ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

`ಪರಿಸರ ಸ್ನೇಹಿ ಗಣಪತಿ' ಆಂದೋಲನ

ವಿವಿಧ ಸಂಸ್ಥೆಗಳಿಂದ ಪರಿಸರ ಸ್ನೇಹಿ ಗಣಪತಿ ಮಾರಾಟ
Last Updated 1 ಸೆಪ್ಟೆಂಬರ್ 2013, 20:17 IST
ಅಕ್ಷರ ಗಾತ್ರ

ಬೆಂಗಳೂರು: ವಿಘ್ನ ನಿವಾರಕ ಗಣಪತಿಯ ಸ್ವಾಗತಕ್ಕೆ ನಗರ ಸಜ್ಜಾಗಿದೆ. ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ, ಬಿಬಿಎಂಪಿ ಹಾಗೂ ನಗರದ ಸಮರ್ಪಣ ಸ್ವಯಂಸೇವಾ ಸಂಸ್ಥೆ ಜತೆಗೂಡಿ `ಪರಿಸರಸ್ನೇಹಿ ಗಣಪತಿಯ ಆಂದೋಲನ'ದ ಮೂಲಕ ಸಾರ್ವಜನಿಕರಿಗೆ ಅರಿವು ಮೂಡಿಸಲು ಮುಂದಾಗಿವೆ.`ಸಮರ್ಪಣ ಸಂಸ್ಥೆ'ಯು ಪರಿಸರ ಸ್ನೇಹಿ ಗಣಪತಿಯನ್ನು ತಯಾರಿಸಿ ಮನೆ-ಮನೆಗೆ ವಿತರಿಸುವ ಕಾರ್ಯ ಕೈಗೊಂಡಿದೆ.

ಆಂದೋಲನದ ಕುರಿತು ಮಾತನಾಡಿದ ಸಮರ್ಪಣ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಶಿವಕುಮಾರ್ ಹೊಸಮನಿ, `ಗಣಪತಿಯನ್ನು ವಿಘ್ನ ನಿವಾರಕನೆಂದು ಪೂಜಿಸಲಾಗುತ್ತದೆ. ಆದರೆ, ಅದೇ ವಿಘ್ನ ನಿವಾರಕನ ಹಬ್ಬ ಮುಗಿದ ಮೇಲೆ ನಗರದ ಎಲ್ಲ ಜಲಮೂಲಗಳು ಕಲುಷಿವಾಗುತ್ತವೆ. ಇದರಿಂದ, ಉಂಟಾಗುವ ಜಲಮಾಲಿನ್ಯದಿಂದ ಜಲಚರಗಳಷ್ಟೇ ಅಲ್ಲ ಮನುಷ್ಯರೂ ಬಾಧಿತರಾಗುತ್ತಾರೆ' ಎಂದು ಅಭಿಪ್ರಾಯಪಟ್ಟರು.

`ಪ್ರತಿ ಬಾರಿ ಗಣಪತಿ ಹಬ್ಬ ಬಂದಾಗಲೂ ಪರಿಸರಸ್ನೇಹಿಯಾಗಿ ಆಚರಿಸುವುದರ ಕುರಿತು ಚರ್ಚೆಗಳು ಮಾತ್ರ ನಡೆದಿವೆ. ಈ ಬಾರಿ `ಪರಿಸರ ಸ್ನೇಹಿ' ಗಣಪತಿಯ ಆಂದೋಲನವನ್ನೇ ಆರಂಭಿಸಲಾಗಿದೆ. ಸಂಸ್ಥೆಯು ಜೇಡಿಮಣ್ಣಿನಿಂದ ಪರಿಸರ ಸ್ನೇಹಿ ಗಣಪತಿಯನ್ನು ತಯಾರಿಸುತ್ತದೆ. ದೂರವಾಣಿ ಕರೆ ಮಾಡಿ ಗಣಪತಿ ಬೇಕೆಂದು ಹೇಳಿದವರ ಮನೆಗೆ ಹೋಗಿ ತಲುಪಿಸುವ ವ್ಯವಸ್ಥೆಯಿದೆ. ಸಂಪ್ರದಾಯದ ಪ್ರಕಾರವೇ ತೆಗೆದುಕೊಂಡು ಹೋಗುತ್ತೇವೆ ಎನ್ನುವವರು ಸಂಸ್ಥೆಗೆ ಬಂದು ಖರೀದಿ ಮಾಡಬಹುದು' ಎಂದರು.

`ಮಣ್ಣಿನಿಂದ ತಯಾರಿಸಿದ ಮೂರ್ತಿಗಳು ಹೆಚ್ಚು ಬಾಳಿಕೆ ಬರುವುದಿಲ್ಲ ಎಂಬ ಮಾತುಗಳು ಜನರಿಂದ ಕೇಳಿಬರುತ್ತಿವೆ. ಇದರಿಂದ, ಒಂದು ವಾರ ಮೊದಲೇ ಶುದ್ಧ ಜೇಡಿಮಣ್ಣಿನಿಂದ ಗಣಪತಿಯನ್ನು ತಯಾರಿಸಿ, ಅದನ್ನು ಪೂರ್ಣವಾಗಿ ಒಣಗಿಸಿದ ನಂತರವೇ ಸಾರ್ವಜನಿಕರಿಗೆ ನೀಡಲಾಗುವುದು. ಸುಮಾರು 25 ದಿನಗಳವರೆಗೂ ಯಾವುದೇ ರೀತಿಯ ಹಾನಿ ಮೂರ್ತಿಗೆ ಆಗುವುದಿಲ್ಲ' ಎಂದು ಸ್ಪಷ್ಟಪಡಿಸಿದರು.
`ನಮ್ಮ ಅಭಿಯಾನದಲ್ಲಿ ರಾಜಾಜಿನಗರದ ಹೊಂಬೇಗೌಡ ಕಾಲೇಜಿನ ವಿದ್ಯಾರ್ಥಿಗಳು, ಅನೇಕ ಸ್ವಯಂಸೇವಕರು ಕೈಗೂಡಿಸಿದ್ದಾರೆ. 5,000 ಗಣಪತಿಗಳನ್ನು ಮಾಡುವ ಇರಾದೆಯಿತ್ತು. ಆದರೆ, ಈಗ ಸದ್ಯ 2,500 ಗಣಪತಿಗಳನ್ನು ತಯಾರಿಸಿದ್ದೇವೆ. ದೂರವಾಣಿ ಕರೆ ಅವಲಂಬಿಸಿ ಗಣಪತಿಗಳನ್ನು ತಯಾರಿಸಿ ನೀಡುತ್ತೇವೆ' ಎಂದರು.

`ಚಿಕ್ಕದಾಗಿ ಆರಂಭಿಸಿದ್ದ ಸ್ಯಾಂಕಿ ಕೆರೆ ಸ್ವಚ್ಛತಾ ಆಂದೋಲನವು ಪರಿಸರಸ್ನೇಹಿ ಗಣಪತಿ ಆಂದೋಲನಕ್ಕೆ ಸ್ಫೂರ್ತಿಯಾಯಿತು. ಗಣಪತಿ ಹಬ್ಬವಾದ ನಂತರ ಸ್ಯಾಂಕಿ ಕೆರೆಯಲ್ಲಿನ ಮಾಲಿನ್ಯವು ಇಮ್ಮಡಿಗೊಂಡಿತ್ತು. ಸರ್ಕಾರ ಮತ್ತು ಬಿಬಿಎಂಪಿಯು ಕಲ್ಯಾಣಿಗಳನ್ನು ಸ್ಥಾಪಿಸಬೇಕು, ಪರಿಸರ ಸ್ನೇಹಿ ಗಣಪತಿಯನ್ನು ಬಳಸಬೇಕು ಎಂದು ಹೇಳುತ್ತ ಬಂದಿತ್ತು. ಆದರೆ, ಯಾವುದೂ ಜಾರಿಯಾಗಿಲ್ಲ. ಇದರಿಂದ, ಈ ವರ್ಷ ಪರಿಸರ ಸ್ನೇಹಿ ಗಣಪತಿಯ ಅಭಿಯಾನವನ್ನು ಆರಂಭಿಸಲಾಗಿದೆ' ಎಂದರು.

ಸಮರ್ಪಣ ಸಂಸ್ಥೆಯ ಅಭಿಯಾನ; ಮನೆ-ಮನೆಗೆ ವಿತರಣೆ:

ದೂರವಾಣಿ ಕರೆ ಮಾಡಿದವರಿಗೆ ಮನೆಗೆ ಹೋಗಿ ಪರಿಸರ ಸ್ನೇಹಿ ಗಣಪತಿಯನ್ನು ತಲುಪಿಸುವ ವ್ಯವಸ್ಥೆಯಿದೆ. ತೆಳುವಾದ ಬಟ್ಟೆಯಿಂದ ತಯಾರಿಸಿದ ಬಟ್ಟೆಯ ಚೀಲಗಳಲ್ಲಿ ಗಣಪತಿಯ ಮೂರ್ತಿಯಿರಿಸಿ ಸ್ವಯಂಸೇವಕರು ಮನೆ ಮನೆಗೆ ಗಣಪತಿ ಮೂರ್ತಿಗಳನ್ನು ತಲುಪಿಸುತ್ತಾರೆ. ಬಟ್ಟೆಯ ಚೀಲದ ಮೇಲೆ ಪರಿಸರ ಉಳಿಸುವ, ಪರಿಸರ ಸ್ನೇಹಿ ಗಣಪತಿಯ ಉದ್ಘೋಷಗಳನ್ನು ಕೈಯಿಂದ ಬರೆಯಲಾಗಿದೆ.

ಎಲ್ಲೆಲ್ಲಿ ಲಭ್ಯ ?: ರಾಜಾಜಿನಗರದ ಮೊದಲ ಬ್ಲಾಕ್‌ನಲ್ಲಿರುವ ಸಮರ್ಪಣ ಸಂಸ್ಥೆ, ಶ್ರೀರಾಮಮಂದಿರದ ಹತ್ತಿರ, ಬಸವೇಶ್ವರನಗರದಲ್ಲಿನ ಹಾವನೂರು ವೃತ್ತ ಬಳಿ, ವಿಜಯನಗರ, ಮಲ್ಲೇಶ್ವರದಲ್ಲಿ ಪರಿಸರ ಸ್ನೇಹಿ ಗಣಪತಿಗಳು ಲಭ್ಯ
ದರ ಎಷ್ಟು?: ಮಾರುಕಟ್ಟೆ ಬೆಲೆಗಿಂತ ರೂ 30ರಿಂದ ರೂ50 ರಷ್ಟು ಕಡಿಮೆಯಿದೆ.
8 ಇಂಚಿನ ಗಣಪತಿ ರೂ 90, 10.5 ಇಂಚಿನ ಗಣಪತಿ ರೂ 120, 14 ಇಂಚಿನ ಗಣಪತಿ ರೂ 190, 16 ಇಂಚಿನ ಗಣಪತಿ ರೂ್ಙ 260ಗೆ ಲಭ್ಯವಿವೆ.
ಮೂರ್ತಿಗಳಿಗೆ ದೂರವಾಣಿ ಕರೆ ದೂರವಾಣಿ ಕರೆ ಮಾಡಿ: 99800 08074, 99166 74225.

ದಿ ಲಿವಿಂಗ್ ಸ್ಟೋರ್‌ನ `ಸುರಕ್ಷಿತ ಹಬ್ಬ ಆಚರಣೆ' ಅಭಿಯಾನ
ದಿ ಲಿವಿಂಗ್ ಸ್ಟೋರ್ `ಸುರಕ್ಷಿತ ಹಬ್ಬ ಆಚರಣೆ' ಕುರಿತು ಜನರಲ್ಲಿ ಪರಿಸರ ಪ್ರಜ್ಞೆಯನ್ನು ಮೂಡಿಸಲು ಪ್ರಚಾರವನ್ನು ಆರಂಭಿಸಿದೆ. ಪರಿಸರ ಸ್ನೇಹಿ ಗಣೇಶ ಮೂರ್ತಿಗಳನ್ನು ತಯಾರಿಸಿ ಮೂರು ವರ್ಷಗಳಿಂದ ವಿತರಿಸುತ್ತ ಬರುತ್ತಿದೆ. ಇದು ಅಭಿಯಾನದ ನಾಲ್ಕನೇ ವರ್ಷವಾಗಿದೆ.

ದಿ ಲಿವಿಂಗ್ ಸ್ಟೋರ್‌ನ ಮುಖ್ಯಸ್ಥೆ ಎಸ್.ವಿಜಯಲಕ್ಷ್ಮಿ , `ಕಳೆದ ನಾಲ್ಕು ವರ್ಷಗಳಿಂದ ಪರಿಸರ ಸ್ನೇಹಿ ಗಣಪತಿಯನ್ನು ತಯಾರಿಸಿ ಮಾರಾಟ ಮಾಡುತ್ತಿದ್ದೇವೆ. ಶುದ್ಧ ಜೇಡಿ ಮಣ್ಣಿನಿಂದ ಗಣಪತಿ ಮೂರ್ತಿಗಳನ್ನು ತಯಾರಿಸುತ್ತೇವೆ. ಗಣಪತಿ ಮೂರ್ತಿಗಳ ಕಣ್ಣು, ಹುಬ್ಬು, ಸೊಂಡಿಲು ಹೀಗೆ ವಿಶೇಷ ಭಾಗಗಳಿಗೆ ಪರಿಸರ ಸ್ನೇಹಿ ಬಣ್ಣಗಳನ್ನು ಬಳಿಯುತ್ತೇವೆ. ಇವುಗಳಿಗೆ ಹೆಚ್ಚಿನ ಬೇಡಿಕೆಯಿದೆ. ಕಲಾವಿದರು ಮತ್ತು ಸ್ವಯಂ ಸೇವಕರು ಸೇರಿ ಒಟ್ಟು 30 ಮಂದಿ ಕೆಲಸ ನಿರ್ವಹಿಸುತ್ತಿದ್ದಾರೆ' ಎಂದರು.

`ಸಹಕಾರನಗರ, ಜೆ.ಪಿ.ನಗರ, ಸ್ವಾತಿನಗರ, ಚಾಮರಾಜಪೇಟೆ, ಬಸವನಗುಡಿಗಳಲ್ಲಿ ಪರಿಸರ ಸ್ನೇಹಿ ಗಣಪತಿಗಳು ಲಭ್ಯವಿರುತ್ತವೆ. ಕೆಲವರು ಮೊದಲೇ ಹೇಳಿ ಮಾಡಿಸುತ್ತಾರೆ. ಕಳೆದ ವರ್ಷ 600 ರಿಂದ 700 ಗಣಪತಿ ಮೂರ್ತಿಗಳು ಮಾರಾಟವಾಗಿದ್ದವು. ಆದರೆ, ಈ ಬಾರಿ 1,000 ಗಣಪತಿ ಮೂರ್ತಿಗಳ ಮಾರಾಟದ  ಗುರಿ ಹೊಂದಿದ್ದೇವೆ. ಪ್ರತಿ ಮನೆ ಮನೆಗೆ ಹೋಗಿ ಗಣಪತಿ ವಿತರಿಸುವ ವ್ಯವಸ್ಥೆಯಿಲ್ಲ. ಒಟ್ಟಿಗೆ 15 ರಿಂದ 20 ಗಣಪತಿ ಮೂರ್ತಿಗಳ ಬೇಡಿಕೆ ಬಂದರೆ, ಆಗ ಅಲ್ಲಿಗೆ ಹೋಗಿ ನೀಡುವ ವ್ಯವಸ್ಥೆಯನ್ನು ಮಾಡಲಾಗುವುದು' ಎಂದು ವಿವರಿಸಿದರು.

`ನಮ್ಮಲ್ಲಿ 9 ಇಂಚಿನ ಗಣಪತಿಯಿಂದ 4 ಅಡಿ ವರೆಗಿನ ಗಣಪತಿ ಮೂರ್ತಿಗಳು ಲಭ್ಯವಿವೆ. ಬಣ್ಣರಹಿತ ಗಣಪತಿಗೆ ಮತ್ತು ಬಣ್ಣ ಹಾಕಿದ ಗಣಪತಿಗೆ ಒಂದೊಂದು ಬೆಲೆ ನಿಗದಿ ಮಾಡಿದ್ದೇವೆ' ಎಂದರು.

`ಲಿವಿಂಗ್ ಸ್ಟೋರ್ ಆರಂಭವಾಗಿ ನಾಲ್ಕು ವರ್ಷಗಳಾದವು. ಆಗ, ಪರಿಸರಕ್ಕೆ ಏನಾದರೂ ಮಾಡಬೇಕೆಂಬ ಹಂಬಲವಿತ್ತು. ನಾವು ಹಬ್ಬಗಳಲ್ಲಿಯೇ ಪರಿಸರವನ್ನು ಹೆಚ್ಚು ಮಲಿನ ಮಾಡುತ್ತೇವೆ. ಗಣಪತಿ ಹಬ್ಬದಂದೇ ನೀರಿನ ಮೂಲಗಳು ಹೆಚ್ಚು ಮಲಿನವಾಗುತ್ತಿವೆ. ಇದರಿಂದ, ಪರಿಸರ ಸ್ನೇಹಿ ಗಣಪತಿ ಮೂರ್ತಿಗಳನ್ನು ತಯಾರಿಸಿ ಮಾರಾಟ ಮಾಡುವ ಅಭಿಯಾನಆರಂಭಿಸಿದೆವು' ಎಂದು ತಮ್ಮ ಅಭಿಯಾನದ ಬಗ್ಗೆ ಹೇಳಿದರು.

ದಿ ಲಿವಿಂಗ್ ಸ್ಟೋರ್‌ನ ಪರಿಸರ ಸ್ನೇಹಿ ಗಣಪತಿಗೆ ಸಂಪರ್ಕಿಸಿ: ದಿ ಲಿವಿಂಗ್ ಸ್ಟೋರ್, ಸಂಖ್ಯೆ.56, ತಾತನ ಮನೆ, ಚಾಮರಾಜಪೇಟೆ. ದೂರವಾಣಿ ಸಂಖ್ಯೆ- 92417 15008, 96325 60390, 94498 48631.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT