ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಡಿತರ ಚೀಟಿ ವಿತರಣೆ: ತಾ.ಪಂ.ನಲ್ಲಿ ಬಿಸಿ ಚರ್ಚೆ

Last Updated 17 ಸೆಪ್ಟೆಂಬರ್ 2011, 8:05 IST
ಅಕ್ಷರ ಗಾತ್ರ

ಬೆಳಗಾವಿ: ತಾಲ್ಲೂಕಿನಲ್ಲಿ ಬಡವರಿಗೆ ಬಿಪಿಎಲ್ ಪಡಿತರ ಚೀಟಿ ವಿತರಣೆ ಮಾಡುವಲ್ಲಿ ವಿಳಂಬ ಆಗುತ್ತಿರುವ ಹಿನ್ನೆಲೆಯಲ್ಲಿ ಆಹಾರ ಇಲಾಖೆಯ ಅಧಿಕಾರಿಯನ್ನು ಶಾಸಕರು ಹಾಗೂ ಜಿ.ಪಂ. ಸದಸ್ಯರು ಶುಕ್ರವಾರ ತರಾಟೆಗೆ ತೆಗೆದುಕೊಂಡರು.

ತಾಲ್ಲೂಕು ಪಂಚಾಯಿತಿ ಸಭಾಭವನದಲ್ಲಿ ಗ್ರಾಮೀಣ ಕ್ಷೇತ್ರದ ಶಾಸಕ ಸಂಜಯ ಪಾಟೀಲ ಅಧ್ಯಕ್ಷತೆಯಲ್ಲಿ ಶುಕ್ರವಾರ ನಡೆದ ತಾ.ಪಂ. ಕೆಡಿಪಿ ಸಭೆಯಲ್ಲಿ ಪಡಿತರ ಚೀಟಿ ವಿತರಣೆಯಲ್ಲಿ ವಿಳಂಬವಾಗುತ್ತಿರುವುದಕ್ಕೆ ಆಕ್ಷೇಪ ವ್ಯಕ್ತವಾಯಿತು.

ಗ್ರಾಮೀಣ ಭಾಗದಲ್ಲಿ ಹಲವು ಕುಟುಂಬ ಎರಡು-ಮೂರು ಬಿಪಿಎಲ್ ಕಾರ್ಡ್‌ಗಳನ್ನು ಹೊಂದಿವೆ. ಅಕ್ರಮ ಪಡಿತರವನ್ನು ರದ್ದುಗೊಳಿಸಲೆಂದು `ಪಂಚತಂತ್ರ~ ಯೋಜನೆಯಡಿ ಮಾಹಿತಿಯನ್ನು ಸಂಗ್ರಹಿಸಲಾಗುತ್ತಿದೆ.

ಅದಾದ ಬಳಿಕ ಪಡಿತರ ಚೀಟಿಗಳನ್ನು ವಿತರಿಸಲಾಗುವುದು” ಎಂದು ಉಪ ತಹಸೀಲ್ದಾರ ಹಿರೇಮಠ ಸಭೆಗೆ ತಿಳಿಸಿದರು. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಜಿ.ಪಂ. ಸದಸ್ಯ ಶಂಕರಗೌಡ ಪಾಟೀಲ, ನೀವು ಹೀಗೆ ಸಬೂಬು ಹೇಳುತ್ತಿದ್ದರೆ ಇನ್ನು ಎರಡು ವರ್ಷಗಳಾದರೂ ಬಡವರಿಗೆ ಬಿಪಿಎಲ್ ಕಾರ್ಡ್ ಸಿಗುವುದಿಲ್ಲ. ಅಲ್ಲಿಯವರೆಗೆ ಬಡವರು ಪಡಿತರ ಧಾನ್ಯಗಳಿಂದ ವಂಚಿತರಾಗುತ್ತಾರೆ” ಎಂದು ಹೇಳಿದರು.

ಶಾಸಕ ಸಂಜಯ ಪಾಟೀಲ ಮಾತನಾಡಿ, “ಬಡವರಿಗೆ ಸಿಗುವ ಸೌಲಭ್ಯವನ್ನು ಹೀಗೆ ವಿಳಂಬ ಮಾಡಿದರೆ ಹೇಗೆ? ಶೀಘ್ರದಲ್ಲೇ ಸಮೀಕ್ಷೆ ನಡೆಸಿ ಬಿಪಿಎಲ್, ಎಪಿಎಲ್ ಫಲಾನುಭವಿಗಳ ಪಟ್ಟಿಯನ್ನು ಆಯಾ ಪಂಚಾಯಿತಿಗಳಲ್ಲಿ ಪ್ರಕಟಿಸಿ. ಇದಕ್ಕೆ ಆಕ್ಷೇಪಣೆ ಸಲ್ಲಿಸಲು ಕಾಲಾವಕಾಶ ನೀಡಿ. ಬಳಿಕ ಅರ್ಹ ಫಲಾನುಭವಿಗಳ ಪಟ್ಟಿಯನ್ನು ಗ್ರಾಮ ಸಭೆಯಲ್ಲಿ ಮಂಡಿಸಿ ಒಪ್ಪಿಗೆ ಪಡೆದುಕೊಂಡ ಕೂಡಲೇ ಪಡಿತರ ಚೀಟಿಗಳನ್ನು ವಿತರಿಸಿ” ಎಂದು ಸೂಚಿಸಿದರು.

ತಾ.ಪಂ. ಕಾರ್ಯನಿರ್ವಹಣಾಧಿಕಾರಿ ಎ.ಎಂ. ಪಾಟೀಲ, ಅನರ್ಹ ಪಡಿತರ ಚೀಟಿಗಳನ್ನು ಗುರುತಿಸುವ ಕಾರ್ಯವನ್ನು ಒಂದು ವಾರದೊಳಗೆ ಪೂರ್ಣಗೊಳಿಸುತ್ತೇವೆ. ಅದಾದ ಬಳಿಕ ಬಿಪಿಎಲ್ ಫಲಾನುಭವಿಗಳ ಸಮೀಕ್ಷೆ ಆರಂಭಿಸುತ್ತೇವೆ” ಎಂದು ಭರವಸೆ ನೀಡಿದರು.

ಸುವರ್ಣಭೂಮಿ ಯೋಜನೆಯಡಿ 1198 ರೈತರಿಗೆ ಸುಮಾರು 96 ಲಕ್ಷ ರೂಪಾಯಿ ಹಣ ವಿತರಿಸಲಾಗಿದೆ. ನವೆಂಬರ್ ಅಥವಾ ಡಿಸೆಂಬರ್‌ನಲ್ಲಿ ಕೃಷಿ ಮೇಳ ಹಮ್ಮಿಕೊಳ್ಳಲಾಗುವುದು” ಎಂದು ಕೃಷಿ ಇಲಾಖೆ ಅಧಿಕಾರಿಗಳು ಹೇಳಿದರು.

ಪಂಥ ಬಾಳೇಕುಂದ್ರಿಯಲ್ಲಿ ಸುವರ್ಣ ಗ್ರಾಮ ಯೋಜನೆಯಡಿ ನಿರ್ಮಿಸಿರುವ ರಸ್ತೆ ಮೂರು ತಿಂಗಳಲ್ಲೇ ಕಿತ್ತು ಹೋಗಿದೆ. ಹೀಗಾಗಿ ಗುತ್ತಿಗೆದಾರರಿಗೆ ಹಣ ಪಾವತಿಸಬಾರದು ಎಂದು ಜಿ.ಪಂ. ಸದಸ್ಯ ಶಂಕರಗೌಡ ಪಾಟೀಲ ಆಕ್ಷೇಪಿಸಿದರು. ಶಾಸಕ ಪಾಟೀಲ ಮಾತನಾಡಿ, `ಮೊದಲು ಆ ರಸ್ತೆ ಹೇಗಿದೆ ಎಂಬುದನ್ನು ಸಮೀಕ್ಷೆ ಮಾಡೋಣ. ಬಳಿಕ ಆ ಬಗ್ಗೆ ನಿರ್ಧಾರ ಕೈಗೊಳ್ಳೋಣ~ ಎಂದು ಸಮಾಧಾನ ಪಡಿಸಿದರು.

ಮಾತಿನ ಚಕಮಕಿ: ತಾ.ಪಂ. ಕೆಡಿಪಿ ಸಭೆಯಲ್ಲಿ ಜಿ.ಪಂ. ಸದಸ್ಯ ಶಂಕರಗೌಡ ಪಾಟೀಲ ಹಾಗೂ ಶಾಸಕ ಸಂಜಯ ಪಾಟೀಲ ನಡುವೆ ಆಗಾಗ ಮಾತಿನ ಚಕಮಕಿ ನಡೆಯಿತು.

ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿ ಸಮರ್ಪಕವಾಗಿ ಉತ್ತರಿಸದ ಹಿನ್ನೆಲೆಯಲ್ಲಿ ಸಿಟ್ಟಿಗೆದ್ದ ಶಂಕರಗೌಡರು, ಏರು ಧ್ವನಿಯಲ್ಲಿ ಅವರನ್ನು ತರಾಟೆಗೆ ತೆಗೆದುಕೊಂಡರು. ಮಧ್ಯ ಪ್ರವೇಶಿಸಿದ ಶಾಸಕರು, ಅಧಿಕಾರಿಗಳನ್ನು ಹೀಗೆ ಹೆದರಿಸಬೇಡಿ. ನಿಮಗೆ ಏನು ಉತ್ತರ ಬೇಕು ಎಂಬುದನ್ನು ಸಮಾಧಾನದಿಂದ ಕೇಳಿ ಪಡೆಯಿರಿ ಎಂದರು. ಈ ಸಂದರ್ಭದಲ್ಲಿ ಕೆಲಕಾಲ ಶಂಕರಗೌಡರ ಹಾಗೂ ಶಾಸಕರ ನಡುವೆ ವಾಕ್‌ಸಮರ ನಡೆಯಿತು.

ಮರಾಠಿ ಪ್ರೇಮ: ಸಭೆಯ ಆರಂಭದಲ್ಲಿ ಕೆಲವು ಸದಸ್ಯರು ಮಾಹಿತಿಗಳನ್ನು ಮರಾಠಿಯಲ್ಲೇ ನೀಡಬೇಕು ಎಂದು ಪಟ್ಟು ಹಿಡಿದರು. ಇದಕ್ಕೆ ಆಕ್ಷೇಪಿಸಿದ ಕಾರ್ಯನಿರ್ವಹಣಾಧಿಕಾರಿಗಳು, ಆಡಳಿತ ಭಾಷೆ ಕನ್ನಡದಲ್ಲೇ ನಾವು ನೀಡುತ್ತೇವೆ. ಮರಾಠಿಯಲ್ಲಿ ನೀಡಲು ಅವಕಾಶವಿಲ್ಲ ಎಂದು ಹೇಳಿದರು.

ಮಧ್ಯ ಪ್ರವೇಶಿಸಿದ ಶಾಸಕ ಪಾಟೀಲ, ಕರ್ನಾಟಕದಲ್ಲಿ ಕನ್ನಡಕ್ಕೆ ಆದ್ಯತೆ ನೀಡಬೇಕು ಎಂಬುದರಲ್ಲಿ ಎರಡು ಮಾತಿಲ್ಲ. ಆದರೆ, ಸದಸ್ಯರಿಗೆ ಅರ್ಥವಾಗಲಿ ಎಂಬ ಉದ್ದೇಶದಿಂದ ಮರಾಠಿಯಲ್ಲಿ ಮಾಹಿತಿ ನೀಡಿದರೆ ತಪ್ಪಲ್ಲ. ಹೀಗಾಗಿ ಮರಾಠಿಯಲ್ಲಿ ಮಾಹಿತಿ ಕೇಳುವವರಿಗೆ ಮರಾಠಿ ಇಲ್ಲವೇ ಇಂಗ್ಲಿಷ್‌ನಲ್ಲಿ ಮಾಹಿತಿ ನೀಡಬೇಕು ಎಂದು ಸೂಚಿಸಿದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT