ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪುಸ್ತಕೋದ್ಯಮ-ಪುಸ್ತಕ ಸಂಸ್ಕೃತಿ ಅನುಸಂಧಾನ ಚರ್ಚೆ ಅಗತ್ಯ

ಸಾಹಿತಿ ಬರಗೂರು ರಾಮಚಂದ್ರಪ್ಪ ಅಭಿಮತ
Last Updated 15 ಏಪ್ರಿಲ್ 2013, 19:52 IST
ಅಕ್ಷರ ಗಾತ್ರ

ಬೆಂಗಳೂರು: `ಪುಸ್ತಕೋದ್ಯಮ ಮತ್ತು ಪುಸ್ತಕ ಸಂಸ್ಕೃತಿಯ ನಡುವೆ ಅನುಸಂಧಾನ ಏರ್ಪಡುವ ಬಗ್ಗೆ ಚರ್ಚೆ ನಡೆಯುವ ಅಗತ್ಯವಿದೆ' ಎಂದು ಹಿರಿಯ ಸಾಹಿತಿ ಪ್ರೊ.ಬರಗೂರು ರಾಮಚಂದ್ರಪ್ಪ ಅಭಿಪ್ರಾಯಪಟ್ಟರು.

ಅಂಕಿತ ಪುಸ್ತಕ ಪ್ರಕಾಶನ ಸಂಸ್ಥೆಯು ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಸೋಮವಾರ ಆಯೋಜಿಸಿದ್ದ ಸಮಾರಂಭದಲ್ಲಿ `ಅಂಕಿತ ಪುಸ್ತಕ' ಪ್ರಶಸ್ತಿಯನ್ನು `ಅಕ್ಷರ ಪ್ರಕಾಶನ'ಕ್ಕೆ ಪ್ರದಾನ ಮಾಡಿ ಅವರು ಮಾತನಾಡಿದರು.

`ಸಂಪಾದನೆ ಮತ್ತು ಮಾರುಕಟ್ಟೆಯನ್ನೇ ಮುಖ್ಯ ಧ್ಯೇಯವಾಗಿಸಿಕೊಂಡ ಪುಸ್ತಕೋದ್ಯಮ ಮತ್ತು ಸಂವೇದನೆಗೆ ಒತ್ತು ನೀಡುವ ಪುಸ್ತಕ ಸಂಸ್ಕೃತಿಯ ನಡುವೆ ಸಮನ್ವಯತೆ ಸಾಧಿಸಿದಾಗ ಮಾತ್ರ ಪ್ರಸ್ತುತ ಅಕ್ಷರ ಲೋಕ ಎದುರಿಸುತ್ತಿರುವ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಸಾಧ್ಯವಿದೆ' ಎಂದು ಹೇಳಿದರು.

`ನವ್ಯ ಸಾಹಿತ್ಯವನ್ನು ಬೆಳೆಸುವಲ್ಲಿ `ಅಕ್ಷರ ಪ್ರಕಾಶನ' ತನ್ನದೇ ಪಾತ್ರವನ್ನು ವಹಿಸಿದೆ. ನವ್ಯ ಸಾಹಿತ್ಯಧಾರೆಯಲ್ಲಿದ್ದವರೆಲ್ಲರೂ ಸಮಾಜವಾದಿಗಳಲ್ಲ. ಆದರೆ, ಕೆ.ವಿ.ಸುಬ್ಬಣ್ಣ ಸಮಾಜವಾದ ಸಿದ್ಧಾಂತವನ್ನು ಒಪ್ಪಿಕೊಂಡವರು. ಸಾಹಿತ್ಯ ವಿದ್ಯಾರ್ಥಿಯಾಗಿ ಅಧ್ಯಯನ ಮಾಡುವಾಗ ಈ ಪ್ರಕಾಶನದ ಹುಟ್ಟು, ಬೆಳವಣಿಗೆ ಮತ್ತು ಕೊಡುಗೆಗಳು ಕುತೂಹಲ ಹುಟ್ಟಿಸುತ್ತದೆ' ಎಂದರು.

`ಯಾವುದೇ ಕ್ಷೇತ್ರದ ಸಾಮಾಜಿಕ ಸೂಕ್ಷ್ಮಗಳು ನಶಿಸಲು ಜಾಹೀರಾತುಕರಣವೇ ಪ್ರಮುಖ ಕಾರಣ. ಇದು ಪುಸ್ತಕ ಲೋಕಕ್ಕೂ ಅಂಟಿಕೊಂಡ ವ್ಯಾಧಿ. ಪುಸ್ತಕ ಪ್ರಕಟಣೆ ಹಾಗೂ ಮಾರಾಟದ ವಿಚಾರದಲ್ಲಿ ಪ್ರಕಾಶಕರು ಒಂದು ನಿರ್ದಿಷ್ಟ ಸಿದ್ಧಾಂತವನ್ನು ರೂಪಿಸಿಕೊಳ್ಳಬೇಕು' ಎಂದು ಸಲಹೆ ನೀಡಿದರು.

ಪ್ರಶಸ್ತಿ ಸ್ವೀಕರಿಸಿದ ಅಕ್ಷರ ಪ್ರಕಾಶನದ ಕೆ.ವಿ.ಅಕ್ಷರ, `ಅಕ್ಷರ ಪ್ರಕಾಶನಕ್ಕೆ ಈಗ 57 ವರ್ಷ. ನನಗೆ 53 ವರ್ಷ ವಯಸ್ಸು. ನನಗಿಂತ ಮೊದಲು ಹುಟ್ಟಿದ ಈ ಪ್ರಕಾಶನದಿಂದಲೇ ನನಗೆ ಈ ಹೆಸರು ಬಂತು' ಎಂದ ಅವರು, 94ರಲ್ಲಿ ಅಂಕಿತ ಪ್ರಕಾಶನವು ಹುಟ್ಟಿದ ಸಂದರ್ಭದಲ್ಲಿ ಕಂಬತ್ತಳ್ಳಿ ಅವರಲ್ಲಿ  `ಈ ಉದ್ಯಮದಲ್ಲಿ ಮುಂದುವರಿಯಬೇಕಾ?' ಎಂದು ಕೇಳಿದ್ದೆ. ಅವರೀಗ ನನ್ನ ತಪ್ಪುಕಲ್ಪನೆಯನ್ನು ಸುಳ್ಳುಮಾಡಿ ನನಗೆ ಪ್ರಶಸ್ತಿ ನೀಡುತ್ತಿರುವುದು ಆಶ್ಚರ್ಯವಾಗಿದೆ ಎಂದು ತಿಳಿಸಿದರು.

`ಪ್ರಕಾಶಕರು ಪುಸ್ತಕಗಳ ಪ್ರಕಟಣೆಯ ಆಯ್ಕೆಯ ವಿಚಾರದಲ್ಲಿ ಯಾವುದೇ ರೀತಿಯಲ್ಲೂ ರಾಜಿಯಾಗಬಾರದು. ಆದರೆ, ಪ್ರಕಟಣೆಯಾದ ಪುಸ್ತಕಗಳಿಗೆ ಮಾರುಕಟ್ಟೆ ಒದಗಿಸಿ, ಅದನ್ನು ಓದುಗರಿಗೆ ತಲುಪಿಸುವಾಗ  ಉದ್ಯಮದ ನೀತಿಯನ್ನು ಅನುಸರಿಸಬೇಕು' ಎಂದು ಹೇಳಿದರು.

`ಸರ್ಕಾರವು ಪ್ರಕಾಶಕರಿಂದ ದೊಡ್ಡ ಪ್ರಮಾಣದಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ಪುಸ್ತಕ ಸಂಸ್ಕೃತಿಯನ್ನು ಹಾಳುಗೆಡವುತ್ತಿದೆ. ಈ ಧೋರಣೆಯನ್ನು ಪ್ರಕಾಶಕರೆಲ್ಲರೂ ಒಕ್ಕೂರಲಿನಿಂದ ವಿರೋಧಿಸಬೇಕು'ಎಂದು ಒತ್ತಾಯಿಸಿದರು.ಪ್ರಶಸ್ತಿಯು ರೂ 25 ಸಾವಿರ ಹಾಗೂ ಫಲಕವನ್ನು ಒಳಗೊಂಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT