ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪೀರಿಯೆಡ್ ಸಿನಿಮಾಗಳತ್ತ ಸೋನಾಕ್ಷಿ

ಪಂಚರಂಗಿ
Last Updated 25 ಜುಲೈ 2013, 19:59 IST
ಅಕ್ಷರ ಗಾತ್ರ

ಸೋನಾಕ್ಷಿ ಅವರ ಕಣ್ಣಾಲಿಗಳು ಆತ್ಮವಿಶ್ವಾಸದ ಚಿಲುಮೆಯಂತೆ ಕಂಗೊಳಿಸುತ್ತಿದ್ದವು. ನಾನಿಲ್ಲಿರುವುದೇ ಬಾಲಿವುಡ್ ಆಳಲು ಎಂಬಂಥ ಗತ್ತು ಅವರಲ್ಲಿತ್ತು. ಈಗಾಗಲೇ ಬಾಲಿವುಡ್‌ನ ಖ್ಯಾತ ಹೀರೊಗಳೊಂದಿಗೆ ಹಾಗೂ ದೊಡ್ಡ ಬ್ಯಾನರ್‌ಗಳಲ್ಲಿ ನಟಿಸಿ ಪಳಗಿರುವ ಸೋನಾಕ್ಷಿ ಮುಖ್ಯವಾಹಿನಿಯ ಸಿನಿಮಾಗಳ ಜತೆಯಲ್ಲೇ `ಲೂಟೇರಾ' ರೀತಿಯ ಚಿತ್ರಗಳನ್ನು ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ. ರಾಜ್‌ಗುರು ಫ್ಯಾಷನ್ ಪೆರೇಡ್‌ನಲ್ಲಿ ಪಾಲ್ಗೊಳ್ಳಲು ನಗರಕ್ಕೆ ಬಂದಿದ್ದ ಸೋನಾಕ್ಷಿ ಹಂಚಿಕೊಂಡ ಮಾತು ಇದು...

`ಲೂಟೇರಾ ಚಿತ್ರಕ್ಕೆ ಸಿಕ್ಕ ಅಭೂತಪೂರ್ವ ಪ್ರಶಂಸೆ ಆತ್ಮತೃಪ್ತಿ ನೀಡಿದೆ. ಆ ರೀತಿಯ ಸಿನಿಮಾ ವೃತ್ತಿ ಜೀವನದಲ್ಲಿ ಒಮ್ಮೆ ಮಾತ್ರ ಸಿಗಬಹುದಾದ ಅವಕಾಶ. ಅದರ ಜತೆಯಲ್ಲಿ ನಟಿಯಾಗಿ ನನಗೆ ಸಿಕ್ಕ ಪ್ರಶಂಸೆಯನ್ನು ಮರೆಯಲು ಸಾಧ್ಯವಿಲ್ಲ. ಲೂಟೇರಾ ನನ್ನ ವೃತ್ತಿ ಜೀವನದ ದೊಡ್ಡ ಅವಕಾಶವಾಗಿ ಬಂದಿದ್ದು ಮಾತ್ರವಲ್ಲ, ಅದು ನನಗೆ ಸವಾಲನ್ನೂ ಒಡ್ಡಿತು.

ವೈಯಕ್ತಿವಾಗಿ ನಾನು ಬಹಳ ಆರೋಗ್ಯವಂತೆ. ಎಂದೂ ಹುಷಾರು ತಪ್ಪಿದವಳಲ್ಲ. ಆದರೆ ಸಿನಿಮಾದಲ್ಲಿ ಕ್ಷಯರೋಗಕ್ಕೆ ತುತ್ತಾಗುವ ಸನ್ನಿವೇಶವನ್ನು ನಟಿಸುವಾಗ ರೋಗದಿಂದ ನರಳುವ ಕಷ್ಟ ಅರಿವಾಯಿತು. ನಿರ್ದೇಶಕರ ಸೂಕ್ತ ಮಾರ್ಗದರ್ಶನ ಇದ್ದಿದ್ದರಿಂದ ಮಾತ್ರ ಇದು ಸಾಧ್ಯವಾಯಿತು' ಎನ್ನುವಾಗ ಸೋನಾಕ್ಷಿ ಮುಖದಲ್ಲಿ ಧನ್ಯತಾ ಭಾವ.

ಲೂಟೇರಾ ಸಿನಿಮಾ 50ರ ದಶಕದ ಸಂದರ್ಭದಲ್ಲಿ ನಡೆಯುವಂಥ ಕಥಾನಕವನ್ನು ಒಳಗೊಂಡಿದೆ. ಸೋನಾಕ್ಷಿ ನಟಿಸುತ್ತಿರುವ `ಒನ್ಸ್ ಅಪಾನ್ ಎ ಟೈಮ್ ಇನ್ ಮುಂಬೈ ದುಬಾರಾ' ಸಿನಿಮಾ 80ರ ದಶಕದ ಕಥೆ ಇರುವಂಥದ್ದು. ಹೀಗಾಗಿ ಅವರಿಗೆ ಸಾಲು ಸಾಲು `ಪೀರಿಯೆಡ್ ಸಿನಿಮಾಗಳು' ಸಿಗುತ್ತಿವೆ. ಇದು ಸೋನಾಕ್ಷಿ ಅವರಿಗೆ ಖುಷಿಯ ಸಂಗತಿ. `ಒನ್ಸ್ ಅಪಾನ್...' ಚಿತ್ರದಲ್ಲಿ ನಟಿಯಾಗುವ ಬಯಕೆಯಿಂದ ಕಾಶ್ಮೀರದಿಂದ ಮುಂಬೈಗೆ ಬರುವ ಮುಸ್ಲಿಂ ಹುಡುಗಿಯ ಪಾತ್ರದಲ್ಲಿ ನಟಿಸುತ್ತಿದ್ದಾರೆ.

`ಇಬ್ಬರು ಗ್ಯಾಂಗ್‌ಸ್ಟರ್‌ಗಳ ಮಧ್ಯೆ ಪರಿಸ್ಥಿತಿ ನಿಭಾಯಿಸುವುದು ಚಿತ್ರದ ಎಳೆ. ಅಕ್ಷಯ್ ಜತೆ ಈಗಾಗಲೇ ನಟಿಸಿದ್ದು, ಅವರೊಂದಿಗೆ ಚಿತ್ರೀಕರಣದಲ್ಲಿ ಪಾಲ್ಗೊಳ್ಳುವುದೇ ಸಂತಸದ ವಿಷಯ. ಆದರೆ ಇಮ್ರಾನ್ ಖಾನ್ ಜತೆಗೆ ಇದು ನನ್ನ ಮೊದಲ ಸಿನಿಮಾ. ತಮಾಷೆ ಎಂದರೆ ಸೆಟ್‌ನಲ್ಲಿ ಭೇಟಿಯಾದಾಗಲೇ ನಾನು ಅವರೊಂದಿಗೆ ಮೊದಲು ಮಾತನಾಡಿದ್ದು' ಎಂದು ತಮ್ಮ ಹೊಸ ಚಿತ್ರದ ಅನುಭವವನ್ನು ಹಂಚಿಕೊಂಡರು.

ಸೋನಾಕ್ಷಿ ಅತ್ಯಂತ ಸೊಮಾರಿ ಹುಡುಗಿಯಂತೆ. ಮನೆಯಲ್ಲಿದ್ದರಂತೂ ಹುಲ್ಲು ಕಡ್ಡಿಯನ್ನೂ ಎತ್ತಿಡದಷ್ಟು ಜಡತ್ವ ಅವರನ್ನು ಆವರಿಸುತ್ತದಂತೆ. ಆದರೂ ಇತ್ತಿಚಿನ ದಿನಗಳಲ್ಲಿ ದಿನದ ಏಳು ಗಂಟೆಯಂತೆ 365 ದಿನವೂ ಬಿಡುವಿಲ್ಲದೆ ಚಿತ್ರೀಕರಣದಲ್ಲಿ ಪಾಲ್ಗೊಂಡಿರುವುದು ಸ್ವತಃ ಅವರಿಗೇ ಆಶ್ಚರ್ಯವಾಗಿದೆ. `ರ್‍ಯಾಂಬೋ ರಾಜ್‌ಕುಮಾರ್' ಹಾಗೂ `ಬುಲೆಟ್ ರಾಜಾ' ಅವರ ಮುಂದಿನ ಚಿತ್ರಗಳು.

`ನನ್ನ ವೃತ್ತಿಜೀವನ ಸರಿಯಾದ ಆಕಾರ ಪಡೆದುಕೊಳ್ಳುತ್ತಿದೆ. ಇದು ಅದೃಷ್ಟವೋ, ಕಠಿಣ ಪರಿಶ್ರಮದ ಫಲವೋ ಗೊತ್ತಿಲ್ಲ. ನನ್ನ ಕೆಲಸವನ್ನು ನಾನು ಬಹುವಾಗಿ ಇಷ್ಟಪಟ್ಟಿದ್ದೇನೆ. ಹೀಗಾಗಿ ಪಾತ್ರಗಳನ್ನೂ ಅನುಭವಿಸಿ ಅಭಿನಯಿಸುತ್ತಿದ್ದೇನೆ. ಬಹುಶಃ ಇದಕ್ಕಾಗಿಯೇ ಅಭಿಮಾನಿಗಳು ನನ್ನನ್ನು ಇಷ್ಟಪಡುತ್ತಿದ್ದಾರೆ ಎನ್ನುವುದು ನನ್ನ ನಂಬಿಕೆ' ಎಂದು ನಕ್ಕು ಮಾತು ಮುಗಿಸಿದರು.

ಸಂದರ್ಶನ- ರೋಹಿಣಿ ಕೇಜ್ರಿವಾಲ್ .

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT