೆ ಹೆಚ್ಚು ವಿಧೇಯತೆಯನ್ನು ತೋರುವ ವಿಭಿನ್ನ ರೀತಿಯ ಮಕ್ಕಳು ಎದುರಾಗಬಹುದು.

ಶಿಕ್ಷಕ ವಿದ್ಯಾರ್ಥಿಗಳಿಗೆ ಪ್ರೇರಣೆಯಾಗುವಂತಹ ವ್ಯಕ್ತಿತ್ವ­ವನ್ನು ಹೊಂದಿರಬೇಕಾಗುತ್ತದೆ. ಆತ/ಆಕೆ ಆಪ್ತ ಸಲಹೆಗಾರ­ರಾಗಿ ಮಾರ್ಗದರ್ಶಕರಾಗಿರಬೇಕು. ತಾಳ್ಮೆಯಿಂದ ನಯವಾಗಿ ವಿದ್ಯಾರ್ಥಿಗಳ ತಪ್ಪುಗಳನ್ನು ತಿದ್ದುವ, ಅವರಿಗೆ ಮನವರಿಕೆ ಮಾಡಿಕೊಡುವ ಕಲೆಗಾರರಾಗಿರಬೇಕು. ಆತ್ಮೀಯರಾಗಿ ಅವರ ಭಾವನೆಗಳಿಗೆ ಧಕ್ಕೆ ಬರದ ಹಾಗೆ ಸ್ಪಂದಿಸಬೇಕು.

ತರಗತಿಯಲ್ಲಿ ಚರ್ಚೆಗೆ ಅನುಕೂಲವಾಗುವಂತೆ ಮುಕ್ತ ವಾತಾವರಣವನ್ನು ಕಲ್ಪಿಸಬೇಕು. ವಿದ್ಯಾರ್ಥಿಗಳು ಸನ್ನಡತೆ ತೋರಿದಾಗ ಪ್ರಶಂಸಿಸಬೇಕು. ಅವರ ಸಮಸ್ಯೆಗಳ ಪರಿಹಾರಕ್ಕೆ ತಮ್ಮ ಸಹಕಾರ ಇದೆ ಎಂಬುದನ್ನು ಮನವರಿಕೆ ಮಾಡಿಸಬೇಕು. ಹೀಗೆ ಅವರಿಗೆ ಶಿಕ್ಷಕರಲ್ಲಿ ವಿಶ್ವಾಸ, ನಂಬುಗೆ, ವಿಧೇಯತೆ­ಯನ್ನು ಹುಟ್ಟು ಹಾಕಿದಾಗ ಮುಕ್ತವಾಗಿ ತಮ್ಮ ಸಮಸ್ಯೆಗಳನ್ನು ಚರ್ಚಿಸಿ ಪರಿಹಾರ ಕಂಡುಕೊಳ್ಳುತ್ತಾರೆ. ಶಿಕ್ಷಕನ ವ್ಯಕ್ತಿತ್ವವೇ ಪ್ರತಿಯೊಂದು ಸವಾಲುಗಳಿಗೆ ಪ್ರತ್ಯುತ್ತರವಾಗಬಲ್ಲದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT