ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರತ್ಯೇಕ ಮೀಸಲಾತಿಗಾಗಿ ಮೆರವಣಿಗೆ

Last Updated 14 ಏಪ್ರಿಲ್ 2011, 5:30 IST
ಅಕ್ಷರ ಗಾತ್ರ

ಸವಣೂರ: ಸಾಚಾರ, ರಂಗನಾಥ ಮಿಶ್ರಾ ಆಯೋಗದ ವರದಿಯನ್ನು ಯಥಾವತ್ತಾಗಿ ಜಾರಿಗೊಳಿಸಬೇಕು ಎಂದು ಜಿಲ್ಲಾ ಮುಸ್ಲಿಂ ಮೀಸಲಾತಿ ಹೋರಾಟ ಸಮಿತಿ ಆಗ್ರಹಿಸಿದೆ.ಮುಸ್ಲಿಂ ಸಮುದಾಯಕ್ಕೆ ಪ್ರತ್ಯೇಕ ಮೀಸಲಾತಿ ಸೇರಿದಂತೆ ಸಮಾಜದ ಹಲವಾರು ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ,  ಬುಧವಾರ ಸವಣೂರಿನಲ್ಲಿ ಪ್ರತಿಭಟನಾ ಮೆರವಣಿಗೆ ಕೈಗೊಂಡ ಪ್ರಮುಖರು, ತಹಸೀಲ್ದಾರರ ಮುಖಾಂತರ ಸರಕಾರಕ್ಕೆ ಮನವಿ ಸಲ್ಲಿಸಿದರು.

ದೇಶದಲ್ಲಿನ ಮುಸ್ಲಿಂ ಸಮಾಜ ಆರ್ಥಿಕವಾಗಿ, ರಾಜಕೀಯವಾಗಿ ಹಾಗೂ ಶೈಕ್ಷಣಿಕವಾಗಿ ಅತ್ಯಂತ ಹಿಂದುಳಿದಿದೆ. ಸ್ವಾತಂತ್ರೋತ್ತರ ದಿನಗಳಲ್ಲಿಯೂ ಸಮಾಜ ತುಳಿತಕ್ಕೆ ಒಳಗಾಗಿ ಅಭಿವೃದ್ಧಿ ವಂಚಿತವಾಗಿದೆ. ಇದನ್ನು ತಪ್ಪಿಸಲು ಹಿಂದುಳಿದ ವರ್ಗಕ್ಕೆ ನೀಡಿದ ವಿಧದಲ್ಲಿಯೇ ಮುಸ್ಲಿಂ ಸಮಾಜಕ್ಕೂ ಮೀಸಲಾತಿ ನಿಡುವ ಅವಶ್ಯಕತೆ ಇದೆ ಎಂದು ಮನವಿಯಲ್ಲಿ ತಿಳಿಸಲಾಗಿದೆ.

ನಿವೃತ್ತ ನ್ಯಾಯಮೂರ್ತಿ ರಾಜೇಂದ್ರ ವರ್ಮಾ ಸಾಚಾರ ಹಾಗೂ ರಂಗನಾಥ ಮಿಶ್ರಾ ಅವರು ಮಂಡಿಸಿರುವ ಆಯೋಗದ ವರದಿಯ ಅನ್ವಯ ಮುಸ್ಲಿಂ ಸಮಾಜಕ್ಕೆ ಪ್ರತ್ಯೇಕ ಮೀಸಲಾತಿ ನೀಡಬೇಕು. ಸ್ಥಳೀಯ ಸಂಸ್ಥೆ, ಪಂಚಾಯತ್ ರಾಜ್ ಹಾಗೂ ಸಹಕಾರಿ ಸಂಸ್ಥೆಗಳಲ್ಲಿ ಮುಸ್ಲಿಂಮರಿಗೆ ಪ್ರತ್ಯೇಕ ಮೀಸಲಾತಿ ಕಲ್ಪಿಸಬೇಕು. 

ಸರ್ಕಾರಿ, ಅರೆ ಸರ್ಕಾರಿ ಹಾಗೂ ಖಾಸಗಿ ಕಂಪೆನಿಗಳಲ್ಲಿ ಮೀಸಲಾತಿ ನೀಡಿ, ಉದ್ಯೋಗಾವಕಾಶ ಕಲ್ಪಿಸಬೇಕು. ಶಿಕ್ಷಣ, ವೃತ್ತಿ ಶಿಕ್ಷಣ, ಮೆಡಿಕಲ್, ದಂತವೈದ್ಯ, ಡಿಪ್ಲೋಮಾ ತರಬೇತಿಯಲ್ಲಿಯೂ ಪ್ರತ್ಯೇಕ ಮೀಸಲಾತಿ ನೀಡಬೇಕು. ದೇಶದ ಮೊಟ್ಟ ಮೊದಲ ಸ್ವಾತಂತ್ರ್ಯ ಹೋರಾಟಗಾರರಾದ ಟಿಪ್ಪೂ ಸುಲ್ತಾನ ಅವರನ್ನು ಸಂಪೂರ್ಣವಾಗಿ ಕಡೆಗಣಿಸಲಾಗಿದ್ದು, ಮುಂದಿನ ದಿನಗಳಲ್ಲಿ ಟಿಪ್ಪೂ ಸುಲ್ತಾನ ಅಭಿವೃದ್ಧಿ ಪ್ರಾಧಿಕಾರ ರಚನೆ ಮಾಡಬೇಕು. ಮೈಸೂರು ನಗರವನ್ನು ಪ್ರೇಕ್ಷಣೀಯ ಸ್ಥಳವಾಗಿ ಘೋಷಿಸಬೇಕು. ಟಿಪ್ಪೂ ಸುಲ್ತಾನ ಅವರ ಜನ್ಮ ದಿನವನ್ನು ಸಂಪೂರ್ಣ ದೇಶದಾದ್ಯಂತ ಆಚರಣೆ ಮಾಡಬೇಕು ಹಾಗೂ ಅಂದು ಸರ್ಕಾರಿ ರಜೆ ನೀಡಬೇಕು ಎಂದು ಮನವಿಯಲ್ಲಿ  ಕೋರಲಾಗಿದೆ.

ಈ ಬೇಡಿಕೆಗಳಿಗೆ ಸರ್ಕಾರ ಸ್ಪಂದಿಸಿ, ಮುಸ್ಲಿಂ ಸಮಾಜದ ಅಭಿವೃದ್ಧಿಗಾಗಿ ರಾಜ್ಯ ಸಭೆ, ವಿಧಾನ ಪರಿಷತ್ ಹಾಗೂ ಲೋಕ ಸಭೆಯಲ್ಲಿ ಈ ಬೇಡಿಕೆಗಳನ್ನು ಚರ್ಚಿಸಬೇಕು ಹಾಗೂ ಇವುಗಳನ್ನು ಜಾರಿಗೊಳಿಸಬೇಕು ಎಂದು ಮನವಿಯಲ್ಲಿ ಕೋರಲಾಗಿದೆ.

ಮನವಿ ಸಲ್ಲಿಸುವ ಸಂದರ್ಭದಲ್ಲಿ ಸಂಘಟನೆಯ ಪ್ರಮುಖರಾದ ಐ.ಯು ಪಠಾಣ, ಜಿಲ್ಲಾ ಸಂಚಾಲಕ ಬಾಬುಸಾಬ ಮೋಮಿನಗಾರ, ಅಧ್ಯಕ್ಷರಾದ ನಜೀರಸಾಬ ಐ. ಸವಣೂರ, ವಕ್ತಾರ ಟಿಪೂ ಸುಲ್ತಾನ ಕಲಕೋಟಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸಾಜೀದ ಅಹ್ಮದ ದಾರೂಗರ, ಅಂಜುಮನ್ ಅಧ್ಯಕ್ಷ ಝಡ್.ಜಿ ಫರಾಶ್, ಆರ್.ಎಮ್ ಡಂಬಳ, ಐ.ಆರ್ ಮಿರ್ಜಾ, ಎನ್.ಡಿ ಬಿರಾದಾರ, ಎಸ್.ಎಮ್ ವಕೀಲ, ಎ.ಜೆ. ಪಠಾಣ, ಡಾ. ಸೈಯದ್‌ರೋಷನ್ ಮುಲ್ಲಾ, ರಿಯಾಜ್ ಅಹ್ಮದ ಜೌಧರಿ, ಉಮ್ಮರಖಾನ್ ಅಳ್ನಾವರ್, ಜೇಶಾನಖಾನ್ ಪಠಾಣ ಸೇರಿದಂತೆ ನಗರದ ಹಲವಾರು ಪ್ರಮುಖರು ಪಾಲ್ಗೊಂಡಿದ್ದರು.

ಇದಕ್ಕೂ ಮುನ್ನ ನಗರದ ಕೃಷಿ ಉತ್ಪನ್ನ ಮಾರುಕಟ್ಟೆ ಪ್ರಾಂಗಣದ ಬಳಿಯಿಂದ ಪ್ರತಿಭಟನಾ ಮೆರವಣಿಗೆ ಕೈಗೊಂಡ ಪ್ರಮುಖರು, ನಗರದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಕೈಗೊಂಡು ತಹಸೀಲ್ದಾರ ಕಚೇರಿ ಬಳಿ ಸಮಾವೇಶಗೊಂಡರು. ಬಳಿಕ ತಹಸೀಲ್ದಾರರ ಮುಖಾಂತರ ಸರ್ಕಾರಕ್ಕೆ ಮನವಿ ಸಲ್ಲಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT