ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಲಾಯನ ಮಾಡಿಲ್ಲ: ಗಢಾಫಿ ಸ್ಪಷ್ಟನೆ

Last Updated 22 ಫೆಬ್ರುವರಿ 2011, 19:30 IST
ಅಕ್ಷರ ಗಾತ್ರ

ಕೈರೊ, ಟ್ರಿಪೊಲಿ (ಪಿಟಿಐ/ಎಪಿ/ಐಎಎನ್‌ಎಸ್):  ‘ನಾನಿನ್ನೂ ಟ್ರಿಪೊಲಿಯಲ್ಲಿ ಇದ್ದೇನೆ. ವೆನಿಜುವೆಲಾದಲ್ಲಿ ಅಲ್ಲ’ ಎಂದು ಲಿಬಿಯಾದ ಸರ್ವಾಧಿಕಾರಿ ಮುಅಮ್ಮರ್ ಗಢಾಫಿ ಮಂಗಳವಾರ ಸ್ಪಷ್ಟಪಡಿಸಿದ್ದಾರೆ.

ವೆನಿಜುವೆಲಾಕ್ಕೆ ಪಲಾಯನ ಮಾಡಿದ್ದಾರೆ ಎಂಬ ದಟ್ಟ ವದಂತಿಯ ಹಿನ್ನೆಲೆಯಲ್ಲಿ ಮಂಗಳವಾರ ಸರ್ಕಾರಿ ಸ್ವಾಮ್ಯದ ಲಿಬಿಯನ್ ಟಿವಿಯಲ್ಲಿ ಪ್ರತ್ಯಕ್ಷರಾಗಿರುವ ಗಢಾಫಿ ಈ ಸ್ಪಷ್ಟನೆ ನೀಡಿದ್ದಾರೆ.

ಸುಳ್ಳು ವರದಿಗಳನ್ನು ಪ್ರಸಾರ ಮಾಡಿದ ವಿದೇಶಿ ಚಾನೆಲ್‌ಗಳನ್ನು  ‘ನಾಯಿಗಳು’ ಎಂದು ಅವರು ಟೀಕಿಸಿದ್ದಾರೆ. ಅಲ್ಲದೆ ತಾನು ಮನೆಯ ಹೊರಗಡೆಯಿಂದ ಮಾತನಾಡುತ್ತಿರುವುದಾಗಿಯೂ ಹೇಳಿದ್ದಾರೆ.

ಮುಅಮ್ಮರ್ ಗಢಾಫಿ ವೆನಿಜುವೆಲಾಕ್ಕೆ ಪಲಾಯನ ಮಾಡಿರುವ ವರದಿಯನ್ನು ಅಲ್ಲಿನ ಸರ್ಕಾರವೂ ತಳ್ಳಿಹಾಕಿದೆ.

ಈ ಮಧ್ಯೆ, ಲಿಬಿಯಾ ರಾಜಧಾನಿಯಲ್ಲಿ ಪ್ರತಿಭಟನಾಕಾರರ ಮೇಲೆ ಹೆಲಿಕಾಪ್ಟರ್‌ಗಳ ಮೂಲಕ ಬಾಂಬ್ ದಾಳಿ ನಡೆದಿದೆ.

ರಕ್ತರಹಿತ ಕ್ಷಿಪ್ರ ಸೇನಾ ಕಾಂತ್ರಿಯ ಮೂಲಕ 41 ವರ್ಷಗಳ ಹಿಂದೆ ಅರಬ್‌ನ ಪುಟ್ಟ ರಾಷ್ಟ್ರ ಲಿಬಿಯಾದ ಆಡಳಿತ ಚುಕ್ಕಾಣಿಯನ್ನು ಹಿಡಿದಿದ್ದ 68 ವರ್ಷದ ಗಢಾಫಿ ಹಿಂದೆಂದೂ ಕಂಡರಿಯದ ರೀತಿಯಲ್ಲಿ ಈಗ ಜನರ ವಿರೋಧವನ್ನು ಎದುರಿಸುತ್ತಿದ್ದಾರೆ.

ಹಳೆಯ ಬಿಳಿ ವ್ಯಾನೊಂದರ ಆಸನದಲ್ಲಿ ಮಳೆಯಿಂದ ರಕ್ಷಣೆ ಪಡೆಯಲು ಛತ್ರಿಯೊಂದನ್ನು ಹಿಡಿದು ಕುಳಿತಿದ್ದ ಗಢಾಫಿ, ಮಂಗಳವಾರ ಸ್ಥಳೀಯ ಕಾಲಮಾನ ಮುಂಜಾನೆ 2ಗಂಟೆ ಸುಮಾರಿಗೆ ಒಂದು ನಿಮಿಷಕ್ಕೂ ಕಡಿಮೆ ಅವಧಿಯಲ್ಲಿ ಸರ್ಕಾರಿ ಟಿವಿಯಲ್ಲಿ ಕಾಣಿಸಿಕೊಂಡರು.

ಎಂಟನೇ ದಿನಕ್ಕೆ ಕಾಲಿರಿಸಿರುವ ಸರ್ಕಾರಿ ವಿರೋಧಿ ಹೋರಾಟದಲ್ಲಿ ಇದುವರೆಗೆ 400ಕ್ಕೂ ಅಧಿಕ ಜನರು ಮೃತಪಟ್ಟಿದ್ದಾರೆ ಎಂದು ಮಾನವ ಹಕ್ಕುಗಳ ಸಂಸ್ಥೆಗಳು ತಿಳಿಸಿವೆ.

ರಾಜೀನಾಮೆ: ಪ್ರತಿಭಟನಾಕಾರರನ್ನು ಅಮಾನುಷವಾಗಿ ಹತ್ತಿಕ್ಕುತ್ತಿರುವುದನ್ನು ಖಂಡಿಸಿ ಲಿಬಿಯಾದ ಕಾನೂನು ಸಚಿವ ಮುಸ್ತಾಫ ಅಬ್ದುಲ್ ಜಲೀಲ್ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ ಎಂದು ಅಲ್-ಜಜೀರಾಟಿವಿ ವರದಿ ಮಾಡಿದೆ.

ಅಮೆರಿಕ ಪ್ರತಿಕ್ರಿಯೆ:  ‘ಅಭಿವ್ಯಕ್ತಿ ಸ್ವಾತಂತ್ರ್ಯ ಸೇರಿದಂತೆ ನಾಗರಿಕರಿಗಿರುವ ಸಾರ್ವತ್ರಿಕ ಹಕ್ಕುಗಳನ್ನು ಗೌರವಿಸುವ ಜವಾಬ್ದಾರಿ ಲಿಬಿಯಾ ಸರ್ಕಾರದ ಮೇಲಿದೆ. ಅಲ್ಲಿ ನಡೆಯುತ್ತಿರುವ ಸ್ವೀಕಾರ್ಹವಲ್ಲದ ರಕ್ತಪಾತವನ್ನು ಸರ್ಕಾರ ಕೂಡಲೇ ನಿಲ್ಲಿಸಬೇಕಾಗಿದೆ’ ಎಂದು ಅಮೆರಿಕ ವಿದೇಶಾಂಗ ಕಾರ್ಯದರ್ಶಿ ಹಿಲರಿ ಕ್ಲಿಂಟನ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಲಿಬಿಯಾದಲ್ಲಿ ಪ್ರತಿಭಟನಾಕಾರರನ್ನು ಸರ್ಕಾರ ಅಮಾನುಷವಾಗಿ ಹತ್ತಿಕ್ಕುತ್ತಿರುವುದನ್ನು ಖಂಡಿಸಿ ವಿವಿಧ ದೇಶಗಳಲ್ಲಿರುವ ಲಿಬಿಯಾ ರಾಜತಾಂತ್ರಿಕರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿ, ಆಡಳಿತ ವಿರೋಧಿ ಜನಾಂದೋಲನಕ್ಕೆ ಬೆಂಬಲ ಸೂಚಿಸುತ್ತಿದ್ದಾರೆ.

ಪ್ರತಿಭಟನೆಗೆ ಸೇನಾಧಿಕಾರಿಗಳ ಬೆಂಬಲ!: ಲಿಬಿಯಾ ಸೇನಾಧಿಕಾರಿಗಳ ಒಂದು ಗುಂಪು ಗಢಾಫಿ  ಅವರನ್ನು ದೇಶದಿಂದ ಉಚ್ಚಾಟನೆ ಮಾಡಲು ಬಯಸಿದ್ದು,  ಜನರು ನಡೆಸುತ್ತಿರುವ ಆಂದೋಲನಕ್ಕೆ ಸೇನೆ ಬೆಂಬಲ ನೀಡಬೇಕು ಎಂದು ಒತ್ತಾಯಿಸಿದೆ ಎಂದು ಅಲ್-ಜಜೀರಾ ಟಿವಿ ಮಂಗಳವಾರ ವರದಿ ಮಾಡಿದೆ.

ವಿಮಾನ ನಿಲ್ದಾಣದಲ್ಲಿ ಜನಸಂದಣಿ: ಅಶಾಂತಿ ಪೀಡಿತ ಲಿಬಿಯಾದಿಂದ ಸ್ವದೇಶಕ್ಕೆ ತೆರಳುವ ತರಾತುರಿಯಲ್ಲಿರುವ ವಿವಿಧ ದೇಶದ ಪ್ರಜೆಗಳು ತಮ್ಮ ಕುಟುಂಬದೊಂದಿಗೆ ಟ್ರಿಪೊಲಿಯಲ್ಲಿರುವ ವಿಮಾನನಿಲ್ದಾಣದಲ್ಲಿ ಸೇರಿದ್ದಾರೆ.

ಸಮಿತಿ ಹೇಳಿಕೆ: ರಾಷ್ಟ್ರದಲ್ಲಿ ಪ್ರತಿಭಟನೆ ನಡೆಸುತ್ತಿರುವ ಸರ್ಕಾರಿ ವಿರೋಧಿ ಶಕ್ತಿಗಳನ್ನು ಮಟ್ಟಹಾಕುವುದಾಗಿ ಹೊಸದಾಗಿ ಅಸ್ತಿತ್ವಕ್ಕೆ ಬಂದಿರುವ ಲಿಬಿಯಾದ ಉನ್ನತ ಮಟ್ಟದ ರಕ್ಷಣಾ ಸಮಿತಿಯು ಹೇಳಿದೆ.

ಮೂನ್ ಅಸಮಾಧಾನ
ಪ್ರತಿಭಟನಾಕಾರರ ಮೇಲೆ ಲಿಬಿಯಾ ಸೇನೆ ಯುದ್ಧವಿಮಾನ, ಹೆಲಿಕಾಪ್ಟರ್‌ಗಳ ಮೂಲಕ ಗುಂಡಿನ ದಾಳಿ ನಡೆಸುತ್ತಿರುವುದಕ್ಕೆ ವಿಶ್ವಸಂಸ್ಥೆ ಪ್ರಧಾನ ಕಾರ್ಯದರ್ಶಿ ಬಾನ್ ಕಿಮೂನ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಲಿಬಿಯಾದ ಎಲ್ಲಾ ಪಕ್ಷಗಳು ಸಂಯಮದಿಂದ ವರ್ತಿಸಬೇಕು. ಈಗ ಉಂಟಾಗಿರುವ ಬಿಕ್ಕಟ್ಟನ್ನು ಮಾತುಕತೆಯ ಮೂಲಕ ಬಗೆಹರಿಸಿಕೊಳ್ಳಬೇಕು ಎಂದೂ ಅವರು ಸಲಹೆ ನೀಡಿದ್ದಾರೆ. ಈ ಮೊದಲು, ಮೂನ್ ಅವರು ಗಢಾಫಿ ಅವರೊಂದಿಗೆ ದೂರವಾಣಿಯಲ್ಲಿ 40 ನಿಮಿಷಗಳ ಕಾಲ ಚರ್ಚಿಸಿ, ಲಿಬಿಯಾದಲ್ಲಿ ನಡೆಯುತ್ತಿರುವ ಹಿಂಸಾಚಾರಕ್ಕೆ ಅಂತ್ಯ ಹಾಡುವಂತೆ ಸೂಚಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT