ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪೋಲಿಯೊ ವಿರುದ್ಧ ಸಮರ

Last Updated 19 ಫೆಬ್ರುವರಿ 2012, 19:30 IST
ಅಕ್ಷರ ಗಾತ್ರ

ದೊಡ್ಡಬಳ್ಳಾಪುರ: ಪೋಲಿಯೊ ಹನಿ ಹಾಕುವ ಕಾರ್ಯಕ್ರಮವನ್ನು ಸದುಪಯೋಗ ಪಡಿಸಿಕೊಂಡು ದೇಶವನ್ನು ಪೋಲಿಯೊ ಮುಕ್ತ ದೇಶವನ್ನಾಗಿಸಬೇಕು ಎಂದು ಕರ್ನಾಟಕ ರೇಷ್ಮೆ ಮಾರಾಟ ಮಂಡಳಿ ಅಧ್ಯಕ್ಷ ಕೆ.ಎಂ.ಹನುಮಂತ ರಾಯಪ್ಪ ಹೇಳಿದರು.

ಐದು ವರ್ಷದ ಒಳಗಿನ ಮಕ್ಕಳಿಗೆ ಪಲ್ಸ್ ಪೋಲಿಯೊ ಹನಿ ಹಾಕುವ ಕಾರ್ಯಕ್ರಮಕ್ಕೆ ಭಾನುವಾರ ನಗರದ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಾಲನೆ ನೀಡಿ ಮಾತನಾಡಿದರು.

ಪೋಲಿಯೊ ಕಾರ್ಯಕ್ರಮಕ್ಕೆ ಸಮುದಾಯದ ಸಹಕಾರವೂ ಅಗತ್ಯವಾಗಿದೆ. 5 ವರ್ಷ ಒಳಗಿನ ಮಕ್ಕಳಿಗೆ ಕಡ್ಡಾಯವಾಗಿ ಪೋಲಿಯೊ ಹನಿ ಹಾಕಿಸಬೇಕು. ಪೋಲಿಯೊ  ಬಾರದಂತೆ ತಡೆಗಟ್ಟಬಹುದಾಗಿದ್ದು, ಮುಂಜಾಗ್ರತೆ ವಹಿಸುವುದು ಅತಿ ಮುಖ್ಯ ಎಂದರು.

ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಶಿವರಾಜ್ ಹೆಡೆ ಮಾತನಾಡಿ, ತಾಲ್ಲೂಕಿನಲ್ಲಿ 36,516 ಮಕ್ಕಳಿಗೆ ಪೋಲಿಯೊ ಹನಿ ಹಾಕುವ ಗುರಿ ಹೊಂದಲಾಗಿದೆ. ಇದಕ್ಕಾಗಿ 139 ಬೂತ್ ಸ್ಥಾಪಿಸಲಾಗಿದೆ. ಒಂದು ಬೂತ್‌ಗೆ 4 ಮಂದಿಯಂತೆ 556 ಲಸಿಕಾ ಹನಿ ಹಾಕುವ ಕಾರ್ಯಕರ್ತರು ಕಾರ್ಯ ನಿರ್ವಹಿಸಲಿದ್ದಾರೆ.

ಇವರಿಗೆ 27 ಮೇಲ್ವಿಚಾರಕರು ಇರುತ್ತಾರೆ. ಅಧಿಕೃತ ಪೋಲಿಯೊ ಲಸಿಕಾ ದಿನದಂದು ಮಾತ್ರವಲ್ಲದೆ ಕಾರ್ಯಕರ್ತರು ಮನೆಗಳಿಗೆ ತೆರಳಿ, ಮತ್ತೆರಡು ದಿನ ಪೋಲಿಯೊ ಲಸಿಕೆ ಹಾಕಲಿದ್ದಾರೆ ಎಂದು ತಿಳಿಸಿದರು.

ಬೆಂಗಳೂರು ಗ್ರಾ.ಜಿ.ಪಂ. ಅಧ್ಯಕ್ಷೆ ಭಾಗ್ಯಮ್ಮ ಮುನಿಕೃಷ್ಣಪ್ಪ, ನಗರಸಭೆ ಸದಸ್ಯ ಡಿ.ಎಂ.ಚಂದ್ರಶೇಖರ್, ವೈದ್ಯಾಧಿಕಾರಿ ಡಾ.ಅಶ್ವತ್ಥ್ ನಾರಾಯಣ, ಆರೋಗ್ಯಾಧಿಕಾರಿ ಶಿವರುದ್ರಯ್ಯ ಮುಂತಾದವರು ಭಾಗವಹಿಸಿದ್ದರು.
ಕೊನಘಟ್ಟ:  ಕೊನಘಟ್ಟ ಸರ್ಕಾರಿ ಪ್ರಾಥಮಿಕ ಆಸ್ಪತ್ರೆಯಲ್ಲಿ ಜಿ.ಪಂ.ಸದಸ್ಯ ಎನ್.ಹನುಮಂತೇಗೌಡ, ತಾ.ಪಂ. ಸದಸ್ಯೆ ಶ್ಯಾಮಲಮ್ಮ ಲಕ್ಷ್ಮೀಪತಿ ಪೊಲೀಯೊ ಲಸಿಕಾ ಹನಿ ಹಾಕುವ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ನಿರ್ಮೂಲನೆಯತ್ತ ವಿಶ್ವದ ನಡಿಗೆ

ವಿಜಯಪುರ: ಶೀಘ್ರದಲ್ಲಿಯೇ ಸಂಪೂರ್ಣ ಪೋಲಿಯೊ ನಿರ್ಮೂಲನೆ ಮಾಡುವಲ್ಲಿ ಮನವ ಸಮಾಜ ಯಶಸ್ಸು ಗಳಿಸಲಿದೆ ಎಂದು ಪಲ್ಸ್ ಪೋಲಿಯೊ ಅಧ್ಯಕ್ಷ ವಿ.ಎನ್. ಸೂರ್ಯಪ್ರಕಾಶ್ ಹೇಳಿದರು.

ಇಲ್ಲಿನ ಸರ್ಕಾರಿ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಭಾನುವಾರ ರೋಟರಿ ಸಂಸ್ಥೆಯ ವತಿಯಿಂದ ಏರ್ಪಡಿಸಲಾಗಿದ್ದ ಪೋಲಿಯೊ ಹನಿ ಹಾಕುವ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಅವರು ಮಾತನಾಡಿದರು.
ಪ್ರಪಂಚದಾದ್ಯಂತ ಪೋಲಿಯೊ ಹೊಡೆದೋಡಿಸುವಲ್ಲಿ ಬಹುಪಾಲು ಸಫಲತೆ ದೊರಕಿದೆ.
 
ಆದರೂ ಹಿಂದಿನ ವರ್ಷ ಭಾರತ, ಪಾಕಿಸ್ತಾನ, ಆಫ್ರಿಕಾದ ನೈರೋಬಿಯಲ್ಲಿ ತಲಾ ಒಂದೊಂದು ಪೋಲಿಯೊ ಪ್ರಕರಣಗಳು ಪತ್ತೆಯಾಗಿವೆ. ಇನ್ನು ಮುಂದೆ ಇವುಗಳೂ ಇಲ್ಲದಂತಾಗಲಿವೆ ಎಂದರು.

ರೋಟರಿ ಅಧ್ಯಕ್ಷ ಸಿ. ಸುರೇಶ್ ಮಾತನಾಡಿ, 2005ಕ್ಕೆ ಭಾರತದಿಂದ ಪೋಲಿಯೊ ಸಂಪೂರ್ಣ ನಿರ್ಮೂಲನೆ ಮಾಡುವ ಕ್ರಮ ಕೈಗೊಂಡಿತ್ತಾದರೂ, ಅಲ್ಲೊಂದು - ಇಲ್ಲೊಂದು ಪ್ರಕರಣಗಳು ಕಾಣಿಸಿದ್ದವು. ಈಗ ಭಾರತದಲ್ಲಿ ಕೇವಲ ಒಂದು ಪೋಲಿಯೊ ಪ್ರಕರಣ ಮಾತ್ರ ಪತ್ತೆಯಾಗಿದ್ದು, ಬಹುಪಾಲು ಭಾರತ ಪೋಲಿಯೊ ಮುಕ್ತವೆಂದೇ ಹೇಳಬಹುದಾಗಿದೆ.
 
ಆದರೂ ಇನ್ನೂ 2 ವರ್ಷಗಳ ಕಾಲ ರೋಟರಿ ಸಂಸ್ಥೆಯಿಂದ ಪೋಲಿಯೊ ಹನಿ ಹಾಕುವ ಕಾರ್ಯಕ್ರಮ ಮುಂದುವರಿಸಲಾಗುವುದು ಎಂದು ತಿಳಿಸಿದರು.

ಕಾರ್ಯಕ್ರಮ ಉದ್ಘಾಟಿಸಿದ ಪುರಸಭಾ ಅಧ್ಯಕ್ಷೆ ಮಂಜುಳಾ ನಾರಾಯಣ ಸ್ವಾಮಿ ಮಾತನಾಡಿ, ಪೋಲಿಯೊ ನಿರ್ಮೂಲನೆಯಲ್ಲಿ ಸಂಘ ಸಂಸ್ಥೆಗಳು, ಆರೋಗ್ಯ ಇಲಾಖೆ ಮತ್ತು ಪುರಸಭೆಗೆ ನೀಡುತ್ತಿರುವ ಸಹಕಾರಕ್ಕೆ ಕೃತಜ್ಞತೆ ಅರ್ಪಿಸಿದರು.
 
ರೋಟರಿ ಸಂಸ್ಥೆ ಮಾಜಿ ಅಧ್ಯಕ್ಷ ಕೆ. ಸದ್ಯೋಜಾತಪ್ಪ, ಎಸ್. ರಂಗನಾಥ್, ವಿನಯ್, ದೇವರಾಜ್, ಸಿ. ಬಸಪ್ಪ, ಇನ್ನರ್‌ವ್ಹೀಲ್ ಸಂಘದ ಅಧ್ಯಕ್ಷೆ ಹೇಮಾವತಿ ಶಂಕರ್, ಮಾಜಿ ಅಧ್ಯಕ್ಷೆ ಭಾರತಿ ಶಿವಪ್ರಸಾದ್, ಶೀಲಾರಾಣಿ ಸುರೇಶ್, ಸರ್ಕಾರಿ ಆಸ್ಪತ್ರೆ ವೈದ್ಯಾಧಿಕಾರಿ ಡಾ.ಸವಿತಾ, ಪುರಸಭಾ ಆರೋಗ್ಯಾಧಿಕಾರಿ ಮಂಜುಳಾ ಉಪಸ್ಥಿತರಿದ್ದರು.

ಪೋಲಿಯೊ ಹನಿ ಹಾಕಲು ಸರ್ಕಾರಿ ಆಸ್ಪತ್ರೆಯಲ್ಲದೆ ಅಂಗನವಾಡಿ ಕೇಂದ್ರಗಳು ಮತ್ತು 20 ಪ್ರತ್ಯೇಕ ಬೂತ್ ವ್ಯವಸ್ಥೆ ಮಾಡಿದ್ದು, ಮೊಬೈಲ್ ಟೀಂಗಳನ್ನೂ ರಚಿಸಲಾಗಿದೆ. ಸಂಜೆ 5ರ ವೇಳೆಗೆ ಸುಮಾರು 4 ಸಾವಿರಕ್ಕೂ ಹೆಚ್ಚು ಮಕ್ಕಳಿಗೆ ಪೋಲಿಯೊ ಹನಿ ಹಾಕಲಾಯಿತು.

`ನಿರ್ಲಕ್ಷ್ಯ ಬೇಡ~

ದೇವನಹಳ್ಳಿ: ಅಂಗವಿಕಲತೆ ಹೋಗಲಾಡಿಸಲು ಐದು ವರ್ಷದೊಳಗಿನ ಎಲ್ಲಾ ಮಕ್ಕಳಿಗೂ ಎರಡು ಹನಿ ಪೋಲಿಯೊ ಲಸಿಕೆಯನ್ನು  ಕಡ್ಡಾಯವಾಗಿ ಹಾಕಿಸುವುದು ಅಗತ್ಯ ಎಂದು ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಪ್ರಿಯಲತಾ ಹೇಳಿದರು.

ಪಟ್ಟಣದ ಸರ್ಕಾರಿ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಭಾನುವಾರ ಏರ್ಪಡಿಸಿದ್ದ ಪಲ್ಸ್ ಪೋಲಿಯೊ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಗ್ರಾಮಾಂತರ ಪ್ರದೇಶದ ಪ್ರಾಥಮಿಕ ಆರೋಗ್ಯ ಕೇಂದ್ರ, ಗ್ರಾಮ ಪಂಚಾಯಿತಿ ಸೇರಿದಂತೆ ಪ್ರತಿ ಗ್ರಾಮಗಳಲ್ಲೂ ಪೋಲಿಯೊ ಹನಿ ಹಾಕುವುದಕ್ಕೆ ಸೂಕ್ತ ವ್ಯವಸ್ಥೆ ಕಲ್ಪಿಸಲಾಗಿದೆ. ಎರಡರಿಂದ ಐದು ವರ್ಷದೊಳಗಿನ ಮಕ್ಕಳಿಗೆ ನಿರಂತರ ನಾಲ್ಕು ದಿನಗಳ ಕಾಲ ಪೋಲಿಯೊ ಹನಿ ಹಾಕಲಾಗುತ್ತಿದೆ. ಇದಕ್ಕೆ ಗ್ರಾಮಸ್ಥರು ಸಹಕರಿಸಬೇಕು ಎಂದರು.

ಮಗುವಿಗೆ ಪಲ್ಸ್ ಪೋಲಿಯೊ ಹನಿ ಹಾಕುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿದ ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಬಿ.ಕೆ.ಶಿವಪ್ಪ, `ಮಕ್ಕಳ ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸುವುದು ಪೋಷಕರ ಕರ್ತವ್ಯ. ತಾಲ್ಲೂಕಿನಲ್ಲಿ ಈಗಾಗಲೇ 6 ತಂಡಗಳು ನಾಲ್ಕು ದಿನ ಎಲ್ಲೆಡೆ ಸಂಚರಿಸಿ ಮಕ್ಕಳಿಗೆ ಪೋಲಿಯೊ ಹನಿ ಹಾಕಲಿವೆ. ಎಲ್ಲ ಸಂಘ ಸಂಸ್ಥೆಗಳು ಇದಕ್ಕೆ ಸಹಕಾರ ನೀಡಬೇಕು ಎಂದರು.

ಡಾ.ರಮೇಶ್ ಮಾತನಾಡಿ, ಇಂದು ಖಾಸಗಿ ಆಸ್ಪತ್ರೆಗಳಿಗಿಂತ ಸರ್ಕಾರಿ ಆಸ್ಪತ್ರೆಗಳಲ್ಲಿ ಉತ್ತಮ ಗುಣಮಟ್ಟದ ಪೋಲಿಯೊ ಹನಿ ಲಭ್ಯವಿದೆ. ಮಗುವಿನ ಸದೃಢ ಆರೋಗ್ಯಕ್ಕೆ ಪೋಲಿಯೊ ಹನಿ ಅವಶ್ಯಕವಿದ್ದು ಯಾರೂ ನಿರ್ಲಕ್ಷ್ಯ ವಹಿಸಬಾರದು ಎಂದರು. ಪುರಸಭೆ ಅಧ್ಯಕ್ಷೆ ರತ್ನಮ್ಮ ಅಧ್ಯಕ್ಷತೆ ವಹಿಸಿದ್ದರು. ಕಂದಾಯ ಶಿರಸ್ತೇದಾರ್ ಮಹದೇವ ಸ್ವಾಮಿ, ಡಾ.ಹೇಮಾ, ರಾಮ ಚಂದ್ರಪ್ಪ ಇತರರು ಇದ್ದರು.

`ಅರಿವು ಅಗತ್ಯ~

ದೇವನಹಳ್ಳಿ: ತಾಲ್ಲೂಕಿನ ಜಾಲಿಗೆ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಕೇಂದ್ರದಲ್ಲಿ ಭಾನುವಾರ ಪಂಚಾಯಿತಿ ಅಧ್ಯಕ್ಷ ನರಸಿಂಹಮೂರ್ತಿ (ನಚ್ಚಿ) ಮಕ್ಕಳಿಗೆ ಪಲ್ಸ್ ಪೋಲಿಯೊ ಹನಿ ಹಾಕುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
 
ಗ್ರಾಮೀಣ ಪ್ರದೇಶದಲ್ಲಿ ಅನಕ್ಷರಸ್ಥ ಮಹಿಳೆಯರಿಗೆ ಮಾರಕ ಪೋಲಿಯೊ ಬಗ್ಗೆ ಹೆಚ್ಚಿನ ಅರಿವು ಮೂಡಿಸುವ ಅಗತ್ಯವಿದೆ. ಪೋಲಿಯೊ ಬಗ್ಗೆ ನಿರ್ಲಕ್ಷ್ಯ ವಹಿಸುವುದು ಸಲ್ಲದು. ಮಕ್ಕಳ ದೈಹಿಕ ಸದೃಢತೆಗಾಗಿ ಪೋಲಿಯೊ ಹನಿ ಹಾಕವುದು ಅತ್ಯಂತ ಅವಶ್ಯವಿದೆ ಎಂದು ಹೇಳಿದರು.
 
ಜಾಲಿಗೆ ಪಂಚಾಯಿತಿ ವ್ಯಾಪ್ತಿಯಲ್ಲಿ ಐದು ವರ್ಷದೊಳಗಿನ 1,219 ಮಕ್ಕಳಿದ್ದು 16 ಸಿಬ್ಬಂದಿ ನಾಲ್ಕು ಬೂತ್‌ಗಳಲ್ಲಿ  ಪೋಲಿಯೊ ಹನಿ ಹಾಕುವ ಕಾರ್ಯ ನಿರ್ವಹಿಸಲಿದ್ದಾರೆ. ಪೋಷಕರು ತಮ್ಮ ಮಕ್ಕಳಿಗೆ ಪೋಲಿಯೊ ಹನಿ ಹಾಕಿಸುವ ಮೂಲಕ ಸಹಕರಿಸಬೇಕು ಎಂದರು.

ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಆರ್.ನಾಗರಾಜು, ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಶ್ರಿರಾಮಯ್ಯ, ಡಾ.ಗಿರೀಶ್, ಡಾ.ಹರಿಣಿ, ಕ್ಷಯರೋಗ ಮೇಲ್ವಿಚಾರಕ ಸುರೇಶ್, ಗ್ರಾ.ಪಂ.ಸದಸ್ಯ ಸುಬ್ರಮಣಿ, ವನಿತಾ, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ರಾಜಣ್ಣ, ಆರೋಗ್ಯ ಸಹಾಯಕಿ ಲಲಿತಾ, ಚಿಕ್ಕಮ್ಮ ಹಾಗೂ ಗ್ರಾಮದ ಮುಖಂಡರು ಇದ್ದರು.

ಶೇಕಡ 87ರಷ್ಟು ಲಸಿಕೆ

ಆನೇಕಲ್: ತಾಲ್ಲೂಕಿನಲ್ಲಿ ಶೇ.87ರಷ್ಟು ಪಲ್ಸ್ ಪೋಲಿಯೊ ಲಸಿಕೆ ಕಾರ್ಯಕ್ರಮ ಯಶಸ್ವಿಯಾಗಿದೆ ಎಂದು ತಾಲ್ಲೂಕು ವೈದ್ಯಾಧಿಕಾರಿ ಡಾ.ಕುಮಾರ್ ತಿಳಿಸಿದರು.

ತಾಲ್ಲೂಕಿನಲ್ಲಿ 62 ಸಾವಿರ ಮಕ್ಕಳಿಗೆ ಲಸಿಕೆ ಹಾಕುವ ಗುರಿ ಹೊಂದಲಾಗಿದ್ದು, ಮೊದಲ ದಿನವೇ ಶೇ.87 ರಷ್ಟು ಸಾಧನೆ ಮಾಡಲಾಗಿದೆ ಎಂದರು.

ಪಟ್ಟಣದ ಸರ್ಕಾರಿ ಆಸ್ಪತ್ರೆಯಲ್ಲಿ ಭಾನುವಾರ ಪಲ್ಸ್ ಪೋಲಿಯೊ ಹನಿ ಹಾಕುವ ಕಾರ್ಯಕ್ರಮವನ್ನು ಪುರಸಭಾ ಅಧ್ಯಕ್ಷೆ ಉಮಾಗೋಪಿ ಉದ್ಘಾಟಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT