ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರತ್ಯೇಕ ಅಪಘಾತ; 3 ಸಾವು

Last Updated 10 ಫೆಬ್ರುವರಿ 2011, 19:35 IST
ಅಕ್ಷರ ಗಾತ್ರ

ಬೆಂಗಳೂರು: ನಗರದ ಮಡಿವಾಳ ಮತ್ತು ಆಡುಗೋಡಿ ಸಂಚಾರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಕಳೆದ 24 ಗಂಟೆಗಳಲ್ಲಿ ಸಂಭವಿಸಿದ ಪ್ರತ್ಯೇಕ ಅಪಘಾತಗಳಲ್ಲಿ ಮೂರು ಮಂದಿ ಸಾವನ್ನಪ್ಪಿದ್ದಾರೆ. ರಸ್ತೆ ದಾಟುತ್ತಿದ್ದ ಕೂಲಿ ಕಾರ್ಮಿಕನಿಗೆ ವಾಹನ ಡಿಕ್ಕಿ ಹೊಡೆದ ಪರಿಣಾಮ ಆತ ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಸರ್ಜಾಪುರ ರಸ್ತೆಯ ಅಗರ ಬಳಿ ಗುರುವಾರ ಬೆಳಿಗ್ಗೆ ನಡೆದಿದೆ.ಅಗರ ಗ್ರಾಮದ ಸಣ್ಣಯ್ಯ (45) ಮೃತಪಟ್ಟವರು. ಅವರು ಲಾರಿಗೆ ಮರಳು ತುಂಬುವ ಕೆಲಸ ಮಾಡುತ್ತಿದ್ದರು.

ಅವರು ಬೆಳಿಗ್ಗೆ 5.45ರ ಸುಮಾರಿಗೆ ರಸ್ತೆ ದಾಟುತ್ತಿದ್ದ ಸಂದರ್ಭದಲ್ಲಿ ಅಪರಿಚಿತ ವಾಹನ ಡಿಕ್ಕಿ ಹೊಡೆಯಿತು. ಇದರಿಂದ ತಲೆಗೆ ತೀವ್ರ ಪೆಟ್ಟಾಗಿ ಸ್ಥಳದಲ್ಲೇ ಮೃತಪಟ್ಟರು ಎಂದು ಪೊಲೀಸರು ತಿಳಿಸಿದ್ದಾರೆ. ಚಾಲಕ ವಾಹನದೊಂದಿಗೆ ಪರಾರಿಯಾಗಿದ್ದಾನೆ. ವಾಹನದ ಗುರುತು ಪತ್ತೆಯಾಗಿಲ್ಲ ಎಂದು ಪೊಲೀಸರು ಹೇಳಿದ್ದಾರೆ. ಮತ್ತೊಂದು ಘಟನೆ: ಸರ್ಜಾಪುರ ರಸ್ತೆಯ ಇಬ್ಬಲೂರು ಗ್ರಾಮದ ಬಳಿ ಗುರುವಾರ ಬೆಳಿಗ್ಗೆ ರಸ್ತೆ ದಾಟುತ್ತಿದ್ದ ಪಿಳ್ಳಪ್ಪ (40) ಎಂಬುವರಿಗೆ ವಾಹನ ಡಿಕ್ಕಿ ಹೊಡೆದ ಪರಿಣಾಮ ಅವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

ದೇವನಹಳ್ಳಿ ಸಮೀಪದ ರೆಡ್ಡಿಹಳ್ಳಿ ನಿವಾಸಿಯಾದ ಪಿಳ್ಳಪ್ಪ ಅವರು ಉದ್ಯಾನದ ನಿರ್ವಹಣೆ (ಮಾಲಿ) ಕೆಲಸ ಮಾಡುತ್ತಿದ್ದರು.ಇಬ್ಬಲೂರಿನಲ್ಲಿರುವ ಸಹೋದರನ ಮನೆಗೆ ಬಂದಿದ್ದ ಅವರು ರೆಡ್ಡಿಹಳ್ಳಿಗೆ ವಾಪಸ್ ಹೊರಟಿದ್ದ ಸಂದರ್ಭದಲ್ಲಿ ಈ ದುರ್ಘಟನೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಮಡಿವಾಳ ಸಂಚಾರ ಠಾಣೆ ಪೊಲೀಸರು ಎರಡೂ ಪ್ರಕರಣಗಳನ್ನು ದಾಖಲಿಸಿಕೊಂಡಿದ್ದಾರೆ.

ಆಡುಗೋಡಿ: ಪಾನಮತ್ತರಾಗಿ ಬೈಕ್‌ನಲ್ಲಿ ಹೋಗುತ್ತಿದ್ದ ಮೂವರು ಸ್ನೇಹಿತರು ರಸ್ತೆ ಬದಿ ನಿಂತಿದ್ದ ಲಾರಿಗೆ ಡಿಕ್ಕಿ ಹೊಡೆದು ಸಂಭವಿಸಿದ ಅಪಘಾತದಲ್ಲಿ ಒಬ್ಬ ಮೃತಪಟ್ಟು, ಮತ್ತಿಬ್ಬರು ಗಾಯಗೊಂಡ ಘಟನೆ ಕೋರಮಂಗಲದ ರಾಷ್ಟ್ರೀಯ ಕ್ರೀಡಾ ಗ್ರಾಮದ ಸಮೀಪ ಬುಧವಾರ ರಾತ್ರಿ ನಡೆದಿದೆ. ಕೋರಮಂಗಲ ಬಳಿಯ ರಾಜೇಂದ್ರನಗರ ನಿವಾಸಿ ಕರಣ್‌ಭಟ್ (30) ಎಂಬುವರು ಸಾವನ್ನಪ್ಪಿದ್ದು, ಅವರ ಸ್ನೇಹಿತರಾದ ಕಿರಣ್ ಮತ್ತು ಕೃಷ್ಣಭಟ್ ಅವರು ಗಾಯಗೊಂಡಿದ್ದಾರೆ.

ನೇಪಾಳ ಮೂಲದ ಕರಣ್‌ಭಟ್ ಕೋರಮಂಗಲದ ಅಪಾರ್ಟ್‌ಮೆಂಟ್‌ವೊಂದರಲ್ಲಿ ಸೆಕ್ಯುರಿಟಿ ಗಾರ್ಡ್ ಆಗಿದ್ದರು. ಅವರಿಗೆ ಇಬ್ಬರು ಮಕ್ಕಳಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಕರಣ್‌ಭಟ್ ಮನೆಯಲ್ಲಿ ರಾತ್ರಿ ಸ್ನೇಹಿತರು ಮದ್ಯ ಕುಡಿದಿದ್ದರು. ಬಳಿಕ ಕರಣ್‌ಭಟ್ ಸ್ನೇಹಿತರನ್ನು ಹಲಸೂರಿಗೆ ಬಿಡಲು ಬೈಕ್‌ನಲ್ಲಿ ಹೋಗುತ್ತಿದ್ದ ಸಂದರ್ಭದಲ್ಲಿ ಈ ಅಪಘಾತ ಸಂಭವಿಸಿದೆ.

ಅಜಾಗರೂಕತೆಯಿಂದ ಅತಿ ವೇಗವಾಗಿ ಬೈಕ್ ಚಾಲನೆ ಮಾಡುತ್ತಿದ್ದ ಕರಣ್‌ಭಟ್, ರಸ್ತೆ ಬದಿ ನಿಂತಿದ್ದ ಲಾರಿಯೊಂದಕ್ಕೆ ವಾಹನ ಗುದ್ದಿಸಿದರು. ಪರಿಣಾಮ ಅವರ ಮುಖ ಮತ್ತು ಎದೆಯ ಭಾಗಕ್ಕೆ ತೀವ್ರ ಪೆಟ್ಟಾಗಿ ಸ್ಥಳದಲ್ಲೇ ಮೃತಪಟ್ಟರು ಎಂದು ಪೊಲೀಸರು ಹೇಳಿದ್ದಾರೆ. ಆಡುಗೋಡಿ ಸಂಚಾರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT