ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪರಿವಾರ ಒಡೆಯುವ ಪ್ರಯತ್ನ ಫಲಿಸದು

Last Updated 23 ಜನವರಿ 2012, 8:10 IST
ಅಕ್ಷರ ಗಾತ್ರ

ಚಿಕ್ಕಮಗಳೂರು: ದೇಶದಲ್ಲಿ ಹಿಂದೂ ಸಮಾಜ ಬೆಳೆದಂತೆ ಸಂಘಟನೆಯೂ ಬೆಳೆಯುತ್ತಿದೆ. ಸಮಾಜದ ಹಿತ ಕಾಪಾಡುವ ದೃಷ್ಟಿಯಿಂದ ರಾಷ್ಟ್ರೀಯ ಸ್ವಯಂಸೇವಕ ಸಂಘ ದುಡಿಯುತ್ತಿದೆ. ಪರಿವಾರ ಒಡೆಯಬೇಕೆಂಬ ಹಲವರ ಪ್ರಯತ್ನ ಇಲ್ಲಿವರೆಗೆ ಸಫಲವಾಗಿಲ್ಲ ಎಂದು ಆರ್‌ಎಸ್‌ಎಸ್ ಹಿರಿಯ ಪ್ರಚಾರಕ ಸು.ರಾಮಣ್ಣ ತಿಳಿಸಿದರು.

ನಗರದ ಜಿಲ್ಲಾ ಆಟದ ಮೈದಾನದಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ವತಿಯಿಂದ ಭಾನುವಾರ ಹಮ್ಮಿಕೊಳ್ಳಲಾಗಿದ್ದ ವಿಜಯ ದುಂಧುಭಿ ಘೋಷ್ ಶಿಬಿರದ ಸಮಾರೋಪದಲ್ಲಿ ತರಬೇತಿ ಪಡೆದ ಕಾರ್ಯಕರ್ತರು ನಡೆಸಿಕೊಟ್ಟ ಪ್ರದರ್ಶನದ ಬಳಿಕ ಮಾತನಾಡಿ, ಪ್ರಧಾನಿಯಿಂದ ಹಿಡಿದು ಹಲವರು ಸಂಘವನ್ನು ಒಡೆಯುವ ಪ್ರಯತ್ನ ಮಾಡಿದ್ದಾರೆ ಎಂದರು.

ಹಿಂದೂ ಸಮಾಜದ ಒಳಿತಿಗಾಗಿ ಸಂಘ ಕಾರ್ಯನಿರ್ವಹಿಸುತ್ತಿದೆ. ಯಾವುದೇ ಪ್ರತಿಫಲ ಅಪೇಕ್ಷಿಸದೆ ದುಡಿಯುತ್ತಿರುವ ಆರ್‌ಎಸ್‌ಎಸ್ ಬಗ್ಗೆ ಲಘುವಾಗಿ ಮಾತನಾಡುವ ಹಲವು ಮಂದಿ ಇತರೆ ಸಂಘಟನೆಗಳಿಗೆ ಹೋಲಿಸುತ್ತಿದ್ದು, ಆದರೆ ಭಯೋತ್ಪಾದಕರಿಗೆ ಭಯ ಹುಟ್ಟಿಸುವ ಕೆಲಸ ಸಂಘ ಮಾಡುತ್ತಿದೆ ಎಂದು ದೂರಿದರು.

1926ರಲ್ಲಿ ಆರಂಭವಾದ ಸಂಘದಲ್ಲಿ ಅಂದು 2 ಬಗೆ ಘೋಷ್ ಇತ್ತು. ಕಾಲ ಬದಲಾದಂತೆ ಘೋಷ್‌ಗಳಲ್ಲೂ ಹಲವು ವಿಧಗಳು ಬಂದಿದೆ. ಸೇನೆಯ ಮಾದರಿಯಲ್ಲಿ ಶಿಸ್ತಿಗೆ ಹೆಮ್ಮರಾಗಿರುವ ಸಂಘದ ಕಾರ್ಯಕರ್ತರಿಗೆ ಘೋಷ್ ಹೇಳಿಕೊಡುವ ಶಿಬಿರ ಇದಾಗಿದೆ. ಕಳೆದ 6 ವರ್ಷಗಳ ಹಿಂದೆ ದೆಹಲಿಯಲ್ಲಿ ನಡೆದ ಘೋಷ್ ಉತ್ತಮವಾಗಿ ನಡೆದಿತ್ತು. ಅಂದು ಮೈದಾನದಲ್ಲಿ ಕಾರ್ಯಕರ್ತರು ನಡೆಸಿದಂತಹ ಘೋಷ್‌ನ ಧ್ವನಿ ಇನ್ನೂ ಸಹ ಸ್ಮೃತಿ ಪಟಲದಲ್ಲಿದೆ. ದೇಶದ ಯಾವುದೇ ಮೂಲೆಯಲ್ಲೂ ನಡೆಯುವ ಸಂಘದ ಕಾರ್ಯಕ್ರಮಕ್ಕೆ ಕಾರ್ಯಕರ್ತರು ತಪ್ಪದೇ ಭಾಗವಹಿಸಬೇಕು ಎಂದರು.

ಪ್ರಪಂಚದ ಯಾವುದೇ ಮೂಲೆಯಲ್ಲೂ ಸಂಘಕ್ಕೆ ಹೋಲಿಕೆಯಾಗುವಂತಹ ಮತ್ತೊಂದು ಸಂಘ ಇಲ್ಲ. ಸಂಘ ಯಾವುದೇ ರೀತಿಯಲ್ಲಿ ರಾಜಕೀಯ ಪಕ್ಷಗಳನ್ನು ನಿಯಂತ್ರಿಸುತ್ತಿಲ್ಲ. ಹಿಂದೂ ಸಮಾಜದ ಒಳಿತಿಗೆ ಬೇಕಾಗುವ ಕಾರ್ಯಕ್ರಮ ನಡೆಸುವುದೇ ಸಂಘದ ಧ್ಯೇಯ ಎಂದರು.

ನಗರದ ಕೃಷ್ಣ ರೀಜೆನ್ಸಿ ಮಾಲೀಕ ಆನಂದಕುಮಾರ್ ಶೆಟ್ಟಿ, ಜೈರಾಂ, ಶಾಸಕ ಸಿ.ಟಿ.ರವಿ. ಡಾ.ವಿಶ್ವನಾಥ್, ನಗರಸಭಾ ಅಧ್ಯಕ್ಷ ಪ್ರೇಂಕುಮಾರ್, ಸಿಡಿಎ ಅಧ್ಯಕ್ಷ ರಾಜಪ್ಪ, ತಾ.ಪಂ. ಅಧ್ಯಕ್ಷ ಕನಕರಾಜ್ ಇನ್ನಿತರರು ಇದ್ದರು.

ಆಕರ್ಷಕ ಘೋಷ್ ವಾದನ ಪಥಸಂಚಲನ
ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಶಿವಮೊಗ್ಗ ವಿಭಾಗದ ವತಿಯಿಂದ 10 ವರ್ಷಗಳ ಬಳಿಕ ನಗರದಲ್ಲಿ ಹಮ್ಮಿಕೊಳ್ಳಲಾಗಿದ್ದ ವಿಜಯ ದುಂದುಬಿ ಘೋಷ್ ಶಿಬಿರದ ಅಂಗವಾಗಿ ಭಾನುವಾರ ನಗರದಲ್ಲಿ ಸಂಘಪರಿವಾರದ ಕಾರ್ಯಕರ್ತರು ಆಕರ್ಷಕ ಘೋಷ್ ವಾದಕದ ಪಥಸಂಚಲನ ನಡೆಸಿದರು.

ನಗರದ ಎರಡು ಭಾಗದಿಂದ ಆರಂಭವಾದ ಪಥ ಸಂಚಲನ ನಗರದ ಚನ್ನಾಪುರ ವೃತ್ತ, ಭಾವಿ ವೃತ್ತ, ಕುವೆಂಪು ರಸ್ತೆ, ಕಣದಾಳ್ ರಸ್ತೆ, ಕೆಇಬಿ ಕ್ವಾಟ್ರಸ್, ತಿಲಕ್‌ಪಾರ್ಕ್, ಅರಳಿಮರ, ಓಂಕಾರೇಶ್ವರ ದೇವಸ್ಥಾನ, ಹನುಮಂತಪ್ಪ ವೃತ್ತ, ನೆಹರು ರಸ್ತೆ ಸೇರಿದಂತೆ ಪ್ರಮುಖ ಬೀದಿಯಲ್ಲಿ ಪಥ ಸಂಚಲನ ನಡೆಯಿತು.

ಆಜಾದ್ ಮೈದಾನದಲ್ಲಿ ಎರಡು ಕಡೆಗಳಿಂದ ಆಗಮಿಸಿದ ಮೆರವಣಿಗೆಗಳು ಸಮಾಗಮಗೊಂಡ ಸಂದರ್ಭ ವಿಶೇಷವಾಗಿತ್ತು. ಶಿವಮೊಗ್ಗ ವಿಭಾಗದ ವ್ಯಾಪ್ತಿಯಲ್ಲಿ ಬರುವ ಚಿಕ್ಕಮಗಳೂರು, ಶಿವಮೊಗ್ಗ, ದಾವಣಗೆರೆ ಭಾಗದಿಂದ ಆಗಮಿಸಿದ್ದ ಸುಮಾರು 500 ಹೆಚ್ಚು ಆರ್‌ಎಸ್‌ಎಸ್ ಕಾರ್ಯಕರ್ತರು ಭಾಗವಹಿಸಿದ್ದರು.
ಸಾರ್ವಜನಿಕರು  ಪ್ರಮುಖ ಬೀದಿಗಳಲ್ಲಿ ನಿಂತು ಪಥಸಂಚಲನದ ಅಪರೂಪದ ದೃಶ್ಯ ವೀಕ್ಷಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT