ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಶ್ನೆ ಹಲವಾರು- ಉತ್ತರಿಸುವವರು ಯಾರು?

Last Updated 15 ಅಕ್ಟೋಬರ್ 2012, 8:35 IST
ಅಕ್ಷರ ಗಾತ್ರ

ಕೊಪ್ಪಳ: ನಗರದ ಮೂಲಕ ಹಾಯ್ದು ಹೋಗಿರುವ ರಾಷ್ಟ್ರೀಯ ಹೆದ್ದಾರಿ 63ರ ವಿಸ್ತರಣೆ ಹಾಗೂ ಅಭಿವೃದ್ಧಿ ಕಾಮಗಾರಿ ನಿಧಾನ ಗತಿಯಲ್ಲಿ ಸಾಗಿದೆ. ಜೊತೆಗೆ ಈಗಿರುವ ರಸ್ತೆಯ ಎರಡೂ ಬದಿಗಳಲ್ಲಿ ಏಕ ಕಾಲಕ್ಕೆ ತೋಡಿರುವುದು ಜನ ಮತ್ತು ವಾಹನಗಳ ಸಂಚಾರಕ್ಕೆ ತೊಂದರೆಯಾಗಿರುವುದು ನಗರದಲ್ಲಿ ಚರ್ಚೆಗೆ ಕಾರಣವಾಗಿದೆ.

ಇನ್ನೊಂದೆಡೆ, ಕಾಮಗಾರಿಯನ್ನು ಖಾಸಗಿ ಕಂಪೆನಿಯೊಂದಕ್ಕೆ ನೀಡಿರುವುದು ಸಹ ಚರ್ಚೆಗೆ ಗ್ರಾಸವಾಗಿದೆ. ಅಲ್ಲದೇ, ಇದು ಪರಸ್ಪರ ಆರೋಪಗಳಿಗೆ ಎಡೆ ಮಾಡಿಕೊಟ್ಟಿದೆ. ಆದರೆ, ಯಾರೂ ಬಹಿರಂಗವಾಗಿ ಯಾರನ್ನೂ ಪ್ರಶ್ನಿಸುತ್ತಿಲ್ಲ. ಯಾರೂ ಜನರಿಗೆ ಇದು ಹೀಗೆಯೇ ಎಂದು ಸಮಜಾಯಿಷಿ ನೀಡುವ ಗೋಜಿಗೆ ಹೋಗುತ್ತಿಲ್ಲ.

ನಗರಸಭೆಗೆ ಮುಖ್ಯಮಂತ್ರಿಗಳ ಸಣ್ಣ ಮತ್ತು ಮಧ್ಯಮ ಪಟ್ಟಣಗಳ ಅಭಿವೃದ್ಧಿ ಯೋಜನೆಯಡಿ (ಸಿಎಂಎಸ್‌ಎಂಟಿಡಿಪಿ) ಬಂದಿರುವ ಅನುದಾನದಲ್ಲಿ ಈ ಕಾಮಗಾರಿಯನ್ನು ಕೈಗೆತ್ತಿಕೊಳ್ಳಲಾಗಿದೆ. ನಗರಸಭೆಯ ಮೂಲಗಳೇ ಹೇಳುವ ಪ್ರಕಾರ ಈ ಕಾಮಗಾರಿಗೆ ಈಗಾಗಲೇ ನಗರಸಭೆ 3.44 ಕೋಟಿ ರೂಪಾಯಿಗಳನ್ನು ಬಿಡುಗಡೆ ಮಾಡಿದ್ದು, ಈ ಹಣ ಖರ್ಚೂ ಆಗಿದೆ ಎನ್ನಲಾಗಿದೆ.

ಕಾಮಗಾರಿಯನ್ನು ಮುಂದುವರಿಸುವ ಸಲುವಾಗಿ ಜಿಲ್ಲಾಧಿಕಾರಿಗಳು ಈಗ 1.80 ಕೋಟಿ ರೂಪಾಯಿಗಳನ್ನು ಬಿಡುಗಡೆ ಮಾಡಿದ್ದಾರೆ. ಇದು ಗಂಗಾವತಿ ನಗರಸಭೆ ಹಾಗೂ ಯಲಬುರ್ಗಾ ಪಟ್ಟಣ ಪಂಚಾಯಿತಿಗೆ ಸಿಎಂಎಸ್‌ಎಂಟಿಡಿಪಿ ಯಡಿ ಬಿಡುಗಡೆಯಾಗಿರುವ ಅನುದಾನದ ಪೈಕಿ ಈ ಮೊತ್ತವನ್ನು ನಗರದಲ್ಲಿ ನಡೆದಿರುವ ಈ ಹೆದ್ದಾರಿ ಅಭಿವೃದ್ಧಿಗಾಗಿ ಬಳಸಲು ಜಿಲ್ಲಾಧಿಕಾರಿ ತಮ್ಮ ವಿವೇಚನಾಧಿಕಾರ ಬಳಸಿ ನೀಡಿದ್ದಾರೆ ಎಂದು ನಗರಸಭೆ ಮೂಲಗಳು ಹೇಳುತ್ತವೆ.

ಕೆಲ ದಿನಗಳಿಂದ ರಸ್ತೆ ಅಭಿವೃದ್ಧಿ ಕಾಮಗಾರಿ ಸ್ಥಗಿತಗೊಂಡು, ಈಗ ಪುನಃ ಆರಂಭಗೊಂಡಿರುವುದು ಹಲವು ವದಂತಿಗಳಿಗೆ ಕಾರಣವಾಗಿದೆ.

ಸದರಿ ಹೆದ್ದಾರಿಗೆ ಡಾಂಬರು ಹಾಕುವುದು ಸೇರಿದಂತೆ ಅಭಿವೃದ್ಧಿಪಡಿಸುವ ಕಾಮಗಾರಿಯನ್ನು ಜಿಎಂಆರ್ ಕಂಪೆನಿಗೆ ವಹಿಸಲಾಗಿದೆ ಎಂದು ಹೇಳಲಾಗುತ್ತಿದೆ. ಈಚೆಗೆ ಸಾಹಿತ್ಯ ಭವನದಲ್ಲಿ ಹಮ್ಮಿಕೊಂಡಿದ್ದ ಡಿ.ದೇವರಾಜ ಅರಸು ಜನ್ಮದಿನಾಚರಣೆ ಕಾರ್ಯಕ್ರಮದಲ್ಲಿ ಈ ವಿಷಯ ಹೇಳಿದ್ದ ಶಾಸಕ ಸಂಗಣ್ಣ ಕರಡಿ ಅವರು, ರಸ್ತೆ ಅಭಿವೃದ್ಧಿಗಾಗಿ ಜಿಎಂಆರ್ ಕಂಪೆನಿ ಒಪ್ಪುವಂತೆ ಮಾಡುವಲ್ಲಿ ಜಿಲ್ಲಾಧಿಕಾರಿ ತುಳಸಿ ಮದ್ದಿನೇನಿ ಶ್ರಮಿಸಿದ್ದನ್ನು ಶ್ಲಾಘಿಸಿದ್ದರು.

ಆದರೆ, ಕಾಮಗಾರಿಯನ್ನು ಕೈಗೊಳ್ಳುವ ಸಂಬಂಧ ಒಪ್ಪಂದ ಮಾಡಿಕೊಳ್ಳುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಜಿಎಂಆರ್ ಕಂಪೆನಿಯ ಹಿರಿಯ ಅಧಿಕಾರಿಯೊಬ್ಬರು ಕೆಲ ತಿಂಗಳು ಹಿಂದೆ ಕಂಪೆನಿ ಬಿಟ್ಟಿರುವುದು ಈಗ ಉದ್ಭವಿಸಿರುವ ಬಿಕ್ಕಟ್ಟಿಗೆ, ಹಬ್ಬಿರುವ ವದಂತಿಗಳಿಗೆ ಕಾರಣ ಎನ್ನಲಾಗಿದೆ.

ಧೈರ್ಯ ಇಲ್ಲ!: ಸಿಎಂಎಸ್‌ಎಂಟಿಡಿಪಿ ಯಡಿ ಬಂದ ಅನುದಾನದಲ್ಲಿ 3 ಕೋಟಿ ರೂಪಾಯಿ ಹಣವನ್ನು ನೀಡಿರುವ ನಗರಸಭೆ ಸದಸ್ಯರು, ರಸ್ತೆ ಕಾಮಗಾರಿ ನಿಧಾನ ಗತಿಯಲ್ಲಿ ಸಾಗಿರುವುದಕ್ಕೆ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಆದರೆ, ತಮ್ಮದೇ ಹಣ ಬಳಸಿ ಕಾಮಗಾರಿ ನಡೆಸುತ್ತಿರುವುದರಿಂದ ಸಂಬಂಧಪಟ್ಟವರನ್ನು ಪ್ರಶ್ನಿಸುವ ಧೈರ್ಯ ಮಾಡುತ್ತಿಲ್ಲ.ಜಿಲ್ಲಾಧಿಕಾರಿಗಳು ನಗರಸಭೆಯನ್ನು ಕತ್ತಲಲ್ಲಿಟ್ಟು ಈ ಕಾಮಗಾರಿಯನ್ನು ಜಿಎಂಆರ್ ಕಂಪೆನಿಗೆ ನೀಡಿದ್ದಾರೆ. ಈಗ ಕಂಪೆನಿ ಕಾಮಗಾರಿಯಿಂದ ಹಿಂದೆ ಸರಿದಿದೆ. ಆದರೆ, ಅಲ್ಲಲ್ಲಿ ಪೋಕ್‌ಲೇನ್ ಯಂತ್ರಗಳನ್ನು ಬಳಸಿ ಬರೀ ಮಣ್ಣು ಅಗೆಯುವ ಕೆಲಸ ಮೂಲಕ ಜಿಲ್ಲಾಡಳಿತ ಜನರ ಕಣ್ಣಿಗೆ ಮಣ್ಣೆರೆಚುವ ಕೆಲಸ ಮಾಡುತ್ತಿದೆ ಎಂದು ನಗರಸಭೆ ಸದಸ್ಯರು ದೂರುತ್ತಿದ್ದಾರೆ.

ರಸ್ತೆ ಕಾಮಗಾರಿಗೆ ಅಗತ್ಯವಿರುವ ಜಲ್ಲಿ ಕಲ್ಲುಗಳು ಸಿಗುತ್ತಿಲ್ಲ. ಹೀಗಾಗಿ ಕಾಮಗಾರಿ ತಾತ್ಕಾಲಿಕವಾಗಿ ಸ್ಥಗಿತಗೊಂಡಿದೆ ಎಂಬುದು ಜಿಲ್ಲಾಧಿಕಾರಿ ತುಳಸಿ ಮದ್ದಿನೇನಿ ಅವರ ಸಮಜಾಯಿಷಿ.

ಹಾಗಾದರೆ, ಸತ್ಯ ಯಾವುದು? ಕೋಟ್ಯಂತರ ರೂಪಾಯಿ ಅನುದಾನ ಬಂದಿದ್ದರೂ ಉತ್ತಮ ರಸ್ತೆಯಲ್ಲಿ ಓಡಾಡುವ ಭಾಗ್ಯ ಕೊಪ್ಪಳದ ನಾಗರಿಕರಿಗೆ ಇಲ್ಲವೇ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT