ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪೈರಸಿ ತಡೆ ತಂಡ ರಚನೆ ಶೀಘ್ರ: ರಾಮು

Last Updated 19 ಜನವರಿ 2012, 6:50 IST
ಅಕ್ಷರ ಗಾತ್ರ

ಹುಬ್ಬಳ್ಳಿ: ಕನ್ನಡ ಭಾಷೆಯ ಚಿತ್ರಗಳ ಪೈರಸಿ ತಡೆಯಲು ಚಿತ್ರರಂಗ ದವರನ್ನೊಳಗೊಂಡ ತಂಡ ವನ್ನು ಕಟ್ಟಲು ಮುಂದಾಗಿರುವುದಾಗಿ ಖ್ಯಾತ ನಿರ್ಮಾಪಕ ರಾಮು ತಿಳಿಸಿದರು.

ಮಾಲಾಶ್ರೀ ಅಭಿನಯದ `ಶಕ್ತಿ~ ಚಿತ್ರದ ವೀಕ್ಷಣೆಗಾಗಿ ನಗರಕ್ಕೆ ಆಗಮಿಸಿದ ಚಿತ್ರತಂಡ ಹಮ್ಮಿಕೊಂಡಿದ್ದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು.

`ಪೈರಸಿಯಿಂದಾಗಿ ಕನ್ನಡ ಚಿತ್ರರಂಗಕ್ಕೆ ಭಾರಿ ನಷ್ಟವಾಗುತ್ತಿದೆ. ಇದನ್ನು ತಡೆಯಲು ಚಲನಚಿತ್ರ ವಾಣಿಜ್ಯ ಮಂಡಳಿ ಸಾಕಷ್ಟು ಕೆಲಸ ಮಾಡುತ್ತಿದ್ದರೂ ಕೇವಲ ಅವರಿಂದಷ್ಟೇ ಈ ಕೆಲಸ ಸಾಧ್ಯವಾಗಲಾರದು. ಈ ಹಿನ್ನೆಲೆಯಲ್ಲಿ 25ರಿಂದ 30 ಮಂದಿಯ ತಂಡವನ್ನು ಕಟ್ಟಿಕೊಂಡು ದಾಳಿ ನಡೆಸಲು ನಿರ್ಧರಿಸಲಾಗಿದೆ~ ಎಂದು ಅವರು ತಿಳಿಸಿದರು.

ಇತರ ಭಾಷೆಯ ಚಿತ್ರಗಳಿಗೆ ಹೋಲಿಸಿದರೆ ಕನ್ನಡ ಚಿತ್ರಗಳಲ್ಲಿ ಪಕ್ವತೆ ಕಡಿಮೆಯಾಗುತ್ತಿದೆ. ನಮ್ಮ ಸಿನಿಮಾ ರಂಗದ ಸಂಪೂರ್ಣ ಚಿತ್ರಣ ಬದಲಾಗಬೇಕಾದ ಅಗತ್ಯವಿದೆ. ತಾಂತ್ರಿಕತೆ, ಕಲಾವಿದರ ಕೌಶಲ, ಚಿತ್ರೀಕರಣಕ್ಕೆ ಬಳಸುವ ಲೊಕೇಷನ್ ಇತ್ಯಾದಿ ವಿಷಯದಲ್ಲೂ ಇತರ ಭಾಷೆಗಳವರು ಮುಂದೆ ಇದ್ದಾರೆ ಎಂದು ಹೇಳಿದ ಅವರು, ವರ್ಷಗಳ ಹಿಂದೆ ಗಳಿಕೆಯ ವಿಷಯದಲ್ಲಿ ಬೇರೆ ಭಾಷೆಯ ಚಿತ್ರಗಳಿಗೂ ಕನ್ನಡ ಚಿತ್ರಗಳಿಗೂ ಹೆಚ್ಚು ವ್ಯತ್ಯಾಸವಿರಲಿಲ್ಲ. ಈಗ ಭಾರಿ ವ್ಯತ್ಯಾಸವಿದೆ ಎಂದರು.

`ಕರ್ನಾಟಕದ ಅನೇಕ ಕಡೆಗಳಲ್ಲಿ ತೆಲುಗು ಚಿತ್ರಗಳ ಭರಾಟೆ ಹೆಚ್ಚಾಗಿದೆ. ಸುಮಾರು 50 ಪ್ರದೇಶಗಳಲ್ಲಿ ಕನ್ನಡ ಚಿತ್ರಗಳಿಗೆ ಆದ್ಯತೆ ಸಿಗುತ್ತಿಲ್ಲ~ ಎಂದು ಅವರು ಹೇಳಿದರು.

ಚಿತ್ರದ ನಾಯಕಿ ಮಾಲಾಶ್ರೀ ಮಾತನಾಡಿ, ಶಕ್ತಿ ಚಿತ್ರಕ್ಕೆ ಉತ್ತಮ ಪ್ರತಿಕ್ರಿಯೆ ಸಿಗುತ್ತಿದೆ, ಎರಡು ದಶಕಗಳ ನಂತರ ಉತ್ತರ ಕರ್ನಾಟಕ ಭಾಗದಲ್ಲಿ ಚಿತ್ರದ ಪ್ರಚಾರಕ್ಕಾಗಿ ಆಗಮಿಸಿದ್ದು ಈ ಭಾಗದ ಜನರು ಪ್ರೀತಿಯಿಂದ ಬರಮಾಡಿಕೊಳ್ಳುತ್ತಿದ್ದಾರೆ ಎಂದು ಹೇಳಿದರು.

ನಿರ್ದೇಶಕ ಅನಿಲ ಕುಮಾರ, `ಇದು ನನ್ನ ಮೊದಲ ಚಿತ್ರ. ಕೈಗೆತ್ತಿಕೊಂಡ ಕೆಲಸದ ಬಗ್ಗೆ ಸಂಪೂರ್ಣ ಮಾಹಿತಿ ಇದ್ದರಷ್ಟೇ ಯಶಸ್ಸು ಸಾಧ್ಯ. ಈಗಿನ ಹೊಸ ನಿರ್ದೇಶಕರು ಈ ವಿಷಯದಲ್ಲಿ ವಿಫಲರಾಗುತ್ತಿದ್ದಾರೆ~ ಎಂದು ಹೇಳಿದರು.

ನಟಿ ಹೇಮಾ ಚೌಧರಿ, ಹೊಸತಾಗಿ ಚಿತ್ರರಂಗಕ್ಕೆ ಕಾಲಿಡುತ್ತಿರುವ ನಾಯಕ ನಟಿಯರಲ್ಲಿ ನಟನಾ ಕೌಶಲದ ಕೊರತೆ ಎದ್ದು ಕಾಣುತ್ತಿದೆ. ಹೀಗಾಗಿ ಸ್ತ್ರೀ ಪಾತ್ರವೇ ಪ್ರಧಾನವಾಗಿರುವ ಚಿತ್ರಗಳು ಕಡಿಮೆಯಾಗುತ್ತಿವೆ ಎಂದು ಹೇಳಿದರು.

ನಟ ಶರತ್ ಲೋಹಿತಾಶ್ವ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು. ಇದಕ್ಕೂ ಮುನ್ನ ನಗರದ ಸುಜಾತಾ ಚಿತ್ರಮಂದಿರದಲ್ಲಿ ಮಾಲಾಶ್ರೀ ಪ್ರೇಕ್ಷಕರ ಜೊತೆ ಮಾತನಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT