ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪರಿಸರ ಸ್ನೇಹಿ ಗಣೇಶೋತ್ಸವ ಹೇಗೆ ? ಏಕೆ ?

Last Updated 29 ಆಗಸ್ಟ್ 2019, 6:59 IST
ಅಕ್ಷರ ಗಾತ್ರ

ಚಿತ್ರದುರ್ಗ: ಗಣೇಶ ಚತುರ್ಥಿಯ ಸಂಭ್ರಮದಲ್ಲಿ ಗಣಪನ ವಿಗ್ರಹಗಳನ್ನು ಕೆರೆಯಲ್ಲಿ ವಿಸರ್ಜಿಸುವ ಮೂಲಕ ನಾವು ಪ್ರತಿ ವರ್ಷ 1000 ಟನ್ನಿನಷ್ಟು ವಿಷಕಾರಕ ವಿಸ್ತುಗಳನ್ನು ಕೆರೆ ನೀರಿಗೆ ಸೇರಿಸುತ್ತೇವೆ !

ಹೌದು, 2011ರಲ್ಲಿ ರಾಷ್ಟ್ರೀಯ ಸೀಸ ಪಾಷಾಣ ವಿರೋಧ ಸಂಸ್ಥೆಯ ಡಾ. ತುಪ್ಪೀಲ್ ವೆಂಕಟೇಶ್ ಲೆಕ್ಕಾಚಾರವನ್ನು ಕಾರ್ಯಕ್ರಮವೊಂದರಲ್ಲಿ ವಿವರಿಸಿದ್ದರು. ಅವರ ಲೆಕ್ಕಾಚಾರ ಹೀಗಿದೆ. ರಾಜ್ಯದಲ್ಲಿ ಆರೂವರೆ ಕೋಟಿ ಜನರಿದ್ದಾರೆ. ಅದರಲ್ಲಿ ನಾಲ್ಕೂವರೆ ಕೋಟಿ ಗಣೇಶನ ಹಬ್ಬ ಆಚರಿಸುತ್ತಾರೆ. ನಾಲ್ಕು ಮಂದಿಗೆ ಒಂದು ಗಣೇಶ ವಿಗ್ರಹ ಎಂದರೂ, ಸುಮಾರು 1.2 ಕೋಟಿ ಗಣೇಶನ ವಿಗ್ರಹಗಳನ್ನು ಪೂಜಿಸುತ್ತಾರೆ. ಇದರಲ್ಲಿ 1 ಕೋಟಿ ವಿಗ್ರಹಗಳು ಗಾಢ ರಾಸಾಯನಿಕ ಬಣ್ಣಗಳನ್ನು ಬಳಿದುಕೊಂಡಿರುತ್ತವೆ.

ಒಂದು ಅಂದಾಜಿನ ಪ್ರಕಾರ ಎರಡು ಕೆ.ಜಿ ತೂಕದ ಗಣೇಶ ವಿಗ್ರಹದಲ್ಲಿ 200 ಗ್ರಾಮ ಬಣ್ಣವಿರುತ್ತದೆ. ಆ ಬಣ್ಣದಲ್ಲಿ ಶೇ 4ರಿಂದ 6ರಷ್ಟು ಸೀಸ ಹಾಗೂ ಇನ್ನಿತರ ವಿಷವಿರುವ ರಾಸಾಯನಿಕಗಳಿರುತ್ತವೆ. ಅಂದರೆ ಪ್ರತಿ ಗಣೇಶನ ವಿಗ್ರಹದಲ್ಲಿ 10 ಗ್ರಾಂ ವಿಷಕಾರಕ ರಾಸಾಯನಿಕಗಳಿರುತ್ತವೆ. ಎಲ್ಲರೂ ಬಳಸುವ ಗಣಪ 2 ಕೆ.ಜಿಯಾಗಿದ್ದರೆ 1000 ಟನ್ ವಿಷ ಕೆರೆ ಸೇರುತ್ತದೆ !

ಗಣೇಶನನ್ನು ನಾವೆಲ್ಲ ವಿಘ್ನ ನಿವಾರಕ ಬುದ್ಧಿಪ್ರದಾಯಕ ಎನ್ನುತ್ತೇವೆ. ಆದರೆ ಪ್ರತಿ ವರ್ಷ ಗಣೇಶನ ಹಬ್ಬಆಚರಿಸುವಾಗ ನಾವೇ ಸಮಾಜಕ್ಕೆ ನಾನಾ ವಿಘ್ನಗಳನ್ನು ತರುತ್ತೇವೆ. ವಿಷಕಾರಕ ವಸ್ತುಗಳನ್ನು ನೀರಿಗೆ ಸೇರಿಸುವ ಮೂಲಕ, ಪರೋಕ್ಷವಾಗಿ ಎಳೆಮಕ್ಕಳ ಬುದ್ಧಿಶಕ್ತಿಯನ್ನು ಕಡಿಮೆ ಮಾಡಬಲ್ಲಂತಹ ಸೀಸದ ವಿಷವನ್ನು ನೀರಿಗೆ ಸೇರಿಸುತ್ತೇವೆ. ಹಬ್ಬದ ಹೆಸರಿನಲ್ಲಿ ಜಲಮಾಲಿನ್ಯ, ವಾಯುಮಾಲಿನ್ಯ ಶಬ್ದಮಾಲಿನ್ಯ, ನೆಲಮಾಲಿನ್ಯ ದೃಶ್ಯಮಾಲಿನ್ಯ ಎಲ್ಲಕ್ಕೂ ಕಾರಣವಾಗುತ್ತವೆ.

ಅಪಾಯಗಳ ಆಗರ
ಗಣೇಶನ ಮೂರ್ತಿ ಆಕರ್ಷಕವಾಗಲೆಂದು, ಎನಾಮೆಲ್ ಬಣ್ಣ ಬಳಿದ ದೊಡ್ಡ ದೊಡ್ಡ ವಿಗ್ರಹಗಳನ್ನೇ ನಾವು ತರುತ್ತೇವೆ. ಅಂಥ ಬಣ್ಣಗಳಲ್ಲಿ ಸೀಸ, ಕ್ಯಾಡ್ಮಿಯಂ, ಕ್ರೋಮಿಯಂ ಮುಂತಾದ ವಿಷದ ರಾಸಾಯನಿಕಗಳಿರುತ್ತವೆ.

ಅದರಲ್ಲೂ ಸೀಸದ ವಿಷ ತೀರಾ ಅಪಾಯಕಾರಿಯಾದುದು. ಅದು ನೀರಿನ ಮೂಲಕ, ಆವಿಯ ಮೂಲಕ, ಉಸಿರಿನ ಮೂಲಕ ನಮ್ಮ ದೇಹಕ್ಕೆ ನೇರವಾಗಿ ಪ್ರವೇಶಿಸಬಹುದು. ಇಂಥ ನೀರಲ್ಲಿ ಬೆಳೆದ ಕಾಯಿಪಲ್ಲೆ ಗಡ್ಡೆಗೆಣಸು, ಹಣ್ಣುಹಂಪಲುಗಳ ಮೂಲಕವೂ ಸೀಸ ನಮ್ಮ ದೇಹಕ್ಕೆ ಪ್ರವೇಶಿಸಬಹುದು. ಅದು ರಕ್ತನಾಳಗಳಲ್ಲಿ ಸೇರಿಕೊಂಡರೆ ಯಕೃತ್ತು, ಮೂತ್ರಪಿಂಡ, ಹೃದಯದ ನಾಳಗಳಿಗೆ ಹೊಕ್ಕು ಅಲ್ಲೇಕೂತಿರುತ್ತದೆ. ಮಿದುಳಿನ ನರಕೋಶಗಳಲ್ಲಿ ಸೇರಿದರೆ, ವಿಶೇಷವಾಗಿ ಎಳೆಯ ಮಕ್ಕಳ ಬುದ್ಧಿ ಕುಂಠಿತವಾಗಬಹುದು ಎನ್ನುತ್ತದೆ ವೈದ್ಯಕೀಯ ಪರಿಣತರು.

ಈ ಭಾರಲೋಹಗಳು ನಮಗಷ್ಟೇ ಅಲ್ಲ ಇತರ ಪ್ರಾಣಿಪಕ್ಷಿಗಳ ದೇಹಕ್ಕೆ, ಕೆಸರಿನಲ್ಲಿ ರುವ ಸೂಕ್ಷ್ಮ ಜೀವಿಗಳಿಗೆ, ಕಳೆಸಸ್ಯಗಳಿಗೆ, ಏಡಿಗೆ, ಕಪ್ಪೆಗೆ, ನೀರೊಳ್ಳೆ ಹಾವುಗಳಿಗೆ ಮತ್ತಿತರ ಜಲಚರಗಳಿಗೂ ಸೇರುತ್ತವೆ. ಕೆರೆಯ ಆಸುಪಾಸಿನ ಜೊಂಡುಹುಲ್ಲನ್ನು ಮೇಯುವ ದನಕರುಗಳಿಗೂ ಸೇರುತ್ತದೆ. ಜೀವಿಗಳ ಸಹಜ ಬದುಕಿಗೆ ವಿಘ್ನತರುತ್ತವೆ ಎನ್ನುವುದು ಕೆಲವು ಸಂಶೋಧನೆಗಳಿಂದ ದೃಢಪಟ್ಟಿದೆ.

ಮಂಟಪದಿಂದಲೂ ಮಲಿನ
ಇನ್ನುಗಣಪನ ಮಂಟಪ ನಿರ್ಮಿಸುವಾಗ ಅಥವಾ ಪೆಂಡಾಲ್ ಹಾಕುವಾಗ ಇನ್ನಷ್ಟು ವಿಷಕಾರಿ ವಸ್ತುಗಳನ್ನು ಬಳಸುತ್ತೇವೆ. ಹಿಂದೆಲ್ಲ ಕೇವಲ ತಳಿರು ತೋರಣ, ಮಾವು, ಬಿಲ್ವಗಳಿಂದ ಗಣಪನ ಮಂಟಪ ಮಾಡುತ್ತಿದ್ದರು. ಈಗೀಗ ಅದೆಷ್ಟೋ ಕೃತಕ ವಸ್ತುಗಳಿಂದ ದೇವರನ್ನುಅಲಂಕರಿಸುತ್ತೇವೆ. ಮೂಲತಃ ಪೆಟ್ರೋಲಿಯಂ ದ್ರವ್ಯಗಳಿಂದ ತಯಾರಿಸಿದ ನಾನಾ ಬಗೆಯ ಪಾಸ್ಲ್ಟಿಕ್, ಸ್ಟೈರೊಫೋಮ್, ಬೈಫಿನೈಲ್, ಥರ್ಮೊಕೊಲ್ ಇತ್ಯಾದಿಗಳನ್ನು ವಸ್ತುಗಳನ್ನು ಬಳಸುತ್ತೇವೆ.

ಹಬ್ಬ ಮುಗಿದ ಮೇಲೆ ಇವು ತ್ಯಾಜ್ಯ ವಸ್ತುಗಳಾತ್ತವೆ; ಆದರೆ ಇವು ಮಣ್ಣಲ್ಲಿ ಮಣ್ಣಾಗುವುದಿಲ್ಲ. ಅವುಗಳ ಜತೆ ಬಾಳೆಯ ಕಂದು, ಬಿಲ್ವಪತ್ರೆ, ಮಿಕ್ಕ ಪೂಜಾ ಪ್ರಸಾದಗಳಂಥ ವಸ್ತುಗಳನ್ನು ಪಾಸ್ಲ್ಟಿಕ್‌ನಲ್ಲಿ ಸುತ್ತಿ ನಾವು ಎಸೆಯುತ್ತೇವೆ. ಅವನ್ನು ಹಸು, ನಾಯಿ, ಪಕ್ಷಿಗಳು ಪ್ಲಾಸ್ಟಿಕ್ ಸಮೇತ ತಿಂದಾಗ ಅವುಗಳ ಹೊಟ್ಟೆಯಲ್ಲಿ ವ್ರಣ ಉಂಟಾಗುತ್ತದೆ.

ಗಣೇಶ ನಿಸರ್ಗದ ಸಂಕೇತ
ಗಣೇಶ ನಮ್ಮೆಲ್ಲರ ಅಚ್ಚುಮೆಚ್ಚಿನ ದೇವರು. ಅವನ ಆನೆಮುಖ, ಮನುಷ್ಯ ದೇಹ, ಹಾವಿನ ಬೆಲ್ಟು, ಇಲಿ ಸವಾರಿ ಇವೆಲ್ಲವೂ ನಮಗೆ ಇಷ್ಟ. ನಾಲ್ಕು ಜೀವಿಗಳನ್ನು ಒಂದಾಗಿಸಿಕೊಂಡ ಅವನು ಜೀವಿವೈವಿಧ್ಯದ ಸಂಕೇತ. ಅಪ್ಪಟ ನಿಸರ್ಗ ದೇವತೆ ಅವನು. ಆದ್ದರಿಂದಲೇ ಅವನಿಗೆ ಪ್ರಥಮ ಪೂಜೆ ಸಲ್ಲುತ್ತದೆ.

ಅವನ ರೂಪ ಅದೆಷ್ಟು ವಿಶಿಷ್ಟವೋ ಅವನ ಆರಾಧನೆಯೂ ಅಷ್ಟೇ ವಿಶಿಷ್ಟ! ಜೇಡಿ ಮಣ್ಣಿನ ರೂಪ ಗರಿಕೆ, ಫಲಪುಷ್ಪಗಳಿಂದ ಪೂಜೆ. ನಂತರ ಮೂರ್ತಿಯನ್ನು ನೀರಿನಲ್ಲೇ ವಿಸರ್ಜಿಸಬೇಕು. ಅದಕ್ಕೆ ನಾವೆಲ್ಲ ಚಿಕ್ಕವರಿದ್ದಾಗ 'ಸಣ್ಣಕೆರೇಲಿ ಬಿದ್ದ; ದೊಡ್ಡ ಕೆರೇಲಿ ಎದ್ದ' ಎಂದು ಅವನನ್ನು ಭಜಿಸುವಾಗಲೂ ನಿಸರ್ಗ ಸಮತೋಲದ ಒಂದು ಸಂಕೇತವನ್ನು ಕಾಣುತ್ತೇವೆ.

ಅಂದರೆ ಹೂಳು ತುಂಬಿ ಚಿಕ್ಕದಾಗಿರುವ ಕೆರೆಯಿಂದ, ನಾವು ಹೂಳೆತ್ತಿ ತಂದುಗಣಪನ ಮೂರ್ತಿಯನ್ನು ಮಾಡುತ್ತಿದ್ದೆವು. ಪೂಜೆಯ ನಂತರ ಅವನನ್ನು ಮತ್ತೆ ಅದೇಚಿಕ್ಕಕೆರೆಗೆ ಬಿಡುವಂತಿಲ್ಲ. ಕಳೆ, ಜೊಂಡು ಹುಲ್ಲನ್ನೆಲ್ಲತೆಗೆದು ಸ್ವಚ್ಛಗೊಳಿಸಿದ ದೊಡ್ಡ ಕೆರೆಯಲ್ಲಿ ಗಣಪನನ್ನು ವಿಸರ್ಜನೆ ಮಾಡಬೇಕು. ಅಂದರೆ, ಗಣೇಶ ಚೌತಿಯ ಸಂದರ್ಭದಲ್ಲಿ ಈ ಎರಡೂ ಕೆರೆಗಳು ಚೊಕ್ಕಟವಾಗಬೇಕು ಎಂಬುದು ಇದರ ಅರ್ಥ.

ಹೀಗೆ ಜಗತ್ತಿನ ಜೀವವೈವಿಧ್ಯಕ್ಕೆ, ನಿಸರ್ಗದ ಸಮತೋಲನಕ್ಕೆ, ಸುಸ್ಥಿರ ಬದುಕಿಗೆ ಹಾಗೂ ಸಮಾಜದ ಸದ್ವರ್ತನೆಗೆ ಪೂರಕವಾಗಿರುವ ಎಷ್ಟೊಂದು ಸಂಕೇತಗಳನ್ನು ಗಣಪ ಒಟ್ಟೊಟ್ಟಿಗೇ ಪ್ರತಿನಿಧಿಸುತ್ತಾನೆ. ಆದ್ದರಿಂದಲೇ ಅವನು ಪ್ರಥಮ ವಂದಿತ. ಆದ್ದರಿಂದಲೇ ಅವನು ಸಾರ್ವತ್ರಿಕ ದೇವ. ಆದ್ದರಿಂದಲೇ ಗಣೇಶೋತ್ಸವ ಪರಿಸರ ಸ್ನೇಹಿಯಾಗಿರಬೇಕು.

ಪರಿಸರ ಸ್ನೇಹಿ ಗಣೇಶೋತ್ಸವಕ್ಕೆ ನವ ಸೂತ್ರಗಳು
* 'ಪ್ರಖರ ಬಣ್ಣಗಳ ಗಣೇಶ ನಮಗೆ ಬೇಡ'. ಪ್ಲಾಸ್ಟರ್ ಆಫ್ ಪ್ಯಾರೀಸ್ ಗಣೇಶ ವಿಗ್ರಹಗಳಿಂದ ದೂರವಿರಿ. ಪರಿಸರ ಸ್ನೇಹಿ ಬಣ್ಣಗಳಿಂದ ನಿರ್ಮಾಣಗೊಂಡ 'ಎಕೊ ಕಲರ್' ಅಂದರೆ ಸಸ್ಯ ರಸದ ಬಣ್ಣ ಬಳಿದ, ನೀರಲ್ಲಿ ಕರಗಬಲ್ಲ ಸೌಮ್ಯ ಬಣ್ಣಗಳ ಮಣ್ಣಿನ ಗಣೇಶ ವಿಗ್ರಹಕ್ಕಾಗಿ ನಿಮ್ಮ ಮಾರಾಟಗಾರರ ಬಳಿ ಬೇಡಿಕೆ ಇದೆ.

* ಪೆಂಡಾಲ್‌ಕಟ್ಟುವಾಗ ಸ್ಥಳದ ಆಯ್ಕೆ ಸರಿಯಾಗಿರಲಿ. ರಸ್ತೆಯ ಮಧ್ಯೆಗುಂಡಿ ಮಾಡಿ, ಸಂಚಾರಕ್ಕೆ ಅಡೆತಡೆ ತರಬೇಡಿ. ಖಾಲಿ ಬಯಲಿನಲ್ಲಿ ಪೆಂಡಾಲ್ ಹಾಕುವಾಗಲೂ ನೆಟ್ಟು ಪೋಷಿಸಿದ ಗಿಡಗಳನ್ನು ನಾಶ ಮಾಡಬೇಡಿ.

* ಗಣಪನ ಮಂಟಪವನ್ನು ಮತ್ತು ಪೆಂಡಾಲ್ ಕಂಬಗಳನ್ನು ಅಲಂಕರಿಸುವಾಗ ಕೃತಕ ಬಣ್ಣ ಬಳಕೆ ನಿಲ್ಲಿಸಿ. ಒಂದೊಮ್ಮೆ ಬಳಸಿದರೆ, ಹಬ್ಬದ ನಂತರ ಅವುಗಳ ಸುರಕ್ಷಿತ ವಿಲೇವಾರಿ ಹೇಗೆ? ಎಲ್ಲಿ? ಎಂಬ ಬಗ್ಗೆ ಈಗಲೇ ಚಿಂತನೆ ನಡೆಸಿ ಆ ಹೊಣೆಗಾರಿಕೆಯನ್ನು ನಿಗದಿತ ಯುವಕರಿಗೆ ವಹಿಸಿ.

* ನೈಸರ್ಗಿಕ ಅಲಂಕಾರಗಳೇ ಗಣಪನಿಗೆ ಶ್ರೇಷ್ಠ. ತೆಂಗಿನ ಗರಿಗಳಿಂದ, ಎಲೆಗಳಿಂದ ಕೂಡ ತುಂಬ ಸುಂದರ ತೋರಣಗಳನ್ನು ಸಿದ್ಧಪಡಿಸಬಹುದು. ಅಕ್ಕಪಕ್ಕದ ಮನೆಗಳಲ್ಲಿ ಅಂಥ ಪರ್ಣಮಾಲೆ ಮಾಡಬಲ್ಲವರು ಇದ್ದಾರೆಯೇ ನೋಡಿ. ನೆರೆ ಹೊರೆಯ ಯುವಕ-ಯುವತಿಯರ, ಎಳೆಮಕ್ಕಳ ಕಲೆಗಾರಿಕೆ, ಸೃಜನಶೀಲತೆಗೆ ಪ್ರೋತ್ಸಾಹಿಸಿ.

* ಧ್ವನಿವರ್ಧಕ ಬಳಸುವುದಾದರೆ ಅದು ಇತರರಿಗೆ ಕಿರಿಕಿರಿ ಆಗದಂತೆ ನೋಡಿಕೊಳ್ಳಿ. ಮಂಟಪದ ದರ್ಶನಕ್ಕೆ ಬರುವವರಿಗೆ ಮಾತ್ರ ಅದು ಕರ್ಣಾನಂದ ನೀಡುವಂತಿರಲಿ.

* ವಿದ್ಯುತ್ ಮಿತವ್ಯಯದ ಬಗ್ಗೆ ವಿಶೇಷ ಕಾಳಜಿ ವಹಿಸಿ. ಹೊನಲು ಬೆಳಕಿಗೆ ಎಲ್‌ಇಡಿ/ ಸಿಎಫ್‌ಎಲ್ ಗಳನ್ನೇ ಬಳಸಿ. ದೀಪ, ಮೋಟರ್, ಧ್ವನಿವರ್ಧಕಗಳಿಗೆ ಜೋಡಿಸುವ ವಯರ್‌ಗಳ ಬಗ್ಗೆ ಹುಷಾರಾಗಿರಿ. ಕತ್ತಲಲ್ಲಿ, ಒದ್ದೆ ನೆಲದಲ್ಲಿ ಅಡ್ಡಾದಿಡ್ಡಿ ತಂತಿಗಳನ್ನು ಜೋಡಿಸಲೇ ಬಾರದು. ಜನರೇಟರ್ ಬಳಸುವುದಾದರೆ ಅದರಿಂದ ಹೊಮ್ಮುವ ಹೊಗೆ ಮತ್ತು ಸದ್ದುಯಾರಿಗೂತೊಂದರೆ ಕೊಡದಂತೆ ನೋಡಿಕೊಳ್ಳಿ.

* ವಿಸರ್ಜನೆಯ ತಾಣವನ್ನು ತಲುಪಿದ ಮೇಲೆ, ಗಣೇಶ ಮೂರ್ತಿಯ ಮೇಲಿನ ಅಲಂಕಾರಗಳನ್ನೆಲ ಪ್ರತ್ಯೇಕ ತೆಗೆದಿಡಿ. ಅವನ್ನು ನೀರಿಗೆ ಹಾಕಬೇಡಿ. ಹಾಗೇ ಸಾವಯವ ದ್ರವ್ಯಗಳು ಅಂದರೆ ತುಳಸಿ, ದರ್ಭೆ/ದೂರ್ವೆ ಪುಷ್ಪಗುಚ್ಛಗಳನ್ನೂ ಹೊರಕ್ಕೆತೆಗೆದಿಡಿ. ಅವೂ ನೀರನ್ನು ಸೇರಬಾರದು.

* ವಿಸರ್ಜನೆ ಮುಗಿಸಿ ಮರಳುವ ಮುನ್ನ ಅಲ್ಲಿ ತೆಗೆದಿಟ್ಟಅಲಂಕಾರಿಕ ದ್ರವ್ಯಗಳನ್ನು ಮತ್ತು ಪೂಜಾ ಸಾಮಗ್ರಿಗಳನ್ನು ನಗರ ಪಾಲಿಕೆ ಅಥವಾ ಪಂಚಾಯ್ತಿ ನಿಗದಿಪಡಿಸಿದ ತೊಟ್ಟಿಯಲ್ಲಿ ಹಾಕಿ. ಇಲ್ಲವೇ ಸುರಕ್ಷಿತ ಹೂತು ಹಾಕಿ ಅದರ ಮೇಲೆ ಗಿಡ ನೆಡಿ. ಸುಡಬೇಡಿ.

* ನಗರಗಳಲ್ಲಿ ನಗರ ಪಾಲಿಕೆ ಹಾಗೂ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಲಿಯವರು ಗಣೇಶ ವಿಸರ್ಜನೆಗೆ ನಿರ್ದಿಷ್ಟ ತಾಣಗಳನ್ನು ನಿಗದಿ ಮಾಡಿರುತ್ತಾರೆ. ಅವುಗಳ ಬಗೆಗೆ ಮೊದಲೇ ಮಾಹಿತಿ ಸಂಗ್ರಹಿಸಿ, ಅದರಂತೆ ಶಾಂತ ರೀತಿಯಲ್ಲಿ ಗಣೇಶನ ವಿಸರ್ಜನೆ ಮಾಡಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT