ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಾಕ್ ವಿದೇಶಾಂಗ ಸಚಿವೆ ಹಾರಿಕೆ ಉತ್ತರ

Last Updated 12 ಜುಲೈ 2012, 19:30 IST
ಅಕ್ಷರ ಗಾತ್ರ

ನಾಮ್ ಫೆನ್ಹ್ (ಪಿಟಿಐ): ಮುಂಬೈ ದಾಳಿಯಲ್ಲಿ ಭಾಗಿಯಾಗಿದ್ದ ಲಷ್ಕರ್-ಎ-ತೊಯ್ಬಾ ಸಂಘಟನೆಯ ಭಯೋತ್ಪಾದಕ ಅಬು ಜುಂದಾಲ್ ಬಂಧನ ಮತ್ತು ಆತನು ಬಹಿರಂಗಪಡಿಸಿರುವ ಮಾಹಿತಿಯ ಆಧಾರದ ಮೇಲೆ ಏನು ಕ್ರಮ ತೆಗೆದುಕೊಳ್ಳಲಾಗುತ್ತದೆ ಎಂಬ ಬಗ್ಗೆ ಪಾಕಿಸ್ತಾನ ಸ್ಪಷ್ಟ ಭರವಸೆ ನೀಡಿಲ್ಲ.

ಭಾರತ ಮತ್ತು ಪಾಕಿಸ್ತಾನದ ಮಧ್ಯೆ ಯಾವುದೇ ರೀತಿಯ ತಪ್ಪು ಮಾಹಿತಿ ವಿನಿಮಯವಾಗಬಾರದು ಮತ್ತು ಯಾವುದೇ ರೀತಿಯ ಅಪನಂಬಿಕೆಗೆ ಆಸ್ಪದವಿರಬಾರದು ಎಂಬುದನ್ನು ಪದೇ ಪದೇ ಹೇಳಲಾಗಿದೆ ಎಂದು ಪಾಕಿಸ್ತಾನದ ವಿದೇಶಾಂಗ ಸಚಿವೆ ಹೀನಾ ರಬ್ಬಾನಿ ಖರ್ ಅವರು ಜಾರಿಕೆಯ ಉತ್ತರ ನೀಡಿದ್ದಾರೆ.

26/11ರ ಮುಂಬೈ ದಾಳಿಯ ವೇಳೆ ಏನು ನಡೆಯಿತು ಎಂದು ಬಂಧಿತ ಜುಂದಾಲ್ ಬಹಿರಂಗಪಡಿಸಿರುವ ಮಾಹಿತಿಯನ್ನು ಇತ್ತೀಚೆಗೆ ದೆಹಲಿಯಲ್ಲಿ ನಡೆದ ಎರಡೂ ರಾಷ್ಟ್ರಗಳ ವಿದೇಶಾಂಗ ಕಾರ್ಯದರ್ಶಿಗಳ ಮಟ್ಟದ ಮಾತುಕತೆ ಸಂದರ್ಭದಲ್ಲಿ ಭಾರತ ನೀಡಿತ್ತು. ಈ ಬಗ್ಗೆ ಏನು ಕ್ರಮ ತೆಗೆದು ಕೊಳ್ಳಲಾಗಿದೆ ಎಂಬ ಪ್ರಶ್ನೆಗೆ ಖರ್ ಅವರು ಹಾರಿಕೆಯ ಉತ್ತರ ನೀಡಿದ್ದಾರೆ.

ಲಷ್ಕರ್-ಎ-ತೊಯ್ಬಾ ಸಂಘಟನೆಯ ಸ್ಥಾಪಕ ಹಫೀಜ್ ಸಯೀದ್ ಜತೆ ತಾನು ಸಹ ನಿಯಂತ್ರಣ ಕಚೇರಿಯಲ್ಲಿ ಇದ್ದುಕೊಂಡು ಮುಂಬೈ ದಾಳಿಯನ್ನು ನಿರ್ದೇಶಿಸಿರುವುದಾಗ ಜುಂದಾಲ್ ನೀಡಿರುವ ಹೇಳಿಕೆಯನ್ನು ವಿದೇಶಾಂಗ ಕಾರ್ಯದರ್ಶಿ ರಂಜನ್ ಮಥಾಯ್ ಅವರು ಪಾಕಿಸ್ತಾನ ವಿದೇಶಾಂಗ ಕಾರ್ಯದರ್ಶಿ ಜಲೀಲ್ ಅಬ್ಬಾಸ್ ಗಿಲಾನಿ ಅವರಿಗೆ ತಿಳಿಸಿದ್ದಾರೆ.

ಆಸಿಯಾನ್ ಪ್ರಾದೇಶಿಕ ಸಂಘಟನೆ ಸಭೆಯಲ್ಲಿ ಪಾಲ್ಗೊಳ್ಳಲು ಇಲ್ಲಿಗೆ ಬಂದಿರುವ ಖರ್  ಅವರು, `ಪಾಕಿಸ್ತಾನ ಎದುರಿಸಿದಷ್ಟು ಭಯೋತ್ಪಾದಕ ಸಮಸ್ಯೆಯನ್ನು ನೆರೆಯ ಯಾವುದಾದರೂ ರಾಷ್ಟ್ರ ಎದುರಿಸುತ್ತಿದೆ ಎಂದು ಯಾರಾದರೂ ಹೇಳಿದರೆ ತಾವು ಖಂಡಿತವಾಗಿ ಅವರ ಜತೆ ಆ ಬಗ್ಗೆ ಚರ್ಚೆ ನಡೆಸಲು ಸಿದ್ಧ~ ಎಂದು ತಿಳಿಸಿದ್ದಾರೆ.

ಭಾರತ ಪ್ರತಿಪಾದನೆ: ಅಂತರರಾಷ್ಟ್ರೀಯ ನಿಯಮಾವಳಿಗೆ ಅನುಗುಣವಾಗಿ ದಕ್ಷಿಣ ಚೀನಾ ಸಾಗರದಲ್ಲಿ ವಿವಿಧ ರಾಷ್ಟ್ರಗಳ ನೌಕಾಯಾನಕ್ಕೆ ಸ್ವಾತಂತ್ರ್ಯ ಇರಬೇಕು ಎಂದು ಭಾರತ ಅಭಿಪ್ರಾಯಪಟ್ಟಿದೆ. ಈ ಸಾಗರ ಪ್ರಾಂತ್ಯದ ಸಂಪನ್ಮೂಲ ಬಳಕೆ ಹಕ್ಕು ಕೂಡ ಇದೇ ತತ್ವ ಆಧರಿಸಿರಬೇಕು ಎಂದು ಭಾರತದ ವಿದೇಶಾಂಗ ಸಚಿವ ಎಸ್.ಎಂ.ಕೃಷ್ಣ ಪ್ರತಿಪಾದಿಸಿದ್ದಾರೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT