ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಿಯು ಉಪನ್ಯಾಸಕರಿಗೆ ಬಡ್ತಿ: ಪರಿಶೀಲನೆ ಭರವಸೆ

Last Updated 6 ಡಿಸೆಂಬರ್ 2013, 19:30 IST
ಅಕ್ಷರ ಗಾತ್ರ

ಸುವರ್ಣಸೌಧ (ಬೆಳಗಾವಿ): ಎಂ.ಫಿಲ್, ಪಿಎಚ್.ಡಿ ಪದವಿಗಳನ್ನು ಪಡೆದಿರುವ ಮತ್ತು ರಾಷ್ಟ್ರೀಯ,  ರಾಜ್ಯಮಟ್ಟದ ಅರ್ಹತಾ ಪರೀಕ್ಷೆಯಲ್ಲಿ ಉತ್ತೀರ್ಣ­ರಾಗಿರುವ ಪದವಿಪೂರ್ವ ಕಾಲೇಜುಗಳ ಉಪನ್ಯಾಸಕರಿಗೆ ಬಡ್ತಿ ನೀಡಿ, ಪದವಿ ಕಾಲೇಜುಗಳಿಗೆ ನಿಯೋಜಿಸುವ ಕುರಿತು ಸರ್ಕಾರ ಪರಿಶೀಲನೆ ನಡೆಸುತ್ತಿದೆ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಕಿಮ್ಮನೆ ರತ್ನಾಕರ ತಿಳಿಸಿದರು.

ವಿಧಾನ ಪರಿಷತ್ತಿನಲ್ಲಿ ಶುಕ್ರವಾರ ಪ್ರಶ್ನೋತ್ತರ ಅವಧಿಯಲ್ಲಿ ಬಿಜೆಪಿಯ ಅಮರನಾಥ ಪಾಟೀಲ್ ಅವರ ಪ್ರಶ್ನೆಗೆ ಉತ್ತರಿಸಿ, ಎಂ.ಫಿಲ್, ಪಿಎಚ್.ಡಿ ಪದವಿ ಪಡೆದ ಹಾಗೂ ಎನ್ಇಟಿ, ಎಸ್ಎಲ್ಇ­ಟಿ ಯಲ್ಲಿ ಉತ್ತೀರ್ಣರಾಗಿರುವ ೧,೩೯೧ ಉಪನ್ಯಾಸಕರು ಪಿಯು ಕಾಲೇಜುಗಳಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಪದವಿ ಕಾಲೇಜು­ಗಳ ಉಪನ್ಯಾಸಕರಾಗುವ ಅರ್ಹತೆ ಅವರಿಗೆ ಇದೆ. ಅವರನ್ನು ಪದವಿ ಕಾಲೇಜುಗಳಿಗೆ ನಿಯೋಜಿಸಲು ಕೆಲವು ಕಾನೂನುಗಳಿಗೆ ತಿದ್ದುಪಡಿ ಅಗತ್ಯವಿದೆ. ಈ ಕುರಿತು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಇಲಾಖೆ ಹಾಗೂ ಉನ್ನತ ಶಿಕ್ಷಣ ಇಲಾಖೆಗಳು ಪರಿಶೀಲನೆ ನಡೆಸುತ್ತಿವೆ ಎಂದರು.

೧೯೯೩ರ ಹಿಂದೆ ಪಿಯು ಉಪನ್ಯಾಸಕ­ರಿಗೆ ಬಡ್ತಿ ನೀಡಿ ಪದವಿ ಕಾಲೇಜುಗಳಿಗೆ ನೇಮಕ ಮಾಡಲಾಗುತ್ತಿತ್ತು. ಆದರೆ, ಈಗ ಅಂತಹ ವ್ಯವಸ್ಥೆ ಇಲ್ಲ. ಇದರಿಂದ ಅರ್ಹ ಉಪನ್ಯಾಸಕರಿಗ ಅನ್ಯಾಯ ಆಗುತ್ತಿದೆ. ಈಗ ಮತ್ತೆ ಅಂತಹ ವ್ಯವಸ್ಥೆ ಜಾರಿಗೊಳಿಸಿ ಎಂದು ಅಮರನಾಥ ಪಾಟೀಲ್ ಒತ್ತಾಯಿಸಿದರು.

ಬಳಿಕ ಉತ್ತರಿಸಿದ ರತ್ನಾಕರ, 'ಈ ವಿಷಯವನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿದೆ. ಆದರೆ, ಹಲವು ನಿಯಮಗಳಿಗೆ ತಿದ್ದುಪಡಿ ತರಬೇಕು. ತಮ್ಮ ಇಲಾಖೆಯು ಉನ್ನತ ಶಿಕ್ಷಣ ಇಲಾಖೆಯ ಜೊತೆ ಸೇರಿ ಕ್ರಮ ಕೈಗೊಳ್ಳಬೇಕಾಗುತ್ತದೆ' ಎಂದರು.

ನಂತರ ಈ ಕುರಿತು ಪ್ರತಿಕ್ರಿಯಿಸಿದ ಉನ್ನತ ಶಿಕ್ಷಣ ಸಚಿವ ಆರ್.ವಿ.ದೇಶಪಾಂಡೆ, 'ಅರ್ಹತೆ ಇರುವ ಪಿಯು ಉಪನ್ಯಾಸಕರನ್ನು ಪದವಿ ಕಾಲೇಜುಗಳಿಗೆ ನೇಮಕ ಮಾಡಬೇಕೆಂಬ ಬೇಡಿಕೆ ಸರಿ ಇದೆ. ಆದರೆ, ವೃಂದ ಮತ್ತು ನೇಮಕಾತಿ ನಿಯಮಗಳ ತಿದ್ದುಪಡಿ, ಸೇವಾ ಹಿರಿತನ ಮತ್ತಿತರ ವಿಷಯಗಳಲ್ಲಿ ಕಾನೂನು ಇಲಾಖೆಯ ಅಭಿಪ್ರಾಯ ಪಡೆದು ಮುಂದುವರಿಯಬೇಕಾಗುತ್ತದೆ' ಎಂದು ಸ್ಪಷ್ಟಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT