ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ಯಾಕೇಜ್ ಹಣ ಬಳಕೆ ವಿಳಂಬ: ಅಸಮಾಧಾನ

Last Updated 15 ಫೆಬ್ರುವರಿ 2012, 5:40 IST
ಅಕ್ಷರ ಗಾತ್ರ

ಮಡಿಕೇರಿ: ಕೊಡಗು ಪ್ಯಾಕೇಜ್ ಹಾಗೂ ವಿಶೇಷ ಪ್ಯಾಕೇಜ್‌ಗಳಲ್ಲಿ ರಸ್ತೆ ಅಭಿವೃದ್ಧಿಗಾಗಿ ಒದಗಿಸಲಾದ ಹಣ ಸದ್ಬಳಕೆ ಮಾಡಿಕೊಳ್ಳುವಲ್ಲಿ ಅಧಿಕಾರಿಗಳು ವಿಳಂಬ ಮಾಡುತ್ತಿದ್ದಾರೆ ಎಂದು ವಿಧಾನ ಸಭಾಧ್ಯಕ್ಷ ಕೆ.ಜಿ.ಬೋಪಯ್ಯ ಅಸಮಧಾನ ವ್ಯಕ್ತಪಡಿಸಿದರು.

ನಗರದ ಕೋಟೆ ಹಳೇ ವಿಧಾನ ಸಭಾಂಗಣದಲ್ಲಿ ಮಂಗಳವಾರ ನಡೆದ ಜಿಲ್ಲೆಯಲ್ಲಿ ಅನುಷ್ಠಾನಗೊಳ್ಳುತ್ತಿರುವ ಕೆಲಸಗಳ ಪ್ರಗತಿ ಬಗ್ಗೆ ಪರಿಶೀಲನಾ ಸಭೆಯಲ್ಲಿ ಅವರು ಮಾತನಾಡಿದರು.

ಈ ವರ್ಷ ಜಿಲ್ಲೆಗೆ ಸಾಕಷ್ಟು ಅನುದಾನ ಒದಗಿಸಲಾಗಿದೆ. ರಸ್ತೆಗಳ ಗುಂಡಿ ಮುಚ್ಚುವುದು ಸೇರಿದಂತೆ ಹಲವು ಕಾಮಗಾರಿಗಳು ಇದುವರೆಗೆ ಪೂರ್ಣಗೊಂಡಿಲ್ಲ ಎಂದರು.

ಮಾ.15ರೊಳಗೆ ಟೆಂಡರ್
ಕೊಡಗು ಜಿಲ್ಲೆಗೆ ವಿವಿಧ ಲೆಕ್ಕ ಶೀರ್ಷಿಕೆಯಡಿ ರಸ್ತೆ ಅಭಿವೃದ್ಧಿಗೆ ಬಿಡುಗಡೆಯಾದ ಅನುದಾನದಲ್ಲಿ ಎಲ್ಲಾ ಕಾಮಗಾರಿಗಳಿಗೂ ಮಾರ್ಚ್ 15ರೊಳಗೆ ಟೆಂಡರ್ ಪ್ರಕ್ರಿಯೆ ನಡೆಸುವಂತೆ ಬೋಪಯ್ಯ ಅವರು ಲೋಕೋಪಯೋಗಿ ಇಲಾಖೆ ಕಾರ್ಯಪಾಲಕ ಎಂಜಿನಿಯರ್‌ಗೆ ಸೂಚನೆ ನೀಡಿದರು.

ಶಾಸಕ ಅಪ್ಪಚ್ಚುರಂಜನ್ ಅವರು ಮಾತನಾಡಿ, ಜಿಲ್ಲೆಯಲ್ಲಿ ಅನೇಕ ರಸ್ತೆ ಕಾಮಗಾರಿಗಳು ಪ್ರಾರಂಭವೇ ಆಗಿಲ್ಲ ಈ ರೀತಿ ವಿಳಂಬವಾದಲ್ಲಿ ಮಳೆಗೆ ಮುನ್ನ ಕಾಮಗಾರಿ ನಡೆಸಲು ಸಾಧ್ಯವಾಗುದಿಲ್ಲ, ಇದರಿಂದ ಅನುದಾನ ಸದ್ಬಳಕೆ ಮಾಡಿಕೊಳ್ಳಲಾಗದು ಎಂದರು.

ಲೋಕೋಪಯೋಗಿ ಇಲಾಖೆಯ ಕಾರ್ಯಪಾಲಕ ಎಂಜಿನಿಯರ್ ದೊಡ್ಡ ಸಿದ್ದಯ್ಯ ಅವರು ಮಾತನಾಡಿ, ಹಲವು ಕಾಮಗಾರಿಗಳಿಗೆ ಈಗಾಗಲೇ ಟೆಂಡರ್ ಕರೆಯಲಾಗಿದೆ. ಇನ್ನುಳಿದವು ಮುಖ್ಯ ಎಂಜಿನಿಯರ್ ಕಚೇರಿಯ ಹಂತದಲ್ಲಿದ್ದು, ಆದಷ್ಟು ಶೀಘ್ರ ಸುವರ್ಣ ಸಮುಚ್ಚಯ ಭವನ ನಿರ್ಮಾಣಕ್ಕೂ ಅಲ್ಪಾವಧಿ ಟೆಂಡರ್ ಕರೆಯಲಾಗುವುದು ಎಂದರು.

ವಿಧಾನಸಭಾಧ್ಯಕ್ಷರು, ಶಾಸಕರು ಮರಳು ಗಣಿಗಾರಿಕೆ ಮತ್ತು ಕಲ್ಲುಕೋರೆಗಳ ಅನುಮತಿ ನಿಯಂತ್ರಣ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಪಡೆದು, ಮರಳು ಗಣಿಗಾರಿಕೆ ಸಮರ್ಪಕವಾಗಿ ನಿಯಂತ್ರಿಸಬೇಕು. ಅಕ್ರಮ ಮರಳು ಸಾಗಣಿಕೆ ತಡೆಯಲು ಕಂದಾಯ ಮತ್ತು ಪೋಲಿಸ್ ಇಲಾಖೆಗಳ ತಂಡ ರಚಿಸಬೇಕು ಎಂದು ಅವರು ಸಲಹೆ ಮಾಡಿದರು.

ಜಿಲ್ಲೆಯಲ್ಲಿ ಮರಳು ಗಣಿಗಾರಿಕೆಗೆ 38 ಸ್ಥಳಗಳಿಗೆ ಟೆಂಡರ್ ಕರೆದು 23 ಸ್ಥಳಗಳಿಗೆ ಟೆಂಡರ್‌ದಾರರಿಗೆ ಅನುಮತಿ ನೀಡಲಾಗಿದೆ. ಉಳಿದ ಅರ್ಜಿಗಳು ಪರಿಶೀಲನೆ ಹಂತದಲ್ಲಿವೆ ಎಂದು ಲೋಕೋಪಯೋಗಿ ಇಲಾಖೆಯ ಕಾರ್ಯಪಾಲಕ ಎಂಜಿನಿಯರ್ ದೊಡ್ಡಸಿದ್ದಯ್ಯ ಅವರು ಮಾಹಿತಿ ನೀಡಿದರು.

ಜಿಲ್ಲಾಧಿಕಾರಿ ಡಾ.ಎನ್.ವಿ.ಪ್ರಸಾದ್ ಅವರು ಮಾತನಾಡಿ, ಅರಣ್ಯ ಇಲಾಖೆಯ ಅನುಮತಿ ಬೇಕಿರುವ ಪ್ರಕರಣಗಳಲ್ಲಿ ಜಂಟಿ ಸ್ಥಳ ತಪಾಸಣೆ ನಡೆಸಿ ವರದಿ ಸಲ್ಲಿಸುವಂತೆ ತಿಳಿಸಿದರು.

ಇದರಂತೆ ದಿನ ನಿಗದಿ ಪಡಿಸಿದಲ್ಲಿ ಜಂಟಿ ತಪಾಸಣೆಗೆ ತಾವು ಸಿಬ್ಬಂದಿಗಳನ್ನು ನಿಯೋಜಿಸುವುದಾಗಿ ಉಪ ಅರಣ್ಯ ಸಂರಕ್ಷಣಾಧಿಕಾರಿ ಆನಂದ್ ತಿಳಿಸಿದರು.

ಜಿ.ಪಂ. ಮುಖ್ಯಕಾರ್ಯನಿರ್ವಹಣಾಧಿಕಾರಿ ಎನ್.ಕೃಷ್ಣಪ್ಪ, ಹೆಚ್ಚುವರಿ ಜಿಲ್ಲಾಧಿಕಾರಿ ಕೆ.ಎಂ. ಚಂದ್ರೇಗೌಡ, ಗಣಿ ಮತ್ತು ಭೂವಿಜ್ಞಾನದ ಅಧಿಕಾರಿ ಹ್ಯಾರಿಸ್, ತಹಶೀಲ್ದಾರ್ ಬಾಬು ರವೀಂದ್ರನಾಥ್ ಪಟೇಲ್ ಮತ್ತಿತರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT