ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪುಸ್ತಕ ಓದು ಸಾರ್ವಕಾಲಿಕ

Last Updated 13 ನವೆಂಬರ್ 2011, 19:30 IST
ಅಕ್ಷರ ಗಾತ್ರ

ಪ್ರತಿ ವರ್ಷ ನವೆಂಬರ್ 14ರಿಂದ 20ರವರೆಗೆ `ರಾಷ್ಟ್ರೀಯ ಪುಸ್ತಕ ಸಪ್ತಾಹ~ವನ್ನು ದೇಶದಾದ್ಯಂತ ಆಚರಣೆ ಮಾಡುತ್ತಿರುವುದರ ಮುಖ್ಯ ಉದ್ದೇಶ ಜನಸಾಮಾನ್ಯರಲ್ಲಿ ಓದುವ ಅಭಿರುಚಿ ಬೆಳೆಸುವುದಾಗಿದೆ. ನವದೆಹಲಿಯ `ನ್ಯಾಷನಲ್ ಬುಕ್ ಟ್ರಸ್ಟ್ ಆಫ್ ಇಂಡಿಯಾ~ ಈ ಸಪ್ತಾಹವನ್ನು ಪ್ರತಿ ವರ್ಷವೂ ಪ್ರಾಯೋಜಿಸುತ್ತಿದೆ. ಪಂಡಿತ ಜವಾಹರಲಾಲ್ ನೆಹರೂ ಅವರ ಕನಸಿನ ಕೂಸಾದ ನ್ಯಾಷನಲ್ ಬುಕ್ ಟ್ರಸ್ಟ್ ಆಫ್ ಇಂಡಿಯಾ ಸಂಸ್ಥೆಯು 1957ರಲ್ಲಿ ಭಾರತ ಸರ್ಕಾರದ ಶಿಕ್ಷಣ ಇಲಾಖೆಯ ಅಧೀನದಲ್ಲಿ ಸ್ವಯಂ ಆಡಳಿತದಿಂದ ಪ್ರಾರಂಭಗೊಂಡಿದ್ದು, ಸದ್ಯ 54 ವಸಂತಗಳನ್ನು ಕಂಡಿರುವ ಸಂಸ್ಥೆ ಇದಾಗಿದೆ.

ಸ್ವತ: ಬರಹಗಾರರು, ಸಾಹಿತ್ಯಾಸಕ್ತರು ಅದಕ್ಕಿಂತಲೂ ಮಿಗಲಾಗಿ `ಪುಸ್ತಕ ಪ್ರೇಮಿ~ಯಾಗಿದ್ದ ನೆಹರೂ ಅವರು ನ್ಯಾಷನಲ್ ಬುಕ್ ಟ್ರಸ್ಟ್ ಸ್ಥಾಪನೆಗೆ ವ್ಯವಸ್ಥಿತ ರೂಪುರೇಷೆಗಳನ್ನು ಹಾಕಿಕೊಟ್ಟವರು. 1982ರಲ್ಲಿ ಟ್ರಸ್ಟ್ `ಬೆಳ್ಳಿ ಹಬ್ಬ~ವನ್ನು ಆಚರಿಸಿದ ನೆನಪಿಗಾಗಿ ಪ್ರತಿ ವರ್ಷವೂ ಜವಾಹರಲಾಲ್ ನೆಹರು ಅವರ ಜನ್ಮ ದಿನವಾದ ನವೆಂಬರ್ 14ರಿಂದ ಪ್ರಾರಂಭಗೊಂಡು ನವೆಂಬರ್ 20ರವರೆಗೆ `ರಾಷ್ಟ್ರೀಯ ಪುಸ್ತಕ ಸಪ್ತಾಹ~ವನ್ನು ದೇಶದಾದ್ಯಂತ ಆಚರಣೆಯಲ್ಲಿ ತಂದಿದೆ.

ಪುಸ್ತಕಗಳ ಕಡೆಗೆ ಜನಸಾಮಾನ್ಯರ ಗಮನ ಸೆಳೆಯುವುದು, ನಾಡಿನ ಕಲೆ, ಸಾಹಿತ್ಯ, ಸಂಸ್ಕೃತಿಯ ಪರಿಚಯವನ್ನು ಪುಸ್ತಕಗಳ ಮೂಲಕ ಜನರಲ್ಲಿ ಮೂಡಿಸುವುದು, ಮಕ್ಕಳ ಸಾಹಿತ್ಯ ಪ್ರಕಟಣೆ, ವಿದ್ಯಾರ್ಥಿಗಳಲ್ಲಿ, ಶಿಕ್ಷಕರಲ್ಲಿ, ಸಮಾಜದ ಎಲ್ಲ ವರ್ಗದ ಜನರಲ್ಲಿ ವಾಚನಾಭಿರುಚಿಯನ್ನು ಬೆಳೆಸುವುದೇ ಈ ಪುಸ್ತಕ ಸಪ್ತಾಹದ ಮುಖ್ಯ ಉದ್ದೇಶವಾಗಿದೆ.

ನಾವೆಷ್ಟು ಓದಬೇಕು? ಜಗತ್ತಿನ ಆಗುಹೋಗುಗಳ ಬಗ್ಗೆ ಸ್ಪಂದನೆ ಹಾಗೂ ಪ್ರಜಾಪ್ರಭುತ್ವದ ಪರಿಪೂರ್ಣ ಪ್ರಜೆಯಾಗಿ ಗುರುತಿಸಿಕೊಳ್ಳಲು ಒಬ್ಬ ವ್ಯಕ್ತಿ ಪ್ರತಿ ವರ್ಷದಲ್ಲಿ ಕನಿಷ್ಠ 2 ಸಾವಿರ ಪುಟಗಳಷ್ಟಾದರೂ ಓದಬೇಕು ಎಂಬುದು ವಿದ್ವಾಂಸರ ಅಭಿಪ್ರಾಯ. ಆದರೆ ಭಾರತದಲ್ಲಿ ಇದು ಎಷ್ಟರ ಮಟ್ಟಿಗೆ ಸಾಕಾರಗೊಂಡಿದೆ ಎಂಬುದು ಚಿಂತನೆ ಮಾಡುವ ಸಂಗತಿಯಾಗಿದೆ. ಭಾರತದಲ್ಲಿ ವ್ಯಕ್ತಿಯೊಬ್ಬ ಪ್ರತಿ ವರ್ಷ ಓದುವುದು ಸರಾಸರಿ ಕೇವಲ 33 ಪುಟಗಳು ಮಾತ್ರ!
ಈ ರೀತಿ ಭಾರತದಲ್ಲಿ ಓದುವ ಸರಾಸರಿ ಮಟ್ಟ ಕಡಿಮೆ ಇರಲು ಪುಸ್ತಕಗಳ ಕೊರತೆಯೇ ಎಂಬ ಪ್ರಶ್ನೆ ಕೆಲವರಲ್ಲಿ ಬರಬಹುದು. ಭಾರತಕ್ಕೆ ಸ್ವಾತಂತ್ರ್ಯ ದೊರೆತ ನಂತರ ಪುಸ್ತಕಗಳ ಪ್ರಕಟಣೆಯು ಪ್ರಗತಿಯಲ್ಲಿದೆ. ಕಳೆದ ಎರಡೂವರೆ ದಶಕಗಳಿಂದೀಚೆಗೆ ಭಾರತವು ಪುಸ್ತಕ ಪ್ರಕಟಣೆಯಲ್ಲಿ ದಾಪುಗಾಲು ಹಾಕುತ್ತಲಿದ್ದು, ಕಳೆದ ಒಂದು ದಶಕದಿಂದ ಭಾರತ ಪುಸ್ತಕ ಪ್ರಕಟಣೆಯಲ್ಲಿ ಜಗತ್ತಿನ ಪ್ರಥಮ ಆರು ರಾಷ್ಟ್ರಗಳಲ್ಲಿ ಒಂದಾಗಿದೆ. ಅಷ್ಟೇ ಅಲ್ಲ ಜಗತ್ತಿನ ಪ್ರಮುಖ ರಾಷ್ಟ್ರಗಳಿಗೆ ಪುಸ್ತಕ ರಫ್ತು ಮಾಡುವುದರಲ್ಲಿ ಭಾರತವು ಮುಂಚೂಣಿಯಲ್ಲಿರುವುದು ಹೆಮ್ಮೆಯ ಸಂಗತಿಯಾಗಿದೆ. ಸದ್ಯ ಭಾರತದಲ್ಲಿ 16 ಸಾವಿರ ಪ್ರಕಾಶಕರು ಪುಸ್ತಕ ಪ್ರಕಟಿಸುತ್ತಿದ್ದು, ಪ್ರತಿ ವರ್ಷ 24 ಭಾಷೆಗಳಲ್ಲಿ 75 ಸಾವಿರಕ್ಕೂ ಅಧಿಕ ಸಂಖ್ಯೆಯ ಶೀರ್ಷಿಕೆಗಳ ಪುಸ್ತಕಗಳು ಮುದ್ರಣಗೊಂಡು ಓದಲು ಸಿದ್ಧಗೊಳ್ಳುತ್ತವೆ. ಅಂದಾಜು ಪ್ರತಿ ವರ್ಷ ಭಾರತದಲ್ಲಿ 13 ಸಾವಿರ ಕೋಟಿ ರೂ. ಪುಸ್ತಕ ವಹಿವಾಟುವಿರುವ ಸಂಗತಿ ಅಚ್ಚರಿ ಮೂಡಿಸುವಂತದ್ದು.

ಅನೇಕ ಹಿರಿಯರು ತಮ್ಮ ಕಾಲದ ವಿದ್ಯಾಭ್ಯಾಸ, ಓದು, ಅಧ್ಯಯನವನ್ನು ಇಂದಿನ ವಿದ್ಯಾರ್ಥಿಗಳ ಮನೋಭಾವನೆಯೊಂದಿಗೆ ತೂಗಿ ನೋಡಿ ಇಂದಿನ ವಿದ್ಯಾರ್ಥಿಗಳನ್ನು ಹೀಯಾಳಿಸುವುದು ಸಾಮಾನ್ಯ ಸಂಗತಿ. `ಓದುಗಾರಿಕೆ~ ಎಂದರೆ ಕೇವಲ ಪರೀಕ್ಷೆಗಾಗಿ ಓದುವ ಪಠ್ಯ ಪುಸ್ತಕಗಳೆಂದು ಇಂದಿನ ವಿದ್ಯಾರ್ಥಿಗಳ ದೃಢ ನಂಬಿಕೆಯಾಗಿದ್ದು, ಓದು ಅವರಲ್ಲಿ ಕೇವಲ ಪರೀಕ್ಷೆಯನ್ನು ಪಾಸು ಮಾಡುವುದಕ್ಕಾಗಿ ಮಾತ್ರ ಉಳಿದಿದೆ. ಇಂದು ವಿದ್ಯಾರ್ಥಿಯು ಸ್ಪರ್ಧಾತ್ಮಕ ಪ್ರಪಂಚನ್ನು ಎದುರಿಸಬೇಕಾಗಿದ್ದು, ಸರ್ವೋತೋಮುಖ ಬೆಳವಣಿಗೆಗೆ, ತನ್ನ ವಜ್ರಕಾಯ ವ್ಯಕ್ತಿತ್ವ ನಿರ್ಮಿಸಿಕೊಳ್ಳಲು ಹತ್ತು ಹಲವಾರು ವಿಷಯ, ಸಂಗತಿಗಳ ಕುರಿತು ಜ್ಞಾನವನ್ನು ಪಡೆದುಕೊಳ್ಳುವುದು ಅತೀ ಅವಶ್ಯವಿದ್ದು, ನಿರಂತರ ಓದು ಅವನದಾಗಬೇಕಾಗಿದೆ.

ಶಿಕ್ಷಕರು ತಾವು ಪದವಿ ಪಡೆಯುವ ಹಾಗೂ ವೃತ್ತಿಗೆ ಸೇರುವ ಪೂರ್ವದಲ್ಲಿ ಓದ್ದ್ದಿದೇ ಕೊನೆಯದು ಎಂಬುದು ಇಂದಿನ ಶೈಕ್ಷಣಿಕ ಗುಣಮಟ್ಟದ ಪ್ರಗತಿಯು ಕುಂಠಿತವಾಗಲು ಹಾಗೂ ವಿಜ್ಞಾನದಲ್ಲಿ ಶೋಧನೆಗಳು ಕ್ಷೆಣಿಸಲು ಪ್ರಮುಖ ಕಾರಣವಾಗಿದೆ. ನಿರಂತರ ಕಲಿಕೆ, ಸಂಶೋಧನೆಯ ಮನೋಭಾವವನ್ನು ಹೊಂದಿರುವ ಶಿಕ್ಷಕರಿಗೆ ಮಾತ್ರ ಪುಸ್ತಕಗಳ ಮೌಲ್ಯ ಗೊತ್ತು. ಅಂಥವರು ಮಾತ್ರ ವಿಷಯ, ಮಾಹಿತಿಗಳಿಗಾಗಿ ಸದಾ ಪುಸ್ತಕಗಳ ಹುಡುಕಾಟದಲ್ಲಿ ನಿರತರಾಗುವರು. ಅದಕ್ಕಾಗಿ ಪುಸ್ತಕಗಳ ಸದ್ಬಳಕೆಗಾಗಿ ಸಂಶೋಧನಾಶೀಲ ಶಿಕ್ಷಕರು ರೂಪುಗೊಳ್ಳುವುದು ಇಂದು ಅತೀ ಅವಶ್ಯವಿದೆ.

ಟೆಲಿವಿಷನ್, ಕಂಪ್ಯೂಟರ್, ಅಂತರ್ಜಾಲ ಹಾಗೂ ಮಾಹಿತಿ ತಂತ್ರಜ್ಞಾನ ಇಂದು ಪುಸ್ತಕಗಳ ಮೇಲೆ ಸವಾರಿ ಮಾಡುತ್ತಲಿವೆ ಎಂಬುದು ಎಲ್ಲೆಲ್ಲೂ ಕೇಳಿ ಬರುವ ಮಾತು! ಕಂಪ್ಯೂಟರ್‌ನ ಕೀಬೋರ್ಡ್‌ನ ಮೇಲೆ ಬೆರಳುಗಳನ್ನು ಆಡಿಸುವುದರ ಮೂಲಕ ಅಂತರ್ಜಾಲವನ್ನು ತೆರೆದು ಗೂಗಲ್ ಮತ್ತು ವಿಕಿಪಿಡಿಯಾ ತಾಣಗಳಿಂದ ಜಗತ್ತಿನ ಸರ್ವ ಮಾಹಿತಿಯನ್ನು ಪಡೆಯುವ ಸೌಲಭ್ಯವಿರುವಾಗ ಪುಸ್ತಕಗಳು ನಮಗೇಕೆ? ಪುಸ್ತಕಗಳನ್ನು ಓದುವ ಕಷ್ಟವನ್ನು ಯಾರು ತಾನೆ ಇಷ್ಟಪಟ್ಟಾರು? ಇದು ಪುಸ್ತಕ ಜಗತ್ತಿನ   ಮುಂದಿರುವ ಪ್ರಶ್ನೆ!

 ಆದರೆ ಟೆಲಿವಿಷನ್ ಹಾಗೂ ಅಂತರ್ಜಾಲದ ಸ್ವರೂಪ, ವ್ಯಾಪ್ತಿ, ಪ್ರಸಾರ ಸಮಯ ನಿರ್ಧರಿಸುವುದು ಇನ್ನೊಬ್ಬರ ಆಧೀನದಲ್ಲಿರುತ್ತದೆ. ಆದರೆ ಪುಸ್ತಕಗಳು ಹಾಗಲ್ಲ. ಯಾವುದೇ ಸ್ಥಳ, ಸಮಯ, ಎಲ್ಲೆಂದರಲ್ಲಿ ಓದಿ ಜ್ಞಾನ ಪಡೆಯುವ ಅವಕಾಶ ನೀಡುವ ಜ್ಞಾನ ದೀವಿಗೆಗಳು. ಟಿವಿ, ಅಂತರ್ಜಾಲ ಮನುಷ್ಯನಿಗೆ ಸಂತೋಷ ಹೆಚ್ಚಿಸಬಲ್ಲವು. ಆದರೆ ಪುಸ್ತಕದಷ್ಟು ಏಕಾಂತದಲ್ಲಿ ಓದುಗನೊಂದಿಗೆ ಸ್ಪಂದಿಸಲಾರವು ಎಂಬುದು ಅಷ್ಟೇ ಕಟು ಸತ್ಯವಾದದ್ದು. ಕಥೆ, ಕಾವ್ಯ, ಕಾದಂಬರಿ, ಲೇಖನ, ಆಧ್ಯಾತ್ಮಿಕ ಬರಹ ಸಾಹಿತ್ಯವನ್ನು ಪುಸ್ತಕ ರೂಪದಲ್ಲಿ ಓದಿ ಪಡೆಯುವ ಸಂತೃಪ್ತಿಯ ಭಾವನೆಯು ಕಂಪ್ಯೂಟರ್ ಮೇಲಿನ ಪ್ರಖರವಾದ ಬೆಳಕಿನ ಡಿಜಿಟಲ್ ಅಕ್ಷರಗಳ ಮೇಲೆ ಕಣ್ಣಾಡಿಸುವಾಗ ದೊರೆಯುವದಿಲ್ಲ. ಪುಸ್ತಕಗಳ ಪುಟಗಳನ್ನು ತಿರುವುತ್ತಾ ಓದಿ, ವಿಷಯಗಳನ್ನು ಮನನ ಮಾಡಿಕೊಳ್ಳುವಾಗಿನ ಸಂತೃಪ್ತಿಯು ಜೋಡಿಸಿಟ್ಟ ಸಿಡಿಗಳನ್ನು ಮಶೀನ್‌ದಲ್ಲಿ ಹಾಕಿಯೋ ಇಲ್ಲವೆ ವೆಬ್‌ಗಳನ್ನು ತೆರೆದು ಓದುವಲ್ಲಿ ಯಾವ ಸಾರ್ಥಕತೆಯು ಓದುಗನಿಗೆ ಅನ್ನಿಸುವುದಿಲ್ಲ! ಅಂತೆಯೇ `ಶಾಸನಗಳಿಗೆ ಸಾವುಂಟು, ಗ್ರಂಥಗಳಿಗೆ ಸಾವಿಲ್ಲ~ ಎಂಬುದು ಇಂದಿನ ಡಿಜಿಟಲ್ ಮತ್ತು ಇ-ಯುಗದಲ್ಲೂ ಸತ್ಯವಾದ ಮಾತು.

`ರಾಷ್ಟ್ರೀಯ ಪುಸ್ತಕ ಸಪ್ತಾಹ~ವು ಕೇವಲ ಏಳು ದಿನಗಳಿಗೆ ಸೀಮಿತವಾಗಿದ್ದರೂ ಸಹ ವರ್ಷವಿಡೀ ಜನರು ಓದುವ ಹವ್ಯಾಸ ಹಾಗೂ ಪುಸ್ತಕ ಸಂಸ್ಕೃತಿಯನ್ನು ಬೆಳೆಸಿಕೊಳ್ಳುವ ಪ್ರೇರಣೆ ಇದರಲ್ಲಿದೆ. ದೇಶದ ಉತ್ತಮ ಪ್ರಜೆಯಾಗಲು ನಿರಂತರ ಓದು ಅವಶ್ಯವಿದೆ. `ನಿಜವಾದ ಓದುಗಾರಿಕೆ ಮನುಷ್ಯನನ್ನು ವಜ್ರವನ್ನಾಗಿಸುತ್ತದೆ; ಬೆಳಕು ಅಲ್ಲಿ ಪ್ರತಿಫಲಿಸುತ್ತದೆ~. ಈ ಮಾತು ಸರ್ವ ಕಾಲಕ್ಕೂ ಸತ್ಯವಾದುದು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT