ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಠ್ಯದಲ್ಲಿ ಬೇಕು ಆಮೂಲಾಗ್ರ ಬದಲಾವಣೆ

Last Updated 15 ಫೆಬ್ರುವರಿ 2012, 9:15 IST
ಅಕ್ಷರ ಗಾತ್ರ

ಚಿಕ್ಕಮಗಳೂರು: ಪಠ್ಯಪುಸ್ತಕದಲ್ಲಿ ಆಮೂಲಾಗ್ರ ಬದಲಾವಣೆ ಆಗಬೇಕಾಗಿದೆ ಎಂದು ವಿಧಾನ ಪರಿಷತ್ ಸಭಾಪತಿ ಡಿ.ಎಚ್.ಶಂಕರಮೂರ್ತಿ ಪ್ರತಿಪಾದಿಸಿದರು.ನಗರದ ಒಕ್ಕಲಿಗರ ಸಮುದಾಯ ಭವನದಲ್ಲಿ ಮಂಗಳವಾರ ನಡೆದ ಪ್ರಾಥಮಿಕ ಶಾಲಾ ಶಿಕ್ಷಕರ ತಾಲ್ಲೂಕು ಮಟ್ಟದ ಶೈಕ್ಷಣಿಕ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.

ಸಮಾಜಕ್ಕೆ ವಿರುದ್ಧವಾಗಿ ಮಕ್ಕಳಿಗೆ ಹೇಳಿಕೊಡಲಾಗುತ್ತಿದೆ. ಮಕ್ಕಳಿಗೆ ಏನು ಪಾಠ ಹೇಳಿಕೊಡಬೇಕು. ಏನು ಹೇಳಿಕೊಡಬಾರದು ಎಂಬ ವಿಷಯ ಕುರಿತು ಚರ್ಚೆಯಾಗಬೇಕಾಗಿದೆ. ಈ ಬಗ್ಗೆ ಅಮೂಲ್ಯ ಸಲಹೆಗಳನ್ನು ಶಿಕ್ಷಕರು ನೀಡಬೇಕು ಎಂದು ತಿಳಿಸಿದರು.

ಶಿಕ್ಷಕರಿಗೆ ಶೈಕ್ಷಣಿಕ ಕಾರ್ಯಾಗಾರ ಕಾಲಕಾಲಕ್ಕೆ ಆಗಬೇಕು. ಅಲ್ಲಿ ಶಿಕ್ಷಣಕ್ಕೆ ಸಂಬಂಧಿಸಿದ ಪ್ರಮುಖ ವಿಷಯಗಳ ಚರ್ಚೆ ನಡೆಯಬೇಕೆಂದು ಪ್ರತಿಪಾದಿಸಲಾಗಿತ್ತು. ಈಗ ಕಾರ್ಯಾಗಾರಗಳು ನಡೆಯುತ್ತಿರುವುದು ಸಮಾಧಾನ ತಂದಿದೆ. 14 ವರ್ಷದೊಳಗಿನ ಮಕ್ಕಳಿಗೆ ಕಡ್ಡಾಯ ಶಿಕ್ಷಣ ನೀಡುವುದು ಸರ್ಕಾರ ಮತ್ತು ಸಮಾಜದ ಜವಾಬ್ದಾರಿ. ಶಿಕ್ಷಣ ಎಲ್ಲರ ಹಕ್ಕು ಎಂಬುದನ್ನು ಸರ್ಕಾರ ಒಪ್ಪಿದೆ ಎಂದು ತಿಳಿಸಿದರು.

ರಾಮ, ಕೃಷ್ಣ, ಮಹಾತ್ಮಗಾಂಧಿ, ಶ್ರೇಷ್ಠ ಋಷಿಮುನಿಗಳು ವಿದ್ಯಾರ್ಥಿಗಳಿಗೆ ಆದರ್ಶರಾಗಬೇಕೇ ಹೊರತು ದೇಶದ ಮೇಲೆ ದಂಡೆತ್ತಿ ಬಂದು ನಮ್ಮ ತಾತ, ಮುತ್ತಾತಂದಿರನ್ನು ಆಳಿದ ವಿದೇಶಿಯರು ಈ ದೇಶದ ವಿದ್ಯಾರ್ಥಿಗಳಿಗೆ ಮಾದರಿಯಾಗಬಾರದು ಎಂದು ಕಿವಿಮಾತು ಹೇಳಿದರು.

ಶಿಕ್ಷಣದಲ್ಲಿ ಒಳ್ಳೆಯ ವಿಷಯಗಳನ್ನು ಬೋಧಿಸಿದ್ದರೆ ವಿಧಾನಸೌಧ ದಲ್ಲಿ ರಾಮನ, ಕೃಷ್ಣನ ಭಾವಚಿತ್ರ ನೋಡುತ್ತಿದ್ದರು. ಬೇರೆ ಚಿತ್ರಗಳನ್ನು ವೀಕ್ಷಣೆ ಮಾಡುವ ಮೂಲಕ ನಾಡಿನ ಜನರು ತಲೆತಗ್ಗಿಸುವ ಘಟನೆಗಳು ಜರುಗುತ್ತಿರಲಿಲ್ಲ ಎಂದು ವಿಷಾದಿಂದ ನುಡಿದರು.

ಸಮಾಜಕ್ಕೆ ಉತ್ತಮ ಹೆಸರನ್ನು ತರುವ ಮಕ್ಕಳನ್ನು ತಯಾರು ಮಾಡಬೇಕಾದ ಜವಾಬ್ದಾರಿ ಶಿಕ್ಷಕರ ಮೇಲಿದೆ. ಶಿಕ್ಷಣದಲ್ಲಿ ಯಾವ ವಿಷಯ ಅಳವಡಿಸಬೇಕು. ಯಾವುದು ಬೇಡ ಎಂದು ಶಿಕ್ಷಕರು ಸಲಹೆ ನೀಡಲು ಕಾಲಪಕ್ವವಾಗಿದೆ ಎಂದರು.

ಶಾಸಕ ಸಿ.ಟಿ.ರವಿ ಮಾತನಾಡಿ, ಮಕ್ಕಳನ್ನು ಚಿಂತನೆಗೆ ಹಚ್ಚುವ ವಿಷಯಗಳನ್ನು ಪಠ್ಯದಲ್ಲಿ ಅಳವಡಿಸುವುದು ಸೂಕ್ತ. ಸ್ವಾಭಿಮಾನ ಬೆಳೆಸಬೇಕಿದೆ. ತಮ್ಮತನದ ಅರಿವು ಆದಾಗ ಮಾತ್ರ ನಮ್ಮ ದೇಶ ಶಕ್ತಿಯಾಗಿ ನಿಲ್ಲಲು ಸಾಧ್ಯ ಎಂದರು.

ನಿರ್ಮಾಣ ಕಾಮಗಾರಿಗಳನ್ನು ಶಿಕ್ಷಕರಿಗೆ ವಹಿಸುವುದು ಬೇಡ. ಬೇರೆ ಸಮಿತಿಗೆ ವಹಿಸಿಕೊಡುವುದು ಸೂಕ್ತ. ಅನ್ಯ ಕೆಲಸಗಳಿಂದ ಶಿಕ್ಷಕರನ್ನು ಮುಕ್ತಗೊಳಿಸಿ, ಶೈಕ್ಷಣಿಕ ವ್ಯವಸ್ಥೆ ಸರಿಪಡಿಸಬೇಕಾಗಿದೆ ಎಂದರು.ಗಿರಿಭತ್ಯೆ, ಶಿಕ್ಷಕರಿಗೆ ವಸತಿ ಗೃಹ ನಿರ್ಮಾಣ ಹಾಗೂ ದೈಹಿಕ ಶಿಕ್ಷಕರಿಗೆ ಬಡ್ತಿ ಬಗ್ಗೆ ಮುಖ್ಯಮಂತ್ರಿ ಹಾಗೂ ಶಿಕ್ಷಣ ಸಚಿವರೊಂದಿಗೆ ಮಾತುಕತೆ ನಡೆಸುವುದಾಗಿ ಶಾಸಕರು ಭರವಸೆ ನೀಡಿದರು.

ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ  ಸುಂದರೇಶ್ ಮಾತನಾಡಿ, ಪದವೀಧರ ಶಿಕ್ಷಕರಿಗೆ 75:25ರ ಅನುಪಾತದಲ್ಲಿ ಬಡ್ತಿ ನೀಡಬೇಕು. ಮಲೆನಾಡು ಭಾಗದಲ್ಲಿ ಕೆಲಸ ನಿರ್ವಹಿಸುವ ಶಿಕ್ಷಕರಿಗೆ ಗಿರಿಭತ್ಯೆ ಮತ್ತು ವಸತಿ ಗೃಹ ನಿರ್ಮಿಸಬೇಕು. ಹೆಚ್ಚುವರಿ ಕೆಲಸಗಳಿಂದ ಶಿಕ್ಷಕರನ್ನು ಮುಕ್ತಿಗೊಳಿಸಬೇಕೆಂದು ಮನವಿ ಮಾಡಿದರು.

ತೆಂಗುನಾರು ಅಭಿವೃದ್ಧಿ ಮಂಡಳಿ ಅಧ್ಯಕ್ಷೆ ರೇಖಾಹುಲಿಯಪ್ಪ ಗೌಡ, ಜಿಲ್ಲಾ ಪಂಚಾಯಿತಿ ಸದಸ್ಯೆ ಸವಿತಾ ರಮೇಶ್, ತಾ.ಪಂ. ಅಧ್ಯಕ್ಷ ಮಂಜುನಾಥ, ಸಿಡಿಎ ಅಧ್ಯಕ್ಷ ಬಿ.ರಾಜಪ್ಪ, ಡಿಡಿಪಿಐ ಕಾಂತರಾಜು, ಕ್ಷೇತ್ರ ಶಿಕ್ಷಣಾಧಿಕಾರಿ ಎಸ್.ಜಿ.ನಾಗೇಶ್, ಡಯಟ್ ಪ್ರಾಂಶುಪಾಲ ಬಸವೇಗೌಡ, ಶಿಕ್ಷಕರ ಸಂಘದ ಮುಖಂಡರಾದ ದೇವರಾಜಪ್ಪ, ತಾರಾನಾಥ, ರೇವಣಸಿದ್ದಪ್ಪ, ಅಣ್ಣೇಗೌಡ, ಪುಟ್ಟಪ್ಪ, ಭುವನೇಶ್, ಶಿವಶಂಕರ, ಮಂಜುನಾಥಗೌಡ, ಕಾಳಯ್ಯ, ಗೋವಿಂದಗೌಡ, ವಿಜಯಲಕ್ಷ್ಮಿ, ಚಂದ್ರನಾಯ್ಕ, ಜರೀನಾ, ಮಹೇಶ್ವರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT