ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪತಿಯಿಂದ ಜೀವಭಯ: ಅವಿತಿರುವ ಭಾರತೀಯ ರಾಜತಾಂತ್ರಿಕನ ಪತ್ನಿ

Last Updated 16 ಜನವರಿ 2011, 19:30 IST
ಅಕ್ಷರ ಗಾತ್ರ

ಲಂಡನ್ (ಪಿಟಿಐ): ತಮ್ಮ ಅಧಿಕೃತ ನಿವಾಸದಲ್ಲಿ ಪತ್ನಿಯ ಮೇಲೆ ಹಲ್ಲೆ ನಡೆಸಿರುವ ಆರೋಪ ಹೊತ್ತಿರುವ ಇಂಗ್ಲೆಂಡ್‌ನಲ್ಲಿರುವ ಭಾರತೀಯ ರಾಜತಾಂತ್ರಿಕ  ಅಧಿಕಾರಿ ಅನಿಲ್ ವರ್ಮಾ ಅವರ ಪತ್ನಿ, ಜೀವಭಯದಿಂದ ಐದು ವರ್ಷದ ಮಗುವಿನೊಂದಿಗೆ ಅವಿತಿದ್ದಾರೆ ಎಂದು ಮಾಧ್ಯಮವೊಂದು ವರದಿ ಮಾಡಿದೆ.

ಮನೆಯಿಂದ ಹೊರಬಂದ ಬಳಿಕ ಪರೊಮಿತ ವರ್ಮಾ ಅವರು ಪ್ರಾಣಾಪಾಯವನ್ನು ಎದುರಿಸುತ್ತಿದ್ದಾರೆ. ತಮ್ಮನ್ನು ಬಲವಂತವಾಗಿ ಭಾರತಕ್ಕೆ ಕರೆ ತರುವ ಸಾಧ್ಯತೆಯಿರುವುದರಿಂದ, ಮಾನವೀಯ ನೆಲೆಯಲ್ಲಿ ಇಂಗ್ಲೆಂಡ್‌ನಲ್ಲಿ ಉಳಿದುಕೊಳ್ಳಲು ಅವಕಾಶ ನೀಡಬೇಕು ಎಂದು ಕೋರಿ ಅವರು ಮನವಿ ಸಲ್ಲಿಸಿದ್ದಾರೆ ಎಂಬುದಾಗಿ ‘ಡೈಲಿ ಮೇಲ್’ ವರದಿ ಮಾಡಿದೆ.

ಪಶ್ಚಿಮ ಬಂಗಾಳದ ಐಎಎಸ್ ಅಧಿಕಾರಿಯಾಗಿರುವ ಅನಿಲ್ ವರ್ಮಾ ಅವರು ಇಂಗ್ಲೆಂಡ್‌ನಲ್ಲಿರುವ ಭಾರತದ ಹೈ ಕಮೀಷನ್‌ನ ಮೂರನೇ ಹಿರಿಯ ರಾಜತಾಂತ್ರಿಕ ಅಧಿಕಾರಿಯಾಗಿದ್ದಾರೆ.
ಕಳೆದ ಡಿಸೆಂಬರ್ ತಿಂಗಳಲ್ಲಿ ಪತ್ನಿ ಮೇಲೆ ಹಲ್ಲೆ ನಡೆಸಿದ ಆರೋಪದಲ್ಲಿ ಪೊಲೀಸರಿಂದ ವಿಚಾರಣೆಗೊಳಗಾದ ಬಳಿಕ ಅನಿಲ್ ವರ್ಮಾ ಅವರು ಕಾನೂನು ಕ್ರಮದಿಂದ ವಿನಾಯಿತಿ ನೀಡುವಂತೆ ಕೋರಿ ಮನವಿ ಸಲ್ಲಿಸಿದ್ದಾರೆ ಎಂದು ಹೇಳಲಾಗಿದೆ.

‘ಲಂಡನ್‌ನಲ್ಲಿರುವಾಗಲೆಲ್ಲಾ, ಅನಿಲ್ ಅವರು ತಮ್ಮ ರಾಜತಾಂತ್ರಿಕ ಹುದ್ದೆ ಕುರಿತಂತೆ ಜಂಭ ಕೊಚ್ಚಿಕೊಳ್ಳುತ್ತಿದ್ದರು. ರಾಜತಾಂತ್ರಿಕರಾಗಿರುವುದರಿಂದ ಯಾರಿದಂಲೂ ತಮಗೆ ಏನೂ ಮಾಡಲು ಸಾಧ್ಯವಿಲ್ಲ ಎಂದು ಅವರು  ಪರೊಮಿತಾಗೆ ಹೇಳುತ್ತಿದ್ದರು.

ಆಕೆಗೆ ಹಿಂಸೆ ನೀಡುತ್ತಾ, ಪೊಲೀಸರಿಗೆ ದೂರು ನೀಡು. ನನ್ನನ್ನೇನು ಮಾಡಲು ಸಾಧ್ಯವಿಲ್ಲ. ನನಗೆ ರಾಜತಾಂತ್ರಿಕ ಹುದ್ದೆಯ ರಕ್ಷಣೆ ಇದೆ ಎನ್ನುತ್ತಿದ್ದರು’ ಎಂಬ  ವರ್ಮಾ ಕುಟುಂಬದ ಆತ್ಮೀಯ ಸ್ನೇಹಿತರೊಬ್ಬರ ಹೇಳಿಕೆಯನ್ನು ಉಲ್ಲೇಖಿಸಿ ಪತ್ರಿಕೆ ವರದಿ ಮಾಡಿದೆ.

 ‘ಅನಿಲ್ ಅವರು ಅಧಿಕಾರವನ್ನು ದುರುಪಯೋಗಪಡಿಸಿಕೊಳ್ಳುತ್ತಿದ್ದಾರೆ. ಪರೊಮಿತ ಅವರು ಜೀವಭಯದಿಂದ ಅವಿತು ಕುಳಿತಿದ್ದಾರೆ. ಆಕೆಯ ಆರೋಗ್ಯ ಮತ್ತು ಜೀವಕ್ಕೆ ಅಪಾಯ ಎದುರಾಗಿದೆ’ ಎಂದು ಸ್ನೇಹಿತರು ಹೇಳಿರುವುದಾಗಿ ಪತ್ರಿಕೆ ಬರೆದಿದೆ. 

ಈ ಪ್ರಕರಣದ ಸಂಬಂಧ ಕಳೆದ ವಾರ ಭಾರತದ ವಿದೇಶಾಂಗ ಇಲಾಖೆ ಹೇಳಿಕೆಯೊಂದನ್ನು ಬಿಡುಗಡೆ ಮಾಡಿದ್ದು, ಪ್ರಕರಣದ ಕುರಿತು ಸಚಿವಾಲಯ ಮತ್ತು ಲಂಡನ್‌ನಲ್ಲಿರುವ ಹೈ ಕಮಿಷನ್‌ಗೆ ಅರಿವಿದ್ದು, ವಿಚಾರವನ್ನು ಕೂಲಂಕಷವಾಗಿ ಪರಿಶೀಲಿಸಲಾಗುತ್ತಿದೆ ಎಂದು ಹೇಳಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT