ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪೇಸ್-ಜಾಂಕೊ ಚಾಂಪಿಯನ್

Last Updated 8 ಜನವರಿ 2012, 19:30 IST
ಅಕ್ಷರ ಗಾತ್ರ

ಚೆನ್ನೈ: ಗಮನಾರ್ಹ ಪ್ರದರ್ಶನ ತೋರಿದ ಭಾರತದ ಲಿಯಾಂಡರ್ ಪೇಸ್ ಮತ್ತು ಸರ್ಬಿಯಾದ ಜಾಂಕೊ ತಿಪ್ಸಾರೆವಿಕ್ ಚೆನ್ನೈ ಓಪನ್ ಟೆನಿಸ್ ಟೂರ್ನಿಯ ಡಬಲ್ಸ್ ವಿಭಾಗದ ಚಾಂಪಿಯನ್ ಆದರು.

ನುಂಗಂಬಾಕ್ಕಂ ಕ್ರೀಡಾಂಗಣದಲ್ಲಿ ಭಾನುವಾರ ರಾತ್ರಿ ನಡೆದ ಫೈನಲ್‌ನಲ್ಲಿ ಪೇಸ್-ಜಾಂಕೊ 6-4, 6-4ರಲ್ಲಿ ಇಸ್ರೇಲ್‌ನ ಜೊನಾಥನ್ ಎಲ್ರಿಚ್ ಹಾಗೂ ಆ್ಯಂಡಿ ರಾಮ್ ಜೋಡಿಯನ್ನು ಪರಾಭವಗೊಳಿಸಿದರು. ಸಿಂಗಲ್ಸ್ ಫೈನಲ್‌ನಲ್ಲಿ ಸೋಲುಕಂಡಿದ್ದ ತಿಪ್ಸಾರೆವಿಕ್ ಈ ಪ್ರಶಸ್ತಿ ಮೂಲಕ ಕೊಂಚ ನಿರಾಸೆ ದೂರ ಮಾಡಿಕೊಂಡರು.

2011ರ ಅಂತ್ಯದಲ್ಲಿ ಮಹೇಶ್ ಭೂಪತಿ ಅವರಿಂದ ದೂರವಾಗಿದ್ದ ಪೇಸ್ ನೂತನ ಸಂವತ್ಸರದ ಮೊದಲ ಟೂರ್ನಿಯಲ್ಲಿ ತಿಪ್ಸಾರೆವಿಕ್ ಜೊತೆಯಾಗಿದ್ದರು. ಅದರಲ್ಲಿ ಅವರು ಯಶಸ್ವಿಕಂಡರು. 2011ರ ಜನವರಿಯಲ್ಲಿ ನಡೆದಿದ್ದ ಈ ಟೂರ್ನಿಯಲ್ಲಿ ಭೂಪತಿ ಜೊತೆಗೂಡಿ ಆಡಿದ್ದ ಲಿಯಾಂಡರ್ ಡಬಲ್ಸ್‌ನಲ್ಲಿ ಚಾಂಪಿಯನ್ ಆಗಿದ್ದರು.

ರೋನಿಕ್‌ಗೆ ಸಿಂಗಲ್ಸ್ ಪ್ರಶಸ್ತಿ: ಪ್ರಬಲ ಪೈಪೋಟಿ ಕಂಡುಬಂದ ಪಂದ್ಯದಲ್ಲಿ ಸರ್ಬಿಯಾದ ಜಾಂಕೊ ತಿಪ್ಸಾರೆವಿಕ್ ಅವರನ್ನು ಮಣಿಸಿದ ಕೆನಡಾದ ಮಿಲೋಸ್ ರೋನಿಕ್ ಸಿಂಗಲ್ಸ್ ವಿಭಾಗದಲ್ಲಿ ಪ್ರಶಸ್ತಿ ಗೆದ್ದರು. 

 ಫೈನಲ್‌ನಲ್ಲಿ ನಾಲ್ಕನೇ ಶ್ರೇಯಾಂಕದ ರೋನಿಕ್ 6-7, 7-6, 7-6 ರಲ್ಲಿ ಜಯ ಸಾಧಿಸಿದರು. ಮ್ಯಾರಥಾನ್ ಹೋರಾಟ ಕಂಡುಬಂದ ಪಂದ್ಯ ಮೂರು ಗಂಟೆ 13 ನಿಮಿಷಗಳ ಕಾಲ ನಡೆಯಿತು. ಮೂರು ಸೆಟ್‌ಗಳೂ ಟೈಬ್ರೇಕರ್‌ನಲ್ಲಿ ಕೊನೆಗೊಂಡವು. ಚೆನ್ನೈ ಓಪನ್ ಇತಿಹಾಸದಲ್ಲಿ ಫೈನಲ್ ಪಂದ್ಯವೊಂದು ಇಷ್ಟು ಸುದೀರ್ಘ ಅವಧಿ ನಡೆದದ್ದು ಇದೇ ಮೊದಲು.

ತಮ್ಮ ವೇಗದ ಸರ್ವ್‌ಗಳ ಬಲದಿಂದಲೇ ಮಿಲೋಸ್ ಅಗ್ರಶ್ರೇಯಾಂಕದ ಆಟಗಾರರನ್ನು ಮಣಿಸಿದರು. 35 ಭರ್ಜರಿ ಏಸ್‌ಗಳ ಮೂಲಕ ಎದುರಾಳಿಯನ್ನು ನಿಬ್ಬೆರಗಾಗಿಸಿದ ಅವರು ಮೊದಲ ಗೇಮ್‌ನಲ್ಲಿ ಗಂಟೆಗೆ 228 ಕಿ.ಮೀ. ವೇಗದಲ್ಲಿ ಸರ್ವ್ ಮಾಡಿದರು. ಪಂದ್ಯದಲ್ಲಿ ಇಬ್ಬರಿಗೂ ಸರ್ವ್ ಬ್ರೇಕ್ ಮಾಡಲು ಸಾಧ್ಯವಾಗದ್ದು ವಿಶೇಷ.

ರೋನಿಕ್ ಮಿರುಗುವ ಟ್ರೋಫಿ ಜೊತೆಗೆ 71,900 ಅಮೆರಿಕನ್ ಡಾಲರ್ ಬಹುಮಾನ ಮೊತ್ತ ತಮ್ಮದಾಗಿಸಿಕೊಂಡರು. ಅವರಿಗೆ 250 ಎಟಿಪಿ ಪಾಯಿಂಟ್‌ಗಳೂ ಲಭಿಸಿದವು. `ರನ್ನರ್ ಅಪ್~ ತಿಪ್ಸಾರೆವಿಕ್ 37,860 ಅಮೆರಿಕನ್ ಡಾಲರ್ ನಗದು ಬಹುಮಾನ ಮತ್ತು 150 ಎಟಿಪಿ ಪಾಯಿಂಟ್ ಪಡೆದರು.

ಕೆನಡಾದ ಆಟಗಾರ ಮೊದಲ ಸೆಟ್‌ನಲ್ಲಿ ಸೋಲು ಅನುಭವಿಸಿದ್ದರು. ಆ ಬಳಿಕ ಅದ್ಭುತ ರೀತಿಯಲ್ಲಿ ಮರುಹೋರಾಟ ನಡೆಸಿದರಲ್ಲದೆ, ಸೋಲಿನ ಸುಳಿಯಿಂದ ಪಾರಾಗಿ ಬಂದರು. ರೋನಿಕ್ ಅವರ ಗ್ರೌಂಡ್‌ಸ್ಟ್ರೋಕ್ ಮತ್ತು ರಿಟರ್ನ್‌ಗಳು ಇನ್ನಷ್ಟು ಪ್ರಭಾವಿ ಎನಿಸಿದ್ದರೆ ಸುಲಭ ಗೆಲುವು ಪಡೆಯಬಹುದಿತ್ತು.

ಕಳೆದ ಎರಡು ವರ್ಷಗಳಲ್ಲಿ ಇಲ್ಲಿ ಸೆಮಿಫೈನಲ್ ಪ್ರವೇಶಿಸಿದ್ದ ತಿಪ್ಸಾರೆವಿಕ್ ಈ ಬಾರಿ ಪ್ರಶಸ್ತಿ ಗೆಲ್ಲುವ ನೆಚ್ಚಿನ ಆಟಗಾರ ಎನಿಸಿದ್ದರು. ಆದರೆ 21ರ ಹರೆಯದ ರೋನಿಕ್ ಅವರ ಕನಸನ್ನು ಭಗ್ನಗೊಳಿಸಿದರು. ಟೈಬ್ರೇಕರ್‌ನಲ್ಲಿ ಕೆನಡಾದ ಆಟಗಾರನ ಪ್ರದರ್ಶನ ಅದ್ಭುತವಾಗಿತ್ತು.

ನಿರ್ಣಾಯಕ ಸೆಟ್‌ನಲ್ಲಿ ತುರುಸಿನ ಹೋರಾಟದ ಬಳಿಕ ಇಬ್ಬರೂ 6-6 ರಲ್ಲಿ ಸಮಬಲ ಸಾಧಿಸಿದರು. ತಮ್ಮ ಸರ್ವೀಸ್ ಉಳಿಸಿಕೊಳ್ಳಲು ಇಬ್ಬರೂ ಯಶಸ್ವಿಯಾದರು. ಇದರಿಂದ ವಿಜೇತರ ನಿರ್ಣಯಕ್ಕೆ ಟೈಬ್ರೇಕರ್ ಮೊರೆಹೋಗಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT