ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಾಕ್ ಗಡಿಯಲ್ಲಿ ನ್ಯಾಟೊ ಸೇನೆ ಜಮಾವಣೆ

Last Updated 17 ಅಕ್ಟೋಬರ್ 2011, 19:30 IST
ಅಕ್ಷರ ಗಾತ್ರ

ಇಸ್ಲಾಮಾಬಾದ್ (ಪಿಟಿಐ): ಹಖಾನಿ ಸಂಘಟನೆಯನ್ನು ಬಗ್ಗು ಬಡಿಯುವ ಸಲುವಾಗಿ ತೀವ್ರ ಕಾರ್ಯಾಚರಣೆಗೆ ಇಳಿದಿರುವ ಅಮೆರಿಕ ನೇತೃತ್ವದ ನ್ಯಾಟೊ ಪಡೆಗಳು ಆಫ್ಘನ್-ಪಾಕ್ ಗಡಿಯ ಉತ್ತರ ವಜೀರಿಸ್ತಾನ ಬುಡಕಟ್ಟು ಪ್ರದೇಶದಲ್ಲಿ ಬೃಹತ್ ಪ್ರಮಾಣದಲ್ಲಿ ಸೇನಾ ಜಮಾವಣೆ ಮಾಡಿದ್ದು, ಯುದ್ಧ ಪರಿಸ್ಥಿತಿ ನಿರ್ಮಾಣವಾಗಿದೆ.

ಬೃಹತ್ ಪ್ರಮಾಣದಲ್ಲಿ ಫಿರಂಗಿದಳ, ಹೆಲಿಕಾಪ್ಟರ್‌ಗಳನ್ನು ಗಡಿ ಪ್ರದೇಶದಲ್ಲಿ ನಿಯೋಜನೆ ಮಾಡಿದ್ದು, ಗಡಿಯಲ್ಲಿ ನಾಗರಿಕ ಸಂಚಾರಕ್ಕೆ ನಿರ್ಬಂಧ ಹೇರಲಾಗಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ.ಪಾಕಿಸ್ತಾನದ ಬುಡಕಟ್ಟು ಪ್ರದೇಶ ಗುಲಾಂ ಖಾನ್ ಪ್ರದೇಶದ ಬಳಿ ಹೆಚ್ಚಿನ ಸೇನೆಯನ್ನು ಶನಿವಾರದಿಂದ ಜಮಾವಣೆ ಮಾಡಲಾಗುತ್ತಿದೆ.

ಯೋಧರು ಗುಡ್ಡಗಾಡು ಪ್ರದೇಶದ ಎತ್ತರದ ಪ್ರದೇಶದಲ್ಲಿ ಬೀಡು ಬಿಟ್ಟಿದ್ದಾರೆ ಎಂದು ಪಾಕಿಸ್ತಾನ ಭದ್ರತಾ ಅಧಿಕಾರಿಗಳು ಮತ್ತು ಬುಡಕಟ್ಟು ಪ್ರದೇಶದ ಹಿರಿಯರನ್ನು ಉಲ್ಲೇಖಿಸಿ `ದಿ ನ್ಯೂಸ್ ಇಂಟರ್‌ನ್ಯಾಷನಲ್~ ವರದಿ ಮಾಡಿದೆ.

ಪೂರ್ವ ಆಘ್ಘಾನಿಸ್ತಾನದ ಖೋಸ್ತ್ ಪ್ರಾಂತ್ಯದ ಕೆಲವು ಪ್ರದೇಶಗಳಲ್ಲಿ ಕರ್ಫ್ಯೂ ವಿಧಿಸಿರುವ ನ್ಯಾಟೊ ಪಡೆಗಳು ಮನೆ ಮನೆಗಳಿಗೆ ನುಗ್ಗಿ ಹಖಾನಿ ಕಾರ್ಯಕರ್ತರಿಗೆ ಶೋಧ ನಡೆಸುತ್ತಿವೆ ಎಂದು `ಜಿಯೊ~ ವಾಹಿನಿ ವರದಿ ಮಾಡಿದೆ.

ಉತ್ತರ ವಜೀರಿಸ್ತಾನದ ಬುಡಕಟ್ಟು ಪ್ರದೇಶವಾದ ಗುಲಾಂ ಖಾನ್ ಪ್ರದೇಶದಲ್ಲಿ ಹಗಲಿನ ವೇಳೆಯಲ್ಲಿ ಯುದ್ಧ ವಿಮಾನಗಳು ಹಾರಾಡುತ್ತಿವೆ ಎಂದು ಸ್ಥಳೀಯರು ತಿಳಿಸಿದ್ದಾರೆ. ನ್ಯಾಟೊ ಪಡೆಗಳು ಗಡಿ ಪ್ರದೇಶದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜಮಾವಣೆ ಗೊಂಡಿರುವುದರಿಂದ ಅಮೆರಿಕ-ಪಾಕ್ ನಡುವೆ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದೆ ಎಂದೂ ಮಾಧ್ಯಮಗಳು ವರದಿ ಮಾಡಿವೆ.

ಜತೆಗೆ ಅಮೆರಿಕ ಪಡೆಗಳು ಡ್ರೋಣ್ (ಮಾನವ ರಹಿತ ವಿಮಾನ) ಕಾರ್ಯಚರಣೆಯನ್ನು ತೀವ್ರಗೊಳಿಸಿವೆ. ಪಾಕಿಸ್ತಾನದ ಗುಲಾಂ ಖಾನ್ ಪ್ರದೇಶ ಮತ್ತು ಆಫ್ಘಾನಿಸ್ತಾನದ ಖೋಸ್ತ್‌ಗೆ ಸಂಪರ್ಕ ಕಲ್ಪಿಸುವ ಹೆದ್ದಾರಿಯನ್ನು ಭದ್ರತಾ ಪಡೆಗಳು ಮುಚ್ಚಿದ್ದು, ನಾಗರಿಕ ಸಂಚಾರವನ್ನು ರದ್ದು ಪಡಿಸಿವೆ ಎಂದೂ ಮಾಧ್ಯಮಗಳು ವರದಿ ಮಾಡಿವೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT