ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಜಾವಾಣಿ ಮುದ್ರಣ ಗುಣಮಟ್ಟಕ್ಕೆ ಅಂತರರಾಷ್ಟ್ರೀಯ ಮನ್ನಣೆ

Last Updated 24 ಮೇ 2012, 19:30 IST
ಅಕ್ಷರ ಗಾತ್ರ

ಪ್ರಥಮಗಳ ಪರಂಪರೆಯ ಮುಂದುವರಿಕೆ: `ಐಎನ್‌ಸಿಕ್ಯುಸಿ~ ಸದಸ್ಯತ್ವ ಪಡೆದ ಮೊದಲ ಕನ್ನಡ ಪತ್ರಿಕೆ

ಬೆಂಗಳೂರು: ವೃತ್ತ ಪತ್ರಿಕೆಗಳ ಅಂತರರಾಷ್ಟ್ರೀಯ ವರ್ಣ ಮುದ್ರಣ ಗುಣಮಟ್ಟ ಕ್ಲಬ್ (ಇಂಟರ್‌ನ್ಯಾಷನಲ್ ನ್ಯೂಸ್ ಪೇಪರ್ ಕಲರ್ ಕ್ವಾಲಿಟಿ ಕ್ಲಬ್-ಐಎನ್‌ಸಿಕ್ಯುಸಿ) 2012-14ರ ಸದಸ್ಯತ್ವದ ಮನ್ನಣೆ `ಪ್ರಜಾವಾಣಿ~ಯ ಬೆಂಗಳೂರು ಆವೃತ್ತಿಗೆ ದೊರೆತಿದೆ.

ಈ ಮೂಲಕ `ಪ್ರಜಾವಾಣಿ~ ವಿಶ್ವದ ಅತ್ಯುತ್ತಮ ಗುಣಮಟ್ಟದಲ್ಲಿ ಮುದ್ರಿತವಾಗುವ ಪತ್ರಿಕೆಗಳ ಸಾಲಿಗೆ ಸೇರುತ್ತಿದೆ. ಕನ್ನಡ ಪತ್ರಿಕೋದ್ಯಮದಲ್ಲಿ ಹಲವು ಪ್ರಥಮಗಳನ್ನು ದಾಖಲಿಸಿರುವ `ಪ್ರಜಾವಾಣಿ~, `ಐಎನ್‌ಸಿಕ್ಯುಸಿ~ ಸದಸ್ಯತ್ವದ ವಿಷಯದಲ್ಲೂ ತನ್ನ ಪ್ರಥಮಗಳ ಪರಂಪರೆ ಮುಂದುವರಿಸಿದೆ. ಜೊತೆಗೆ ಈ ಗೌರವಕ್ಕೆ ಪಾತ್ರವಾಗಿರುವ ದಕ್ಷಿಣ ಭಾರತದ ಏಕೈಕ ಭಾಷಾ ಪತ್ರಿಕೆ ಎಂಬ ಹೆಗ್ಗಳಿಕೆಯೂ `ಪ್ರಜಾವಾಣಿ~ಯದ್ದಾಗಿದೆ.

2010-12ರ ಅವಧಿಯಲ್ಲೇ `ಪ್ರಜಾವಾಣಿ~ಯ ಸೋದರ ಪತ್ರಿಕೆ `ಡೆಕ್ಕನ್ ಹೆರಾಲ್ಡ್~ ಈ ಗೌರವಕ್ಕೆ ಪಾತ್ರವಾಗಿತ್ತು. ಜೊತೆಗೆ 2012-14ರ ಸಾಲಿನಲ್ಲೂ ಈ ಗೌರವ ಪಡೆಯುವ ಮೂಲಕ `ಡೆಕ್ಕನ್ ಹೆರಾಲ್ಡ್~ ತನ್ನ ಮುದ್ರಣ ಗುಣಮಟ್ಟದಲ್ಲಿ ಸ್ಥಿರತೆ ಕಾಯ್ದುಕೊಂಡಿರುವುದನ್ನು ಸಾಬೀತು ಮಾಡಿದೆ.

ಪ್ರತೀ ಎರಡು ವರ್ಷಕ್ಕೊಮ್ಮೆ ವಿಶ್ವದ ಅತ್ಯುತ್ತಮ ವೃತ್ತ ಪತ್ರಿಕಾ ಮುದ್ರಕರನ್ನು ಗುರುತಿಸುವ ಈ ಪ್ರಕ್ರಿಯೆಯನ್ನು ವಿಶ್ವ ವೃತ್ತ ಪತ್ರಿಕೆಗಳ ಸಂಸ್ಥೆಯಾದ `ವ್ಯಾನ್-ಇಫ್ರಾ~ ನಡೆಸುತ್ತದೆ. ಅಂತರರಾಷ್ಟ್ರೀಯ ಶಿಷ್ಟತೆಗಳನ್ನು ಒಳಗೊಂಡ ಪರೀಕ್ಷಾ ಪ್ರಕ್ರಿಯೆ ಮೂರು ತಿಂಗಳಷ್ಟು ದೀರ್ಘವಾದುದು.
 
ಈ ಅವಧಿಯಲ್ಲಿ ಪರೀಕ್ಷೆಗೆ ಅಗತ್ಯವಿರುವ ತಾಂತ್ರಿಕ ವಿವರಗಳೊಂದಿಗೆ ಪತ್ರಿಕೆಯನ್ನು ಮುದ್ರಿಸಬೇಕಾಗುತ್ತದೆ. ಹೀಗೆ ಮುದ್ರಣಗೊಂಡ ಪ್ರತಿಗಳನ್ನು ಮೊದಲಿಗೆ ಸಾಮಾನ್ಯ ಓದುಗನ ದೃಷ್ಟಿಕೋನದಿಂದ ಪರಿಶೀಲಿಸಲಾಗುತ್ತದೆ. ಇದರ ಜೊತೆಗೆ ಇನ್ನೂ 28 ತಾಂತ್ರಿಕ ಮಾನದಂಡಗಳಲ್ಲಿ ಸೂಕ್ಷ್ಮ ಪರಿಶೀಲನೆ ನಡೆಸಿದ ನಂತರ ಗುಣಮಟ್ಟದ ಕುರಿತಂತೆ ತೀರ್ಪುಗಾರರ ತಂಡ ನಿರ್ಧಾರಕ್ಕೆ ಬರುತ್ತದೆ.

ಈ ಪರಿಶೀಲನಾ ಪ್ರಕ್ರಿಯೆ ಜರ್ಮನಿಯ ಡಾರ್ಮ್‌ಶ್ಟಾಟ್‌ನಲ್ಲಿರುವ `ವ್ಯಾನ್-ಇಫ್ರಾ~ದ ಕಚೇರಿಯಲ್ಲಿ ನಡೆಯಿತು. ಪರಿಶೀಲನೆ ನಡೆಸಿದ ಅಂತರರಾಷ್ಟ್ರೀಯ ಮಟ್ಟದ ತೀರ್ಪುಗಾರರ ಮಂಡಳಿಯಲ್ಲಿ ಸೌದಿ ಅರೇಬಿಯಾದ ಡಾ.ಸಾದ್ ರಶೀದ್ ಅಲ್ ದೊಸ್ಸಾರಿ, ಪೆರುವಿನ ಇಗ್ನೇಶಿಯೋ ಪ್ರಾದೊ, `ದ ಹಿಂದೂ~ ಪತ್ರಿಕಾ ಬಳಗದ ಆರ್.ಪಿ. ಲಕ್ಷ್ಮಿವೆಂಕಟರಾಮನ್ ಮುಂತಾದವರಿದ್ದರು. ಇವರ ಹೊರತಾಗಿ ಇಟಲಿಯ ಪತ್ರಿಕಾ ಪ್ರಕಾಶಕರ ಸಂಘದ ಆಡಳಿತ ಮಂಡಳಿ ಸದಸ್ಯ ಲೂಕಾ ಮಿಶೆಲ್ಲಿ ತೀರ್ಪುಗಾರರ ಮಂಡಳಿಯಲ್ಲಿ `ವ್ಯಾನ್-ಇಫ್ರಾ~ವನ್ನು ಪ್ರತಿನಿಧಿಸಿದ್ದರು.

2012-14ರ ಸಾಲಿನ ಸ್ಪರ್ಧೆಯಲ್ಲಿ ಭಾರತದ ಅನೇಕ ಪ್ರಮುಖ ಪತ್ರಿಕಾ ಸಂಸ್ಥೆಗಳು ಭಾಗವಹಿಸಿದ್ದವು. ಆದರೆ, ಇದರಲ್ಲಿ ಕೇವಲ ಐದು ಸಂಸ್ಥೆಗಳಷ್ಟೇ ತಮ್ಮ ನಿರ್ದಿಷ್ಟ ಮುದ್ರಣ ಕೇಂದ್ರಗಳಿಗೆ ಈ ಮನ್ನಣೆ ಪಡೆದುಕೊಂಡಿವೆ. ವಿಶ್ವಮಟ್ಟದಲ್ಲಿ ಒಟ್ಟು ಆಯ್ಕೆಯಾದ ಪತ್ರಿಕಾ ಸಂಸ್ಥೆಗಳ ಸಂಖ್ಯೆ 80 ಮಾತ್ರ. ಸ್ಪರ್ಧೆಯಲ್ಲಿ ವಿಶ್ವವ್ಯಾಪಿಯಾಗಿ ಸುಮಾರು 190 ಸಂಸ್ಥೆಗಳು ಭಾಗವಹಿಸಿದ್ದವು.

ಈ ಮನ್ನಣೆಗೆ ಪಾತ್ರವಾದ ಪತ್ರಿಕೆಗಳಲ್ಲಿ ಮುದ್ರಿತವಾಗುವ ವರ್ಣ ಚಿತ್ರಗಳ ಗುಣಮಟ್ಟವು, ಮೂಲಚಿತ್ರಗಳ ವರ್ಣ ಸಂಯೋಜನೆಗೆ ಸಮನಾಗಿರುತ್ತದೆ. ಇದನ್ನು ಸಾಧಿಸುವ ಹಾದಿ ಸುಗಮವಾದುದೇನೂ ಅಲ್ಲ. ಸಾಮಾನ್ಯವಾಗಿ ವರ್ಣಚಿತ್ರಗಳನ್ನು ಮುದ್ರಿಸುವ ಪ್ರಕ್ರಿಯೆಗೂ ಪತ್ರಿಕಾ ಮುದ್ರಣದ ಪ್ರಕ್ರಿಯೆಯ ನಡುವೆಯೂ ಬಹಳ ದೊಡ್ಡ ವ್ಯತ್ಯಾಸಗಳಿವೆ.

ಮುದ್ರಣಕ್ಕೆ ಬಳಸುವ ಶಾಯಿ, ಮುದ್ರಣದ ಯಂತ್ರ, ಮುದ್ರಣ ವಿಧಾನ ಹಾಗೂ ಒಟ್ಟು ಪ್ರಕ್ರಿಯೆಯ ನಿರ್ವಹಣೆಯಲ್ಲಿ ಅಂತರರಾಷ್ಟ್ರೀಯ ಶಿಷ್ಟತಾ ಸಂಸ್ಥೆ ನಿಗದಿ ಪಡಿಸಿರುವ ಎಲ್ಲಾ ನಿಯಮಗಳನ್ನೂ ಚಾಚೂ ತಪ್ಪದೆ ಪಾಲಿಸ ಬೇಕಾಗುತ್ತದೆ. ತಂತ್ರಜ್ಞಾನದ ಆಯ್ಕೆಯಿಂದ ಆರಂಭಿಸಿ ಅದನ್ನು ಕಾರ್ಯರೂಪಕ್ಕೆ ತರುವ ಸಿಬ್ಬಂದಿಯಲ್ಲೂ ನಿರ್ದಿಷ್ಟ ಶಿಷ್ಟತೆಗಳನ್ನು ಪಾಲಿಸುವ ಪರಿಣತಿ ಇರಬೇಕಾಗುತ್ತದೆ.

`ಪ್ರಜಾವಾಣಿ~ ತನ್ನ ಓದುಗರಿಗೆ ಗುಣಮಟ್ಟದಲ್ಲಿ ರಾಜಿ ಇಲ್ಲದ ಪತ್ರಿಕೆನೀಡುವ ಉದ್ದೇಶದಿಂದ ಇಡೀ ಮುದ್ರಣ ಪ್ರಕ್ರಿಯೆಯನ್ನು ಅಂತರರಾಷ್ಟ್ರೀಯ ಶಿಷ್ಟತೆಗೆ ಅನುಗುಣವಾಗಿ ಮಾರ್ಪಡಿಸಿಕೊಂಡಿತು. ಈ ಮಾರ್ಪಾಟಿಗೆ ದೊರೆತ ಸಿಬ್ಬಂದಿ ಸಹಕಾರ `ಐಎನ್‌ಸಿಕ್ಯುಸಿ~ ಮನ್ನಣೆ ಪಡೆಯುವ ಹಾದಿ ಸುಗಮಗೊಳಿಸಿತು.

`ಐಎನ್‌ಸಿಕ್ಯುಸಿ~ ಪ್ರಶಸ್ತಿಗಳನ್ನು ಮ್ಯಾಡ್ರಿಡ್‌ನಲ್ಲಿ ಅಕ್ಟೋಬರ್ 31ರಂದು ನಡೆಯಲಿರುವ `ವರ್ಲ್ಡ್ ಪಬ್ಲಿಷಿಂಗ್ ಎಕ್ಸ್‌ಪೋ 2012~ನಲ್ಲಿ ನಡೆಯುವ ಸಮಾರಂಭದಲ್ಲಿ ಪ್ರದಾನ ಮಾಡಲಾಗುವುದು. ಈ ಪ್ರತಿಷ್ಠಿತ ಉತ್ಸವವನ್ನು `ವ್ಯಾನ್-ಇಫ್ರಾ~ ಸಂಘಟಿಸುತ್ತಿದೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT