ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಶ್ನೆ-ಉತ್ತರ

Last Updated 1 ಸೆಪ್ಟೆಂಬರ್ 2013, 19:59 IST
ಅಕ್ಷರ ಗಾತ್ರ

-ಚೈತ್ರಾ ವಿ.
ನಾನು ಡಿಪ್ಲೊಮಾ (ಇ.ಸಿ.) 6ನೇ ಸೆಮಿಸ್ಟರ್‌ನಲ್ಲಿ ಓದುತ್ತಿದ್ದೇನೆ. ಮುಂದೆ ಬಿ.ಟೆಕ್. ಮಾಡುವುದೋ ಅಥವಾ ಬೇರೇನಾದರೂ ಮಾಡುವುದೋ ಎಂಬ ಗೊಂದಲ ಇದೆ. ದಯಮಾಡಿ ಸೂಕ್ತ ಸಲಹೆ ಕೊಡಿ
.
ಡಿಪ್ಲೊಮಾ ಮುಗಿದ ನಂತರ ವಿದ್ಯಾಭ್ಯಾಸವನ್ನು ಮುಂದುವರಿಸಲು ಬಯಸುತ್ತೀರೋ ಅಥವಾ ಉದ್ಯೋಗಕ್ಕೆ ಸೇರಲು ಬಯಸುತ್ತೀರೋ ಎಂಬುದು ನಿಮ್ಮ ಪತ್ರದಿಂದ ಸ್ಪಷ್ಟವಾಗಿಲ್ಲ. ಭವಿಷ್ಯದ ಬಗ್ಗೆ ಸ್ಪಷ್ಟ ಕಲ್ಪನೆ ಅಗತ್ಯ. ನೀವು ವಿದ್ಯಾಭ್ಯಾಸವನ್ನೇ ಮುಂದುವರಿಸಲು ಬಯಸುವಿರಾದರೆ, ಸಿಇಟಿ ಪರೀಕ್ಷೆ ತೆಗೆದುಕೊಂಡು ಬಿ.ಇ.ಗೆ ಸೇರಬಹುದು ಅಥವಾ ನಿಮ್ಮ ಓದಿಗೆ ಸಂಬಂಧಪಟ್ಟ ವಿಷಯದಲ್ಲೇ ಪಿ.ಜಿ. ಡಿಪ್ಲೊಮಾ ಮಾಡಬಹುದು. ಓದನ್ನು ಮುಂದುವರಿಸಲು ನಿಮ್ಮ ಆರ್ಥಿಕ ಪರಿಸ್ಥಿತಿ ಅನುಕೂಲಕರ ಆಗಿಲ್ಲದಿದ್ದರೆ ಉದ್ಯೋಗಕ್ಕೆ ಸೇರಿಕೊಳ್ಳಬಹುದು. ಉದ್ಯೋಗದಲ್ಲಿ ಇದ್ದುಕೊಂಡೇ ಮುಕ್ತ ವಿಶ್ವವಿದ್ಯಾಲಯಗಳ ಮುಖಾಂತರ ಓದನ್ನು ಮುಂದುವರಿಸಬಹುದು.

-ಪ್ರಕಾಶ್, ಸಿಂದಗಿ, ಬಿಜಾಪುರ
ನಾನು 2009ರಲ್ಲಿ ಎಸ್ಸೆಸ್ಸೆಲ್ಸಿ ಮುಗಿಸಿದ ನಂತರ ಅನಿವಾರ್ಯ ಕಾರಣಗಳಿಂದ ಓದು ಮುಂದುವರಿಸಲಾಗಲಿಲ್ಲ. ನನಗೆ ಈಗ 22 ವರ್ಷ. ಮುಂದೆ ಓದಿ ಖಗೋಳ ವಿಜ್ಞಾನಿ ಆಗಬೇಕೆಂಬ ಗುರಿ ಇದೆ. ಆದರೆ ವಯೋಮಿತಿ ಅಥವಾ ಓದಿನ ಅಂತರದಿಂದ ನನಗೆ ಅವಕಾಶ ತಪ್ಪುವುದೇ?

ನಿಮ್ಮ ಮಹತ್ವಾಕಾಂಕ್ಷೆಯನ್ನು ತಿಳಿದು ಸಂತೋಷವೂ, ಹತಾಶ ಪರಿಸ್ಥಿತಿತಿಳಿದು ದುಃಖವೂ ಆಗುತ್ತಿದೆ. ಓದಲು ಅನುಕೂಲ ಇದ್ದವರಿಗೆ ಮಹತ್ವಾಕಾಂಕ್ಷೆ ಇಲ್ಲದಿರುವುದು, ಅನುಕೂಲ ಇಲ್ಲದವರಿಗೆ ಇಂತಹ ಆಕಾಂಕ್ಷೆಗಳಿರುವುದು ವಿಧಿಯ ವೈಚಿತ್ರ್ಯವೇ ಸರಿ. ಆದರೆ ನೀವು ಎದೆಗುಂದಬೇಕಾಗಿಲ್ಲ. ಹೇಗಾದರೂ ಪಿ.ಯು. ವಿದ್ಯಾಭ್ಯಾಸ ಮುಗಿಸಿದ ನಂತರ ಮುಕ್ತ ವಿಶ್ವವಿದ್ಯಾಲಯಗಳ ಮುಖಾಂತರ ವಿಜ್ಞಾನದ ಓದನ್ನು ಮುಂದುವರಿಸಬಹುದು.

ನಿಮಗಾಗಲೇ 22 ವರ್ಷ ಆಗಿರುವುದರಿಂದ ಈ ಮಾರ್ಗ ಸ್ವಲ್ಪ ಕಷ್ಟ. ಅದರ ಬದಲು ನೀವು ಸೂಕ್ತ ಉದ್ಯೋಗಕ್ಕೆ ಸೇರಿಕೊಂಡು ಬಿಡುವಿನ ವೇಳೆಯಲ್ಲಿ ಖಗೋಳ ಶಾಸ್ತ್ರವನ್ನು ಅಧ್ಯಯನ ಮಾಡಬಹುದು. ಖಗೋಳ ವಿಜ್ಞಾನಕ್ಕೆ ಬೇಕಾದ ಪ್ರಯೋಗ ಶಾಲೆ ನೆತ್ತಿಯ ಮೇಲೆ ಸದಾ ಕಾಲ ಲಭ್ಯವಾಗಿರುವುದರಿಂದ ನೀವು ಖಗೋಳ ವೀಕ್ಷಣೆ ಮತ್ತು ಓದನ್ನು ಮುಂದುವರಿಸಬಹುದು. ನಿಧಾನವಾಗಿ ಒಂದು ಬೈನಾಕ್ಯುಲರ್ ಅಥವಾ ದೂರದರ್ಶಕವನ್ನು ಸಂಪಾದಿಸಿಕೊಂಡರೆ ವಿಜ್ಞಾನಿಯ ಎಲ್ಲ ಸಂತೋಷ ನಿಮ್ಮದಾಗುತ್ತದೆ.

-ವೇಣು
ನಾನು ಬಿ.ಸಿ.ಎ. ಮೊದಲ ವರ್ಷದಲ್ಲಿ ಓದುತ್ತಿದ್ದೇನೆ. ನಂತರ ಇರುವ ಅತ್ಯುತ್ತಮ ಕೋರ್ಸುಗಳು ಯಾವುವು? ಯಾವುದಕ್ಕೆ ಉತ್ತಮ ಭವಿಷ್ಯ ಮತ್ತು ಉದ್ಯೋಗಾವಕಾಶಗಳಿವೆ?

ಬಿ.ಸಿ.ಎ. ಮೊದಲ ವರ್ಷದ ಓದಿನಲ್ಲೇ ನೀವು ಭವಿಷ್ಯದ ಬಗ್ಗೆ ಯೋಚಿಸುತ್ತಿರುವುದು ಒಳ್ಳೆಯದು. ನಂತರ ನೀವು ಏನು ಓದಬೇಕೆಂಬುದು ನಿಮ್ಮ ಮುಂದಿನ ಆಸಕ್ತಿಯನ್ನು ಅವಲಂಬಿಸಿರುತ್ತದೆ. ಕಂಪ್ಯೂಟರ್ ತಂತ್ರಜ್ಞಾನದಲ್ಲೇ ಆಸಕ್ತಿ ಇದ್ದರೆ ಮುಂದೆ ಎಂ.ಸಿ.ಎ. ಓದಬಹುದು. ತಾಂತ್ರಿಕ ನಿರ್ವಹಣೆಯ ಕ್ಷೇತ್ರದಲ್ಲಿ ಆಸಕ್ತಿ ಇದ್ದರೆ ಎಂ.ಬಿ.ಎ. ಮಾಡಬಹುದು. ಸಾಮಾಜಿಕ ಆಡಳಿತದಲ್ಲಿ ಆಸಕ್ತಿ ಇದ್ದರೆ ಕೆ.ಎ.ಎಸ್. ಅಥವಾ ಐ.ಎ.ಎಸ್. ಪರೀಕ್ಷೆಗಳನ್ನು ತೆಗೆದುಕೊಳ್ಳಬಹುದು. ನಿಮ್ಮ ಪರಿಣತಿ ಮತ್ತು ಆಸಕ್ತಿಯನ್ನು ಗುರುತಿಸಿಕೊಂಡು ಮುಂದುವರಿದರೆ ಯಶಸ್ಸು ಸಿಗುತ್ತದೆ.

-ನವೀನ್ ರಾಹುಲ್
ನಾನು ಇ.ಇ.ಯಲ್ಲಿ ಡಿಪ್ಲೊಮಾ ಮುಗಿಸಿದ್ದೇನೆ. ಮುಂದೆ ಎ.ಎಂ.ಐ.ಇ. ಮಾಡಬೇಕೆಂದಿದ್ದೇನೆ. ಇದು ಎಷ್ಟು ವರ್ಷದ ಕೋರ್ಸ್? ಇದಕ್ಕೂ ಬಿ.ಟೆಕ್.ಗೂ ಇರುವ ವ್ಯತ್ಯಾವೇನು? ಸರ್ಕಾರಿ ಉದ್ಯೋಗಾವಕಾಶಗಳು ಇವೆಯೇ?

ನೀವು ಉದ್ಯೋಗದಲ್ಲಿ ಇದ್ದುಕೊಂಡೇ ಎ.ಎಂ.ಐ.ಇ. ಮಾಡಬಹುದು. ಸರ್ಕಾರದಿಂದ ಅಂಗೀಕರಿಸಲಾದ ಸಂಸ್ಥೆಯು ಪ್ರದಾನ ಮಾಡುವ ಡಿಗ್ರಿ ಇದಾದ್ದರಿಂದ ಇದನ್ನು ಬಿ.ಇ. ಅಥವಾ ಬಿ.ಟೆಕ್.ಗೆ ಸಮಾನವಾಗಿ ಪರಿಗಣಿಸಲಾಗುತ್ತದೆ. ಆದ್ದರಿಂದ ಉದ್ಯೋಗಾವಕಾಶಗಳಿಗೂ ಕೊರತೆ ಇಲ್ಲ.

ಆದರೆ ಇತ್ತೀಚೆಗೆ ಎಂಜಿನಿಯರಿಂಗ್ ಕಾಲೇಜುಗಳ ಸಂಖ್ಯೆ ಹೆಚ್ಚಾಗಿ ಎಂಜಿನಿಯರಿಂಗ್ ಓದು ಸುಲಭವಾದ್ದರಿಂದ, ಬಿ.ಇ. ಮಾಡುವವರೇ ಹೆಚ್ಚಾಗಿ ಎ.ಎಂ.ಐ.ಇ. ಮಾಡುವವರು ಕಡಿಮೆಯಾಗುತ್ತಿದ್ದಾರೆ. ಬಿ.ಇ. ಅಥವಾ ಬಿ.ಟೆಕ್. ಮಾಡಲು ಎಂಜಿನಿಯರಿಂಗ್ ಕಾಲೇಜುಗಳಿಗೇ ಸೇರಬೇಕು. ಎ.ಎಂ.ಐ.ಇ. ಮಾಡಲು ಅಂತಹ ಅನಿವಾರ್ಯ ಸ್ಥಿತಿ ಇಲ್ಲ.

-ಕವಿತಾ ಎಂ.
ನಾನು ಡಿಪ್ಲೊಮಾ ನಂತರ ಎ.ಎಂ.ಐ.ಇ.- ಟಿ.ಇ. ಮುಗಿಸಿದ್ದೇನೆ. ಆದರೆ ಕಳೆದ 15 ವರ್ಷದಿಂದ ಉದ್ಯೋಗಕ್ಕೆ ಹೋಗಿಲ್ಲ. ಈಗ ಶಿಕ್ಷಕಿ ಆಗಬೇಕೆಂದು ಆಸೆಯಾಗುತ್ತಿದೆ. ಎಂ.ಎಸ್ಸಿ. ಅಥವಾ ಎಂಜಿನಿಯರಿಂಗ್ ಮತ್ತು ಬಿ.ಇಡಿ. ಮಾಡಬೇಕು ಎಂದುಕೊಳ್ಳುತ್ತಿದ್ದೇನೆ. ಇದು ಸಾಧ್ಯವೇ? ದೂರಶಿಕ್ಷಣ ಅಥವಾ ಅಂಚೆ ತೆರಪಿನ ತರಬೇತಿ ನೀಡುವ ವಿಶ್ವವಿದ್ಯಾಲಯಗಳು ಇವೆಯೇ?

ಹದಿನೈದು ವರ್ಷಗಳ ಉದ್ಯೋಗ ಶೂನ್ಯತೆ ನಿಮ್ಮ ಮಹತ್ವಾಕಾಂಕ್ಷೆಗೆ ಅಡ್ಡಿಯಾಗಬಹುದು. ಆದರೂ ನೀವು ಖಾಸಗಿ ಡಿಪ್ಲೊಮಾ  ಕಾಲೇಜುಗಳಲ್ಲಿ ನಿಮ್ಮ ಎ.ಎಂ.ಐ.ಇ. ಡಿಗ್ರಿ ಆಧಾರದ ಮೇಲೆ ಶಿಕ್ಷಕ ಹುದ್ದೆಗೆ ಪ್ರಯತ್ನಿಸಬಹುದು. ಹೀಗೆ ಉದ್ಯೋಗ ಮಾಡುತ್ತಾ ಎಂ.ಎಸ್ಸಿ. ಮತ್ತು ಬಿ.ಇಡಿ. ಪದವಿಗಳನ್ನು ಮುಕ್ತ ವಿಶ್ವವಿದ್ಯಾಲಯಗಳಿಂದ ಪಡೆದು ಅನಂತರ ಖಾಸಗಿ ಪಿ.ಯು. ಕಾಲೇಜುಗಳಲ್ಲಿ ಉದ್ಯೋಗಕ್ಕೆ ಪ್ರಯತ್ನಿಸಬಹುದು. ಇತ್ತೀಚೆಗೆ ರಾಷ್ಟ್ರ ಮಟ್ಟದ ಆಯ್ಕೆ ಪರೀಕ್ಷೆಗಳಿಗೆ ತರಬೇತಿ ನೀಡುವ ಅನೇಕ ಖಾಸಗಿ ಸಂಸ್ಥೆಗಳಿವೆ. ಇಲ್ಲಿಯೂ ನೀವು ಉದ್ಯೋಗಕ್ಕೆ ಪ್ರಯತ್ನಿಸಬಹುದು.

-ಸ್ಫೂರ್ತಿ
ನನ್ನ ಗೆಳತಿಯೊಬ್ಬಳು ವಿಜ್ಞಾನ ವಿಭಾಗದಲ್ಲಿ ಪ್ರಥಮ ಪಿ.ಯು.ಸಿ. ಓದಿದ ನಂತರ ಕಾರಣಾಂತರಗಳಿಂದ ಓದನ್ನು ಮುಂದುವರಿಸಲು ಸಾಧ್ಯವಾಗಲಿಲ್ಲ. ಈಗ ಅವಳ ಭವಿಷ್ಯವನ್ನು ಹಸನಾಗಿಸಲು ಯಾವುದಾದರೂ ದಾರಿಗಳಿವೆಯೇ?

ನಿಮ್ಮ ಗೆಳತಿ ಹೇಗಾದರೂ ದ್ವಿತೀಯ ಪಿ.ಯು. ವಿದ್ಯಾಭ್ಯಾಸವನ್ನು ಮುಗಿಸಬೇಕು. ನಂತರ ಉದ್ಯೋಗ ಮಾಡುತ್ತಲೇ ಮುಕ್ತ ವಿಶ್ವವಿದ್ಯಾಲಯದ ಮುಖಾಂತರ ಸ್ನಾತಕ ಮತ್ತು ಸ್ನಾತಕೋತ್ತರ ಪದವಿ ಪಡೆಯಬಹುದು. ದ್ವಿತೀಯ ಪಿ.ಯು. ಮುಗಿದ ನಂತರ ಡಿ.ಇಡಿ. ಮುಗಿಸಿದರೆ ಮಾಧ್ಯಮಿಕ ಶಾಲೆಯಲ್ಲಿ ಶಿಕ್ಷಕಿಯಾಗಬಹುದು.

-ಗುಂಡಪ್ಪ ಭೈರಪ್ಪನವರ್
ನನಗೆ 35 ವರ್ಷವಾಗಿದ್ದು 6 ವರ್ಷಗಳಿಂದ ಗುತ್ತಿಗೆ ಆಧಾರದ ಮೇಲೆ ಆರೋಗ್ಯ ಇಲಾಖೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದೇನೆ. ದ್ವಿತೀಯ ಪಿ.ಯು.ಸಿ.ವರೆಗೆ ಓದಿದ್ದೇನೆ. ಈಗ ಒಂದೇ ವರ್ಷದಲ್ಲಿ ಪದವಿ ಪಡೆಯಬಹುದೆಂದು ಹೇಳುತ್ತಾರೆ. ಇದು ಸಾಧ್ಯವೇ? ಇದಕ್ಕೆ ಸರ್ಕಾರಿ ಮತ್ತು ಖಾಸಗಿ ಕ್ಷೇತ್ರದಲ್ಲಿ ಬೆಲೆ ಇದೆಯೇ? ಇದ್ದರೆ ನಾನು ಸಿ.ಬಿ.ಜಡ್. ವಿಷಯದಲ್ಲಿ ಪದವಿ ಪಡೆದರೆ ಈಗ ಕಾರ್ಯ ನಿರ್ವಹಿಸುತ್ತಿರುವ ಕ್ಷೇತ್ರಕ್ಕೆ ಉತ್ತಮ ಎಂದು ಭಾವಿಸಿದ್ದೇನೆ. ಅದೇ ರೀತಿ ನನ್ನ ಪತ್ನಿ ಶಾಲೆಯೊಂದರಲ್ಲಿ ಶಿಕ್ಷಕಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾಳೆ. ಅವಳಿಗೂ ಪದವಿ ಮತ್ತು ಬಿ.ಇಡಿ.ಯ ಅವಶ್ಯಕತೆ ಇದೆ. ಆದ್ದರಿಂದ ಸೂಕ್ತ ಸಲಹೆ ಕೊಡಿ.

ಒಂದೇ ವರ್ಷದಲ್ಲಿ ಡಿಗ್ರಿ ನೀಡುವ ಸಂಸ್ಥೆಗಳಿದ್ದರೂ, ಇಂತಹ ಡಿಗ್ರಿಗೆ ಯು.ಜಿ.ಸಿ. ಮಾನ್ಯತೆ ಇದೆಯೇ ಎಂಬುದನ್ನು ತಿಳಿದುಕೊಳ್ಳಬೇಕು. ಮುಕ್ತ ವಿಶ್ವವಿದ್ಯಾಲಯಗಳು ಮೂರು ವರ್ಷಗಳ ಅಧ್ಯಯನದ ನಂತರ ನೀಡುವ ಪದವಿಯನ್ನು ಒಂದು ವರ್ಷದ ಅಧ್ಯಯನದ ಪದವಿಯೊಂದಿಗೆ ಹೋಲಿಸಲು ಆಗುವುದಿಲ್ಲ. ಮುಂದಿನ ಉದ್ಯೋಗದ ದೃಷ್ಟಿಯಿಂದಲೂ ಇಂತಹ ದಿಢೀರ್ ಡಿಗ್ರಿಗಳು ಸಾಧುವಲ್ಲ.

ಪ್ರಶ್ನೆ ಕಳುಹಿಸಬೇಕಾದ ವಿಳಾಸ: ಸಂಪಾದಕರು, ಶಿಕ್ಷಣ ವಿಭಾಗ, ಪ್ರಜಾವಾಣಿ, 75 ಎಂ.ಜಿ. ರಸ್ತೆ, ಬೆಂಗಳೂರು 560 001
ಇ-ಮೇಲ್- shikshanapv@gmail.com

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT