ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಶ್ಚಿಮಬಂಗಾಳದಲ್ಲಿ ಚಿಟ್‌ಫಂಡ್ ಹಗರಣ: ಕೇಂದ್ರದಿಂದ ತನಿಖೆ

Last Updated 25 ಏಪ್ರಿಲ್ 2013, 9:43 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ಪಶ್ಚಿಮಬಂಗಾಳದಲ್ಲಿ ಬಿರುಗಾಳಿಯನ್ನೇ ಎಬ್ಬಿಸಿರುವ ಶಾರದ ಸಮೂಹ ಸಂಸ್ಥೆಗಳ ಚಿಟ್‌ಫಂಡ್ ಹಗರಣಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ತನಿಖೆಗೆ ಗುರುವಾರ ಆದೇಶ ನೀಡಿದೆ.

ಬೆಳಿಗ್ಗೆ ಇಲ್ಲಿ ಹಿರಿಯ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಕಾರ್ಪೋರೇಟ್ ವ್ಯವಹಾರಗಳ ಸಚಿವ ಸಚಿನ್ ಪೈಲಟ್ ಅವರು ಕಂಪೆನಿಯ ವ್ಯವಹಾರಗಳ ಬಗೆಗೆ ಸಂಪೂರ್ಣ ತನಿಖೆಗೆ ಆದೇಶಿಸಿದರು.

ಪಶ್ಚಿಮಬಂಗಾಳದಲ್ಲಿ ಸಾವಿರಾರು ಮಂದಿ ಬಡವರಿಗೆ ವಂಚಿಸಿದ ಆರೋಪ ಶಾರದ ಸಮೂಹ ಕಂಪೆನಿಯ ವಿರುದ್ಧ ಕೇಳಿ ಬಂದಿದ್ದು, ಕಂಪೆನಿಯ ಅಧ್ಯಕ್ಷ ಸುದೀಪ್ತ ಸೇನ್ ಅವರನ್ನು ಕಾಶ್ಮೀರ ಕಣಿವೆಯಲ್ಲಿ ಬಂಧಿಸಿ ಕೋಲ್ಕೊತ್ತಾಕ್ಕೆ ಕರೆತರಲಾಗಿದೆ. ಈಗಾಗಲೇ ಸೆಬಿ ಹಾಗೂ ಆದಾಯ ತೆರಿಗೆ ಇಲಾಖೆಯೂ ಕೂಡ ತನಿಖೆಯನ್ನು ಕೈಗೆತ್ತಿಕೊಂಡಿದೆ.

73 ಕಂಪೆನಿಗಳು ಪಶ್ಚಿಮ ಬಂಗಾಳದಲ್ಲಿ ಅಕ್ರಮ ಸ್ಕೀಂಗಳ ಮೂಲಕ ಹಣ ಸಂಗ್ರಹಿಸುತ್ತಿವೆ ಎಂದು ದೂರುಗಳು ಕೇಂದ್ರ ಕಾರ್ಪೋರೇಟ್ ಇಲಾಖೆಗೆ ಬಂದಿದೆ ಎಂದು ಮೂಲಗಳು ತಿಳಿಸಿವೆ.

ಈ ಮಧ್ಯೆ ಶಾರದಾ ಸಮೂಹ ಸಂಸ್ಥೆಗಳ ಅಧ್ಯಕ್ಷ ಸುದೀಪ್ತ ಸೇನ್ ಅವರನ್ನು ಪೊಲೀಸರು ನ್ಯಾಯಾಲಯಕ್ಕೆ ಹಾಜರುಪಡಿಸುವ ಸಂಧರ್ಭದಲ್ಲಿ ನೂರಾರು ಯುವಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. ಹಗರಣದಲ್ಲಿ ಆಡಳಿತಾರೂಢ ಟಿಎಂಸಿಯ ಸಂಸತ್ ಸದಸ್ಯರೂ ಶಾಮೀಲಾಗಿದ್ದಾರೆ ಎಂದು ಆರೋಪಿಸಿದರು. ನಂತರ ಪೊಲೀಸರು ಲಘು ಲಾಠಿಪ್ರಹಾರದ ಮೂಲಕ ಗುಂಪನ್ನು ಚದುರಿಸಿದರು. ನ್ಯಾಯಾಲಯವು ಆರೋಪಿಗಳನ್ನು 14 ದಿನಗಳವರೆಗೆ ಪೊಲೀಸ್ ವಶಕ್ಕೆ ಒಪ್ಪಿಸಿದೆ. 

ಸಿಪಿಐ(ಎಂ) ಹಗರಣವನ್ನು ಸಿಬಿಐ ತನಿಖೆಗೆ ಒಪ್ಪಿಸಬೇಕೆಂದು ಒತ್ತಾಯಿಸಿದೆ.

ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಹಣ ಕಳೆದುಕೊಂಡ ಸಾವಿರಾರು ಜನರಿಗೆ 500 ಕೋಟಿ ರೂ ಪರಿಹಾರ ಪ್ಯಾಕೇಜ್  ಘೋಷಿಸಿದ್ದಾರೆ.

ಏತನ್ಮಧ್ಯೆ ಶಾರದಾ ಸಮೂಹ ಸಂಸ್ಥೆಗಳ ಅಧ್ಯಕ್ಷ ಸುದೀಪ್ತ ಸೇನ್ ಅವರು ಸಿಬಿಐ ಗೆ ಪತ್ರ ಬರೆದು ತೃಣಮೂಲ ಕಾಂಗ್ರೆಸ್‌ನ ಸಂಸದರಾದ ಕುನಾಲ್ ಘೋಷ್ ಹಾಗೂ ಸೃಂಜಯ್ ಬೋಸ್ ಅವರು ಭಾರಿ ಪ್ರಮಾಣದ ಹಣವನ್ನು ಸಂಗ್ರಹಿಸುವಂತೆ ಬ್ಲಾಕ್‌ಮೇಲ್ ಮಾಡಿದ್ದು, ತಮ್ಮ ಹೆಸರಿನಲ್ಲಿ ಕೋಟ್ಯಂತರ ಹಣವನ್ನು ಅಕ್ರಮವಾಗಿ ಸಂಗ್ರಹಿಸಿದ್ದಾರೆ ಎಂದು 18 ಪುಟಗಳ ಪತ್ರದಲ್ಲಿ ಆರೋಪಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT