ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಡುಬಿದ್ರಿ: ಕಟ್ಟಡ ಕಾಮಗಾರಿಗೆ ನೀರು- ವಿದ್ಯಾರ್ಥಿಗಳ ಪರದಾಟ

Last Updated 20 ಡಿಸೆಂಬರ್ 2012, 10:11 IST
ಅಕ್ಷರ ಗಾತ್ರ

ಪಡುಬಿದ್ರಿ: ಇಲ್ಲಿನ ಮಾರ್ಕೆಟ್ ರಸ್ತೆಯ ಪೊಲೀಸ್ ಠಾಣೆ ಬಳಿ ನಿರ್ಮಾಣವಾಗುತ್ತಿರುವ ಪಶು ಸಂಗೋಪನಾ ಆಸ್ಪತ್ರೆಯ ಕಟ್ಟಡಕ್ಕೆ ಸ್ಥಳೀಯ ಸರ್ಕಾರಿ ವಿದ್ಯಾರ್ಥಿನಿಲಯದ ನೀರನ್ನು ಬಳಲಾಗುತ್ತಿದ್ದು, ವಿದ್ಯಾರ್ಥಿಗಳು ನೀರಿಗಾಗಿ ಪರದಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ವಿದ್ಯಾರ್ಥಿಗಳು 4-5 ದಿನ ಸ್ನಾನಕ್ಕೂ ನೀರಿಲ್ಲದೆ ಪರದಾಡಿದ್ದಾರೆ.

ಪಡುಬಿದ್ರಿಯ ಸಾರ್ವಜನಿಕ ಮೆಟ್ರಿಕ್ ಪೂರ್ವ ವಿದ್ಯಾರ್ಥಿನಿಲಯದಲ್ಲಿ ವಿವಿಧ ಜಿಲ್ಲೆಯ 24ಮಂದಿ ವಿದ್ಯಾರ್ಥಿಗಳು ಇದ್ದಾರೆ. 5ರಿಂದ 10ನೇ ತರಗತಿಯಲ್ಲಿ ಶಿಕ್ಷಣ ಪಡೆಯುತ್ತಿರುವ ವಿದ್ಯಾರ್ಥಿಗಳಿಗೆ ಇಲ್ಲಿ ಉತ್ತಮ ಸೌಕರ್ಯವೂ ಇದೆ. ಆದರೆ ಇತ್ತೀಚಿಗೆ ಸಮೀಪದಲ್ಲಿಯೇ ನಿರ್ಮಾಣವಾಗುತ್ತಿರುವ ಕಟ್ಟಡಕ್ಕೆ ನೀರನ್ನು ಹೇರಳವಾಗಿ ಬಳಸುತ್ತಿರುವುದರಿಂದ ನೀರಿನ ಸಮಸ್ಯೆ ಎದುರಾಗಿದೆ.

ವಿದ್ಯಾರ್ಥಿನಿಲಯದ ಸಮೀಪದಲ್ಲಿಯೇ ಇದ್ದ ಪಶು ಸಂಗೋಪನಾ ಇಲಾಖೆ ಹಳೆ ಕಟ್ಟಡವನ್ನು ಕೆಡವಿ 17ಲಕ್ಷ ರೂಪಾಯಿ ವೆಚ್ಚದಲ್ಲಿ ಹೊಸ ಕಟ್ಟಡ ನಿರ್ಮಿಸಲಾಗುತ್ತಿದೆ. ನಿರ್ಮಿತಿ ಕೇಂದ್ರದವರು ಕಟ್ಟಡದ ಕಾಮಗಾರಿ ನಡೆಸುತ್ತಿದ್ದು, ಕಳೆದ ಮೂರು ತಿಂಗಳಿಂದ ಅಡಿಪಾಯ ನಿರ್ಮಾಣ ಕಾಮಗಾರಿ ಪ್ರಗತಿಯಲ್ಲಿದೆ. ವಿದ್ಯಾರ್ಥಿನಿಲಯದ ನೀರಿನ ತೊಟ್ಟಿಯ ಪೈಪ್ ಸಂಪರ್ಕವನ್ನು ಪಶು ಸಂಗೋಪನಾ ಕೇಂದ್ರಕ್ಕೂ ನೀಡಲಾಗಿತ್ತು. ಅಡಿಪಾಯ ನಿರ್ಮಾಣದ ವೇಳೆ ವಿದ್ಯಾರ್ಥಿ ನಿಲಯದ ಆವರಣದಲ್ಲಿರುವ ಟ್ಯಾಂಕ್‌ನಲ್ಲಿ ತುಂಬಿಸಿಟ್ಟಿದ್ದ ನೀರನ್ನು ಪೈಪ್ ಮೂಲಕ ಹೇರಳವಾಗಿ ಬಳಸಲಾಗುತ್ತಿದೆ. ಇದರಿಂದ ವಿದ್ಯಾರ್ಥಿಗಳು ಇತ್ತೀಚೆಗೆ ನಾಲ್ಕೈದು ದಿನ ನೀರಿಲ್ಲದೆ ಪರದಾಡಿದ್ದರು. ಆದರೂ ಈ ಸಮಸ್ಯೆ ಬಗ್ಗೆ ಯಾರಲ್ಲೂ ಹೇಳಿಕೊಂಡಿರಲಿಲ್ಲ.

ಬುಧವಾರ ಕಾರ್ಮಿಕನೊಬ್ಬ ಕಾಮಗಾರಿಗೆ ವಿದ್ಯಾರ್ಥಿನಿಲಯದ ನೀರನ್ನು ಬಳಸಲು ಮುಂದಾದಾಗ ಸಾರ್ವಜನಿಕರೇ ಆತನನ್ನು ತಡೆದು  ತರಾಟೆಗೆ ತೆಗೆದುಕೊಂಡರು.  ನೀರಿಗೆ ಪರ್ಯಾಯ ವ್ಯವಸ್ಥೆ ಮಾಡಿಕೊಳ್ಳುವಂತೆ ಸೂಚಿಸಿದರು
`ಕೆಲವು ವಾರಗಳ ಹಿಂದೆ 4 ದಿನ ನೀರೇ ಇರಲಿಲ್ಲ. 4ದಿನ ಸ್ನಾನ ಮಾಡಲೂ ಸಾಧ್ಯವಾಗಿರಲಿಲ್ಲ. ನೀರಿಗಾಗಿ ಇಷ್ಟೊಂದು ಸಮಸ್ಯೆ ಎಂದೂ ಉಂಟಾಗಿರಲಿಲ್ಲ' ಎಂದು ವಿದ್ಯಾರ್ಥಿನಿಲಯದ 8ನೇ ತರಗತಿ ವಿದ್ಯಾರ್ಥಿ ರಾಯಚೂರಿನ ಲೋಕೇಶ್ `ಪ್ರಜಾವಾಣಿ'ಗೆ ತಿಳಿಸಿದರು.

`ಇತ್ತೀಚೆಗೆ ನೀರಿನ ಸಮಸ್ಯೆ ತೀವ್ರವಗಿದೆ. ಗ್ರಾಮ ಪಂಚಾಯಿತಿಗೆ ಈ ಬಗ್ಗೆ ಮಾಹಿತಿ ನೀಡಿದ್ದೇವೆ. ಆದರೂ ಪ್ರಯೋಜನವಾಗಿಲ್ಲ. ಪಶು ಸಂಗೋಪನೆಯ ಇಲಾಖೆ ಕಟ್ಟಡ ನಿರ್ಮಾಣಕ್ಕೆ ಹೇರಳ ನೀರು ಬಳಸುತ್ತಿರುವುದರಿಂದ ಇಲ್ಲಿ ನೀರಿನ ಸಮಸ್ಯೆ ಹೆಚ್ಚಾಗಿದೆ. ಅಲ್ಲದೆ ಈ ಕಟ್ಟಡ ನಿರ್ಮಾಣ ಆಗುವ ಮೊದಲು ವಿದ್ಯಾರ್ಥಿ ನಿಲಯಕ್ಕೆ ಬರಲು ಸರಿಯಾದ ರಸ್ತೆ ವ್ಯವಸ್ಥೆಯೂ ಕಲ್ಪಿಸಲು ಹೇಳಿದ್ದೆವು. ಆದರೆ ರಸ್ತೆ ವ್ಯವಸ್ಥೆಯನ್ನೂ ಕಲ್ಪಿಸಿಲ್ಲ' ಎಂದು ಅಡುಗೆ ಸಹಾಯಕ ಸಂಜೀವ ದೂರಿದರು.

`ಸರ್ಕಾರ ಜನಸಾಮಾನ್ಯರಿಗಾಗಿ  ಹಮ್ಮಿಕೊಳ್ಳುವ ಯೋಜನೆ ಅಧಿಕಾರಿಗಳ ಬೇಜವಾಬ್ದಾರಿತನದಿಂದ ಯಾವ ಸ್ಥಿತಿಗೆ ತಲುಪುತ್ತದೆ ಎಂಬುದಕ್ಕೆ ಪಶು ಸಂಗೋಪನಾ ಇಲಾಖೆಯ ಕಟ್ಟಡ ಕಾಮಗಾರಿಯೇ ಉದಾಹರಣೆ. ಅಡಿಪಾಯ ನಿರ್ಮಾಣದ ವೇಳೆ ವಿದ್ಯಾರ್ಥಿನಿಲಯದ ನೀರನ್ನು ಬಳಸಲಾಯಿತು. ಅಡಿಪಾಯ ನಿರ್ಮಾಣವಾದ ಬಳಿಕ ಕ್ಯೂರಿಂಗ್‌ಗೆ ತೊಟ್ಟು ನೀರು ಕೂಡಾ ಇಲ್ಲ. ಈ ಕಟ್ಟಡ ನಿರ್ಮಾಣವಾದ ಬಳಿಕ ಎಷ್ಟು ಸುಭದ್ರವಾಗಿದ್ದೀತು?' ಎಂದು ಪ್ರಶ್ನಿಸುತ್ತಾರೆ ಸ್ಥಳೀಯರು.

`ಗುತ್ತಿಗೆ ವಹಿಸಿಕೊಂಡವರು ನೀರಿಗೆ ಪರ್ಯಾಯ ವ್ಯವಸ್ಥೆ ಮಾಡದೆ ವಿದ್ಯಾರ್ಥಿ ನಿಲಯದ ನೀರು ಬಳಸುವುದು ಸರಿಯಲ್ಲ' ಎನ್ನುತ್ತಾರೆ ಇಲ್ಲಿನ ಶ್ರೀನಾರಾಯಣ ಗುರು ತಾಂತ್ರಿಕ ತರಬೇತಿ ಕೇಂದ್ರದ ಮಧ್ವರಾಜ್ ಸುವರ್ಣ.

 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT