ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಪ್ಪಾಯಿ ಮಧ್ಯೆ ಚೆಂಡು ಹೂ

Last Updated 23 ಜನವರಿ 2012, 19:30 IST
ಅಕ್ಷರ ಗಾತ್ರ

ಈ ಜಮೀನಿನ ಹತ್ತಿರ ನಿಂತ ನೋಡಿದರೆ ಎಂಥವರಿಗೂ ಆಶ್ಚರ್ಯವಾಗುತ್ತದೆ. `ಅಬ್ಬಾ! ಕಲ್ಲು ಗುಡ್ಡದಿಂದ ತುಂಬಿದ ಇದು ಎಂಥ ಜಮೀನು, ಇದರಲ್ಲಿಯೂ ಬೇಸಾಯ ಮಾಡಿ ಜೀವನ ಸಾಗಿಸುತ್ತಾರಾ~ ಅನಿಸುತ್ತದೆ. ರಾಯಚೂರು ಜಿಲ್ಲೆ ಲಿಂಗಸುಗೂರು ತಾಲ್ಲೂಕು ಸಂತೆ ಕಲ್ಲೂರ ಗ್ರಾಮದ ರೈತ ಮಹಿಳೆ ಚಂದ್ರಮ್ಮ ಸೋಮಶೇಖರ ಗಡೇದ ಅವರು ಇಂಥ ಜಮೀನನ್ನು ತಮ್ಮ ಕಠಿಣ ಶ್ರಮದಿಂದ ಫಲವತ್ತಾದ ಭೂಮಿಯಾಗಿ ಪರಿವರ್ತಿಸಿದ್ದಾರೆ.

ಕೃಷಿಯಲ್ಲಿ ಸದಾ ಏನಾದರೂ ಪ್ರಯೋಗ, ಹೊಸದನ್ನು ಮಾಡುವ ಕಾಯಕ ಇವರದು. ಈ ವರ್ಷ 6 ಎಕರೆ ಪ್ರದೇಶದಲ್ಲಿ ತಲಾ 7 ಅಡಿ ಅಂತರ ಕೊಟ್ಟು ಪಪ್ಪಾಯಿ ಸಸಿ ಹಾಕಿದ್ದಾರೆ. ಇವಕ್ಕೆಲ್ಲ ಸಾವಯವದ್ದೇ ತಿಂಡಿ-ಊಟ.

ಒಂದು ಸಲ ಹೀಗೆ ಗಂಡನ ಜತೆ ಚರ್ಚೆ ಮಾಡುತ್ತ, `ಪಪ್ಪಾಯಿ ಬೆಳವಣಿಗೆ, ಫಲ ನಿಧಾನ. ಅಲ್ಲಿ ವರೆಗೆ ಇದರ ನಡುವೆ ಏನಾದರೂ ಅಂತರ ಬೆಳೆ ಬೆಳೆಯಬಹುದಲ್ಲ~ ಎಂದು ಆಲೋಚಿಸಿದರು. ಹೇಗಿದ್ದರೂ ದೀಪಾವಳಿ ಹಬ್ಬ ಮತ್ತು ಕಾರ್ತಿಕ ಮಾಸದಲ್ಲಿ ಚೆಂಡು ಹೂಗಳಿಗೆ ಬೇಡಿಕೆ ಇರುತ್ತದೆ ಎಂದು ಊಹಿಸಿ ಚೆಂಡು ಹೂ ಬೆಳೆಯಲು ಮುಂದಾದರು.

ಸುಮಾರು 4 ಕಿಲೊ ಹೂವಿನ ಬೀಜಗಳನ್ನು (ಖಾರ, ಪಿರಕಿ  ಮತ್ತು ಮುದ್ದಿ ಚೆಂಡು ಹೂ ತಳಿ) ಬೆಂಗಳೂರಿನಿಂದ ತರಿಸಿ ಸಸಿಮಡಿಗೆ ಹಾಕಿದರು. ನಂತರ ಸಸಿಗಳನ್ನು ಪಪ್ಪಾಯಿ ಗಿಡಗಳ ಮಧ್ಯದ ಜಾಗದಲ್ಲಿ ನಾಟಿ ಮಾಡಿದರು.  ಇವಕ್ಕೆ ಪ್ರತ್ಯೇಕ ಗೊಬ್ಬರವಾಗಲಿ, ನೀರಾಗಲಿ, ಕಳೆ ನಿಯಂತ್ರಣವಾಗಲೀ ಮಾಡಲಿಲ್ಲ. ಪಪ್ಪಾಯಿ ಗಿಡಗಳಿಗೆ ಕೊಡುತ್ತಿದ್ದ ಗಂಜಲ, ಸಗಣಿ ರಾಡಿ, ಸಾವಯವ ಗೊಬ್ಬರಗಳೇ ಅವುಗಳಿಗೂ ಉಪಯೋಗವಾಗುತ್ತಿತ್ತು. ಮನೆಯವರೇ ಸೇರಿ ಹೂ ಕೊಯ್ದರು.

ಅಂದರೆ ಹೆಚ್ಚು ಮೇಲು ಖರ್ಚಿಲ್ಲದೇ ಚೆಂಡು ಹೂಗಳನ್ನು ಬೆಳೆದರು (ಖರ್ಚಾಗಿದ್ದು ಬೀಜಕ್ಕೆ ರೂ 320 ಮತ್ತು ಸಾಗಾಣಿಕೆಗಾಗಿ ರೂ 1000 ಒಟ್ಟು 1320 ರೂಪಾಯಿ ಮಾತ್ರ).

ದೀಪಾವಳಿ ಹಬ್ಬದಲ್ಲಿ 2 ದಿನ ಒಟ್ಟು 12 ಕ್ವಿಂಟಾಲ್ ಚೆಂಡು ಹೂಗಳನ್ನು ಮಾರಿ 38 ಸಾವಿರ ರೂ ನಿವ್ವಳ ಲಾಭ ಸಂಪಾದಿಸಿದರು. ಅವರ ಹೊಲದಲ್ಲಿ ಈಗಲೂ ಚೆಂಡು ಹೂಗಳಿದ್ದು, ಅದನ್ನು ಮಾರಾಟ ಮಾಡುತ್ತಿದ್ದಾರೆ. ಆದರೆ ಹಬ್ಬದ ಸೀಸನ್‌ನಷ್ಟು ಬೇಡಿಕೆ ಇಲ್ಲ.

ಇಲ್ಲಿಯವರೆಗೆ ಹೂವಿನಿಂದಲೇ ಒಟ್ಟು 50 ಸಾವಿರ ರೂಪಾಯಿ ಸಂಪಾದಿಸಿದ್ದಾರೆ. ಸುತ್ತಮುತ್ತಲ ಹೊಲದ ರೈತರಿಗೆ ಚೆಂಡು ಹೂಗಳನ್ನು ಪುಕ್ಕಟೆಯಾಗಿ ವಿತರಿಸಿದ್ದಾರೆ. ಜೊತೆಗೆ ಮುಂದಾಲೋಚನೆಯಿಂದ ಕೃಷಿ ಮಾಡಿದರೆ ಏನನ್ನು ಬೇಕಾದರೂ ಸಾಧಿಸಬಹುದು ಎಂದು ತೋರಿಸಿ ಕೊಟ್ಟಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT