ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರತಿಭಾ ಕಾರಂಜಿ: ಚಿಣ್ಣರ ಕಲರವ

Last Updated 11 ಜನವರಿ 2014, 7:15 IST
ಅಕ್ಷರ ಗಾತ್ರ

ಕೊಪ್ಪಳ: ತಲೆಗೆ ಸೆರಗು ಸುತ್ತಿಕೊಂಡು ಹುಲ್ಲು ಹೊರೆ ಹೊತ್ತುಕೊಂಡು ಮೆಲ್ಲ ಮೆಲ್ಲನೆ ಬರುತಿಹಳು ಭಾರತದ ಗರತಿ....
ಗುರೂಜಿ ಗುರೂಜೀ ಅಲೆದಾಡಿ ಬಂದೆ, ಹಳ್ಳ ಹೊಳೆ ಸುತ್ತಾಡಿ ಬಂದೆ, ಸುರಿಯೋ ಮಳೆರಾಯ...

– ಇವು ಇಲ್ಲಿನ ಭಾಗ್ಯನಗರದ ಸರ್ಕಾರಿ ಪದವಿಪೂರ್ವ ಕಾಲೇಜು ಆವರಣದಲ್ಲಿ ಶುಕ್ರವಾರ ಕೇಳಿಬಂದ ಚಿಣ್ಣರ ಕಲರವ.
ಜಿಲ್ಲಾ ಪಂಚಾಯಿತಿ, ಶಿಕ್ಷಣ ಇಲಾಖೆ, ಭಾಗ್ಯನಗರ ಸರ್ಕಾರಿ ಪದವಿಪೂರ್ವ ಕಾಲೇಜು ಆಶ್ರಯದಲ್ಲಿ ಶುಕ್ರವಾರ ನಡೆದ ಜಿಲ್ಲಾಮಟ್ಟದ ಪ್ರಾಥಮಿಕ ಹಾಗೂ ಪ್ರೌಢಶಾಲಾ ವಿಭಾಗದ ಪ್ರತಿಭಾ ಕಾರಂಜಿ ಸ್ಪರ್ಧೆಯ ಝಲಕ್‌.

1ರಿಂದ 4ನೇ ತರಗತಿ ವಿಭಾಗದ ಛದ್ಮವೇಷ ಸ್ಪರ್ಧೆಯಲ್ಲಿ ಕೊಪ್ಪಳದ ಕಾವ್ಯಾ ಸಿದ್ನಿಕೊಪ್ಪ ಶಿವನಾಗಿ ಅವತರಿಸಿದರೆ, ಗಂಗಾವತಿ ಮರಿಸ್ವಾಮಿ ರಾಕ್ಷಸ ವೇಷ, ಕುಷ್ಟಗಿಯ ಎ. ಶಿಲ್ಪಾ ಕಿತ್ತೂರು ಚನ್ನಮ್ಮ, ಸ್ವಪ್ನಾ ಪಾಟೀಲ್‌ ದುರ್ಗೆಯಾಗಿ ಗಮನಸೆಳೆದರು. 5ರಿಂದ 7ನೇ ತರಗತಿ ವಿಭಾಗದಲ್ಲಿ ಕೊಪ್ಪಳದ ಗೌರಿ ಒನಕೆ ಓಬವ್ವ­ಳಾದಳು. ಗಂಗಾವತಿಯ ಅಮೃತಾ ಯಕ್ಷಗಾನದ ವೇಷ ಧರಿಸಿದ್ದಳು.

ಆದರೆ, ಅದು ಯಾವ ಪ್ರಕಾರದ್ದು ಎಂಬ ಸ್ಪಷ್ಟತೆ ಇರಲಿಲ್ಲ. ಯಲ­ಬುರ್ಗಾದ ಸರಸ್ವತಿ ಹೊನ್ನುಂಬೆ ಶಾರದೆಯಾಗಿ ಕಾಣಿಸಿಕೊಂಡಳು.
ಮೌಖಿಕ ಪ್ರಸ್ತುತಿಗೆ ಅವಕಾಶವಿಲ್ಲದ ಛದ್ಮವೇಷ ಸ್ಪರ್ಧೆಯಲ್ಲಿ ವೇಷ, ಅಭಿನಯಕ್ಕೆ ಪೂರಕವಾದ ಹಿನ್ನೆಲೆ ಸಂಗೀತ ನೀಡಲಾದರೂ ಅವಕಾಶ ಬೇಕಿತ್ತು ಎಂಬ ಅಭಿಪ್ರಾಯ ಪ್ರೇಕ್ಷಕರಿಂದ ಕೇಳಿಬಂದಿತು.

ಜಾನಪದ, ಕೋಲಾಟ ನೃತ್ಯಗಳು ಒಂದ­ನ್ನೊಂದು ಮೀರಿಸುವಂತಿದ್ದವು. ಗಂಗಾವತಿ ತಾಲ್ಲೂ­ಕಿನ ಬಸವನದುರ್ಗ ಶಾಲೆಯ ವಿದ್ಯಾರ್ಥಿಗಳು ಪ್ರಸ್ತುತಪಡಿಸಿದ ಬೇಡರ ನೃತ್ಯವಂತೂ ಆಕರ್ಷಕ ಕಸರತ್ತುಗಳಿಂದ ಕೂಡಿದ್ದು ಗಮನಸೆಳೆಯಿತು.

ಒಂದೆಡೆ ವೇದಿಕೆ ಕಾರ್ಯಕ್ರಮಗಳು ಬಹಿರಂಗವಾಗಿ ನಡೆದರೆ ಶಾಲಾ ಕೊಠಡಿಯೊಳಗೆ ಚಿತ್ರಕಲೆ, ಸಂಗೀತ ಸ್ಪರ್ಧೆ, ಮಣ್ಣಿನ ಮಾದರಿ ರಚನೆ ಕಾರ್ಯಗಳು ಸದ್ದಿಲ್ಲದೇ ನಡೆಯುತ್ತಿದ್ದವು.

ಮಣ್ಣಿನ ಮಕ್ಕಳು: ಮಣ್ಣಿನ ಮಾದರಿ ರಚನೆ­ಯಂತೂ ಮಕ್ಕಳ ಸೃಜನಶೀಲತೆ ಅನಾವರಣ­ಗೊಳಿಸಿತು. ಮಣ್ಣಿನ ರಚನೆ ಸ್ಪರ್ಧೆಯಲ್ಲಿ ಉಳಕಲ ಕ್ಯಾಂಪ್‌ನ ಶರಣ್‌ ಕುಮಾರ್‌ ಕೈಯಲ್ಲಿ ನವಿಲು ಗರಿ­ಬಿಚ್ಚಿತು. ಯಲಬುರ್ಗಾದ ಬಸವರಾಜ ಧಮ್ಮೂರು ರಚಿಸಿದ ಆಮೆ ನೀರಿನ ಮೇಲೆ ನಿಂತಿತ್ತು. ಗುಡಗೇರಿ ಶಾಲೆಯ ಮಾರುತಿ ಬಿಡ್ಡಪ್ಪನ ಕೈಯಲ್ಲಿ ಮೊಸಳೆ ಬಾಯಿಬಿಟ್ಟು ಬೇಟೆಗೆ ಕಾದಿತ್ತು. ಗಂಗಾವತಿ ಅಕ್ಷರ ಪಬ್ಲಿಕ್‌ ಸ್ಕೂಲ್‌ನ ತನಿಶಾ ಕೈಯಲ್ಲಿ ಗ್ರಾಮ ಸಂಸ್ಕೃತಿ– ಗುಡಿಕೈಗಾರಿಕೆ ಅರಳಿತು. ತಳವಗೆರೆಯ ಸಿದ್ದಪ್ಪ ವಿಶ್ವೇಶ್ವರಯ್ಯ ಅವರ ಪ್ರತಿಮೆ ರಚಿಸಿದರು.

ಒಂದೆಡೆ ಸ್ಪರ್ಧೆಗಳು ನಡೆಯುತ್ತಲೇ ಇದ್ದರೆ ಮತ್ತೊಂದೆಡೆ ಗೋಧಿ ಹುಗ್ಗಿ, ಅನ್ನ ಸಾಂಬಾರು ಮಕ್ಕಳ ಹೊಟ್ಟೆ ತಣ್ಣಗಾಗಿಸಿತು.
ಒಟ್ಟಿನಲ್ಲಿ ಅಪ್ಪಟ ದೇಸಿ, ಸೃಜನಶೀಲ ಪ್ರತಿಭೆಗೆ ವೇದಿಕೆ ಕಲ್ಪಿಸುವಲ್ಲಿ ಕಾರ್ಯಕ್ರಮ ಯಶಸ್ವಿ­ಯಾಯಿತು. ನಮಗೆ ಕಾರ್ಯಕ್ರಮ ಖುಷಿ ತಂದಿದೆ. ಜಿಲ್ಲಾಮಟ್ಟದ ಕಾರ್ಯಕ್ರಮ ನಡೆಸು­ವಲ್ಲಿಯೂ ಸಮಯಪಾಲನೆಯಲ್ಲಿ ಎಡವಿದ ಸಂಘಟಕರು ಮಕ್ಕಳು ಹಾಗೂ ಶಿಕ್ಷಕರಿಗೆ ಸಮಯ ಕಡಿಮೆಯಿದೆ ಬೇಗ ಸಿದ್ಧರಾಗಿ ಎಂದು ಧ್ವನಿ­ವರ್ಧಕದಲ್ಲಿ ಗದರುತ್ತಿರುವುದು ಸಲ್ಲದು ಎಂದು ಗ್ರಾಮೀಣ ಭಾಗದ ಶಿಕ್ಷಕರು ಅಸಮಾಧಾನ ವ್ಯಕ್ತಪಡಿಸಿದರು.

ಉದ್ಘಾಟನೆ: ಶಾಸಕ ಕೆ.ರಾಘವೇಂದ್ರ ಹಿಟ್ನಾಳ ಕಾರ್ಯಕ್ರಮ ಉದ್ಘಾಟಿಸಿದರು. ಜಿ.ಪಂ. ಸದಸ್ಯೆ ವನಿತಾ ಗಡಾದ, ಶಿಕ್ಷಣ ಇಲಾಖೆ ಉಪನಿರ್ದೇಶಕ ಜಿ.ಎಚ್. ವೀರಣ್ಣ, ಗ್ರಾಮ ಪಂಚಾಯಿತಿ ಅಧ್ಯಕ್ಷ  ಹೊನ್ನೂರಸಾಬ್ ಮಹ್ಮದ ಸಾಬ್, ಜಿ.ಪಂ. ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷ ಅಮರೇಶ್ ಕುಳಗಿ, ತಾ.ಪಂ. ಸದಸ್ಯ ದಾನಪ್ಪ ಕವಲೂರು, ಶ್ರೀನಿವಾಸ ಹ್ಯಾಟಿ, ಜಿಲ್ಲಾ ವಾರ್ತಾಧಿಕಾರಿ ತುಕಾರಾಂ ರಾವ್, ಪ್ರೌಢಶಾಲಾ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ಎಚ್.ಎಸ್. ಶಿವರೆಡ್ಡಿ, ಕಾಲೇಜಿನ ಪ್ರಾಂಶುಪಾಲ ಮಂಡ­ಸೊಪ್ಪಿ, ಉಪ ಪ್ರಾಚಾರ್ಯ ಸುರೇಂದ್ರಗೌಡ ಪಾಟೀಲ ಭಾಗವಹಿಸಿದ್ದರು. ಶಿಕ್ಷಣ ಇಲಾಖೆಯ ಬಡದಾನಿ ಸ್ವಾಗತಿಸಿ, ವಂದಿಸಿದರು. 
ಜ.11ರಂದು ಪ್ರೌಢಶಾಲಾ ವಿಭಾಗದ ಸ್ಪರ್ಧೆಗಳು ನಡೆಯಲಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT