ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪದಕ ಬೇಟೆಗೆ ಭಾರತ ತಂಡ ಸಜ್ಜು

ಸೌತ್ ಏಷ್ಯನ್‌ ಕ್ರೀಡಾಕೂಟಕ್ಕೆ ಇಂದು ಚಾಲನೆ; ಗುವಾಹಟಿ–ಶಿಲ್ಲಾಂಗ್‌ನಲ್ಲಿ ಆಯೋಜನೆ
Last Updated 4 ಫೆಬ್ರುವರಿ 2016, 19:30 IST
ಅಕ್ಷರ ಗಾತ್ರ

ಗುವಾಹಟಿ: ಹಲವು ಕಾರಣಗಳಿಂದ ಪದೇ ಪದೇ ಮುಂದೂಡಲ್ಪಟ್ಟಿದ್ದ 12ನೇ ಸೌತ್‌ ಏಷ್ಯನ್‌ ಕ್ರೀಡಾಕೂಟಕ್ಕೆ ಶುಕ್ರವಾರ ಚಾಲನೆ ಲಭಿಸಲಿದೆ. ತವರಿನ ಅಂಗಳದಲ್ಲಿ ನಡೆಯುವ ಕೂಟದ ವಿವಿಧ ವಿಭಾಗಗಳಲ್ಲಿ ಪದಕದ ಬೇಟೆಯಾಡಲು ಭಾರತದ ಕ್ರೀಡಾಪಟುಗಳು ಸಜ್ಜಾಗಿದ್ದಾರೆ.

ಶುಕ್ರವಾರ ಇಂದಿರಾಗಾಂಧಿ ಕ್ರೀಡಾಂಗಣದಲ್ಲಿ ನಡೆಯುವ ಸಮಾರಂಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಕೂಟಕ್ಕೆ ಚಾಲನೆ ನೀಡಲಿದ್ದಾರೆ.
ದಕ್ಷಿಣ ಏಷ್ಯನ್‌ ಒಲಿಂಪಿಕ್ ಕೌನ್ಸಿಲ್‌ ಆಶ್ರಯದಲ್ಲಿ 12 ದಿನ ನಡೆಯುವ ಕೂಟದಲ್ಲಿ ಎಂಟು ಸಾರ್ಕ್‌ ರಾಷ್ಟ್ರಗಳ 2, 500 ಕ್ರೀಡಾಪಟುಗಳು ಭಾಗವಹಿಸಲಿದ್ದಾರೆ.

12ನೇ ಆವೃತ್ತಿಯ ಕ್ರೀಡಾಕೂಟ 2012ರಲ್ಲಿ ನವದೆಹಲಿಯಲ್ಲಿ ನಡೆದಿತ್ತು. ದೆಹಲಿ ವಿಧಾನಸಭೆ  ಚುನಾವಣೆಯ ಕಾರಣ ಕೂಟವನ್ನು ಮುಂದೂಡ ಲಾಗಿತ್ತು. 2012ರ ಡಿಸೆಂಬರ್‌ನಿಂದ 2014ರ ಫೆಬ್ರುವರಿಯವರೆಗೆ ಅಂತರರಾಷ್ಟ್ರೀಯ ಒಲಿಂಪಿಕ್‌ ಸಮಿತಿಯು ಭಾರತ ಒಲಿಂಪಿಕ್‌ ಸಂಸ್ಥೆಯನ್ನು ಅಮಾನತಿ ನಲ್ಲಿಟ್ಟಿತ್ತು. ಹೀಗಾಗಿ ಕೂಟ ನಡೆದಿರಲ್ಲ.

ಇತ್ತೀಚೆಗೆ ಐಒಸಿಯು ಐಒಎ ಮೇಲಿನ ಅಮಾನತು ತೆರವುಗೊಳಿಸಿದ ಕಾರಣ ಕೂಟ ಆಯೋಜನೆಯ ಹಾದಿ ಸುಗಮಗೊಂಡಿದೆ. 2010ರಲ್ಲಿ ಬಾಂಗ್ಲಾದೇಶದಲ್ಲಿ ನಡೆದಿದ್ದ ಕೂಟದಲ್ಲಿ ಭಾರತ 90 ಚಿನ್ನ ಸೇರಿದಂತೆ ಒಟ್ಟು 175 ಪದಕಗಳಿಗೆ ಜಯಿಸಿತ್ತು. ಈ ಬಾರಿ ಕೂಟ ತವರಿನಲ್ಲಿ ನಡೆಯುತ್ತಿರುವ ಕಾರಣ ಆತಿಥೇಯ ಸ್ಪರ್ಧಿಗಳು ಇನ್ನೂ ಹೆಚ್ಚಿನ ಪದಕ ಬೇಟೆಯಾಡಬಹುದೆಂಬ ನಿರೀಕ್ಷೆ ಗರಿಗೆದರಿದೆ. 

ಈ ಬಾರಿಯ ಕೂಟದಲ್ಲಿ ಭಾಗ ವಹಿಸುವ ಅಥ್ಲೀಟ್‌ಗಳಿಗೆ ತಲಾ 228 ಚಿನ್ನ ಮತ್ತು ಬೆಳ್ಳಿ ಹಾಗೂ 308 ಕಂಚಿನ ಪದಕಗಳನ್ನು ಗೆಲ್ಲುವ ಅವಕಾಶ ಇದೆ. ಕೂಟದಲ್ಲಿ ಸೇರಿಸಲಾಗಿರುವ ಎಲ್ಲಾ ವಿಭಾಗಗಳಲ್ಲಿ ಪುರುಷರಂತೆ  ಮಹಿಳೆ ಯರಿಗೂ ಪಾಲ್ಗೊಳ್ಳುವ ಅವಕಾಶ ಕೊಡಲಾಗಿರುವುದು ಈ ಬಾರಿಯ ಕೂಟದ ವಿಶೇಷ.

ಹಿಂದಿನ ಎಲ್ಲಾ ಆವೃತ್ತಿಗಳಲ್ಲಿಯೂ ಹೆಚ್ಚು ಪದಕ ಗೆದ್ದ ದಾಖಲೆ ಭಾರತದ ಹೆಸರಿನಲ್ಲಿದೆ. ಹೀಗಾಗಿ ಈ ಬಾರಿ 254 ಮಹಿಳಾ ಸ್ಪರ್ಧಿಗಳು ಸೇರಿದಂತೆ 521 ಕ್ರೀಡಾಪಟುಗಳನ್ನು  ಕಣಕ್ಕಿಳಿಸಲು ಭಾರತ ಕಣಕ್ಕಿಳಿಸಲಿದೆ.  ನೇಪಾಳ ಮತ್ತು ಬಾಂಗ್ಲಾದೇಶ ದಿಂದ ಕ್ರಮವಾಗಿ 381 ಮತ್ತು 370 ಕ್ರೀಡಾಪಟುಗಳು ಭಾಗವಹಿಸಲಿದ್ದಾರೆ. ಪಾಕಿಸ್ತಾನ 346 ಅಥ್ಲೀಟ್‌ಗಳ ತಂಡವನ್ನು ಕಣಕ್ಕಿಳಿಸಿದೆ.

16 ಸ್ಪರ್ಧೆಗಳಿಗೆ ವೇದಿಕೆ: ಅಥ್ಲೆಟಿಕ್ಸ್‌, ಬ್ಯಾಸ್ಕೆಟ್‌ಬಾಲ್‌, ಸೈಕ್ಲಿಂಗ್‌, ಫುಟ್‌ ಬಾಲ್‌, ಹ್ಯಾಂಡ್‌ಬಾಲ್‌, ಹಾಕಿ, ಕಬಡ್ಡಿ, ಕೊಕ್ಕೊ, ಶೂಟಿಂಗ್‌, ಸ್ಕ್ವಾಷ್‌, ಈಜು, ಟೆನಿಸ್‌, ಟ್ರಯಥ್ಲಾನ್‌, ವಾಲಿಬಾಲ್‌, ವೇಟ್‌ ಲಿಫ್ಟಿಂಗ್‌, ಕುಸ್ತಿ ಮತ್ತು ಪುರುಷರ ವಿಭಾಗದ ಫುಟ್‌ಬಾಲ್‌ ಸ್ಪರ್ಧೆಗಳಿಗೆ ಗುವಾಹಟಿ ವೇದಿಕೆ ಕಲ್ಪಿಸಲಿದೆ. ಆರ್ಚರಿ, ಬ್ಯಾಡ್ಮಿಂಟನ್‌, ಬಾಕ್ಸಿಂಗ್‌, ಜೂಡೊ, ಟೇಬಲ್‌ ಟೆನಿಸ್‌, ಟೇಕ್ವಾಂಡೊ, ವುಶು ಮತ್ತು ಮಹಿಳೆ ಯರ ಫುಟ್‌ಬಾಲ್‌ ಸ್ಪರ್ಧೆಗಳು ಶಿಲ್ಲಾಂಗ್‌ನಲ್ಲಿ ಜರುಗಲಿವೆ.

ಸತ್ವ ಪರೀಕ್ಷೆ: ಒಲಿಂಪಿಯನ್‌ಗಳಾದ ಬಾಕ್ಸರ್‌ ಮೇರಿ ಕೋಮ್‌, ಶೂಟರ್‌ ಗಗನ್‌ ನಾರಂಗ್‌ ಮತ್ತು ಬ್ಯಾಡ್ಮಿಂಟನ್‌ ಆಟಗಾರ್ತಿ ಸೈನಾ ನೆಹ್ವಾಲ್‌ ಅವರು ಈ ಕೂಟದಲ್ಲಿ ಭಾರತದ ಸವಾಲು ಮುನ್ನಡೆಸಲಿದ್ದಾರೆ. ರಿಯೊ ಒಲಿಂಪಿಕ್ಸ್‌ಗೆ ಆರು ತಿಂಗಳು ಬಾಕಿ ಉಳಿದಿರುವುದಿಂದ ಮಹತ್ವದ ಕೂಟಕ್ಕೆ ಸಜ್ಜಾಗಲು ಈ ಇವರೆಲ್ಲರಿಗೂ ಈ ಕೂಟ ವೇದಿಕೆ ಎನಿಸಿದೆ.

ದಕ್ಷಿಣ ಏಷ್ಯಾ ರಾಷ್ಟ್ರಗಳಿಗೆ ಹೋಲಿಸಿದರೆ ಆರ್ಚರಿ, ಬ್ಯಾಡ್ಮಿಂಟನ್‌, ಬಾಕ್ಸಿಂಗ್‌, ಶೂಟಿಂಗ್‌ ಮತ್ತು ಕುಸ್ತಿ ವಿಭಾಗಗಳಲ್ಲಿ ಭಾರತ ಬಲಿಷ್ಠವಾಗಿದೆ. ಹೀಗಾಗಿ ಈ ಸ್ಪರ್ಧೆಗಳಲ್ಲಿ ಆತಿಥೇಯ ರಾಷ್ಟ್ರಕ್ಕೆ ಪದಕ ಬಹುತೇಕ ನಿಶ್ಚಿತ ಎಂದೇ ಭಾವಿಸಲಾಗಿದೆ.

ಪುರುಷರ ವಿಭಾಗದ ಹಾಕಿಯಲ್ಲಿ ಪಾಕಿಸ್ತಾನ ತಂಡ ಹ್ಯಾಟ್ರಿಕ್‌ ಸಾಧನೆಯ ಕನಸು ಕಾಣುತ್ತಿದೆ. ಹಿಂದಿನ ಎರಡು ಆವೃತ್ತಿಗಳಲ್ಲಿ ಸತತವಾಗಿ ಪದಕ ಗೆದ್ದಿರುವ ಈ ತಂಡಕ್ಕೆ ಭಾರತದಿಂದ ಪ್ರಬಲ ಪೈಪೋಟಿ ಎದುರಾಗುವ ಸಾಧ್ಯತೆ ಇದೆ. ಹಾಕಿ ಇಂಡಿಯಾ ಲೀಗ್‌ ಟೂರ್ನಿ ನಡೆಯುತ್ತಿರುವ ಕಾರಣ ಭಾರತದ ಪ್ರಮುಖ ಆಟಗಾರರು ಈ ಕೂಟದಲ್ಲಿ ಭಾಗವಹಿಸುತ್ತಿಲ್ಲ. ಇದು ಆತಿಥೇಯ ತಂಡಕ್ಕೆ ಅಲ್ಪ ಹಿನ್ನಡೆಯಾಗಿ ಪರಿಣಮಿಸಿದೆ.

ವನಿತೆಯರ ಮೇಲೆ ಭರವಸೆ: 36 ವರ್ಷಗಳ ಬಳಿಕ ಒಲಿಂಪಿಕ್ಸ್‌ ಕೂಟದಲ್ಲಿ ಪಾಲ್ಗೊಳ್ಳಲು ಅರ್ಹತೆ ಗಳಿಸಿರುವ ಭಾರತ ಮಹಿಳಾ ತಂಡ ಕೂಟದಲ್ಲಿ ಚಿನ್ನ ಗೆಲ್ಲುವ ನೆಚ್ಚಿನ ತಂಡವೆಂಬ ಹಣೆಪಟ್ಟಿ ಯೊಂದಿಗೆ ತನ್ನ ಅಭಿಯಾನ ಆರಂಭಿ ಸಲಿದೆ. 

ಕಬಡ್ಡಿಯಲ್ಲಿ ಚಿನ್ನದ ಪಟ್ಟು: ಪುರುಷರ ಮತ್ತು ಮಹಿಳೆಯರ ಕಬಡ್ಡಿ ಸ್ಪರ್ಧೆಗಳಲ್ಲಿ ಭಾರತಕ್ಕೆ ಚಿನ್ನ ಗೆಲ್ಲುವ ನೆಚ್ಚಿನ ತಂಡವೆನಿಸಿದೆ. ಹಿಂದಿನ ಆವೃತ್ತಿಯಲ್ಲಿ ಭಾರತದ ತಂಡಗಳಿಂದ ಚಿನ್ನದ ಸಾಧನೆ ಮೂಡಿಬಂದಿರುವುದರಿಂದ ಭರವಸೆ ಹೆಚ್ಚಿದೆ. ಇರಾನ್‌ ಎದುರು ಸರಣಿ ಆಡಿ ಇಲ್ಲಿಗೆ ಬಂದಿರುವ ಪಾಕಿಸ್ತಾನ ತಂಡ ಕೂಡ ಚಿನ್ನ ಗೆಲ್ಲುವ ಸಾಮರ್ಥ್ಯ ಹೊಂದಿದೆ. ಹೀಗಾಗಿ ಎರಡೂ ರಾಷ್ಟ್ರ ತಂಡಗಳ ನಡುವೆ ನೇರ ಪೈಪೋಟಿ ಏರ್ಪಟ್ಟಿದೆ.

ಸ್ಕ್ವಾಷ್‌ನಲ್ಲಿ ಚಿಗುರಿದ ಆಸೆ: ಸ್ಕ್ವಾಷ್‌ ಸ್ಪರ್ಧೆಯಲ್ಲಿ ಈ ಬಾರಿ ಭಾರತದ ಬಲಿಷ್ಠ ತಂಡಗಳು ಕಣಕ್ಕಿಳಿಯುತ್ತಿವೆ. ಅನುಭವಿ ಗಳಾದ ಸೌರವ್‌ ಘೋಷಾಲ್‌, ಹರೀಂದರ್ ಪಾಲ್‌ ಪುರುಷರ ತಂಡದ ಶಕ್ತಿ ಎನಿಸಿದ್ದಾರೆ. ಮಹಿಳಾ ವಿಭಾಗದಲ್ಲಿ  ಜೋಷ್ನಾ ಚಿಣ್ಣಪ್ಪ  ಮಿಂಚುವ ತವಕದಲ್ಲಿದ್ದಾರೆ.  ಹೀಗಾಗಿ ಈ ಬಾರಿ ಪಾಕಿಸ್ತಾನದ ಪ್ರಾಬಲ್ಯಕ್ಕೆ ಕಡಿವಾಣ ಬೀಳುವ ಸಾಧ್ಯತೆ ಇದೆ.

ಬಾಕ್ಸಿಂಗ್‌ ಬಲ: ಬಾಕ್ಸಿಂಗ್‌ನಲ್ಲಿ ಭಾರತದ ಸ್ಪರ್ಧಿಗಳು ಚಿನ್ನಕ್ಕೆ ಪಂಚ್‌ ಮಾಡುವ ವಿಶ್ವಾಸ ಇದೆ. ಮಹಿಳೆಯರ ವಿಭಾಗದಲ್ಲಿ ಮಣಿಪುರದ ಮೇರಿ ಕೋಮ್‌ ಮತ್ತು  ಎಲ್‌. ಸರಿತಾ ದೇವಿ  ಉತ್ತಮ ಲಯದಲ್ಲಿದ್ದಾರೆ.  ಪುರುಷರ ವಿಭಾಗದಲ್ಲಿ ಎಲ್‌. ದೇವೆಂದ್ರೊ ಸಿಂಗ್‌ ಮತ್ತು ಶಿವ ಥಾಪಾ ಅವರ ಮೇಲೆ ನಿರೀಕ್ಷೆಯ ಭಾರ ಬಿದ್ದಿದೆ. ಪಾಕಿಸ್ತಾನ ತಂಡ ಇದೇ ಮೊದಲ ಬಾರಿಗೆ ಮಹಿಳಾ ಬಾಕ್ಸಿಂಗ್‌ ಸ್ಪರ್ಧಿಗಳನ್ನು ಕಣಕ್ಕಿಳಿ ಸಿರುವುದು ಕುತೂಹಲ ಕಾರಣವಾಗಿದೆ.

ಬ್ಯಾಸ್ಕೆಟ್‌ಬಾಲ್‌ ಸ್ಪರ್ಧೆ ಅನುಮಾನ
ಅಂತರರಾಷ್ಟ್ರೀಯ ಬ್ಯಾಸ್ಕೆಟ್‌ಬಾಲ್‌ ಫೆಡರೇಷನ್‌ (ಫಿಬಾ) ಮಾನ್ಯತೆ ನಿರಾಕರಿಸಿರುವ ಹಿನ್ನೆಲೆಯಲ್ಲಿ ಕೂಟದಲ್ಲಿ ಬ್ಯಾಸ್ಕೆಟ್‌ಬಾಲ್‌ ಸ್ಪರ್ಧೆಗಳು ನಡೆ ಯುವುದು ಅನುಮಾನವಾಗಿದೆ. ಈ ಸ್ಪರ್ಧೆಗಳು ಫೆಬ್ರುವರಿ 11 ರಿಂದ 16ರವರೆಗೆ ನಬಿನ್‌ ಚಂದ್ರ ಬೊರ್ದೊಲೊಯಿ ಕ್ರೀಡಾಂಗಣದಲ್ಲಿ ಆಯೋಜನೆಯಾಗಿದ್ದವು.

₹ 150 ಕೋಟಿ ಬಜೆಟ್‌
ಕೇಂದ್ರ ಸರ್ಕಾರ ಕ್ರೀಡಾಕೂಟದ ಆಯೋಜನೆಗೆ ಒಟ್ಟು ₹ 150 ಕೋಟಿ ಬಿಡುಗಡೆ ಮಾಡಿದೆ. ಈ ಪೈಕಿ ಭದ್ರತೆಗಾಗಿಯೇ ₹ 60 ಕೋಟಿ ಮೀಸಲಿಡಲಾಗಿದೆ.

ಕರ್ನಾಟಕದ ಸವಾಲು
ಈ ಬಾರಿಯ ಕೂಟದಲ್ಲಿ ರಾಜ್ಯದ ಸ್ಪರ್ಧಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುತ್ತಿದ್ದಾರೆ. ಬ್ಯಾಡ್ಮಿಂಟನ್‌ನಲ್ಲಿ ಅಶ್ವಿನಿ ಪೊನ್ನಪ್ಪ, ಕಬಡ್ಡಿಯಲ್ಲಿ ತೇಜಸ್ವಿನಿ ಬಾಯಿ, ಅಥ್ಲೆಟಿಕ್ಸ್‌ನಲ್ಲಿ ಎಂ.ಆರ್‌. ಪೂವಮ್ಮ  ಮತ್ತು ಹಾಕಿಯಲ್ಲಿ ಎಂ.ಎನ್‌. ಪೊನ್ನಮ್ಮ, ಡಿಫೆಂಡರ್ ಎ.ಬಿ. ಚೀಯಣ್ಣ, ಮಿಡ್‌ಫೀಲ್ಡರ್‌ ಪಿ. ಪ್ರಧಾನ್‌ ಸೋಮಣ್ಣ ಮತ್ತು ಫಾರ್ವರ್ಡ್‌್ ಆಟಗಾರ ಪಿ.ಎಲ್‌. ತಿಮ್ಮಣ್ಣ  ಅವರು ಕೂಟದಲ್ಲಿ ಭಾಗವಹಿಸುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT