ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪತಿಯ ಕೊಲೆ: ಮಹಿಳೆ ಬಂಧನ

Last Updated 3 ಜನವರಿ 2012, 19:30 IST
ಅಕ್ಷರ ಗಾತ್ರ

ಬೆಂಗಳೂರು: ಪತಿಯನ್ನು ಕೊಲೆ ಮಾಡಿ ನಂತರ ಆ ಘಟನೆಯನ್ನು ಆಕಸ್ಮಿಕ ಸಾವು ಎಂಬಂತೆ ಬಿಂಬಿಸಲು ಯತ್ನಿಸಿದ್ದ ನಿಗೂಢ ಪ್ರಕರಣವನ್ನು ಭೇದಿಸಿರುವ ರಾಜರಾಜೇಶ್ವರಿನಗರ ಪೊಲೀಸರು ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ರಾಜರಾಜೇಶ್ವರಿನಗರ ಸಮೀಪದ ಜವರೇಗೌಡನ ದೊಡ್ಡಿ ನಿವಾಸಿ ಶೀಲಾ (23) ಬಂಧಿತರು. ಪತಿ ರಮೇಶ್ (33) ಅವರನ್ನು  ಆರೋಪಿ ಕೊಲೆ ಮಾಡಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

 ದಂಪತಿ ವಿವಾಹವಾಗಿ ನಾಲ್ಕು ವರ್ಷವಾಗಿತ್ತು ಮತ್ತು ಅವರಿಗೆ ಮೂರು ವರ್ಷದ ಗಂಡು ಮಗುವಿದೆ. ರಮೇಶ್ ತರಕಾರಿ ವ್ಯಾಪಾರ ಮಾಡುತ್ತಿದ್ದರು ಮತ್ತು ಶೀಲಾ ಸಿದ್ಧ ಉಡುಪು ಕಾರ್ಖಾನೆಯಲ್ಲಿ ಉದ್ಯೋಗಿಯಾಗಿದ್ದರು.
 ಮದ್ಯ ವ್ಯಸನಿಯಾದ ರಮೇಶ್ ಪತ್ನಿಯ ಜತೆ ನಿತ್ಯ ಜಗಳವಾಡಿ ಕಿರುಕುಳ ನೀಡುತ್ತಿದ್ದರು. 2011ರ ಡಿ.25ರಂದು ರಮೇಶ್ ಪಾನಮತ್ತರಾಗಿ ಬಂದು ಪತ್ನಿಗೆ ಹೊಡೆಯಲು ಯತ್ನಿಸಿದ್ದರು. ಇದರಿಂದ ಕೋಪಗೊಂಡ ಶೀಲಾ ಪತಿಯ ತಲೆಗೆ ಲಟ್ಟಣಿಗೆಯಿಂದ ಹೊಡೆದಿದ್ದರು, ಅಲ್ಲದೇ ಇಸ್ತ್ರಿ ಪೆಟ್ಟಿಗೆಯ ವಯರ್‌ನಿಂದ ಕುತ್ತಿಗೆ ಬಿಗಿದು ಕೊಲೆ ಮಾಡಿದ್ದರು ಎಂದು ಪೊಲೀಸರು ಹೇಳಿದ್ದಾರೆ.

ಕೊಲೆಯನ್ನು ಆಕಸ್ಮಿಕ ಸಾವೆಂದು ಬಿಂಬಿಸಲು ಯತ್ನಿಸಿದ್ದ ಶೀಲಾ, `ಪಾನ ಮತ್ತರಾಗಿ ಮನೆ ಮಹಡಿಯಲ್ಲಿ ನಿಂತಿದ್ದ ಪತಿ ನಿಯಂತ್ರಣ ತಪ್ಪಿ ಕೆಳಗೆ ಬಿದ್ದು ಮೃತಪಟ್ಟಿದ್ದಾರೆ~ಎಂದು ದೂರು ಕೊಟ್ಟಿದ್ದರು.

ಈ ಸಂಬಂಧ ಆರಂಭದಲ್ಲಿ ಅಸಹಜ ಸಾವು ಪ್ರಕರಣ ದಾಖಲಿಸಿಕೊಂಡು ಶವವನ್ನು ವಿಕ್ಟೋರಿಯಾ ಆಸ್ಪತ್ರೆಗೆ ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿತ್ತು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

`ಮರಣೋತ್ತರ ಪರೀಕ್ಷೆ ನಡೆಸಿದ ವೈದ್ಯರು ರಮೇಶ್ ಅವರ ಕುತ್ತಿಗೆಗೆ ವಯರ್ ಬಿಗಿದು ಉಸಿರುಗಟ್ಟಿಸಿ ಕೊಲೆ ಮಾಡಲಾಗಿದೆ ಎಂದು ವರದಿ ನೀಡಿದರು. ಈ ಹಿನ್ನೆಲೆಯಲ್ಲಿ ಶೀಲಾ ಅವರನ್ನು ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸಿದಾಗ ಕೊಲೆ ಸಂಗತಿ ಬೆಳಕಿಗೆ ಬಂತು. ಇದೀಗ ಕೊಲೆ ಪ್ರಕರಣ ದಾಖಲಿಸಿಕೊಂಡು ಆರೋಪಿ ಶೀಲಾ ಅವರನ್ನು ಬಂಧಿಸಲಾಗಿದೆ~ ಎಂದು ಪಶ್ಚಿಮ ವಿಭಾಗದ ಡಿಸಿಪಿ ಎಸ್.ಎನ್.ಸಿದ್ದರಾಮಪ್ಪ `ಪ್ರಜಾವಾಣಿ~ಗೆ ತಿಳಿಸಿದರು.

ಸಿದ್ದರಾಮಪ್ಪ ಅವರ ಮಾರ್ಗದರ್ಶನದಲ್ಲಿ ಇನ್‌ಸ್ಪೆಕ್ಟರ್ ಎಚ್.ಹನುಮಂತಪ್ಪ ಮತ್ತು ಸಿಬ್ಬಂದಿ ಈ ಪ್ರಕರಣವನ್ನು ಭೇದಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT