ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪರವಾನಗಿಗಾಗಿ ಆಟೊ ಚಾಲಕರ ಪ್ರತಿಭಟನೆ

Last Updated 11 ಫೆಬ್ರುವರಿ 2011, 9:05 IST
ಅಕ್ಷರ ಗಾತ್ರ

ಚಿಕ್ಕಮಗಳೂರು: ಜಿಲ್ಲಾಡಳಿತ ಇತ್ತೀಚೆಗೆ ಹೊರಡಿಸಿರುವ ರಹದಾರಿ ಆದೇಶ ವಿರೋಧಿಸಿ ಜಿಲ್ಲೆಯ ವಿವಿಧ ಪಟ್ಟಣಗಳಲ್ಲಿ ಗುರುವಾರ ಆಟೊ ಚಾಲಕರ ಮತ್ತು ಮಾಲೀಕರ ಸಂಘದ ವತಿಯಿಂದ ಪ್ರತಿಭಟನೆ ನಡೆಯಿತು. ಆಲ್ದೂರು, ಮೂಡಿಗೆರೆ, ಕಳಸದಲ್ಲಿ ಆಟೋಗಳು ಬೀದಿಗಿಳಿಯದ ಕಾರಣ ಪ್ರಯಾಣಿಕರು ಪರದಾಡುವಂತಾಯಿತು.

ಆಲ್ದೂರು ವರದಿ:  ಚಾಲನಾ ವ್ಯಾಪ್ತಿಯ ಮಿತಿಯನ್ನು ಕಡಿಮೆ ಮಾಡಿರುವುದನ್ನು ವಿರೋಧಿಸಿ ಇಲ್ಲಿನ ಗೆಳೆಯರ ಬಳಗ ಆಟೊ ಚಾಲಕರ ಮತ್ತು ಮಾಲಿಕರ ಸಂಘದ ಸದಸ್ಯರು ಪಟ್ಟಣದಲ್ಲಿ  ಗುರುವಾರ ಪ್ರತಿಭಟನೆ ನಡೆಸಿದರು.ಆಟೊ ಚಾಲಕರ ಮತ್ತು ಮಾಲೀಕರ ಸಂಘದ ಅಧ್ಯಕ್ಷ, ರಮೇಶ್, ಉಪಾಧ್ಯಕ್ಷ ನೂರ್ ಮಹಮ್ಮದ್, ಕಾರ್ಯದರ್ಶಿ ಧರ್ಮೇಶ್, ಜಯಕರ್ನಾಟಕ ಸಂಘಟನೆಯ ಜಿಲ್ಲಾದ್ಯಕ್ಷ ಅನಿಲ್ ಕುಮಾರ್, ಷಹಬುದ್ದೀನ್ ನೇತೃತ್ವ ವಹಿಸಿದ್ದರು.

ಈ ಸಂದರ್ಭ ಮಾತನಾಡಿದ ಸಂಘದ ಅಧ್ಯಕ್ಷ ರಮೇಶ್, ಜಿಲ್ಲಾಡಳಿತ ಈ ಹಿಂದೆ ಇದ್ದ 8ಕಿ.ಮೀ. ಆಟೋ ಚಾಲನಾ ವ್ಯಾಪ್ತಿಯ ಪರ್ಮಿಟ್ ಅನ್ನು 5 ಕಿ.ಮೀ.ಗೆ ಇಳಿಸಿರುವುದರಿಂದ ಆಟೊ ಚಾಲಕರ ಹೊಟ್ಟೆ ಮೇಲೆ ಹೊಡೆದಂತಾಗಿದೆ ಎಂದರು. 

 ಬೇಡಿಕೆ ಮನವಿ ಪತ್ರವನ್ನು ಕಂದಾಯ ಅಧಿಕಾರಿ ಹೇಮಂತ್ ಅವರ ಮೂಲಕ ಜಿಲ್ಲಾಧಿಕಾರಿಗಳಿಗೆ ಸಲ್ಲಿಸಲಾಯಿತು. ಪ್ರತಿಭಟನೆಯಯಲ್ಲಿ ಆಟೋ ಚಾಲಕರೊಂದಿಗೆ ಸಾರ್ವಜನಿಕರು ಹಾಗೂ ವಿವಿಧ ಸಂಘ ಸಂಸ್ಥೆಗಳ ಮುಖಂಡರು ಬೆಂಬಲ ಸೂಚಿಸಿ ಭಾಗವಹಿಸಿದ್ದರು. ಪ್ರತಿಭಟನೆಯ ಹಿನ್ನಲೆಯಲ್ಲಿ ಪಟ್ಟಣದಲ್ಲಿ ಆಟೋ ಸೇವೆ ನಿಲ್ಲಿಸಲಾಗಿತ್ತು.

ಕಳಸ ವರದಿ: ಪಟ್ಟಣದಲ್ಲಿ ಗುರುವಾರ ದಿನವಿಡೀ ಆಟೋ ಸೇವೆ ಸ್ಥಗಿತಗೊಳಿಸಿ ಚಾಲಕರು ಪ್ರತಿಭಟನೆ ನಡೆಸಿದರು.ಕಳಸೇಶ್ವರ ಸ್ವಾಮಿ ದೇವಸ್ಥಾನದಿಂದ ಆರಂಭಗೊಂಡ ಆಟೊ ಮೆರವಣಿಗೆ ಮುಖ್ಯ ರಸ್ತೆ, ಮಹಾವೀರ ರಸ್ತೆ ಮತ್ತು ಕೆ.ಎಂ. ರಸ್ತೆಯ ಮೂಲಕ ನಾಡ ಕಚೇರಿ ತಲುಪಿತು. ಖಾಸಗಿ ಬಸ್‌ಗಳ ಲಾಬಿಗೆ ಮಣಿದು ಜಿಲ್ಲಾಡಳಿತವು ಆಟೊಗಳಿಗೆ ಆಯಾ ಗ್ರಾಮದ 5 ಕಿ.ಮೀ. ವ್ಯಾಪ್ತಿಯಲ್ಲಿ ಮಾತ್ರ ಸಂಚರಿಸಲು ಅನುಮತಿ ನೀಡಿದೆ ಎಂದು ಚಾಲಕರು ಆಕ್ರೋಶ ವ್ಯಕ್ತಪಡಿಸಿದರು.

ಕಳಸ, ಸಂಸೆ, ಬಾಳೆಹೊಳೆ, ಹೊರನಾಡು, ಹಿರೇಬೈಲು, ಕುದುರೆಮುಖದ ಆಟೊ ಚಾಲಕರು ಕಪ್ಪು ಪಟ್ಟಿ ಧರಸಿ ಮೆರವಣಿಗೆಯಲ್ಲಿ ಭಾಗವಹಿಸಿದರು. ಕೆ.ಎಂ.ರಸ್ತೆಯಲ್ಲಿ ಖಾಸಗಿ ಬಸ್ ಸಿಬ್ಬಂದಿ ಮತ್ತು ಆಟೋ ಸಂಘದ ಅಧ್ಯಕ್ಷ ಜಗದೀಶ್ ನಡುವೆ ಮಾತಿನ ಚಕಮಕಿಯೂ ನಡೆಯಿತು. ಮೆರವಣಿಗೆಯ ಉದ್ದಕ್ಕೂ ಆಟೊ ಚಾಲಕರು ಅಲ್ಲಲ್ಲಿ ಖಾಸಗಿ ಬಸ್‌ಗಳನ್ನು ಅಡ್ಡಗಟ್ಟಿ ಕೋಪ ಪ್ರದರ್ಶಿಸಿದರು.

ನಾಡಕಚೇರಿ ಬಳಿಗೆ ತೆರಳಿದ ಮೆರವಣಿಗೆ ಅಲ್ಲಿ ಮಾನವ ಸರಪಳಿ ನಿರ್ಮಿಸಿ ಕೆಲ ಕಾಲ ರಸ್ತೆತಡೆಯನ್ನೂ ನಡೆಸಿತು. ಆನಂತರ ಕಾಲ್ನಡಿಗೆಯಲ್ಲಿ ಸಾಗಿದ ಆಟೊ ಚಾಲಕರು ಮತ್ತೊಮ್ಮೆ ಪ್ರತಿಭಟನಾ ಮೆರವಣಿಯನ್ನು ನಡೆಸಿದರು.

ನಾಡಕಚೇರಿಯ ಅಧಿಕಾರಿಗಳ ಮೂಲಕ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು. ತಾಲ್ಲೂಕು ರಹದಾರಿ ನೀಡುವವರೆಗೂ ಹೋರಾಟ ನಡೆಸುವುದಾಗಿ ಮನವಿಯಲ್ಲಿ ಎಚ್ಚರಿಸಲಾಗಿದೆ. ಸಿಪಿಐ ಮುಖಂಡ ಗೋಪಾಲ ಶೆಟ್ಟಿ ಮತ್ತು ಮಲೆನಾಡು ಹಿತರಕ್ಷಣಾ ವೇದಿಕೆಯ ಸಂಚಾಲಕ ಕೆ.ಎಲ್.ವಾಸು ಆಟೋ ಚಾಲಕರ ಹೋರಾಟಕ್ಕೆ ಬೆಂಬಲ ಸೂಚಿಸಿ ಮೆರವಣಿಗೆಯಲ್ಲಿ ಭಾಗವಹಿಸಿದರು.

ಮೂಡಿಗೆರೆ ವರದಿ: ಜಿಲ್ಲಾಡಳಿತ ಇತ್ತೀಚೆಗೆ ನೀಡಿರುವ ಆದೇಶ ಹಿಂದಕ್ಕೆ ಪಡೆಯುವಂತೆ ಆಗ್ರಹಿಸಿ ತಾಲ್ಲೂಕಿನ ಆಟೊ ಚಾಲಕರು ಮತ್ತು ಮಾಲೀಕರ ಸಂಘದ ವತಿಯಿಂದ ಗುರುವಾರ ಪ್ರತಿಭಟನೆ ನಡೆಸಿದರು.ಮುಷ್ಕರದಿಂದಾಗಿ  ಶಾಲೆಗೆ ತೆರಳುವ ಮಕ್ಕಳು, ನೌಕರರು, ಕೂಲಿ ಕಾರ್ಮಿಕರು ಪರದಾಡುವಂತಾಯಿತು. ಗುರುವಾರ ಬೆಳಗ್ಗೆಯಿಂದ ಸಂಜೆಯವರೆಗೆ ಆಟೊ ಮುಷ್ಕರ ಮಾಡಿದ ಪರಿಣಾಮ ಪಟ್ಟಣದಲ್ಲಿ ವಾಹನ ಓಡಾಟ ವಿರಳವಾಗಿತ್ತು.

ಜಿಲ್ಲಾಡಳಿತ ಇತ್ತೀಚೆಗೆ ಹೊರಡಿಸಿರುವ ರಹದಾರಿ ಆದೇಶದಂತೆ, ಮೂಡಿಗೆರೆ ಪಟ್ಟಣದ ಆಟೊ ಚಾಲಕರು 15 ಕಿ.ಮೀ. ಒಳಗೆ  ಹಾಗೂ ಹೋಬಳಿ ಕೇಂದ್ರಗಳಲ್ಲಿ ಆಟೊ ಚಾಲಕರು 5 ಕಿ.ಮೀ. ಒಳಗೆ, ಪ್ರಯಾಣಿಕರನ್ನು ಕರೆದುಕೊಂಡು ಹೋಗುವಂತೆ ಮಾಡಿರುವ ಆದೇಶ ಹಿಂದಕ್ಕೆ ಪಡೆಯುವಂತೆ, ತಾಲ್ಲೂಕು ಆಟೊ ಚಾಲಕರ ಹಾಗೂ ಮಾಲೀಕರ ಸಂಘ ಅಧ್ಯಕ್ಷ ಕಿರಣ್, ಲೋಕವಳ್ಳಿ ರಮೇಶ್, ಕಾರ್ಯದರ್ಶಿ ಅಮರ್‌ನಾಥ್,ಒತ್ತಾಯಿಸಿದರು.

ಕೆಲವು ಪಟ್ಟಭದ್ರ ಹಿತಾಸಕ್ತಿಗಳ ಒತ್ತಡಕ್ಕೆ ಮಣಿದು ಆದೇಶಮಾಡಿರುವ ಅಧಿಕಾರಿಗಳು ತಕ್ಷಣ ಸಮಸ್ಯೆ ಪರಿಹಾರ ಸೂಚಿಸುವಂತೆ ಗೌಡಹಳ್ಳಿಪ್ರಸನ್ನ,ಕನ್ನಡ ಪರಹೋರಾಟಗಾರ ಹೊರಟ್ಟಿ ರಘು, ನಾಗೇಂದ್ರ ಆಗ್ರಹಿಸಿದರು.ಸಂಘದ ವತಿಯಿಂದ ಪ್ರವಾಸಿಮಂದಿರದಿಂದ ಪಟ್ಟಣದ ವಿವಿಧ ಭಾಗಗಳಲ್ಲಿ ಪ್ರತಿಭಟನಾ ಮೆರವಣಿಗೆ ಮಾಡಿ,ವಾಹನ ನಿಲ್ದಾಣದ ಬಳಿ ರಸ್ತೆ ತಡೆಮಾಡಿ ಸಭೆ ನಡೆಸಿದ ಆಟೊ ಚಾಲಕರು, ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ತಹಸೀಲ್ದಾರ್ ಶಿವೇಗೌಡ ರವರಿಗೆ ಮನವಿ ಸಲ್ಲಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT