ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಿಟೀಲು ಶ್ರೀನಿವಾಸ್ ಕಿರೀಟಕ್ಕೆ ಇನ್ನೊಂದು ಗರಿ

Last Updated 2 ಮೇ 2012, 19:30 IST
ಅಕ್ಷರ ಗಾತ್ರ

ಕಳೆದ ಒಂದೂವರೆ ದಶಕಗಳಿಂದಲೂ ಕರ್ನಾಟಕ ಸಂಗೀತ ಕ್ಷೇತ್ರದಲ್ಲಿ ಪರಿಚಿತವಾಗಿರುವ `ಆರಾಧನಾ~ ಸಂಸ್ಥೆಯು ಪ್ರತಿವರ್ಷವೂ ವಿಶೇಷ ಕಾರ್ಯಕ್ರಮಗಳನ್ನು ನಡೆಸುತ್ತಾ ಬಂದಿದೆ. ಹಿರಿಯ ಪಿಟೀಲು ವಿದ್ವಾಂಸರಾಗಿದ್ದ ಟಿ.ಕೆ.ಸುಬ್ರಹ್ಮಣ್ಯ ಶಾಸ್ತ್ರಿ, ಪ್ರಭಾಕರ್ ಫಾಠಕ್ ಹಾಗೂ ಸಿ.ವಿ.ನಾಗರಾಜ್ ಈ ಮೂರೂ ವಿದ್ವಾಂಸರ ನೆನಪಿನಲ್ಲಿ ನಡೆಯುವ ಕಾರ್ಯಕ್ರಮವಿದು. ಈಗ ಪಿಟೀಲು ವಿದ್ವಾನ್ ಟಿ.ಎಸ್. ಕೃಷ್ಣಮೂರ್ತಿ ಹಾಗೂ ಅವರ ಪತ್ನಿ ಭರತನಾಟ್ಯ ಪ್ರವೀಣೆ ಮತ್ತು ಗಾಯಕಿ ಸುಮಾ ಕೃಷ್ಣಮೂರ್ತಿ ಅವರ ನೇತೃತ್ವದಲ್ಲಿ ನಡೆಯುತ್ತಿರುವ ಸಂಗೀತೋತ್ಸವ ಹದಿನೈದನೆಯದು. ಈ ದಂಪತಿ ತಮ್ಮ ಮನೆಯ ಮೇಲ್ಛಾವಣಿಯನ್ನೇ ಸುಂದರವಾದ ಸಭಾಂಗಣವಾಗಿ ಪರಿವರ್ತಿಸಿ ಅಲ್ಲಿ ಕಾರ್ಯಕ್ರಮಗಳನ್ನು ನಡೆಸುತ್ತಿದ್ದರು.

ತೈಲದೀಪಗಳ ಬೆಳಕಿನಲ್ಲಿ ಧ್ವನಿವರ್ಧಕ ರಹಿತ ಕಛೇರಿಗಳನ್ನು ನಡೆಸಿದ್ದೂ ಉಂಟು. ಅನೇಕ ಸೀಡಿಗಳನ್ನು ಪ್ರಕಟಿಸುವುದರ ಜೊತೆಗೆ ಪ್ರತಿ ವರ್ಷವೂ ಸಂಗೀತೋತ್ಸವವನ್ನು ನಡೆಸಿ ಸಮಾರೋಪ ಸಮಾರಂಭದಲ್ಲಿ ಅದರ ಅಧ್ಯಕ್ಷತೆ ವಹಿಸಿದ ಕಲಾವಿದರಿಗೆ `ಕಲಾರಾಧನಾ ಶ್ರೀ~ ಎಂಬ ಬಿರುದು, ನೆನಪಿನ ಕಾಣಿಕೆ, ಗೌರವ ಧನ ನೀಡಿ ಸನ್ಮಾನಿಸುತ್ತಾ ಬಂದಿದ್ದಾರೆ.

ಆರಾಧನಾ ಸಂಸ್ಥೆಯ ಈ ಬಾರಿಯ ಅಂದರೆ 15ನೇ ವರ್ಷದ ಮೂರು ದಿನಗಳ ಸಂಗೀತೋತ್ಸವವನ್ನು ಮೇ 4ರಿಂದ 6ರವರೆಗೆ ಬಸವೇಶ್ವರನಗರದ ಎಸ್‌ವಿಕೆ ಲೇಔಟ್‌ನಲ್ಲಿರುವ ಲಕ್ಷ್ಮಿ ವರಪ್ರದ ವೆಂಕಟೇಶ್ವರ ದೇವಸ್ಥಾನದ ಆವರಣದಲ್ಲಿ ಹಮ್ಮಿಕೊಳ್ಳಲಾಗಿದೆ.

ಖ್ಯಾತ ಪಿಟೀಲು ವಿದ್ವಾಂಸ ಪ್ರೊ.ಟಿ.ಟಿ. ಶ್ರೀನಿವಾಸನ್ ಅವರು ಸಂಗೀತೋತ್ಸವದ ಅಧ್ಯಕ್ಷ ಸ್ಥಾನವನ್ನು ಅಲಂಕರಿಸಿ ಮೇ 6ರಂದು ನಡೆಯಲಿರುವ ಸಮಾರೋಪ ಸಮಾರಂಭದಲ್ಲಿ `ಕಲಾರಾಧನಾ ಶ್ರೀ~ ಪ್ರಶಸ್ತಿಗೆ ಭಾಜನರಾಗಲಿದ್ದಾರೆ.

ಬಾಲ್ಯಾವಸ್ಥೆಯಿಂದಲೇ ತಮ್ಮ ತಂದೆ ಟಿ.ಎಸ್.ತಾತಾಚಾರ್ ಅವರಿಂದ ಪಿಟೀಲು ವಾದನದಲ್ಲಿ ತರಬೇತಿ ಆರಂಭಿಸಿ ಹದಿನೈದರ ಹರೆಯದಲ್ಲೇ ಚೊಚ್ಚಲ ಕಛೇರಿ ನೀಡಿ ಭೇಷ್ ಅನಿಸಿಕೊಂಡರು. ಆಕಾಶವಾಣಿಯ ನಿಲಯ ಕಲಾವಿದರೂ ಆಗಿನ ಕಾಲದ ಮುಂಚೂಣಿ ಪಿಟೀಲು ವಾದಕರೂ ಆಗಿದ್ದ ತಂದೆ ತಾತಾಚಾರ್ ಅವರ ಎಲ್ಲ ಪ್ರೋತ್ಸಾಹದಿಂದ ಶ್ರೀನಿವಾಸನ್ ಬೇಗ ಪಳಗಿದ ಪಕ್ಕವಾದ್ಯಗಾರರಾದರು. ಪ್ರಧಾನ ಕಲಾವಿದರೊಂದಿಗೆ ಸರಸ ಒಡನಾಟ, ಅನುಕರಣೆ ಮತ್ತು ಅನುಸರಣೆಗಳ ಜೊತೆಗೆ ತಮ್ಮ ಶುದ್ಧ ಸಾಂಪ್ರದಾಯಿಕ ಶೈಲಿ, ಉತ್ತಮ ಲಯ ಜ್ಞಾನ, ಶಾಸ್ತ್ರ ಮತ್ತು ಪ್ರಯೋಗಳಲ್ಲಿ ಪರಿಣತಿಯಿಂದ ಅವರ ಜನಪ್ರಿಯತೆ ಹೆಚ್ಚಿತು. ಆಕಾಶವಾಣಿಯಿಂದಲೂ ಮಾನಿತರಾದರು. ಭೌತಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದುಕೊಂಡು ಬೆಂಗಳೂರಿನ ಸುಪ್ರಸಿದ್ಧ ಕಾಲೇಜಿನಲ್ಲಿ ಅಧ್ಯಾಪನ ವೃತ್ತಿಯಲ್ಲಿ ತೊಡಗಿದರೂ ಅವರ ಒಲವು ಪಿಟೀಲು ವಾದನದ ಕಡೆಗೇ.

ತಮ್ಮ ಕಾಲೇಜಿನ ಎಂಇಎಸ್ ಕಲಾವೇದಿ ವೇದಿಕೆಯ ಚಟುವಟಿಕೆಗಳ ನೇತಾರರಾಗಿ ಶ್ರೀನಿವಾಸನ್ ವೈವಿಧ್ಯಮಯ ಕಾರ್ಯಕ್ರಮಗಳನ್ನು ನಿರಂತರವಾಗಿ ಆಯೋಜಿಸಿ ಹಲವಾರು ಕಲಾವಿದರಿಗೆ ವೇದಿಕೆಯನ್ನು ಒದಗಿಸಿಕೊಡುತ್ತಿದ್ದಾರೆ. ಬೇರೆ ಬೇರೆ ಸಂಸ್ಥೆಗಳೊಡನೆಯೂ ಕಲಾವೇದಿಯು ಕೈಜೋಡಿಸಿ ಆ ಸಂಸ್ಥೆಗಳಿಗೂ ಒತ್ತಾಸೆಯಾಗಿ ನಿಂತು ಕಾರ್ಯಕ್ರಮಗಳನ್ನು ನಡೆಸುತ್ತಿರುವುದರಲ್ಲಿ ಶ್ರೀನಿವಾಸನ್‌ಅವರ ಮಹತ್ವದ ಪಾತ್ರವಿದೆ.

 ರಾಜ್ಯದ ಒಳಗೆ ಮತ್ತು ಹೊರಗೆ ಹಾಗೂ ವಿದೇಶಗಳಲ್ಲಿ ಅವರು ಸಂಚರಿಸಿ ಅಸಂಖ್ಯ ಸೋಲೋ ಕಛೇರಿಗಳು ಮತ್ತು ಪಕ್ಕವಾದ್ಯ ಸಹಕಾರವನ್ನು ನೀಡಿದ್ದಾರೆ. ಆಕಾಶವಾಣಿ ಮತ್ತು ದೂರದರ್ಶನ ಕಛೇರಿಗಳ ಜೊತೆಗೆ ಅನೇಕ ಸಂಗೀತ ರೂಪಕಗಳನ್ನೂ ನಿರೂಪಿಸಿದ್ದಾರೆ. ಸಂಗೀತಕ್ಕೆ ಸಂಬಂಧಿಸಿದ ಕೆಲವು ಉಪಯುಕ್ತ ಲೇಖನಗಳನ್ನು ಬರೆದಿದ್ದಾರೆ. ತಮ್ಮ ತಂದೆಯವರೊಂದಿಗೆ ಯುಗಳ ಕಛೇರಿಗಳನ್ನೂ ಮಾಡಿ ಪ್ರಶಂಸೆಗೆ ಭಾಜನರಾಗಿದ್ದಾರೆ. ಮಠ-ಮಂದಿರಗಳಿಂದ ಅವರಿಗೆ ಬಿರುದು ಮತ್ತು ಪುರಸ್ಕಾರಗಳು ಸಂದಿವೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT