ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಿಲಿಕುಳದಲ್ಲಿ ರಾಜ್ಯದ 2ನೇ ತಾರಾಲಯ

Last Updated 5 ಫೆಬ್ರುವರಿ 2011, 6:50 IST
ಅಕ್ಷರ ಗಾತ್ರ

ಮಂಗಳೂರು: ‘ಪ್ರವಾಸೋದ್ಯಮ’ ಅಭಿವೃದ್ಧಿಯಲ್ಲಿ ರಾಜ್ಯದ ಗಮನ ಸೆಳೆದ ಪಿಲಿಕುಳ ನಿಸರ್ಗಧಾಮದಲ್ಲಿ ತಾರಾಲಯ ಸ್ಥಾಪನೆಗೆ ರಾಜ್ಯ ಸರ್ಕಾರದ ಅಂಕಿತ ದೊರಕಿದೆ. ರಾಜ್ಯದ ಎರಡನೇ ತಾರಾಲಯ ಹೊಂದಿದ ಕೇಂದ್ರ ಎಂಬ ಹೆಗ್ಗಳಿಕೆಗೆ ಪಿಲಿಕುಳ ಪಾತ್ರವಾಗಲಿದೆ.

ಪಿಲಿಕುಳ ನಿಸರ್ಗಧಾಮದ ಪ್ರಾದೇಶಿಕ ವಿಜ್ಞಾನ ಕೇಂದ್ರದ ಆಶ್ರಯದಲ್ಲಿ ರೂ. 15.5 ಕೋಟಿ ವೆಚ್ಚದಲ್ಲಿ ನೂತನ ತಾರಾಲಯ ಸ್ಥಾಪನೆಯಾಗಲಿದೆ. ಇದಕ್ಕೆ ರಾಜ್ಯ ಸರ್ಕಾರ ಹಂತಹಂತವಾಗಿ ರೂ. 11 ಕೋಟಿ ನೀಡಲಿದೆ. ಕೇಂದ್ರವೂ ನೆರವು ನೀಡಲಿದೆ ಎಂದು ಗುರುವಾರ ನಡೆದ ರಾಜ್ಯ ಸಂಪುಟ ಸಭೆಯಲ್ಲಿ ತೀರ್ಮಾನಿಸಲಾಗಿತ್ತು.

ಒಂದೂವರೆ ವರ್ಷದ ಕನಸು: ಒಂದೂವರೆ ವರ್ಷದ ಹಿಂದೆ ಕಡಲತಡಿಯಲ್ಲೊಂದು ತಾರಾಲಯ ಸ್ಥಾಪಿಸಬೇಕು ಎಂಬ ಕನಸು ಮೊಳಕೆಯೊಡೆದಿತ್ತು. ನೀಲಿ ನಕಾಶೆ ರೂಪಿಸಲಾಗಿದೆ. ಪಿಲಿಕುಳ ವಿಜ್ಞಾನ ಕೇಂದ್ರದ ಸಮೀಪದಲ್ಲೇ 3 ಎಕರೆಯಲ್ಲಿ ತಾರಾಲಯ ಸ್ಥಾಪನೆಯಾಗಲಿದ್ದು, 3 ವರ್ಷದಲ್ಲಿ ಪೂರ್ಣಗೊಳಿಸುವ ಗುರಿ ಹೊಂದಲಾಗಿದೆ.

ಕಟ್ಟಡ ಹಾಗೂ ತಾರಾಲಯಕ್ಕೆ ಬೇಕಾಗುವ ಸಾಮಗ್ರಿಗೆ ರೂ. 14 ಕೋಟಿ ವೆಚ್ಚವಾಗಲಿದೆ. ರಾಜ್ಯ ಸರ್ಕಾರ ಮೂರು ಕಂತುಗಳಲ್ಲಿ ರೂ. 11 ಕೋಟಿ ಬಿಡುಗಡೆ ಮಾಡಲಿದೆ. ಮೊದಲ ವರ್ಷ ರೂ. 1 ಕೋಟಿ, ಎರಡು ಹಾಗೂ ಮೂರನೇ ವರ್ಷ ತಲಾ ರೂ. 5 ಕೋಟಿ ಬಿಡುಗಡೆ ಮಾಡಲಿದೆ. ಸಾರ್ವಜನಿಕ ಸಹಭಾಗಿತ್ವದಲ್ಲಿ ರೂ. 3 ಕೋಟಿ ಸಂಗ್ರಹಿಸಲು ಯೋಜಿಸಲಾಗಿದೆ. ಉಳಿದ 1.5 ಕೋಟಿ ರೂಪಾಯಿ ಜಾಗದ ಬಾಬ್ತು ಎಂದು ಪಿಲಿಕುಳ ನಿಸರ್ಗಧಾಮ ಸೊಸೈಟಿ ಅಧ್ಯಕ್ಷ ಜೆ.ಆರ್.ಲೋಬೊ ‘ಪ್ರಜಾವಾಣಿ’ಗೆ ಶುಕ್ರವಾರ ತಿಳಿಸಿದರು.

ಯೋಜನೆ ಅನುಷ್ಠಾನ ಹಾಗೂ ನಿರ್ವಹಣೆ ಜವಾಬ್ದಾರಿ ಪಿಲಿಕುಳ ನಿಸರ್ಗಧಾಮ ಸೊಸೈಟಿಗೆ ನೀಡಲಾಗಿದೆ. ತಾರಾಲಯ 220 ಮಂದಿ ಕುಳಿತುಕೊಳ್ಳಲು ಅವಕಾಶವಿದ್ದು, ಗೋಪುರದ ವ್ಯಾಸ 15 ಮೀಟರ್ ಇರಲಿದೆ. ಬೆಂಗಳೂರಿನ ತಾರಾಲಯಕ್ಕಿಂತ ಪಿಲಿಕುಳದ ಆಸನ ಸಾಮರ್ಥ್ಯ ಜಾಸ್ತಿ ಇರಲಿದ್ದು, ಅತ್ಯಾಧುನಿಕ ತಂತ್ರಜ್ಞಾನ ಬಳಸಿ ನಿರ್ಮಾಣ ಮಾಡಲಾಗುತ್ತಿದೆ. ಡಿಜಿಟಲ್, ಅಪ್ಟೋ ಮೆಕ್ಯಾನಿಕಲ್ ಅಂಡ್ ಹೈಬ್ರಿಡ್ ಸಿಸ್ಟಮ್ ಇಲ್ಲಿ ಅಳವಡಿಸಲಾಗುವುದು ಎಂದು ಅವರು ಮಾಹಿತಿ ನೀಡಿದರು.

ನಿರ್ವಹಣಾ ವೆಚ್ಚ ಕಡಿಮೆ: ಪಿಲಿಕುಳದಲ್ಲಿ ಪ್ರಾದೇಶಿಕ ವಿಜ್ಞಾನ ಕೇಂದ್ರ ಇರುವುದರಿಂದ ತಾರಾಲಯಕ್ಕೆ ಹೆಚ್ಚಿನ ಸಿಬ್ಬಂದಿ ಅಗತ್ಯ ಬೀಳದು. ಪಾರ್ಕಿಂಗ್, ವಿದ್ಯುತ್ ಸೇರಿದಂತೆ ಕೆಲವು ಸೌಲಭ್ಯಗಳು ಎರಡೂ ಕಡೆಗೆ ಬಳಕೆ ಆಗುವುದರಿಂದ ನಿರ್ವಹಣೆ ವೆಚ್ಚ ಬೇರೆ ಕಡೆಗೆ ಹೋಲಿಸಿದರೆ ತೀರಾ ಕಡಿಮೆ ಆಗಲಿದೆ ಎಂದರು. ಇಲ್ಲಿಗೆ ಬೇಕಾಗುವ ತಾಂತ್ರಿಕ ಸಾಮಗ್ರಿಗಳಿಗೆ ಜಾಗತಿಕ ಟೆಂಡರ್ ಕರೆದು ನಂತರ ಕಟ್ಟಡದ ವಿನ್ಯಾಸ ರೂಪಿಸಲಾಗುವುದು. ತಾಂತ್ರಿಕ ಸಮಿತಿ ರಚನೆಯೂ ಆಗಬೇಕಿದೆ. ಕೋಲ್ಕತ್ತದ ರಾಷ್ಟ್ರೀಯ ವಿಜ್ಞಾನ ಕೌನ್ಸಿಲ್ ಮಾರ್ಗದರ್ಶನದಲ್ಲಿ ತಾಂತ್ರಿಕತೆ ಅನುಷ್ಠಾನ ಮಾಡಲಾಗುವುದು. ಶಾಸಕ ಎನ್.ಯೋಗೀಶ್ ಭಟ್ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಕೃಷ್ಣ ಪಾಲೆಮಾರ್ ಅವರ ವಿಶೇಷ ಮುತುವರ್ಜಿಯಿಂದ ಸಂಪುಟದ ಒಪ್ಪಿಗೆ ಸಿಕ್ಕಿದೆ ಎಂದು ಅವರು ಮಾಹಿತಿ ನೀಡಿದರು.

ತಾರಾಲಯ ಪಥ: ಪಿಲಿಕುಳದಲ್ಲಿ ತಾರಾಲಯ ಸ್ಥಾಪನೆಗೆ ನಿಸರ್ಗಧಾಮ ಸೊಸೈಟಿ ವತಿಯಿಂದ ರೂ. 9 ಕೋಟಿ ಪ್ರಸ್ತಾವನೆಯನ್ನು ರಾಜ್ಯ ಸರ್ಕಾರಕ್ಕೆ ಸಲ್ಲಿಸಲಾಗಿತ್ತು. ಶಾಸಕ ಯೋಗೀಶ್ ಭಟ್ ಹಾಗೂ ಸಚಿವ ಕೃಷ್ಣ ಪಾಲೆಮಾರ್ ಮೂಲಕ ಸಿಎಂಗೆ ಸಲ್ಲಿಸಲಾಗಿತ್ತು. ಬಳಿಕ ತಾರಾಲಯಕ್ಕೆ ಮುಂಗಡಪತ್ರದಲ್ಲಿ ರೂ. 1 ಕೋಟಿ ಮಂಜೂರಾಗಿತ್ತು. ರಾಜ್ಯ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ ಪ್ರಧಾನ ಕಾರ್ಯದರ್ಶಿ ಅವರು ಸಭೆ ನಡೆಸಿ ತಾರಾಲಯ ಸ್ಥಾಪನೆ ಸಂಬಂಧ ವಿಸ್ತ್ರತ ಚರ್ಚೆ ನಡೆಸಿದ್ದರು. ಬೆಂಗಳೂರು ನೆಹರು ತಾರಾಲಯದ ನಿರ್ದೇಶಕರ ಅಧ್ಯಕ್ಷತೆಯಲ್ಲಿ ತಜ್ಞರ ಸಮಿತಿ ರಚಿಸಿ ಅಧ್ಯಯನ ನಡೆಸಿ ರಾಜ್ಯ ಸರ್ಕಾರಕ್ಕೆ ವರದಿ ಸಲ್ಲಿಸಲಾಗಿತ್ತು ಎಂದು ಮೂಲಗಳು ತಿಳಿಸಿವೆ.

ಬೆಂಗಳೂರಿನ ತಾರಾಲಯ
ಬೆಂಗಳೂರಿನ ಜವಹರ್‌ಲಾಲ್ ನೆಹರು ತಾರಾಲಯ 1989ರಲ್ಲಿ ಸ್ಥಾಪನೆಯಾಗಿತ್ತು. 1992ರಲ್ಲಿ ಹೊಸದಾಗಿ ಸ್ಥಾಪನೆಯಾದ ಸ್ಥಾಯತ್ತ ಸಂಸ್ಥೆ ಬೆಂಗಳೂರು ಅಸೋಸಿಯೇಶನ್ ಫಾರ್ ಸಯನ್ಸ್ ಎಜ್ಯುಕೇಶನ್‌ಗೆ ಆಡಳಿತ ನೀಡಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT