ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪೆಟ್ರೋಲ್ ದರ ಏರಿಕೆ ಖಂಡಿಸಿ ಪ್ರತಿಭಟನೆ

Last Updated 25 ಮೇ 2012, 5:50 IST
ಅಕ್ಷರ ಗಾತ್ರ

ಕೋಲಾರ: ಪೆಟ್ರೋಲ್ ಬೆಲೆ ಏರಿಕೆಯನ್ನು ಖಂಡಿಸಿ ಸಿಪಿಎಂ ಕಾರ್ಯಕರ್ತರು ನಗರದ ಹೊಸ ಬಸ್ ನಿಲ್ದಾಣ ವೃತ್ತದಲ್ಲಿ ಗುರುವಾರ ವಿಶಿಷ್ಟ ರೀತಿಯ ಧರಣಿ ನಡೆಸಿದರು.

ಮಾನವ ಸರಪಳಿ ರಚಿಸಿದ ಕಾರ್ಯಕರ್ತರು ದ್ವಿಚಕ್ರ ವಾಹನಗಳಿಗೆ ಹಗ್ಗ ಕಟ್ಟಿ ಎಳೆದು ಕೇಂದ್ರ ಸರ್ಕಾರ ವಿರುದ್ಧ ಧಿಕ್ಕಾರ ಕೂಗಿದರು.

`ಇಲ್ಲದ ನೆಪಗಳನ್ನೊಡ್ಡಿ ಪೆಟ್ರೋಲ್ ದರವನ್ನು ಹೆಚ್ಚಿಸಲಾಗಿದೆ. ಬೆಲೆ ಏರಿಕೆಯಿಂದ ತತ್ತರಿಸಿ ಕನಿಷ್ಠ ಜೀವನ ನಡೆಸಲು ಜನತೆ ಪರದಾಡುತ್ತಿರುವಾಗ ಕೇಂದ್ರ ಸರ್ಕಾರ ಮನಸ್ಸಿಗೆ ಬಂದಂತೆ ದರ ಏರಿಸಿರುವುದು ಖಂಡನೀಯ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಜನಸಾಮಾನ್ಯರ ಹಣವನ್ನು ದರೋಡೆ ಮಾಡುವ ರೀತಿಯಲ್ಲಿ ಬೆಲೆ ಏರಿಕೆ ಮಾಡಲಾಗಿದೆ. ಇಡೀ ಜಗತ್ತಿನಲ್ಲಿಯೇ ಪೆಟ್ರೋಲ್ ಬೆಲೆ ಅತ್ಯಂತ ಹೆಚ್ಚು ದುಬಾರಿಯಾಗಿರುವುದು ಭಾರತದಲ್ಲಿ ಮಾತ್ರ. ಅದೇ ರೀತಿ ದೇಶದ ಇತರೇ ರಾಜ್ಯಗಳಿಗೆ ಹೋಲಿಸಿದರೆ ಕರ್ನಾಟಕದಲ್ಲಿ ಅತ್ಯಂತ ಹೆಚ್ಚು ಬೆಲೆ ಇದೆ. ಆಳುವ ಸರ್ಕಾರಗಳ ನೀತಿಗಳಿಂದ ಅತ್ಯಂತ ಹೆಚ್ಚು ತೆರಿಗೆಗಳನ್ನು ವಿಧಿಸಲಾಗಿರುವುದರಿಂದ ಜೀವನ ದುಬಾರಿಯಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಕೇಂದ್ರದಲ್ಲಿ ಯುಪಿಎ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಎಲ್ಲ ಅಗತ್ಯ ವಸ್ತುಗಳ ಬೆಲೆಗಳು ಎರಡು ಮೂರು ಪಟ್ಟು ಹೆಚ್ಚಾಗಿವೆ.

ಬೆಲೆ ಏರಿಕೆಯನ್ನು ನಿಯಂತ್ರಿಸಲು ವಿಫಲವಾಗಿರುವ ಸರ್ಕಾರ ಕಳೆದ ಐದು ವರ್ಷಗಳಿಂದೀಚಿಗೆ ದೇಶದ ಶ್ರೀಮಂತರಿಗೆ ಅಂದಾಜು 8 ಲಕ್ಷ ಕೋಟಿಯಷ್ಟು ತೆರಿಗೆ ವಿನಾಯಿತಿ ನೀಡಿದೆ ಎಂದು ದೂರಿದರು.

ಅಗತ್ಯ ವಸ್ತುಗಳ ಬೆಲೆ ಮತ್ತಷ್ಟು ಏರಿಕೆಯಾಗಲು ಕಾರಣವಾಗಿರುವ ಪೆಟ್ರೋಲ್ ಬೆಲೆ ಏರಿಕೆಯನ್ನು ಕೂಡಲೇ ವಾಪಸ್ ಪಡೆಯಬೇಕು. ತೈಲ ಉತ್ಪನ್ನಗಳ ಮೇಲಿನ ತೆರಿಗೆಗಳನ್ನು ಕಡಿತ ಮಾಡಬೇಕು ಎಂದು ಒತ್ತಾಯಿಸಿದರು.

ಪಕ್ಷದ ಜಿಲ್ಲಾ ಘಟಕದ ಕಾರ್ಯದರ್ಶಿ ಗಾಂಧಿನಗರದ ನಾರಾಯಣಸ್ವಾಮಿ, ವಿ.ಗೀತಾ, ಟಿ.ಎಂ.ವೆಂಕಟೇಶ್, ಹೆಚ್.ಎಂ.ಯಲ್ಲಪ್ಪ, ವಿಜಯಕೃಷ್ಣ, ಗಂಗಮ್ಮ, ವಿ.ನಾರಾಯಣರೆಡ್ಡಿ, ಎ.ವಿ.ರಮೇಶ್, ರಾಮಾಂಜಿ, ಭೀಮರಾಜ್ ನೇತೃತ್ವ ವಹಿಸಿದ್ದರು.

ಇಂದು ಪ್ರತಿಭಟನೆ:  ಪೆಟ್ರೋಲ್ ಬೆಲೆ ಏರಿಕೆಯನ್ನು ಪ್ರತಿಭಟಿಸಿ ಶುಕ್ರವಾರ ಬಿಜೆಪಿ ಕಾರ್ಯಕರ್ತರು ನಗರದ ಹೊಸ ಬಸ್ ನಿಲ್ದಾಣ ವೃತ್ತದಲ್ಲಿ ಪ್ರತಿಭಟನೆ ನಡೆಸಲಿದ್ದಾರೆ ಎಂದು ಯುವ ಮೋರ್ಚಾ ಜಿಲ್ಲಾ ಘಟಕದ ಅಧ್ಯಕ್ಷ ಓಂಶಕ್ತಿ ಚಲಪತಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT