ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಾಕ್‌ಗೆ ಶಸ್ತ್ರಾಸ್ತ್ರ ಪೂರೈಕೆ; ಭಾರತ ಕಳವಳ

Last Updated 9 ಫೆಬ್ರುವರಿ 2011, 19:30 IST
ಅಕ್ಷರ ಗಾತ್ರ

ಬೆಂಗಳೂರು:  ‘ಭಾರತಕ್ಕೆ ಶಸ್ತ್ರಾಸ್ತ್ರಗಳನ್ನು ಪೂರೈಸುತ್ತಿರುವ ಅಮೆರಿಕ ನೆರೆಯ ಪಾಕಿಸ್ತಾನಕ್ಕೂ ನೀಡುತ್ತಿರುವುದು ಕಳವಳಕಾರಿ ಸಂಗತಿ. ಹೀಗೆ ಮಾಡುವುದರಿಂದ ಎರಡೂ ದೇಶಗಳ ನಡುವೆ ಯುದ್ಧದ ವಾತಾವರಣ ಸೃಷ್ಟಿಯಾಗುವ  ಆತಂಕವಿದೆ’ ಎಂದು ಕೇಂದ್ರ ರಕ್ಷಣಾ ಸಚಿವ ಎ.ಕೆ. ಆಂಟನಿ ಹೇಳಿದರು.

ನಗರದ ಯಲಹಂಕ ವಾಯುನೆಲೆಯಲ್ಲಿ ಐದು ದಿನಗಳ 8ನೇ ಆವೃತ್ತಿಯ ‘ಏರೊ ಇಂಡಿಯಾ’ ಪ್ರದರ್ಶನಕ್ಕೆ ಬುಧವಾರ ಚಾಲನೆ ನೀಡಿದ ನಂತರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು.

‘ಅವಕಾಶ ಸಿಕ್ಕಾಗಲೆಲ್ಲ ಅಮೆರಿಕದ ಗಮನಕ್ಕೆ ಈ ವಿಷಯವನ್ನು ತಂದಿದ್ದೇವೆ. ನಮ್ಮ ಸ್ಥಿತಿಯನ್ನು ಅವರು ಅರ್ಥಮಾಡಿಕೊಳ್ಳುತ್ತಾರೆ ಎನ್ನುವ ವಿಶ್ವಾಸ ಇದೆ’ ಎಂದು ಅವರು ತಿಳಿಸಿದರು.

‘ಯಾವುದೇ ದೇಶವಾಗಲಿ ರಕ್ಷಣಾ ಸಾಮಗ್ರಿಗಳನ್ನು ತಾನೊಂದೇ ತಯಾರಿಸಿಕೊಳ್ಳಲು ಸಾಧ್ಯ ಇಲ್ಲ. ಬೇರೆ ದೇಶಗಳ ಮೇಲೆ ಅವಲಂಬನೆ ಆಗಬೇಕಾಗುತ್ತದೆ. ಸಂಪೂರ್ಣವಾಗಿ ಬೇರೆ ದೇಶಗಳ ಮೇಲೆ ಅವಲಂಬನೆಯಾಗದೆ, ಸಾಧ್ಯವಾದಷ್ಟು ದೇಶೀಯವಾಗಿ ಅಭಿವೃದ್ಧಿಪಡಿಸಿಕೊಳ್ಳುವುದು ನಮ್ಮ ಉದ್ದೇಶವಾಗಿದೆ’ ಎಂದು ಅವರು ನುಡಿದರು.

‘ಮುಂದಿನ ಏರೊ ಇಂಡಿಯಾ ಪ್ರದರ್ಶನವನ್ನು 2013ರ ಫೆ 6ರಿಂದ 10ರವರೆಗೆ ಇಲ್ಲಿಯೇ ನಡೆಸಲಾಗುವುದು’ ಎಂದು ಅವರು ಘೋಷಿಸಿದರು.

ಭಿನ್ನಾಭಿಪ್ರಾಯ ಇಲ್ಲ: ‘ಏರ್ ಚೀಫ್ ಮಾರ್ಷಲ್ ಪಿ.ವಿ. ನಾಯಕ್ ಅವರೊಂದಿಗೆ ಯಾವುದೇ ರೀತಿಯ ಭಿನ್ನಾಭಿಪ್ರಾಯ ಇಲ್ಲ. ಅವರು ನಮ್ಮ ವಾಯುಪಡೆ ಇನ್ನಷ್ಟು ಬಲಿಷ್ಠವಾಗಲಿ ಎನ್ನುವ ಉದ್ದೇಶದಿಂದ ಹೆಚ್ಚೆಚ್ಚು ಸಹಾಯ ಬಯಸುತ್ತಾರೆ ಅಷ್ಟೇ’ ಎಂದು ಹೇಳಿದರು.

ಯಾರೂ ಸ್ವತಂತ್ರರಲ್ಲ: ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಯಾರೂ ಸ್ವತಂತ್ರರಲ್ಲ. ಒಬ್ಬರ ಮೇಲೆ ಮತ್ತೊಬ್ಬರು ಇರುತ್ತಾರೆ. ನಿಗಾ ವಹಿಸು      ವುದು ಹಾಗೂ ನಿಯಂತ್ರಣ ಮಾಡುವುದು ಇದರ ಉದ್ದೇಶ’ ಎಂದು ಅವರು ತಿಳಿಸಿದರು.

‘ಇಸ್ರೊದ ಎಸ್-ಬ್ಯಾಂಡ್ ತರಂಗಾಂತರ ಹಗರಣದ ಹಿನ್ನೆಲೆಯಲ್ಲಿ ಸರ್ಕಾರಿ ಅಧಿಕಾರಿಗಳು ಎಷ್ಟು ಸ್ವತಂತ್ರರು’ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ‘ಸಚಿವನಾದ ನಾನು ಕೂಡ ಸ್ವತಂತ್ರನಲ್ಲ, ಜನರಿಗೆ ಹಾಗೂ ಸಂಸತ್ತಿಗೆ ಉತ್ತರದಾಯಿ ಆಗಿರಬೇಕು’ ಎಂದರು.

ಇಲಾಖೆಯ ಅಧಿಕಾರಿಗಳಿಗೆ ಉತ್ತಮವಾಗಿ ಕಾರ್ಯನಿರ್ವಹಿಸಲು ಅವಶ್ಯವಿದ್ದಷ್ಟು ಸ್ವಾತಂತ್ರ್ಯ ನೀಡಲಾಗಿದೆ. ಇಲಾಖೆಯ ಕಾರ್ಯಚಟುವಟಿಕೆಗಳಲ್ಲಿ ರಾಜಕೀಯ ಮಧ್ಯಪ್ರವೇಶ ಕೂಡ ಮಾಡುವುದಿಲ್ಲ ಎಂದು ಸ್ಪಷ್ಟಪಡಿಸಿದರು.

‘ರಕ್ಷಣಾ ಸಚಿವಾಲಯವು ಖರೀದಿಸಲು ಉದ್ದೇಶಿಸಿರುವ 126 ಬಹೂಪಯೋಗಿ ಬಳಕೆಯ ಮಧ್ಯಮ ಗಾತ್ರದ ಯುದ್ಧ ವಿಮಾನಗಳ (ಎಂಎಂಆರ್‌ಸಿಎ) ಟೆಂಡರ್ ಪ್ರಕ್ರಿಯೆ ನಿಗದಿಯಂತೆ ನಡೆಯಲಿದೆ. ಇದಕ್ಕೆ ಯಾವುದೇ ಗಡುವು ವಿಧಿಸಲಾಗಿಲ್ಲ’ ಎಂದು ತಿಳಿಸಿದರು.

ಸರ್ಕಾರಿ ಕಂಪೆನಿಗಳು ಸಶಕ್ತ:  ‘ರಕ್ಷಣಾ ವಲಯದ ಸರ್ಕಾರಿ ಕಂಪೆನಿಗಳು ಅತ್ಯಾಧುನಿಕವಾಗಿದ್ದು, ಖಾಸಗಿ ಕಂಪೆನಿಗಳಿಗೆ ಪೈಪೋಟಿ ನೀಡುವಷ್ಟು ಸಶಕ್ತವಾಗಿವೆ. ಜಾಗತಿಕ ಮಟ್ಟದ ಹಲವು ಟೆಂಡರ್‌ಗಳನ್ನು ಪಡೆದಿರುವುದು ಇದಕ್ಕೆ ಸಾಕ್ಷಿ’ ಎಂದು ಅವರು ಪ್ರಶಂಸಿಸಿದರು.

‘ಸರ್ಕಾರಿ ಕಂಪೆನಿಗಳು ಸಂಪೂರ್ಣ ವಿಶ್ವಾಸಕ್ಕೆ ಪಾತ್ರವಾಗಿವೆ. ಸರ್ಕಾರದ ನಿಯಮಾವಳಿಗೆ ತಕ್ಕಂತೆ ಅವು ಕಾರ್ಯನಿರ್ವಹಿಸುತ್ತವೆ. ಹೀಗಾಗಿ ರಕ್ಷಣಾ ಸಚಿವಾಲಯದ ಹೆಚ್ಚಿನ ಗುತ್ತಿಗೆಗಳನ್ನು ಇವುಗಳಿಗೆ ನೀಡಲಾಗುತ್ತದೆ’ ಎಂದು ಉತ್ತರಿಸಿದರು.

ಇದಕ್ಕೂ ಮುಂಚೆ ‘ಏರೊ ಇಂಡಿಯಾ’ ಪ್ರದರ್ಶನದ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಅವರು, ‘ನಮ್ಮದು ಶಾಂತಿಪ್ರಿಯ ರಾಷ್ಟ್ರವಾದರೂ, ದೇಶಕ್ಕೆ ಎದುರಾಗುವ ಯಾವುದೇ ಸವಾಲುಗಳನ್ನು ಎದುರಿಸಲು ರಕ್ಷಣಾ ಪಡೆಗಳು ಸಮರ್ಥವಾಗಿವೆ’ ಎಂದು ಪ್ರಶಂಸಿಸಿದರು.

‘ನೆರೆಯ ರಾಷ್ಟ್ರಗಳಲ್ಲಿನ ಅಶಾಂತಿ, ಗಲಭೆಗಳು ದೇಶೀಯ ಸುರಕ್ಷತೆಗೆ ಆತಂಕ ಸೃಷ್ಟಿಸಿವೆ. ಈ ಹಿನ್ನೆಲೆಯಲ್ಲಿ ದೇಶದ ರಕ್ಷಣಾ ವ್ಯವಸ್ಥೆಯನ್ನು ಆಧುನೀಕರಣ ಹಾಗೂ ಇನ್ನಷ್ಟು ಸಬಲಗೊಳಿಸಲಾಗುತ್ತಿದೆ. ದೇಶದ ಒಟ್ಟು ಉತ್ಪಾದನೆಯ (ಜಿಡಿಪಿ) ಶೇ 2.5ರಷ್ಟು ಭಾಗವನ್ನು ರಕ್ಷಣಾ ಕಾರ್ಯಗಳಿಗೆ ವೆಚ್ಚ ಮಾಡಲಾಗುತ್ತಿದೆ’ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT