ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರತಿ ತಾಲ್ಲೂಕಿನಲ್ಲಿ ಅಗ್ನಿ ಶಾಮಕ ಠಾಣೆ

Last Updated 19 ಫೆಬ್ರುವರಿ 2011, 19:20 IST
ಅಕ್ಷರ ಗಾತ್ರ

ಬೆಂಗಳೂರು:  ‘ರಾಜ್ಯದ ಪ್ರತಿ ತಾಲ್ಲೂಕಿನಲ್ಲಿ ಅಗ್ನಿ ಶಾಮಕ ಠಾಣೆಗಳಿರಬೇಕು ಎಂಬುದು ಸರ್ಕಾರದ ಆಶಯವಾಗಿದ್ದು ಇಲಾಖೆಗೆ ಅಗತ್ಯವಿರುವ ಸಿಬ್ಬಂದಿಯನ್ನು ಶೀಘ್ರವೇ ನೇಮಕ ಮಾಡಿಕೊಳ್ಳಲಾಗುವುದು’ ಎಂದು ಗೃಹ ಸಚಿವ ಆರ್. ಅಶೋಕ ತಿಳಿಸಿದರು.

ಕರ್ನಾಟಕ ರಾಜ್ಯ ಅಗ್ನಿಶಾಮಕ ಮತ್ತು ತುರ್ತುಸೇವೆಗಳ ಇಲಾಖೆ ನಗರದಲ್ಲಿ ಶನಿವಾರ ಏರ್ಪಡಿಸಿದ್ದ  ಕಾರ್ಯಕ್ರಮದಲ್ಲಿ ಆಧುನಿಕ ಅಗ್ನಿಶಮನ ಹಾಗೂ ರಕ್ಷಣಾ ವಾಹನಗಳನ್ನು ಸಾರ್ವಜನಿಕರ ಸೇವೆಗೆ ಸಮರ್ಪಿಸಿ ಅವರು ಮಾತನಾಡಿದರು.

‘ರಾಜ್ಯದಲ್ಲಿ 144 ತಾಲ್ಲೂಕುಗಳಲ್ಲಿ 168 ಅಗ್ನಿಶಾಮಕ ಠಾಣೆಗಳಿದ್ದು ಕೆಲವು ತಾಲ್ಲೂಕುಗಳಲ್ಲಿ ಒಂದಕ್ಕಿಂತ ಹೆಚ್ಚು ಠಾಣೆಗಳಿವೆ. ರಾಜ್ಯದ ಎಲ್ಲಾ 176 ತಾಲೂಕುಗಳಲ್ಲಿ ಠಾಣೆಗಳನ್ನು ನಿರ್ಮಿಸುವ ಗುರಿಯನ್ನು ಸರ್ಕಾರ ಹೊಂದಿದೆ’ ಎಂದರು.‘ಇಲಾಖೆಯಲ್ಲಿ 1254 ಹುದ್ದೆಗಳನ್ನು ಭರ್ತಿ ಮಾಡಲು ಅವಕಾಶ ದೊರೆತಿದೆ. ಅಗತ್ಯವಿರುವ ಇನ್ನೂ 2000 ಸಿಬ್ಬಂದಿಗಳನ್ನು ಹಂತ ಹಂತವಾಗಿ ನೇಮಕ ಮಾಡಿಕೊಳ್ಳಲಾಗುವುದು’ ಎಂದು ಅವರು ಹೇಳಿದರು.

‘ಉತ್ತರ ಕರ್ನಾಟಕದ ನೆರೆ ಪೀಡಿತ ಪ್ರದೇಶಗಳಲ್ಲಿ ತುರ್ತು ಪರಿಸ್ಥಿತಿ ನಿಭಾಯಿಸಲು ತಲಾ ಮೂರು ರಕ್ಷಣಾ ವಾಹನಗಳು ಹಾಗೂ ಮಧ್ಯಮ ರಕ್ಷಣಾ ವಾಹನಗಳನ್ನು ಒದಗಿಸಲಾಗಿದೆ. ಅಲ್ಲದೇ 12 ಜಲ ವಾಹನಗಳು ಕಾರ್ಯ ನಿರ್ವಹಿಸಲಿವೆ. ಉತ್ತರ ಕರ್ನಾಟಕ ಅಭಿವೃದ್ಧಿ ಯೋಜನೆಯಡಿ ಈ ವಾಹನಗಳನ್ನು ಖರೀದಿ ಮಾಡಲಾಗಿದೆ’ ಎಂದರು.‘32 ಮೀಟರ್ ಎತ್ತರದಲ್ಲಿ ಕಾರ್ಯ ನಿರ್ವಹಿಸುವ 4 ಕೋಟಿ ವೆಚ್ಚದ ಏರಿಯಲ್ ಲ್ಯಾಡರ್ ಫ್ಲಾಟ್‌ಫಾರ್ಮ್ ಹುಬ್ಬಳ್ಳಿ ಧಾರವಾಡ ಅವಳಿ ನಗರದಲ್ಲಿ ಕಾರ್ಯಾಚರಣೆ ನಡೆಸಲಿದೆ’ ಎಂದೂ ಅವರು ತಿಳಿಸಿದರು.

‘ಕ್ಷಿಪ್ರವಾಗಿ ರಕ್ಷಣಾ ಕಾರ್ಯಕ್ಕೆ ನೆರವಾಗುವ ಕಟಿಂಗ್, ಲಿಫ್ಟಿಂಗ್, ಪುಲ್ಲಿಂಗ್, ದೋಣಿ ಹಾಗೂ ಉಸಿರಾಟದ ಉಪಕರಣಗಳು ರಕ್ಷಣಾ ವಾಹನಗಳಲ್ಲಿ ಇರಲಿವೆ.  ಡೀಸೆಲ್ ಜನರೇಟರ್‌ಗಳನ್ನು ಮಧ್ಯಮ ರಕ್ಷಣಾ ವಾಹನಗಳು ಹೊಂದಿವೆ. 12 ಜಲವಾಹನಗಳು ತಲಾ 4500 ಲೀಟರ್ ಸಾಮರ್ಥ್ಯದ ನೀರಿನ ಟ್ಯಾಂಕ್ ಪಂಪ್ ಹಾಗೂ ಜೀವ ರಕ್ಷಕ ಉಪಕರಣಗಳನ್ನು ಹೊಂದಿವೆ’ ಎಂದು ತಿಳಿಸಿದರು.

‘ಬೆಂಗಳೂರಿನಲ್ಲಿ ಅಗ್ನಿ ಅನಾಹುತಗಳನ್ನು ತಪ್ಪಿಸಲು 52 ಮೀಟರ್ ಎತ್ತರದಲ್ಲಿ ಕಾರ್ಯಾಚರಣೆ ನಡೆಸುವ ಏರಿಯಲ್ ಲ್ಯಾಡರ್ ಫ್ಲಾಟ್‌ಫಾರ್ಮ್ ಕಾರ್ಯಾರಂಭ ಮಾಡಿದೆ.ಇದು 17ರಿಂದ 18 ಮಹಡಿ ಹೊಂದಿರುವ ಬಹುಮಹಡಿ ಕಟ್ಟಡಗಳಲ್ಲಿ ಸಂಭವಿಸುವ ಅಗ್ನಿ ಅನಾಹುತಗಳನ್ನು ಪರಿಣಾಮಕಾರಿಯಾಗಿ  ತಡೆಯಲಿದೆ. 3.92 ಕೋಟಿ ರೂಪಾಯಿ ಬೆಲೆ ಬಾಳುವ ವಾಹನ ಇದಾಗಿದೆ’ ಎಂದರು.

ಸರ್ಜಾಪುರ ರಸ್ತೆಯ ಕೈಕೊಂಡನಹಳ್ಳಿಯಲ್ಲಿ ಕ್ರೆಡಾಯ್ ಸಂಸ್ಥೆ ನಿರ್ಮಿಸಿರುವ ನೂತನ ಅಗ್ನಿಶಾಮಕ ಠಾಣೆ ಶನಿವಾರ ಉದ್ಘಾಟನೆ ಕುರಿತು ಮಾಹಿತಿ ನೀಡಿದ ಅವರು ‘ಜಿಮ್, ವಿಶ್ರಾಂತಿ ಕೊಠಡಿ ಸಿಬ್ಬಂದಿ ತರಬೇತಿ ಕೇಂದ್ರ, ಸಾರ್ವಜನಿಕ ತರಬೇತಿ ಸೇರಿದಂತೆ ಅತ್ಯಾಧುನಿಕ ಸೌಲಭ್ಯಗಳನ್ನು ಈ ಠಾಣೆ ಹೊಂದಿದೆ’ ಎಂದರು.

ಈ ಸಂದರ್ಭದಲ್ಲಿ  52 ಮೀಟರ್ ಎತ್ತರದಲ್ಲಿ ಕಾರ್ಯಾಚರಣೆ ನಡೆಸುವ ಏರಿಯಲ್ ಲ್ಯಾಡರ್ ಫ್ಲಾಟ್‌ಫಾರ್ಮ್‌ನ ಪ್ರಾತ್ಯಕ್ಷಿಕೆಯನ್ನು ನೀಡಲಾಯಿತು. ಶಾಸಕರಾದ ವರ್ತೂರು ಪ್ರಕಾಶ್, ಎಂ.ಕೃಷ್ಣಪ್ಪ, ಅಗ್ನಿಶಾಮಕ ಮತ್ತು ತುರ್ತುಸೇವೆಗಳ ಇಲಾಖೆಯ ಡಿಜಿಪಿ ಡಾ. ಡಿ.ವಿ. ಗುರುಪ್ರಸಾದ್, ಬಿಎಂಟಿಸಿ ವ್ಯವಸ್ಥಾಪಕ ನಿರ್ದೇಶಕ ಸೈಯದ್ ಜಮೀರ್ ಪಾಷಾ, ಬಿಎಂಟಿಸಿ ಭದ್ರತೆ ಮತ್ತು ಪರಿಸರ ವಿಭಾಗದ ನಿರ್ದೇಶಕ ಅರುಣ್ ಚಕ್ರವರ್ತಿ ಮತ್ತಿತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT