ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಾಧ್ಯಾಪಕರ ವೇತನಕ್ಕೆ ಸಮನಾದ ಗೌರವ ಧನ

ಅತಿಥಿ ಉಪನ್ಯಾಸಕರಿಗೆ ಸಚಿವ ದೇಶಪಾಂಡೆ ಭರವಸೆ
Last Updated 12 ಸೆಪ್ಟೆಂಬರ್ 2013, 19:59 IST
ಅಕ್ಷರ ಗಾತ್ರ

ಬೆಂಗಳೂರು: ‘ಅತಿಥಿ ಉಪನ್ಯಾಸಕರಿಗೆ ಪ್ರಾಧ್ಯಾಪಕರ ವೇತನಕ್ಕೆ ಸಮನಾದ ಗೌರವ ಧನ ನೀಡಲು ಪ್ರಯತ್ನಿಸಲಾಗು­ವುದು’ ಎಂದು ಸಚಿವ ಆರ್.ವಿ.­ದೇಶಪಾಂಡೆ ಭರವಸೆ ನೀಡಿದರು.

ಮಹಾರಾಣಿ ಮಹಿಳಾ ವಿಜ್ಞಾನ ಕಾಲೇಜು ಗುರುವಾರ ಹಮ್ಮಿಕೊಂಡಿದ್ದ ಪ್ರಸಕ್ತ ಸಾಲಿನ ಸಾಂಸ್ಕೃತಿಕ, ಕ್ರೀಡಾ, ಎನ್ಎಸ್ಎಸ್, ಎನ್‌ಸಿಸಿ ಚಟುವಟಿಕೆ ಉದ್ಘಾಟಿಸಿ  ಮಾತನಾಡಿದರು. ‘ಅತಿಥಿ ಉಪನ್ಯಾಸಕರ ನೇಮಕಾತಿ ಪಾರದರ್ಶಕವಾಗಿರಬೇಕೆಂಬ ಉದ್ದೇಶ­ದಿಂದ ಈ ಬಾರಿ ಆನ್ ಲೈನ್ ನೇಮಕಾತಿ­ಯನ್ನು ಜಾರಿ ಮಾಡಲಾಗಿದೆ’ ಎಂದ ಅವರು, ‘ ಅತಿಥಿ ಉಪನ್ಯಾಸಕ ಹುದ್ದೆಗೆ ಸುಮಾರು 34,900 ಮಂದಿ ಅರ್ಜಿ  ಹಾಕಿದ್ದರು. ನೀಡುತ್ತಿರುವ ಗೌರವಧನ ಕಡಿಮೆಯಿದ್ದರೂ ಸಹ, ಅರ್ಜಿ ಹಾಕಿದ­ವರ ಸಂಖ್ಯೆಯೇನೂ ಕಡಿಮೆ ಇರಲಿಲ್ಲ. ಇದು ರಾಜ್ಯದಲ್ಲಿ ನಿರುದ್ಯೋಗ ಸಮಸ್ಯೆ ಹೆಚ್ಚಾಗಿರುವ ಅಂಶವನ್ನು ಸೂಚಿಸು­ತ್ತದೆ’ ಎಂದು ತಿಳಿಸಿದರು.

‘ರಾಜ್ಯದಲ್ಲಿ ಕೇವಲ 17 ಲಕ್ಷ ಮಂದಿ ವಿದ್ಯಾರ್ಥಿಗಳಿಗೆ ಮಾತ್ರ ಉನ್ನತ ಶಿಕ್ಷಣ ಪಡೆಯಲು ಸಾಧ್ಯವಾಗುತ್ತಿದೆ. ಈ ವರ್ಷದಿಂದ ಪದವಿ ಪಡೆಯಲು ಇಚ್ಛಿಸುವ ವಿದ್ಯಾರ್ಥಿಗಳಿಗೂ ರಾಷ್ಟ್ರೀಕೃತ ಬ್ಯಾಂಕ್‌ಗಳ ಮೂಲಕ ಸಾಲ ನೀಡಿ, ಬಡ್ಡಿಯನ್ನು ಸರ್ಕಾರವೇ ಭರಿಸಲಿದೆ’ ಎಂದರು.

‘ತಮ್ಮದೇ ಒಂದು ಶಿಕ್ಷಣ ಸಂಸ್ಥೆಯಲ್ಲಿ ಪ್ರೌಢಶಾಲೆಯಲ್ಲಿ ಅನುತ್ತೀರ್ಣರಾದ, ಕಲಿಕೆಯಲ್ಲಿ ತೀರಾ ಹಿಂದುಳಿದ ವಿದ್ಯಾರ್ಥಿ­ಗಳಿಗೆ ಉದ್ಯೋಗ ಕೌಶಲ ತರಬೇತಿ ನೀಡಲಾಗಿದ್ದು, ಅವರಲ್ಲಿ ಶೇ 71ರಷ್ಟು ಮಂದಿ ಸ್ವ ಉದ್ಯೊಗಿ­ಗಳಾಗಿದ್ದಾರೆ’ ಎಂದು ಮಾಹಿತಿ ನೀಡಿದರು.

ಕಾಲೇಜಿನ ಪ್ರಾಂಶುಪಾಲರಾದ ಲಲಿತಮ್ಮ ಅವರು  ಪ್ರಸ್ತಾಪಿಸಿದ ಬೇಡಿಕೆ­ಗಳ ಬಗ್ಗೆ ಪ್ರತಿಕ್ರಿಯಿಸಿದ ಸಚಿವರು, ಕಾಲೇಜಿನಲ್ಲಿ ಆರಂಭಿಸಲು ಉದ್ದೇಶಿ­ಸಿರುವ ಅಧ್ಯಯನ ಕೇಂದ್ರ ಕುರಿತ ಪ್ರಸ್ತಾವನೆ­ಯನ್ನು  ಪರಿಶೀಲಿಸಿ, ಮಂಜೂರು ಮಾಡುವುದಾಗಿ ಹೇಳಿದರು. ಜತೆಗೆ, ಸುಸಜ್ಜಿತ ಸಭಾಂಗಣ, ಹೊಸ ವಸತಿ ನಿಲಯದ ಬೇಡಿಕೆಗಳನ್ನು ಸೂಕ್ತವೆಂದು ಪರಿಗಣಿಸ­ಲಾಗುವುದು ಎಂದರು.

ಶಾಸಕ ಪುಟ್ಟಣ್ಣ, ‘ಅತಿಥಿ ಉಪನ್ಯಾಸ­ಕರ ವೇತನವನ್ನು ರೂ 25 ಸಾವಿರಕ್ಕೆ ಹೆಚ್ಚಿಸ­ಬೇಕು’ ಎಂದು ಒತ್ತಾಯಿಸಿದ ಅವರು ‘ಸಭಾಂಗಣ ನಿರ್ಮಾಣಕ್ಕೆ ತಮ್ಮ ಅನುದಾನದಿಂದ ರೂ 25 ಲಕ್ಷ ಒದಗಿಸುವುದಾಗಿ ತಿಳಿಸಿದರು. ಕಾಲೇಜು ಶಿಕ್ಷಣ ಇಲಾಖೆ ಆಯುಕ್ತ ಬಿ.ಜಿ.ನಂದಕುಮಾರ್, ಸಾಹಿತಿ ಪ್ರೊ ಜಿ.ಕೆ.ಗೋವಿಂದರಾವ್ ಇತರರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT